ವಿಚಾರವಾದಿ ಧಾಬೋಲ್ಕರ್ ಹತ್ಯೆ ಸಂಬಂಧ ಬಂಧನ, ಕಲ್ಬುರ್ಗಿ ಕೊಲೆರಹಸ್ಯ ಅರಿಯುವುದಕ್ಕೂ ಸಹಕರಿಸೀತೇ ಈ ವಿದ್ಯಮಾನ?

ನರೇಂದ್ರ ಧಾಬೋಲ್ಕರ್

ಡಿಜಿಟಲ್ ಕನ್ನಡ ಟೀಮ್:

ವಿಚಾರವಾದಿ ನರೇಂದ್ರ ಧಾಬೋಲ್ಕರ್ ಹತ್ಯೆ ಸಂಬಂಧವಾಗಿ ‘ಹಿಂದು ಜನಜಾಗೃತಿ ಸಮಿತಿ’ಯ ವೀರೇಂದ್ರ ತಾವ್ಡೆಯನ್ನು ಸಿಬಿಐ ಶುಕ್ರವಾರ ಬಂಧಿಸಿದೆ. ಇಂದು ಮಧ್ಯಾಹ್ನ ಬಂಧಿತರನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಇದರೊಂದಿಗೆ, ಕರ್ನಾಟಕದಲ್ಲಿ ಸಾಹಿತಿ ಎಂ. ಎಂ. ಕಲ್ಬುರ್ಗಿ ಹತ್ಯೆ ಕುರಿತೂ ವಿಚಾರಣೆಯಲ್ಲಿ ಸುಳಿವುಗಳು ಸಿಗಬಹುದೇ ಎಂಬ ನಿರೀಕ್ಷೆ ಮೂಡಿದೆ. ಬಂಧಿತ ವೀರೇಂದ್ರ ತಾವ್ಡೆಯ ಹಿಂದು ಜನಜಾಗೃತಿ ಸಮಿತಿಯು ‘ಸನಾತನ ಸಂಸ್ಥೆ’ ಜತೆಗೂ ಸಂಬಂಧ ಹೊಂದಿದೆ ಎನ್ನಲಾಗಿದೆ. ಇನ್ನೊಬ್ಬ ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ ಸಂಬಂಧ ಸನಾತನ ಸಂಸ್ಥೆ ಮೇಲೆ ಶಂಕೆ ವ್ಯಕ್ತವಾಗಿ ಆ ನಿಟ್ಟಿನಲ್ಲಿ ವಿಚಾರಣೆಗಳು ನಡೆಯುತ್ತಿರುವುದು ಗಮನಾರ್ಹ.

ತಾವ್ಡೆ ಬಳಿ ಸಿಬಿಐ ಕೆಲವು ದಾಖಲೆಗಳನ್ನು, ಫೋನ್ ನಂಬರ್ ಗಳನ್ನು ಹಾಗೂ ಇ ಮೇಲ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಹತ್ಯೆಯಲ್ಲಿ ಇವರ ಪಾತ್ರ ಏನಿರಬಹುದೆಂದು ವಿಚಾರಿಸುವುದಕ್ಕಾಗಿ ಬಂಧಿಸಲಾಗಿದೆ. 2013ರ ಆಗಸ್ಟ್ ನಲ್ಲಿ ಧಾಬೋಲ್ಕರ್ ಹತ್ಯೆಯಾದ ಮೂರು ವರ್ಷಗಳ ನಂತರ ಆಗುತ್ತಿರುವ ಬಂಧನ ಇದು. ದಾಭೋಲ್ಕರ್ ಅವರು ಮುಂಜಾನೆ ನಡಿಗೆಯಲ್ಲಿದ್ದಾಗ ಅಪರಿಚಿತರು ಬಂದು ಗುಂಡು ಹಾರಿಸಿ ಕೊಂದು ಪರಾರಿ ಆಗಿದ್ದರು. ಕಲ್ಬುರ್ಗಿ ಅವರನ್ನೂ ಮುಂಜಾನೆ ಮನೆಯಲ್ಲಿರುವಾಗ ಬಂದ ಆಗುಂತಕರು ಹಣೆಗೆ ಗುಂಡಿಟ್ಟು ಪರಾರಿಯಾಗಿದ್ದರು. ಮೂಢನಂಬಿಕೆ ಆಚರಣೆಗಳ ವಿರುದ್ಧ ಧ್ವನಿ ಎತ್ತಿ, ಇದಕ್ಕೆ ಅಂದಿನ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಮೂಡನಂಭಿಕೆ ವಿರೋಧಿ ಮಸೂದೆ ಮಂಡನೆಗೆ ಒಪ್ಪಿಕೊಂಡ ಕೆಲದಿನಗಳಲ್ಲೇ ದಾಭೋಲ್ಕರ್ ಹತ್ಯೆಯಾಗಿದ್ದರು. ಈ ಮಸೂದೆಗೆ ಕೆಲವು ಹಿಂದು ಗುಂಪುಗಳ ಪ್ರಖರ ವಿರೋಧವಿತ್ತು.

ಕಲ್ಬುರ್ಗಿ ಸಹ ಕೆಲವು ಆಚರಣೆಗಳ ವಿರುದ್ಧ ಧ್ವನಿ ಎತ್ತಿ ಪ್ರತಿರೋಧ ಎದುರಿಸಿದ್ದರು.

ಈ ಎಲ್ಲ ಸಾಮ್ಯಗಳ ಹಿನ್ನೆಲೆಯಲ್ಲಿ ಈಗ ಆಗಿರುವ ಬಂಧನವು ದಾಭೋಲ್ಕರ್ ಹತ್ಯೆ ಮಾತ್ರವಲ್ಲದೇ ವಿಚಾರವಾದಿಗಳ ಹತ್ಯೆ ಸರಣಿಗಳ ವಿಷಯದಲ್ಲಿ ಉತ್ತರಗಳನ್ನು ಕೊಟ್ಟೀತೇ ಎಂಬ ನಿರೀಕ್ಷೆ ಇದೆ.

Leave a Reply