ಪಾಕ್ ವಿಷಯ ಹಾಗಿರಲಿ, ಬಾಂಗ್ಲಾದೇಶದಲ್ಲಿ ದಿನಾ ಬೀಳುತ್ತಿದೆ ಹಿಂದು-ಜಿಹಾದೇತರರ ಹೆಣ!

ಡಿಜಿಟಲ್ ಕನ್ನಡ ಟೀಮ್:

ಎಲ್ಲರೂ ಪಾಕಿಸ್ತಾನದ ಬಗ್ಗೆ ಆಕ್ರೋಶಿತವಾಗಿ ಮಾತಾಡಿಕೊಂಡಿದ್ದೇವೆ. ಆದರೆ ಭಾರತವೇ ವಿಮೋಚನೆಗೊಳಿಸಿದ್ದ ಬಾಂಗ್ಲಾದೇಶ ಇವತ್ತು ತಾನೇನು ಕಡಿಮೆ ಎಂಬಷ್ಟು ಮತಾಂಧವಾಗಿದೆ. ಈಗಲ್ಲಿ ಕಟ್ಟರ್ ಮುಸ್ಲಿಮೇತರರು, ವಿಶೇಷವಾಗಿ ಹಿಂದುಗಳನ್ನು ಕೊಲ್ಲುವ ಅಭಿಯಾನ ಜಾರಿಯಲ್ಲಿದೆ. ಅದಕ್ಕೆ ಹೊಸ ಸೇರ್ಪಡೆ ಎಂದರೆ ಹಿಂದು ಆಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ನಿತ್ಯರಂಜನ್ ಪಾಂಡೆ (60) ಹತ್ಯೆ. ಶುಕ್ರವಾರ ಬೆಳಗಿನ ನಡಿಗೆಗೆ ಹೋಗಿದ್ದವರನ್ನು ಅಪರಿಚಿತ ಜಿಹಾದಿಗಳು ಕೊಲೆ ಮಾಡಿದ್ದಾರೆ. ಮಂಗಳವಾರವಷ್ಟೇ ಹಿಂದು ಪೂಜಾರಿಯೊಬ್ಬರನ್ನು ರುಂಡ ಚೆಂಡಾಡಿ ಸಾಯಿಸಲಾಗಿತ್ತು.

ಇವೆಲ್ಲ ಅಚಾನಕ್ ಘಟನೆಗಳೇನಲ್ಲ. ಹಿಂದುಗಳು, ಕ್ರೈಸ್ತರು ಹಾಗೂ ಇಸ್ಲಾಂ ತೀವ್ರವಾದವನ್ನು ವಿರೋಧಿಸುವ ಮುಸ್ಲಿಂ ಚಿಂತಕರು ಇವರ್ಯಾರನ್ನೂ ಸಹಿಸುತ್ತಿಲ್ಲ ಬಾಂಗ್ಲಾ ಜಿಹಾದಿಗಳು.

ಪ್ರತಿಬಾರಿ ಇಂಥ ದಾಳಿಗಳಾದಾಗಲೂ ಪ್ರಧಾನಿ ಶೇಖ್ ಹಸೀನಾ, ನಾವು ಕೊಲೆಗಾರರನ್ನು ಬಿಡೋದಿಲ್ಲ ಅಂತ ಹೇಳಿಕೆ ಕೊಡುತ್ತಾರೆ. ಅಲ್ಲಿನ ರಾಜಕೀಯ ಪ್ರತಿಸ್ಪರ್ಧಿ ಖಲೀದಾ ಜಿಯಾಗೆ ಹೋಲಿಸಿದರೆ ಈಕೆ ಭಾರತ ಸ್ನೇಹಿ, ಉದಾರವಾದಿ ಎಂಬುದು ಹೌದಾದರೂ, ತೀವ್ರಗಾಮಿಗಳನ್ನು ಹತ್ತಿಕ್ಕುವಲ್ಲಿ ವಿಫಲರಾಗುತ್ತಿರುವುದು ಸ್ಪಷ್ಟ.

ಬಾಂಗ್ಲಾದೇಶದ ಹಲವು ದಾಳಿಗಳಿಗೆ ಐಸಿಸ್- ಅಲ್ ಕಾಯಿದಾಗಳು ಹೊಣೆ ಹೊರುತ್ತಿವೆ. ಅಷ್ಟರಮಟ್ಟಿಗೆ ಉಗ್ರರ ಪ್ರಭಾವಕ್ಕೆ ಸಿಲುಕುವಲ್ಲಿ ಅದು ಇನ್ನೊಂದು ಇರಾಕ್ ಆಗುವತ್ತ ಸಾಗುತ್ತಿದೆ.

ವಾರದ ಹಿಂದೆ ಭಾನುವಾರ, ಚರ್ಚಿಗೆ ಹೋಗಿದ್ದ ಕ್ರೈಸ್ತ ಉದ್ಯಮಿಯನ್ನು ಕೊಲೆಮಾಡಲಾಯಿತು. ಏಪ್ರಿಲ್ ನಲ್ಲಿ ಹಿಂದು ದರ್ಜಿಯೊಬ್ಬನನ್ನು ಕತ್ತು ಸೀಳಿ ಕೊಲ್ಲಲಾಯಿತು. ಅತ್ಯಾಚಾರ ಪ್ರಕರಣಗಳೂ ವಿಪರೀತವಾಗಿವೆ. ಕೆಲವು ವರ್ಷಗಳಿಂದ ಅಲ್ಲಿ ಅಲ್ಪಸಂಖ್ಯಾತ ಹಿಂದು- ಕ್ರೈಸ್ತರ ಸ್ಥಿತಿಗಳ ಬಗ್ಗೆ ಧ್ವನಿ ಎತ್ತಿದವರು, ಈ ಬಗ್ಗೆ ಬರೆದ ಬ್ಲಾಗರ್ ಗಳನ್ನೆಲ್ಲ ಕೊಲ್ಲುತ್ತ ಬರಲಾಗಿದೆ.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತವಾದದ ವಿರುದ್ಧ ಲೇಖನಗಳನ್ನು ಬರೆಯುತ್ತಿದ್ದ, 1971ರ ಯುದ್ಧಾಪರಾಧಿಗಳಿಗೆ ಗಲ್ಲಾಗಬೇಕೆಂಬ ಅಭಿಯಾನದ ಪರವಿದ್ದ ನಿಲೊಯ್ ಚಟರ್ಜಿಯವರನ್ನು 2015ರ ಆಗಸ್ಟ್ ನಲ್ಲಿ ಜಿಹಾದಿಗಳು ಕೊಂದರು. 2015ರ ಫೆಬ್ರವರಿಯಲ್ಲಿ ಅವಿಜಿತ್ ರಾಯ್ ಎಂಬ ಬ್ಲಾಗರ್ ಅನ್ನು ಅವರ ಹೆಂಡತಿ ರಫೀದಾಳ ಎದುರೇ ಕೊಂದರಲ್ಲದೇ ಆಕೆಯನ್ನೂ ಗಂಭೀರವಾಗಿ ಗಾಯಗೊಳಿಸಿದ್ದರು. ಈ ಅವಿಜಿತ್ ರಾಯ್ ಅವರ ಆಪ್ತವಲಯದ ಇನ್ನೊಬ್ಬ ಪತ್ರಕರ್ತ- ಬ್ಲಾಗರ್ ಅನಂತಾ ಬಿಜೊಯ್ ದಾಸ್ ರನ್ನೂ 2015ರ ಮೇನಲ್ಲಿ ಭೀಕರವಾಗಿ ಕೊಲ್ಲಲಾಯಿತು. ಅಷ್ಟೇ ಅಲ್ಲ, ಅವಿಜಿತ್ ಜತೆ ಕೆಲಸ ಮಾಡಿದ್ದ ಪ್ರಕಾಶಕ ಫೈಸಲ್ ಅರ್ಫಿನ್ ದಿಪನ್ ರನ್ನೂ ಕೊಚ್ಚಿ ಕೊಲೆಗೈದರು. ಫೇಸ್ಬುಕ್ ಪೇಜ್ ಸೃಷ್ಟಿಸಿಕೊಂಡು ಅದರಲ್ಲಿ ಮತೀಯವಾದದ ವಿರುದ್ಧ ಬರೆಯುತ್ತಿದ್ದ  ನಜೀಮುದ್ದೀನ್ ಸಮದ್ ಎಂಬ ಕಾನೂನು ವಿದ್ಯಾರ್ಥಿ ಸಹ ಕಳೆದ ಏಪ್ರಿಲ್ ನಲ್ಲಿ ಹತ್ಯೆಯಾದ.

ಮುಸ್ಲಿಂ ಮೂಲಭೂತವಾದ ಮತ್ತು ದ್ವೇಷವನ್ನು ಒಪ್ಪಿಕೊಂಡವರಿಗೆ ಮಾತ್ರ ಬಾಂಗ್ಲಾದೇಶದಲ್ಲಿ ಬದುಕು ಸಾಧ್ಯವೇನೋ ಎಂಬಂಥ ಚಿತ್ರಣ ಸಿಗುತ್ತಿದೆ. ಭಾರತದ ಮಗ್ಗುಲಲ್ಲೊಂದು ಸಿರಿಯಾ ತಯಾರಾಗುತ್ತಿದೆ ಎಂದರೆ ಅದು ಅತಿಶಯೋಕ್ತಿಯಾಗುತ್ತದೆಯೇ?

Leave a Reply