‘ಮೋದಿ ತತ್ತ್ವ’ ಎಂಬ ಹೊಸಪದವನ್ನೇ ಟಂಕಿಸಿತು ಅಮೆರಿಕ, ಸಿಬಿಎಫ್ ಸಿಗೆ ಕ್ಲಾಸ್ ತಗೋತು ಬಾಂಬೆ ಹೈಕೋರ್ಟ್, ಕಾಬೂಲ್ ನಲ್ಲಿ ಭಾರತ ಮಹಿಳೆಯ ಕಿಡ್ನಾಪ್

ಶುಕ್ರವಾರ ವಿಧಾನ ಪರಿಷತ್ ಚುನಾವಣೆಯ ಮತದಾನ ಸಂದರ್ಭದಲ್ಲಿ ವಿ. ಸೋಮಣ್ಣ, ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಒಂದು ಕುಶಲೋಪರಿ..

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಸಂಸತ್ ಉದ್ದೇಶಿಸಿ ಮೋದಿ ಮಾಡಿದ ಭಾಷಣ ಸಾಕಷ್ಟು ಖ್ಯಾತಿ ಪಡೆದಿತ್ತು. ಜಾಗತಿಕ ಅಭಿವೃದ್ಧಿಗೆ ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಹೇಗೆ ಪ್ರಮುಖ ಎಂದು ಮೋದಿ ಹೇಳಿದ ಮಾತುಗಳನ್ನು ‘ಮೋದಿ ತತ್ತ್ವ’ ಎಂದು ಅಮೆರಿಕ ಪರಿಗಣಿಸಿದೆ. ಇಂಗ್ಲಿಷ್ ಪದ Modi Doctrine. ಎಲ್ಲ ಪ್ರತಿಪಾದನೆಗಳಿಗೂ ಈ ಹೆಗ್ಗಳಿಕೆ ಸಿಗುವುದಿಲ್ಲ. ವ್ಯಕ್ತಿಯೊಬ್ಬ ಕಲಿಸಿದ ಹೊಸ ಪಾಠ ಎಂಬರ್ಥದಲ್ಲಿ doctrine ಪದದ ಬಳಕೆ ಇದೆ. ಹೀಗಾಗಿ, ಮೋದಿ ಟೆಲಿಪ್ರಾಂಪ್ಟರ್ ಬಳಸಿ ಮಾತಾಡಿದರು, ಮಾತಿನ ಆಕರ್ಷಣೆಗೆ ಚಪ್ಪಾಳೆ ಹೊಡೆದಿದ್ದು ದೊಡ್ಡ ವಿಷಯವಲ್ಲ ಎಂಬೆಲ್ಲ ಟೀಕೆಗಳಿಗೆ ಅರ್ಥವಿಲ್ಲ ಎಂಬುದನ್ನು ಈ ವಿದ್ಯಮಾನ ಜಾಹೀರಾಗಿಸಿದೆ. ಏಕೆಂದರೆ ಕೇವಲ ಮಾತಿನ ಮೆರಗಲ್ಲದೇ ಅದರ ತಿರುಳು ಒಪ್ಪಿಗೆ ಆಗಿರುವುದರಿಂದಲೇ ‘ಮೋದಿ ತತ್ತ್ವ’ವೆಂಬ ಮುದ್ರೆ ಬಿದ್ದಿದೆ.

‘ಇತ್ತೀಚೆಗೆ ಮೋದಿ ಅವರು ಮಾಡಿದ ಭಾಷಣದಲ್ಲಿ ವಿದೇಶಾಂಗ ನೀತಿ ಕುರಿತು ಇದ್ದ ದೂರದೃಷ್ಟಿ ಮಹತ್ವದ್ದಾಗಿದೆ. ವಿದೇಶಾಂಗ ನೀತಿಯಲ್ಲಿ ಈ ಹಿಂದೆ ಇದ್ದ ಹಿಂಜರಿಕೆತನವನ್ನು ತೊಡೆದುಹಾಕಿದೆ. ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ವಿಶ್ವದಲ್ಲಿ ಶಾಂತಿ ನೆಲೆಸುವಲ್ಲಿ ಮಹತ್ವದ ಪಾತ್ರ ಬೀರಲಿದೆ. ಏಷ್ಯಾದಿಂದ ಆಫ್ರಿಕಾವರೆಗೂ ಹಿಂದೂ ಮಹಾಸಾಗರದಿಂದ ಪೆಸಿಫಿಕ್ ಸಾಗರದವರೆಗೂ ಏಳಿಗೆ ಮತ್ತು ಭದ್ರತೆ ತರುವ ಬಗ್ಗೆ ಅವರ ಮಾತುಗಳು ಗಮನ ಸೆಳೆದಿದ್ದವು. ಸಮುದ್ರ ಮಾರ್ಗದಲ್ಲಿ ಭದ್ರತೆ, ಸ್ವತಂತ್ರ ಮತ್ತು ವ್ಯಾಪಾರದ ಬಗ್ಗೆ ಸ್ಪಷ್ಟ ಮಾಹಿತಿ ಇತ್ತು. ಹಾಗಾಗಿ ಅವರ ಭಾಷಣವನ್ನು ಮೋದಿ ತತ್ತ್ವವೆಂದು ಪರಿಗಣಿಸಲಾಗುವುದು’ ಎಂದಿದ್ದಾರೆ ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್.

ಇಲ್ಲೊಂದು ಕೌತುಕವೂ ಇದೆ. ಅಮೆರಿಕ ಗೃಹಖಾತೆಯ ದಕ್ಷಿಣ ಮತ್ತು ಮಧ್ಯ ಏಷ್ಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಆಗಿರುವ ನಿಶಾ ದೇಸಾಯಿ ಬಿಸ್ವಲ್ ಗುಜರಾತ್ ಮೂಲದವರು. ಹಾಗಂತ ಅದು ಅವರ ವೈಯಕ್ತಿಕ ಹೇಳಿಕೆ ಆಗುವುದಿಲ್ಲ. ಅಮೆರಿಕ ಸರ್ಕಾರದ ಪರವಾಗಿಯೇ ಹೇಳಿರುವ ಮಾತಿದು.

ಚಿತ್ರವನ್ನು ಪ್ರಮಾಣಿಕರಿಸಿ, ಸೆನ್ಸಾರ್ ಮಾಡಬೇಡಿ: ಸಿಬಿಎಫ್ ಸಿಗೆ ಕೋರ್ಟ್ ಸೂಚನೆ

ಉಡ್ತಾ ಪಂಜಾಬ್ ಚಿತ್ರವನ್ನು ಪ್ರಮಾಣೀಕರಿಸುವ ಬದಲು ಸೆನ್ಸಾರ್ ಮಾಡಲು ಮುಂದಾಗಿದ್ದೇಕೆ ಎಂದು ಬಾಂಬೆ ಹೈಕೋರ್ಟ್ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ ಸಿ)ಗೆ ಪ್ರಶ್ನಿಸಿದೆ.

ಚಿತ್ರಕ್ಕೆ ಅತಿಯಾದ ಪ್ರಮಾಣದಲ್ಲಿ ಕತ್ತರಿ ಪ್ರಯೋಗ ಮಾಡಲು ಸೂಚಿಸಿದ ಸಿಬಿಎಫ್ ಸಿ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಚಿತ್ರದಲ್ಲಿ ಮಾದಕ ವಸ್ತು ಸೇವನೆಯನ್ನು ವೈಭವೀಕರಿಸಿದ್ದರೆ, ಇಡೀ ಚಿತ್ರವನ್ನೇ ನಿಷೇಧಿಸಲಿಲ್ಲವೇಕೆ? ಎಂದು ಕೇಳಿತು.

ಆಧುನಿಕ ಕಾಲದ ಪ್ರೇಕ್ಷಕರು ಪ್ರಬುದ್ಧರು. ಹಾಗಾಗಿ ಚಿತ್ರದಲ್ಲಿ ರಾಜ್ಯದ ಮಾನ ಕಳೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಈ ಪ್ರಕರಣದಿಂದ ಚಿತ್ರಕ್ಕೆ ಅನಗತ್ಯ ಪ್ರಚಾರ ಸಿಕ್ಕಿದೆ. ತಮಗೆ ಟಿವಿ ಹಾಗೂ ಸಿನಿಮಾದಲ್ಲಿ ಏನು ಬೇಕು ಎಂಬುದನ್ನು ಜನರೇ ನಿರ್ಧರಿಸಲು ಬಿಡಿ. ಸಿಬಿಎಫ್ ಸಿ ಚಿತ್ರವನ್ನು ಪ್ರಮಾಣಿಕರಿಸಬೇಕೇ ಹೊರತು ಸೆನ್ಸಾರ್ ಮಾಡಲು ಮುಂದಾಗ ಬಾರದು ಎಂದು ನಿರ್ದೇಶನ ನೀಡಿದೆ.

ಮತ್ತೊಂದೆಡೆ ಚಿತ್ರದ ಹಾಡೊಂದರಲ್ಲಿ ಶಾಹಿದ್ ಕಪೂರ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ದೃಶ್ಯವನ್ನು ತೆಗೆದು ಹಾಕಲು ಚಿತ್ರ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದ ಅಂತಿಮ ತೀರ್ಪನ್ನು ಸೋಮವಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಭಾರತ ಮಹಿಳೆ ಅಪಹರಣ

ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಭಾರತದ ಮಹಿಳೆಯೊಬ್ಬರನ್ನು ಅಪರಹರಣ ಮಾಡಲಾಗಿದೆ. ಅಗಾ ಖಾನ್ ಫೌಂಡೇಶನ್ ಎಂಬ ಎನ್ಜಿಒನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜುದಿತ್ ಡಿಸೋಜಾ ಅವರನ್ನು ಕಾಲಾ ಇ ಫಾತುಲ್ಲಾ ಪ್ರದೇಶದಿಂದ ಗುರುವಾರ ರಾತ್ರಿ ಅಪಹರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿವೆ. ಅಲ್ಲದೆ ಆಕೆಯ ಬಿಡುಗಡೆಗೆ ಎಲ್ಲ ಪ್ರಯತ್ನ ಮಾಡುವುದಾಗಿಯೂ ತಿಳಿಸಲಾಗಿದೆ. 40 ವರ್ಷದ ಜುದಿತ್ ಡಿಸೋಜಾ 2000ರಿಂದ ಸುಮಾರು 15 ವರ್ಷಗಳ ಕಾಲ ಪಶ್ಚಿಮ ಬಂಗಾಳ ಪುದುಚೆರಿ, ತಮಿಳುನಾಡು ಮತ್ತು ಒಡಿಶಾದಲ್ಲಿ ಸಾಮಾಜಿಕ ಹಾಗೂ ಪರಿಸರ ತಜ್ಞೆಯಾಗಿ ಕಾರ್ಯನಿರ್ವಹಿಸಿದ್ದರು. 2015ರ ಜುಲೈನಿಂದ ಕಾಬುಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

5 ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

ಪ್ರವಾಸಕ್ಕೆಂದು ಆಗಮಿಸಿದ್ದ ಡೆನ್ಮಾರ್ಕ್ ನ 52 ವರ್ಷದ ಮಹಿಳೆಯ ಮೇಲೆ ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಐವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 2014 ರ ಜನವರಿ 14 ರಂದು ಈ ಮಹಿಳೆ ತಾಜ್ ಮಹಲ್ ಗೆ ಭೇಟಿ ನೀಡಿ ಹೊಟೇಲ್ ಗೆ ಮರಳುತ್ತಿರುವಾಗ ವಿಳಾಸ ತಿಳಿಯದೇ ಒಂದು ಗುಂಪಿನ ಯುವಕರನ್ನು ವಿಚಾರಿಸಲು ಮುಂದಾದಳು. ಆಗ ಅಲ್ಲಿದ್ದ 9 ಯುವಕರ ಗುಂಪು ಆಕೆಗೆ ಚಾಕು ತೋರಿಸಿ ಅಪಹರಿಸಿ, ಅತ್ಯಾಚಾರ ನಡೆಸಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಬ್ಬ ಆರೋಪಿ ತೀರ್ಪು ಪ್ರಕಟವಾಗುವ ಮುನ್ನವೇ ಮೃತಪಟ್ಟಿದ್ದಾನೆ.

Leave a Reply