ಡಿಕೆಶಿ- ರೇವಣ್ಣ ವಾಕ್ಸಮರ, ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಪ್ರಕಟ, ಎನ್ ಎಸ್ ಜಿ ಸದಸ್ಯತ್ವಕ್ಕೆ ಮುಂದುವರಿತು ಚೀನಾ ವಿರೋಧ, ರಾಹುಲ್ ದಾಖಲೆಯ ಶತಕ

 ಶನಿವಾರ ಬೆಂಗಳೂರಿನ ಎಂಜಿ ರಸ್ತೆಯಲ್ಲಿಲಾರೆನ್ ಗಾತಿಲೆಬ್ ಮತ್ತಿತರ ನೃತ್ಯಗಾರ್ತಿಯರ ಕಲಾಕರ್ಷಣೆ.. 

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆಗೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆ ವೇಳೆ ಜೆಡಿಎಸ್ ಚುನಾವಣೆ ಏಜೆಂಟ್ ಆಗಿದ್ದ ಎಚ್.ಡಿ ರೇವಣ್ಣ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ನಡುವೆ ಮಾತಿನ ಜಟಾಪಟಿ ನಡೆಯಿತು. ಕಾಂಗ್ರೆಸ್ ಶಾಸಕ ಜಿ.ರಾಮಕೃಷ್ಣ ಅನಾರೋಗ್ಯದ ಕಾರಣ ಮತದಾನಕ್ಕೆ ಆಗಮಿಸದ ಕಾರಣ ಅವರ ಮತವನ್ನು ಎಂಎಲ್ ಸಿ ಗೋವಿಂದ ರಾಜು ಚಲಾಯಿಸಲು ಆಗಮಿಸಿದರು. ಇದಕ್ಕೆ ರೇವಣ್ಣ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಡಿಕೆಶಿ ಮತ್ತು ರೇವಣ್ಣ ನಡುವೆ ವಾಗ್ವಾದ ನಡೆಯಿತು. ನಂತರ ಚುನಾವಣೆ ಕೊಠಡಿಯಿಂದ ಹೊರ ಬಂದ ಡಿಕೆಶಿ ಹಾಗೂ ರೇವಣ್ಣ ಹೆಗಲ ಮೇಲೆ ಕೈ ಹಾಕಿ ಮಾಧ್ಯಮಗಳ ಮುಂದೆ ತಮಾಷೆ ಮಾಡಿದರು. ಇನ್ನು ಜೆಡಿಎಸ್ ಈ ಚುನಾವಣೆ ಪ್ರಕ್ರಿಯೆನ್ನು ವಿರೋಧಿಸಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಅಲ್ಲದೆ ಚುನಾವಣೆ ಮುಕ್ತಾಯಗೊಂಡ ನಂತರ ಚುನಾವಣ ಅಧಿಕಾರಿಗೂ ದೂರು ನೀಡಿದರು.

 

ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ

ರಾಜ್ಯಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜಿಲ್ಲಾಧ್ಯಕ್ಷರ ನೂತನ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಿದ್ದು, ರಾಜ್ಯ ಕಾರ್ಯಕಾರಿ ಸಮಿತಿ ಮಾದರಿಯಲ್ಲೇ ತಮ್ಮ ಬೆಂಬಲಿಗರಿಗೆ ಮಣೆ ಹಾಕಿದ್ದಾರೆ.

ಜಿಲ್ಲಾಧ್ಯಕ್ಷರ ಪಟ್ಟಿ ಮೊದಲೇ ಸಿದ್ಧವಾಗಿದ್ದು, ರಾಜ್ಯಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣದಿಂದ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಕಟಗೊಂಡಿರುವಂತಿದೆ.

ನೂತನ ಜಿಲ್ಲಾಧ್ಯಕ್ಷರ ಪಟ್ಟಿ ಹೀಗಿದೆ:

ಮೈಸೂರು ನಗರ- ಡಾ ಬಿ.ಎಚ್. ಮಂಜುನಾಥ್, ಮೈಸೂರು ಗ್ರಾಮಾಂತರ- ಎಂ. ಶಿವಣ್ಣ, ಚಾಮರಾಜನಗರ- ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಂಢ್ಯ- ನಾಗನಗೌಡ, ಹಾಸನ- ಹೆಚ್. ಯೋಗಾರಮೇಶ್, ಕೊಡಗು- ಎ.ಕೆ.ಮನುಮುತ್ತಪ್ಪ, ದಕ್ಷಿಣ ಕನ್ನಡ- ಸಂಜೀವ ಮಠಂದೂರು, ಉಡುಪಿ- ಮಟ್ಟಾರು ರತ್ನಾಕರ ಹೆಗ್ಗಡೆ, ಚಿಕ್ಕಮಗಳೂರು- ಡಿ.ಎನ್. ಜೀವರಾಜ, ಶಿವಮೊಗ್ಗ- ಎಸ್.ರುದ್ರೇಗೌಡ, ಉತ್ತರ ಕನ್ನಡ- ಕೆ.ಜಿ.ನಾಯ್ಕ ಸಿದ್ದಾಪುರ, ಹಾವೇರಿ- ಶಿವರಾಜ್ ಶರಣಪ್ಪ ಸಜ್ಜನರ್, ಹುಬ್ಬಳಳಿ- ಧಾರವಾಡ- ನಾಗೇಶ್ ಗುಲ್ಬುರ್ಗಿ, ಧಾರವಾಡ ಗ್ರಾಮಾಂತರ- ಈರಣ್ಣ ಜಡಿ, ಗದಗ- ಚಂದ್ರಕಾಂತ ಗೌಡ ಚನ್ನಪ್ಪಗೌಡ ಪಾಟೀಲ್, ಬೆಳಗಾವಿ ನಗರ- ಅನಿಲ್ ಬೆನಕೆ, ಬೆಳಗಾವಿ ಗ್ರಾಮಾಂತರ- ಡಾ.ವಿಶ್ವನಾಥ ಈರನಗೌಡ ಪಾಟೀಲ, ಚಿಕ್ಕೋಡಿ- ಶಶಿಕಾಂತ ಅಕ್ಕಪ್ಪ ನಾಯಿಕ, ಬಾಗಲಕೋಟೆ-ಸಿದ್ದು ಸವದಿ, ವಿಜಯಪುರ- ವಿಠಲ ದೋಂಡಿಬ ಕಟಕದೊಂಡ, ಬೀದರ್- ಡಾ. ಶೈಲೇಂದ್ರ ಕಾಶಿನಾಥ ಬೆಲ್ದಾಳೆ, ಕಲಬುರಗಿ ನಗರ- ಬಸವರಾಜ ಗಳಂಗಳಪ್ಪ ಪಾಟೀಲ, ಕಲಬುರಗಿ ಗ್ರಾಮಾಂತರ- ದೊಡ್ಡಪ್ಪಗೌಡ ಪಾಟೀಲ ನರೀಬೋಳ, ಯಾದಗಿರಿ- ಚಂದ್ರಶೇಖರ ಗೌಡ ಮಾಗನೂರು, ರಾಯಚೂರು- ಶರಣಪ್ಪಗೌಡ ಜಾಡಲದಿನ್ನಿ ಸಿರಿವಾರ,

ಕೊಪ್ಪಳ- ವಿರುಪಾಕ್ಷಪ್ಪ ಸಿಂಗನಾಳ, ಬಳ್ಳಾರಿ- ಎಸ್.ಗುರುಲಿಂಗನ ಗೌಡ, ದಾವಣಗೆರೆ- ಯಶವಂತರಾವ್ ಜಾಧವ್, ಚಿತ್ರದುರ್ಗ- ಕೆ.ಎಸ್.ನವೀನ್, ತುಮಕೂರು- ಜಿ.ಬಿ. ಜ್ಯೋತಿ ಗಣೇಶ್, ರಾಮನಗರ- ದೇವರಾಜ್ ಹುಳವಾಡಿ, ಬೆಂಗಳೂರು ಗ್ರಾಮಾಂತರ- ಕೆ.ನಾಗೇಶ್, ಚಿಕ್ಕಬಳ್ಳಾಪುರ- ಡಾ.ಜಿ.ವಿ. ಮಂಜುನಾಥ, ಕೋಲಾರ- ಬಿ.ಪಿ. ವೆಂಕಟ ಮುನಿಯಪ್ಪ, ಬೆಂಗಳೂರು ನಗರ ಜಿಲ್ಲೆ- ಎಸ್.ಮುನಿರಾಜು, ಬೆಂಗಳೂರು ನಗರ- ಪಿ.ಎನ್. ಸದಾಶಿವ

 

ಎನ್ ಎಸ್ ಜಿ ಸಭೆಯಲ್ಲಿ ಮೂಡದ ಸ್ಪಷ್ಟ ತೀರ್ಮಾನ, ಜೂನ್.20ಕ್ಕೆ ಅಂತಿಮ ನಿರ್ಧಾರ

ಅಣು ಪೂರೈಕೆ ಸಮೂಹ (ಎನ್ ಎಸ್ ಜಿ) ಗುಂಪಿನಲ್ಲಿ ಸದಸ್ಯತ್ವ ಪಡೆಯುವ ಭಾರತದ ಅರ್ಜಿಗೆ ಚೀನಾ ತನ್ನ ವಿರೋಧ ಮುಂದುವರಿಸಿದೆ. ಇದರೊಂದಿಗೆ ಶನಿವಾರ ವಿಯೆನ್ನಾದಲ್ಲಿ ಮುಕ್ತಾಯವಾದ ಎರಡು ದಿನಗಳ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬರಲಿಲ್ಲ. ಹೀಗಾಗಿ ಜೂನ್ 20ರಂದು ಸಿಯೋಲ್ ನಲ್ಲಿ ನಡೆಯಲಿರುವ ಸಭೆಯ ಮೇಲೆ ನಿರೀಕ್ಷೆ ಹೆಚ್ಚಿದೆ.

ಭಾರತದ ಸದಸ್ಯತ್ವಕ್ಕೆ ಗುರುವಾರವೇ ಅಮೆರಿಕ ಬೆಂಬಲ ಸೂಚಿಸಿತ್ತು. ಆದರೆ, ಕೆಲವು ರಾಷ್ಟ್ರಗಳು ಇದಕ್ಕೆ ವಿರೋಧಿಸಿದ್ದವು. ಆ ಪೈಕಿ ನ್ಯೂಜಿಲೆಂಡ್, ಟರ್ಕಿ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ತಮ್ಮ ವಿರೋಧದ ನಿರ್ಧಾರ ಸಡಿಲಗೊಳಿಸಿತಾದರೂ ಚೀನಾ ಮಾತ್ರ ತನ್ನ ಪಟ್ಟು ಬಿಡಲಿಲ್ಲ.

 

ಯುದ್ಧ ನೌಕೆಯಲ್ಲಿ ಅನಿಲ ಸೋರಿಕೆ 2 ಸಾವು

ಭಾರತದ ಅತಿದೊಡ್ಡ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ನಡೆದ ಅವಗಡದಲ್ಲಿ ಒಬ್ಬ ನಾವಿಕ ಹಾಗೂ ಕೆಲಸಗಾರ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಕರ್ನಾಟಕದ ಕಾರವಾರ ನೌಕಾ ನೆಲೆ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆ ಸುಮಾರಿಗೆ ಯುದ್ಧ ನೌಕೆಯಲ್ಲಿ ತ್ಯಾಜ್ಯ ನೀರು ಮತ್ತು ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯನ್ನು ಸರಿಪಡಿಸುವ ವೇಳೆ ಟಾಕ್ಸಿಕ್ ಹೊಗೆ ಸೇವನೆಯಿಂದ ಈ ಸಾವು ಸಂಭವಿಸಿದೆ ಎನ್ನಲಾಗಿದೆ.

 

ಒಲಿಂಪಿಕ್ಸ್ ನಲ್ಲಿ ಪೇಸ್ ಜೋಡಿಯಾಗಿ ಬೋಪಣ್ಣ

ಒಲಿಂಪಿಕ್ಸ್ ನ ಪುರುಷರ ಡಬಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಸಾಕೇತ್ ಮೈನೆನಿ ಜತೆಗೆ ಕಣಕ್ಕಿಳಿಸುವಂತೆ ರೋಹನ್ ಬೋಪಣ್ಣ ಅವರ ಅರ್ಜಿಯನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ನಿರಾಕರಿಸಿದೆ. ಶನಿವಾರ ಒಲಿಂಪಿಕ್ಸ್ ಗೆ ಭಾರತ ತಂಡವನ್ನು ಪ್ರಕಟಿಸಿದ ಎಐಟಿಎ ಪೇಸ್- ಬೋಪಣ್ಣ ಒಟ್ಟಿಗೆ ಆಡಬೇಕು ಎಂಬ ನಿರ್ಧಾರ ತೆಗೆದುಕೊಂಡಿದೆ. ಎಐಟಿಎ ಈ ನಿರ್ಧಾರದಿಂದ ಲಿಯಾಂಡರ್ ಪೇಸ್ ಸತತ 7ನೇ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಿಶ್ರ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಒಟ್ಟಾಗಿ ಕಣಕ್ಕಿಳಿಯಲಿದ್ದಾರೆ.

 

ರಾಹುಲ್ ದಾಖಲೆ ಶತಕ, ಟೀಂ ಇಂಡಿಯಾಗೆ ಜಯ

ಹರಾರೆ ಸ್ಫೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ (ಅಜೆಯ 100 ರನ್, 115 ಎಸೆತ, 7 ಬೌಂಡರಿ, 1 ಸಿಕ್ಸರ್) ದಾಖಲೆಯ ಶತಕ ದಾಖಲಿಸಿದರು. ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಹಾಗೂ ವಿಶ್ವದ 11ನೇ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಭಾಜನರಾದರು. ಈ ಜಯದೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಜಿಂಬಾಬ್ವೆ 49.5 ಓವರ್ ಗಳಲ್ಲಿ 168 ರನ್ ಗಳಿಗೆ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಭಾರತ 42.3 ಓವರ್ ಗಳಲ್ಲಿ 1 ವಿಕೆಟ್ ಗೆ 173 ರನ್ ದಾಖಲಿಸಿತು. ಶತಕ ದಾಖಲಿಸಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್: ಬಿಂಬಾಬ್ವೆ 49.5 ಓವರ್ ಗಳಲ್ಲಿ 168 (ಚಿಗುಂಬುರಾ 41, ಸಿಕಂದರ್ 23, ಬುಮ್ರಾ 28ಕ್ಕೆ 4); ಭಾರತ 42.3 ಓವರ್ ಗಳಲ್ಲಿ 1 ವಿಕೆಟ್ ಗೆ 173 (ರಾಹುಲ್ ಅಜೇಯ 100, ರಾಯುಡು ಅಜೇಯ 62, ಚಟಾರ 20ಕ್ಕೆ 1)

Leave a Reply