ರಾಜ್ಯಸಭೆ ಚುನಾವಣೆಯಲ್ಲೂ ಶೃತಪಟ್ಟ ಜೆಡಿಎಸ್ ‘ದೇಹಭಂಗ’, ರಾಮಮೂರ್ತಿ ಗೆಲುವಿನಲ್ಲಿದೆ ಸಿಎಂ- ಡಿಕೆಶಿ ಜಂಭ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆ ಚುನಾವಣೆಯಲ್ಲೂ ಶೃತಪಟ್ಟ ಜೆಡಿಎಸ್ ‘ದೇಹಭಂಗ’ವು ಪಕ್ಷದ ಅಭ್ಯರ್ಥಿ ಬಿ.ಎ. ಫಾರೂಕ್ ಸೋಲನ್ನು ಪೋಷಿಸಿದೆ. ಫಾರೂಕ್ 33 ಮತಗಳೊಂದಿಗೆ ಸೋತಿದ್ದಾರೆ. ದೇವೇಗೌಡರ ಕುಟುಂಬದ ಜತೆ ತೊಡೆ ತಟ್ಟಿ ನಿಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಜೋಡಿ ಕಾಂಗ್ರೆಸ್ ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಅವರನ್ನು ಎಲ್ಲರಿಗಿಂತ ಹೆಚ್ಚಿನ 52 ಮತಗಳೊಂದಿಗೆ ಗೆಲ್ಲಿಸಿಕೊಳ್ಳುವುದರೊಂದಿಗೆ ಜಂಭದ ನಗೆ ಬೀರಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ನ 8 ಮಂದಿ ಕಾಂಗ್ರೆಸ್ ಪ್ರಾಯೋಜಿತ ಅಭ್ಯರ್ಥಿ ರಾಮಮೂರ್ತಿ ಪರ ಚಲಾಯಿಸಿದ್ದಾರೆ. ನಿನ್ನೆ ಮೇಲ್ಮನೆ ಚುನಾವಣೆಯಲ್ಲಿ ಐವರು ಶಾಸಕರು ಅಡ್ಡಮತದಾನ ಮಾಡಿದ್ದರು. ಇಂದು ಆ ಸಂಖ್ಯೆ 8 ಕ್ಕೆ ಏರಿದ್ದು, ಜೆಡಿಎಸ್ ‘ದೇಹಭಂಗ’ ಆದಂತಾಗಿದೆ. ಚಲುವರಾಯಸ್ವಾಮಿ, ಜಮೀರ ಅಹಮದ್ ಖಾನ್, ಎಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅಹಮದ್ ಅನ್ಸಾರಿ ಅವರ ಜತೆಗೆ ರಮೇಶ್ ಬಂಡಿಸಿದ್ದೇಗೌಡ, ಭೀಮಾನಾಯಕ್ ಹಾಗೂ ಗೋಪಾಲಯ್ಯ ಅವರು ಕೆ.ಸಿ. ರಾಮಮೂರ್ತಿ ಪರ ಮತ ಚಲಾಯಿಸಿದವರು.

ಕುದುರೆ ವ್ಯಾಪಾರ, ಅದರ ಸ್ಟಿಂಗ್ ಆಪರೇಷನ್, ಸ್ಟಿಂಗ್ ಗೆ ಒಳಗಾದ ಶಾಸಕರ ತರೆಹೇವಾರಿ ಹೇಳಿಕೆ, ಪ್ರಕರಣದ ಸಿಬಿಐ ತನಿಖೆ ನಡುವೆಯೂ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಆಸ್ಕರ್ ಫರ್ನಾಂಡಿಸ್ (46 ಮತಗಳು), ಜೈರಾಂ ರಮೇಶ್ (47), ಕೆ.ಸಿ. ರಾಮಮೂರ್ತಿ ಹಾಗೂ ಬಿಜೆಪಿಯ ನಿರ್ಮಲಾ ಸೀತಾರಾಮನ್ (46) ಮತಗಳೊಂದಿಗೆ ಗೆಲವು ಸಾಧಿಸಿದ್ದಾರೆ. ಬಿಜೆಪಿ ಬಳಿ 44 ಮತಗಳಿದ್ದವು. ಪಕ್ಷೇತರರಾದ ಹಾಲಾಡಿ ಶ್ರೀನಿವಾಸಶೆಟ್ಟಿ, ಸುರೇಶ್ ಬಾಬು ಬಿಜೆಪಿ ಪರ ಮತ ಚಲಾಯಿಸಿದರು. ಉಳಿದವರ ಫಲಿತಾಂಶ ನಿರೀಕ್ಷಿತವೇ ಆಗಿತ್ತಾದರೂ, ಮತಕೊರತೆ ಎದುರಿಸುತ್ತಿದ್ದ ರಾಮಮೂರ್ತಿ ಹಾಗೂ ಜೆಡಿಎಸ್ ನ ಫಾರೂಕ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದಕ್ಕೆ ನಿರ್ಣಾಯಕರಾಗಿದ್ದ ಪಕ್ಷೇತರರ ಬೆಂಬಲದ ಜತೆಗೆ ಜೆಡಿಎಸ್ಸಿನ 8 ಮತಗಳನ್ನೂ ಕಬಳಿಸುವುದರಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಪಕ್ಷೇತರರ ಒಂದು ಮತ ಫಾರೂಕ್ ರಿಗೆ ಸಂದಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಿನ್ನೆ ನಡೆದ ಚುನಾವಣೆ ಮತದಾನ ವೈಖರಿಯಲ್ಲೇ ಇವತ್ತಿನ ಫಲಿತಾಂಶ ಅನುರಣಿಸಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಂಚಿ ಹೋಗಿದ್ದ ಪಕ್ಷೇತರರು ಹಾಗೂ ಜೆಡಿಎಸ್ ಬಿಟ್ಟು ಜಾರಿದ್ದ ಐವರು ಶಾಸಕರು ರಾಜ್ಯಸಭೆ ಚುನಾವಣೆ ಫಲಿತಾಂಶವನ್ನು ನಿನ್ನೆಯೇ ಬರೆದಿಟ್ಟಿದ್ದರು. ಇವತ್ತಿನ ಚುನಾವಣೆ ವಾಡಿಕೆಗೆ ಮಾತ್ರ ಸೀಮಿತವಾಗಿತ್ತು. 40 ಶಾಸಕರು ಇದ್ದ ಜೆಡಿಎಸ್ ಅಭ್ಯರ್ಥಿಗೆ ಸಿಕ್ಕಿರುವುದು 33 ಮತಗಳು ಮಾತ್ರ. 33 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ಸಿನ ತೃತೀಯ ಅಭ್ಯರ್ಥಿ ರಾಮಮೂರ್ತಿ ಅವರಿಗೆ ದಕ್ಕಿರುವುದು ಭರ್ಜರಿ 52 ಮತಗಳು. 11 ಪಕ್ಷೇತರರು, ಜೆಡಿಎಸ್ ನ 8 ಮಂದಿ  ರಾಮಮೂರ್ತಿ ಪರ ಮತ ಚಲಾಯಿಸಿದರು.

ಪಕ್ಷೇತರ ಶಾಸಕರಿಗೆ ತಲಾ ನೂರು ಕೋಟಿ ರುಪಾಯಿ ಕ್ಷೇತ್ರಾಭಿವೃದ್ಧಿ ನಿಧಿ, ಜತೆಗೊಂದಿಷ್ಟು ವೈಯಕ್ತಿಕ ನೆರವು ಸೇರಿದಂತೆ ನಾನಾ ಆಮಿಷಗಳನ್ನು ಒಡ್ಡಲಾಗುತ್ತಿದೆ. ಹೀಗಾಗಿ ಚುನಾವಣೆ ಮುಂದಕ್ಕೆ ಹಾಕಬೇಕು ಎಂದು ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಜತೆಗೆ ಇಂಡಿಯ ಟುಡೆ ಹಾಗೂ ಟೈಮ್ಸ್ ನೌ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲೂ ಶಾಸಕರ ಮತ ಖರೀದಿ ಕುರುಹುಗಳ ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗದಿಂದ ವರದಿ ತರಿಸಿಕೊಂಡು ಕೇಂದ್ರ ಚುನಾವಣೆ ಆಯೋಗವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.

ಜೆಡಿಎಸ್ ಗೆ ಈ ಚುನಾವಣೆ ಹಣೆಬರಹ ಮೊದಲೇ ಗೊತ್ತಿತ್ತಾದರೂ ಪಕ್ಷದ ಭಿನ್ನ ಶಾಸಕರ ನಿಲುವು ಖಚಿತ ಪಡಿಸಿಕೊಳ್ಳುವುದರ ಜತೆಗೆ ಜಗಜ್ಜಾಹೀರು ಮಾಡಲಷ್ಟೇ ಈ ಚುನಾವಣೆಯನ್ನು ಪ್ರಯೋಗಶಾಲೆ ಮಾಡಿಕೊಂಡಿತ್ತು. ಅವರ ವಿರುದ್ಧ ಕೈಗೊಳ್ಳುವ ಕ್ರಮಕ್ಕೆ ಸಾಕ್ಷಿ ಮಾಡಿಕೊಂಡಿತ್ತು. ಇದೀಗ ಭಿನ್ನಶಾಸಕರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಭಾನುವಾರ ಕರೆದಿರುವ ಕಾರ್ಯಕರ್ತರ ಸಭೆಯಲ್ಲಿ ಸಿಡಿಯಬಹುದಾದ ವಾಗ್ಸ್ಫೋಟಗಳಷ್ಟೇ ಕುತೂಹಲ ಹಿಡಿದಿಟ್ಟುಕೊಂಡಿದೆ. ಉಳಿದೆಲ್ಲವೂ ನಿರೀಕ್ಷಿತ. ಇವತ್ತಿನ ಚುನಾವಣೆ ಫಲಿತಾಂಶದಂತೆ.

1 COMMENT

  1. ಸರ್, ಹದವರಿತ ವಿಶ್ಲೇಷಣೆ, ಗೌಡರು ಗುಟುರು ಹಾಕುವುದಷ್ಟೇ ಬಾಕಿ

Leave a Reply