ಜಮ್ಮು-ಕಾಶ್ಮೀರವೆಂದರೆ ಹಿಂಸೆ ಮಾತ್ರವಲ್ಲ, ಹಿಮಗಡ್ಡೆ ಬಳಸಿಯೇ ಕೃಷಿ ಮಾಡುತ್ತಿರುವ ಲಡಾಕಿಗರ ಸಾಧನಾಗಾಥೆಯೂ ಇದೆ!

ಕೃತಕವಾಗಿ ನಿರ್ಮಿಸಲಾಗಿರುವ ಹಿಮಗಡ್ಡೆ

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರ ಅಂದರೆ ನಮ್ಮ ಕಲ್ಪನೆಗೆ ಬರೋದು ಉಗ್ರರು, ಯೋಧರ ನಡುವಣ ಕಾದಾಟ. ಅದೇ ಜಮ್ಮು ಕಾಶ್ಮೀರದಲ್ಲಿರುವ ಲಡಾಕ್ ಪ್ರಾಂತ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗ ನಿಜಕ್ಕೂ ಅಚ್ಚರಿ ಮೂಡಿಸಿದೆ. ಇಂತಹ ಪ್ರಯೋಗಗಳಲ್ಲಿ ನೀರಿನ ಕೊರತೆ ನೀಗಿಸಲು ಕೃತಕ ಹಿಮಗಡ್ಡೆಗಳ ಬಳಕೆ ಮಹತ್ವದ್ದು.

ಬಹುಶಃ ಜಮ್ಮು-ಕಾಶ್ಮೀರವೆಂದರೆ ಕೇವಲ ಶ್ರೀನಗರ, ಅನಂತ್ ನಾಗ್, ಬಾರಾಮುಲ್ಲಾ ಇತ್ಯಾದಿಗಳೆಂದು ಬಿಂಬಿಸಿಕೊಂಡು, ಕಲ್ಲೂ ತೂರಿಕೊಂಡಿರುವ ಅದೇ ರಾಜ್ಯದ ಸತ್ಪ್ರಜೆಗಳು ಅನುಸರಿಸಬೇಕಾದ ಯಶೋಗಾಥೆ ಇದು.

ಲಡಾಕ್, ಹಿಮಾಲಯದ ತಪ್ಪಲಿನಲ್ಲಿದ್ದರೂ ತೀರಾ ಬಟಾಬಯಲು ಪ್ರದೇಶ. ಇಲ್ಲಿ ಹಸಿರು ಕಣ್ಣಿಗೆ ಕಾಣುವುದೇ ಅಪರೂಪ. ಒಂದರ್ಥದಲ್ಲಿ ಇದನ್ನು ಮರುಭೂಮಿಯಂತಲೇ ಪರಿಗಣಿಸುತ್ತಾರೆ. ಪ್ರತಿ ವರ್ಷ ಸರಾಸರಿ ಮಳೆ ಕೇವಲ 4 ಸೆ.ಮೀ ನಷ್ಟು. ಆದರೆ ಇಲ್ಲೂ ಜನರು ಕೃಷಿ ಮಾಡುತ್ತಾರೆ. ಕಡಿಮೆ ಅವಧಿ ಮಳೆಗಾಲ, ಸುದೀರ್ಘ ಚಳಿ ಮತ್ತು ಬೇಸಿಗೆಯ ವಾತಾವರಣ ಇಲ್ಲಿ ನೀರಿನ ಅಭಾವ ಹೆಚ್ಚಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಬರದ ಸ್ಥಿತಿಯೇ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಜನರು ಕೃತಕ ಹಿಮಗಡ್ಡೆಯ ಮಾರ್ಗ ಅಳವಡಿಸಿಕೊಂಡಿರುವ ನಿಜಕ್ಕೂ ಗಮನಾರ್ಹ.

ಏನಿದು ಕೃತಕ ಹಿಮಗಡ್ಡೆ? ಇದು ಹೇಗೆ ಪ್ರಯೋಜನವಾಗುತ್ತದೆ? ಈ ಪರಿಕಲ್ಪನೆ ಬಂದಿದ್ದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

Ice-Stupa-Artificial-Glacier..

ಹಿಮಗಡ್ಡೆಯಿಂದ ಕರಗಿದ ನೀರು ಹರಿಯಲು ನಿರ್ಮಿಸಿರುವ ಕಾಲುವೆ

ಈ ಹಿಮಗಡ್ಡೆ ಪ್ರಯೋಗ ಮೊದಲು ಹುಟ್ಟುಕೊಂಡಿದ್ದು 1987ರಲ್ಲಿ. ಲಡಾಕ್ ನ ಎಂಜಿನಿಯರ್ ಚೆವಾಂಗ್ ನೊರ್ಫೆಲ್ ಈ ಕೃತಕ ಹಿಮಗಡ್ಡೆ ರೂಪಿಸಿದ ವ್ಯಕ್ತಿ. ಸ್ಕರ್ರಾ ಹಳ್ಳಿಯಲ್ಲಿ ಹುಟ್ಟಿದ ಚೆವಾಂಗ್, ಅಲ್ಲಿನ ಕೃಷಿಕರ ಪರದಾಟವನ್ನು ನೋಡುತ್ತಾ ಬೆಳೆದ. ಮಳೆ ಸರಿಯಾದ ಸಮಯದಲ್ಲಿ ಬೀಳದಿದ್ದರೆ, ಇಲ್ಲಿನ ಜನ ಬೆಳೆ ಬೆಳೆಯಲು ಪರದಾಡುತ್ತಿದ್ದರು. ಹಿಮಾಲಯದಿಂದ ಕರಗಿದ ನೀರಿನ ಮೇಲೆ ಇಲ್ಲಿನ ಜನ ಅವಲಂಬಿತರಾಗಿದ್ದರು. ಈ ನೀರು ಬರುವ ವೇಳೆಗೆ ಅಕ್ಟೋಬರ್ ನವೆಂಬರ್ ತಿಂಗಳಾಗುತ್ತಿತ್ತು. ಅಷ್ಟೊತ್ತಿಗೆ ಬಿತ್ತನೆಯ ಕಾಲಾವಧಿ ಮೀರುತ್ತಿತ್ತು. ಈ ನಡುವೆ ಹಿಮಾಲಯದಿಂದ ಕರಗಿ ಬಂದ ನೀರು ವ್ಯರ್ಥವಾಗಿ ನದಿ ಸೇರುತಿತ್ತು.

ನೀರು ವ್ಯರ್ಥವಾಗಿ ಸಾಗುತ್ತಿದ್ದದನ್ನು ಮನಗಂಡ ಚೆವಾಂಗ್, ಇದಕ್ಕೆ ಒಂದು ಪರಿಹಾರ ಕಂಡುಹಿಡಿದ. ಆ ಪರಿಹಾರವೇ ಕೃತಕ ಹಿಮಗಡ್ಡೆ ನಿರ್ಮಾಣ. ಹಿಮಾಲಯದಿಂದ ಕರಗಿ ಹರಿಯುತ್ತಿದ್ದ ನೀರಿಗೆ ಪೈಪ್ ಗಳ ಮೂಲಕ ದಿಕ್ಕು ಬದಲಿಸಿ ನೀರು ಒಂದೆಡೆ ಶೇಖರಣೆಯಾಗುವಂತೆ ಮಾಡಿದ. ಗ್ರಾಮದ ಎತ್ತರದ ಪ್ರದೇಶದಲ್ಲಿ ಈ ನೀರು ಶೇಖರಣೆಯಾಗುವಂತೆ ಮಾಡಿದ. ನಂತರ ಅದು ಚಳಿಗಾಲದಲ್ಲಿ ಹಿಮಗಡ್ಡೆಯಾಗುವಂತೆ ಮಾಡಿ ಮುಂದಿನ ಬೇಸಿಗೆಯಲ್ಲಿ ಬಳಸಲು ಅನುಕೂಲವಾಗುವ ವ್ಯವಸ್ಥೆಯನ್ನು ನಿರ್ಮಿಸಿದ.

chewang

ಕೃತಕ ಹಿಮಗಡ್ಡೆ ನಿರ್ಮಾಣದ ಮಾರ್ಗ ಕಂಡುಹಿಡಿದ  ಚೆವಾಂಗ್ ನೊರ್ಫೆಲ್

ಬೇಸಿಗೆಯಲ್ಲಿ ಈ ಹಿಮಗಡ್ಡೆ ಕರಗಿ ಅಗತ್ಯ ಪ್ರದೇಶಗಳತ್ತ ಸಾಗುವಂತೆ ಕಾಲುವೆ ನಿರ್ಮಿಸಿದರು. ಆ ಮೂಲಕ ಲಡಾಕ್ ನಲ್ಲಿ ಮೊದಲ ಬಾರಿಗೆ ಕೃತಕ ಹಿಮಗಡ್ಡೆಯ ಬಳಕೆ ಆರಂಭವಾಗಿ ನೀರಿನ ಸಮಸ್ಯೆ ಪರಿಹಾರವಾಯಿತು. ನಂತರ ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲೂ ಇದೇ ಮಾದರಿ ಅನುಸರಿಸಲಾಯಿತು. ಲಡಾಕ್ ಪ್ರದೇಶದ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಚೆವಾಂಗ್ ಅವರನ್ನು ಭಾರತದ ಐಸ್ ಮ್ಯಾನ್ (ಐಸ್ ಮ್ಯಾನ್ ಆಫ್ ಇಂಡಿಯಾ) ಎಂದೇ ಕರೆಯಲಾಗುತ್ತಿದೆ. ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರವೂ ಪ್ರಾಪ್ತವಾಗಿದೆ.

ಈ ಒಂದು ಪ್ರಕ್ರಿಯೆಯಲ್ಲಿ ಯಾವುದೇ ಸರ್ಕಾರ, ಸಂಸ್ಥೆಗಳ ಪಾತ್ರವಿಲ್ಲ. ಆಯಾ ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಯೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡಿರುವುದು ನಿಜಕ್ಕೂ ಪ್ರಶಂಸನಿಯ.

Leave a Reply