ಡಿಕೆಶಿ-ಎಚ್ಡಿಕೆ ಸಮರದಲ್ಲಿ ಬಿಜೆಪಿಯ ಲೆಹರ್ ಸಿಂಗ್ ಗೆದ್ರು, ವೆಂಕಟಾಪತಿ ಬಿದ್ರು, ಜೆಡಿಎಸ್ ಮುಖಭಂಗಕ್ಕೆ ಭಿನ್ನರು ಜತೆಯಾದ್ರು!

ಡಿಜಿಟಲ್ ಕನ್ನಡ ಟೀಮ್:

ಪಾರಂಪರಿಕ ರಾಜಕೀಯ ಶತ್ರುಗಳಾದ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಣ ಮೇಲ್ಮನೆ ಚುನಾವಣೆಯ ಪ್ರತಿಷ್ಠೆ ಸಮರದಲ್ಲಿ ಜೆಡಿಎಸ್ ಸೋತು, ಬಿಜೆಪಿಯ ಲೆಹರ್ ಸಿಂಗ್ ಮೇಲ್ಮನೆ ಪ್ರವೇಶಿಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಎರಡನೇ ಅಭ್ಯರ್ಥಿ ಡಾ. ವೆಂಕಟಾಪತಿ ಪರಾಭವವನ್ನು ಒಂದೇ ವಾಕ್ಯದಲ್ಲಿ ಹೀಗೆ ವಿಶ್ಲೇಷಿಸಬಹುದು.

ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದೆ. ಕಾಂಗ್ರೆಸ್ಸಿನ ಅಲ್ಲಂ ವೀರಭದ್ರಪ್ಪ (33 ಮತಗಳು), ಆರ್.ಬಿ. ತಿಮ್ಮಾಪುರ (33), ವೀಣಾ ಅಚ್ಚಯ್ಯ (31), ರಿಜ್ವಾನ್ ಅರ್ಶದ್ (34), ಬಿಜೆಪಿಯ ವಿ. ಸೋಮಣ್ಣ (31), ಲೆಹರ್ ಸಿಂಗ್ (27) ಹಾಗೂ ಜೆಡಿಎಸ್ ನ ಕೆ.ವಿ. ನಾರಾಯಣಸ್ವಾಮಿ (30) ಗೆದ್ದಿದ್ದಾರೆ. ಜೆಡಿಎಸ್ ನ ಎರಡನೇ ಅಭ್ಯರ್ಥಿ ಡಾ. ವೆಂಕಟಾಪತಿ ಕೇವಲ 5 ಮತಗಳೊಂದಿಗೆ ಹೀನಾಯ ಸೋಲು ಅನುಭವಿಸಿದ್ದಾರೆ. ಜೆಡಿಎಸ್ ಬಳಿ ಇದ್ದದ್ದು 40 ಮತಗಳು. ಆ ಪೈಕಿ ನಾರಾಯಣಸ್ವಾಮಿ ಮತ್ತು ವೆಂಕಟಾಪತಿ ಅವರಿಗೆ ಬಂದಿರುವ ಒಟ್ಟು ಮತ 35. ಉಳಿದ ಐದು ಮತಗಳ ಪೈಕಿ ಎರಡು ಅಸಿಂಧು ಆಗಿದ್ದು, ಮೂರು ಬೇರೆ ಪಕ್ಷಕ್ಕೆ ಹೋಗಿದೆ.

ಚುನಾವಣೆಗೆ ಕೊಂಚ ಖದರ್ರು ಬಂದಿದ್ದೇ 7 ನೇ ಸ್ಥಾನಕ್ಕೆ ಜೆಡಿಎಸ್ ಮತ್ತು ಬಿಜೆಪಿ ಕ್ರಮವಾಗಿ ಡಾ. ವೆಂಕಟಾಪತಿ ಹಾಗೂ ಲೆಹರ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದರಿಂದ. ಆದರೆ ಈ ಇಬ್ಬರಿಗೂ ಅಗತ್ಯ ಮತಗಳಿರಲಿಲ್ಲ. ಬಿಜೆಪಿ ಬಳಿ 44 ಹಾಗೂ ಜೆಡಿಎಸ್ ಬಳಿ 40 ಮತಗಳಿದ್ದವು. ಎರಡೂ ಪಕ್ಷಗಳ ಎರಡನೇ ಅಭ್ಯರ್ಥಿ ಗೆಲುವಿಗೆ ಕ್ರಮವ್ಗಿ 14 ಹಾಗೂ 18 ಮತಗಳ ಕೊರತೆ ಇತ್ತು. ಆರಂಭದಲ್ಲಿ ಎರಡೂ ಪಕ್ಷಗಳು ಪರಸ್ಪರ ಬೆಂಬಲ ನಿರೀಕ್ಷೆ ಮಾಡಿದವಾದರೂ ಪ್ರತಿಷ್ಠೆ ಅಡ್ಡಬಂದು ಮತದಾನ ಅನಿವಾರ್ಯವಾಯಿತು. ಆರಂಭದಲ್ಲಿ ಕುಮಾರಸ್ವಾಮಿ ಕುದುರಿಸಿಟ್ಟುಕೊಂಡಿದ್ದ ಪಕ್ಷೇತರರ ಬೆಂಬಲವನ್ನು ಡಿ.ಕೆ. ಶಿವಕುಮಾರ್ ಹೈಜಾಕ್ ಮಾಡಿದ್ದೇ ಅಲ್ಲದೆ, ಅದರಲ್ಲಿ ಒಂದಷ್ಟನ್ನು ಬಿಜೆಪಿ ಅಭ್ಯರ್ಥಿಗೆ ತಿರುಗಿಸುವಲ್ಲಿ ಸಹಕರಿಸಿದ್ದು ಜೆಡಿಎಸ್ ಅಭ್ಯರ್ಥಿಯನ್ನು ಬಲಿ ತೆಗೆದುಕೊಂಡಿದೆ.

ಹಾಗೆ ನೋಡಿದರೆ ನಾಳೆ ಚುನಾವಣೆ ನಡೆಯಲಿರುವ ರಾಜ್ಯಸಭೆ ಅಭ್ಯರ್ಥಿ ಫಾರೂಕ್ ಪರ ಪಕ್ಷೇತರರ ಬೆಂಬಲವನ್ನು ಕುಮಾರಸ್ವಾಮಿ ಎರಡು ತಿಂಗಳ ಹಿಂದೆಯೇ ಜೋಪಾನ ಮಾಡಿಟ್ಟುಕೊಂಡಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ತಂತ್ರಗಾರಿಕೆ ಅಖಾಡಕ್ಕಿಳಿದ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೂಡಿ ಕೆ.ಸಿ. ರಾಮಮೂರ್ತಿ ಅವರನ್ನು ಕಾಂಗ್ರೆಸ್ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇ ಅಲ್ಲದೇ, ಅವರ ಪರ ಪಕ್ಷೇತರರ ಬೆಂಬಲವನ್ನು ಕುಮಾರಸ್ವಾಮಿ ಅಂಗಳದಿಂದ ಎತ್ತೊಯ್ದರು. ಆ ರೀತಿ ಹೈಜಾಕ್ ಮಾಡಿದ ಮತಗಳನ್ನು ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಪರ ತಿರುಗಿಸುವ ಮೂಲಕ ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಬಳಿ ಇದ್ದದ್ದು 123 ಮತಗಳು. ಅದರ ನಾಲ್ವರು ಅಭ್ಯರ್ಥಿಗಳಿಗೆ ಒಟ್ಟಾರೆ ಬಂದಿರುವುದು 131 ಮತಗಳು. ಅಂದರೆ 8 ಹೆಚ್ಚುವರಿ ಮತಗಳು ಬಂದಿವೆ. ಇವುಗಳಲ್ಲಿ ಮೂರು ಜೆಡಿಎಸ್, ಐದು ಪಕ್ಷೇತರರಿಂದ ಬಂದಿವೆ.

ಡಿ.ಕೆ. ಶಿವಕುಮಾರ್ ಆಟ ಇಷ್ಟಕ್ಕೇ ನಿಂತಿಲ್ಲ. ಈಗಾಗಲೇ ದೇವೇಗೌಡರ ಕುಟುಂಬದ ಜತೆ ಮುನಿಸಿಕೊಂಡಿರುವ ಜಮೀರ್ ಅಹಮದ್, ಚಲುವರಾಯಸ್ವಾಮಿ ಒಳಗೊಂಡ ಜೆಡಿಎಸ್ ಭಿನ್ನರ ತಂಡದ ವಿಶ್ವಾಸವನ್ನು ತಮ್ಮ ರಾಜಕೀಯ ಹಗೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಜೆಡಿಎಸ್ ಬಳಿ ಇದ್ದದ್ದು 40 ಮತಗಳು. ಈ ಪೈಕಿ ಜೆಡಿಎಸ್ ಮೊದಲ ಅಭ್ಯರ್ಥಿ ನಾರಾಯಣಸ್ವಾಮಿ ಅವರಿಗೆ 30 ಮತಗಳು ಬಿದ್ದಿವೆ. ಉಳಿದ 10 ಮತಗಳು ಎರಡನೇ ಅಭ್ಯರ್ಥಿ ವೆಂಕಟಾಪತಿ ಅವರಿಗೆ ಬರಬೇಕಿತ್ತು. ಆದರೆ ಅವರಿಗೆ ಬಂದಿರುವುದು ಕೇವಲ 5 ಮತಗಳು ಮಾತ್ರ. ಅಂದರೆ ಜಮೀರ್, ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅಹಮದ್ ಅವರ ಮತಗಳು ಜೆಡಿಎಸ್ ನಿಂದ ಚದುರಿ ಹೋಗುವಲ್ಲಿಯೂ ಶಿವಕುಮಾರ್ ಕೈ ಚಳಕ ಕಾಣುತ್ತಿದೆ.

ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ವಾಗ್ಸಮರದಿಂದ ಚುನಾವಣೆ ಕಣ ರಂಗೇರಿತ್ತು. ನಾಳೆ ನಡೆಯುವ ರಾಜ್ಯಸಭೆ ಚುನಾವಣೆ ಮೇಲೂ ಇದರ ನೆರಳಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದಕ್ಕಿಂತ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುವುದರಲ್ಲಿಯೇ ಹೆಚ್ಚಿನ ಆನಂದ ಇತ್ತು ಎಂಬುದು ಬಿಜೆಪಿಯ ಎರಡನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿನಿಂದ ಶೃತಪಟ್ಟಿದೆ. ಏಕೆಂದರೆ ಪಕ್ಷೇತರರ ಬೆಂಬಲ ಇಲ್ಲದೇ ಬಿಜೆಪಿ ಈ ಸ್ಥಾನ ಗೆಲ್ಲಲು ಆಗುತ್ತಿರಲಿಲ್ಲ. ಯಡಿಯೂರಪ್ಪ ಅವರಿಗೆ ಈ ಮತಗಳನ್ನು ಖಾತರಿ ಮಾಡಿಕೊಡುವ ಮೂಲಕ ಡಿ.ಕೆ. ಶಿವಕುಮಾರ್ ಜೆಡಿಎಸ್ ಅನ್ನು ಅಡ್ಡಡ್ಡ ಮಲಗಿಸಿದ್ದಾರೆ. ಈ ಸೋಲಿನ ಸುಳಿವು ಸಿಕ್ಕ ಕುಮಾರಸ್ವಾಮಿ ಅವರು ಶುಕ್ರವಾರ ಬೆಳಗ್ಗೆಯೇ ನಾರಾಯಣಸ್ವಾಮಿ ಮಾತ್ರ ಪಕ್ಷದ ಅಧಿಕೃತ ಅಭ್ಯರ್ಥಿ ಎಂದಿದ್ದರು. ಆದರೂ ಕಣದಲ್ಲಿದ್ದ ಡಾ. ವೆಂಕಟಾಪತಿ ಸೋಲಿನ ನೆರಳನ್ನು ತನ್ನದಲ್ಲ ಎಂದು ಜೆಡಿಎಸ್ ನಿರಾಕರಿಸಲಾಗುವುದಿಲ್ಲ.

ರಾಜ್ಯಸಭೆಗೆ ನಾಳೆ ನಡೆಯುವ ಚುನಾವಣೆಯಲ್ಲೂ ಜೆಡಿಎಸ್ ಗೆ ಇದೇ ಕಹಿ ಅನುಭವ ಮರುಕಳಿಸಲಿದೆ. ಈ ಕಹಿ ಅನುಭವ ದಯಪಾಲಿಸುವಲ್ಲಿ ಪಾಲುದಾರರಾಗಿರುವ ಜೆಡಿಎಸ್ ಭಿನ್ನ ಶಾಸಕರ ಪಕ್ಷಬಾಂಧವ್ಯ ಪಣದೊಂದಿಗೆ!

Leave a Reply