ವೆಂಕಯ್ಯ- ಕಪಿಲ್ ಆದಿಯಾಗಿ ದೊಡ್ಡ ಹೆಸರುಗಳೆಲ್ಲ ಗೆದ್ದವು, ಹರ್ಯಾಣದಲ್ಲಿಮಾಧ್ಯಮ ದೊರೆಯನ್ನು ಗೆಲ್ಲಿಸೋಕೆ ಕಾಂಗ್ರೆಸಿಗರು ಉಲ್ಟಾ ಹೊಡೆದ್ರಾ? ಜಾರ್ಖಂಡ್ ನಲ್ಲಿ ಬಂಧನ ತಂತ್ರ…

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಬಿಜೆಪಿಯಿಂದ ಕೇಂದ್ರ ಸಚಿವ ಚೌಧರಿ ವಿರೇಂದರ್ ಸಿಂಗ್, ವೆಂಕಯ್ಯ ನಾಯ್ಡು, ಮುಕ್ತಾರ್ ಅಬ್ಬಾಸ್ ನಕ್ವಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿಯ ತಂತ್ರವನ್ನು ಮೆಟ್ಟಿನಿಂತು ಉತ್ತರ ಪ್ರದೇಶದಲ್ಲಿ ಕ್ರಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

57 ಸ್ಥಾನಗಳ ಪೈಕಿ ಈಗಾಗಲೇ 30 ಸ್ಥಾನ ಅವಿರೋಧ ಆಯ್ಕೆಯಾಗಿದ್ದರಿಂದ ಶನಿವಾರ 7 ರಾಜ್ಯಗಳಲ್ಲಿ 27 ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಪೈಕಿ ಉತ್ತರಾಖಂಡ (ಎಸ್ಪಿ 7, ಬಿಎಸ್ಪಿ 2, ಬಿಜೆಪಿ 1, ಕಾಂಗ್ರೆಸ್ 1 ), ರಾಜಸ್ಥಾನ (ಬಿಜೆಪಿ 4), ಮಧ್ಯಪ್ರದೇಶ (ಬಿಜೆಪಿ 2, ಕಾಂಗ್ರೆಸ್ 1), ಜಾರ್ಖಂಡ್ (ಬಿಜೆಪಿ 2), ಹರ್ಯಾಣ (ಬಿಜೆಪಿ 2) ಉತ್ತರಾಖಂಡ (ಕಾಂಗ್ರೆಸ್ 1), ಕರ್ನಾಟಕ (ಕಾಂಗ್ರೆಸ್ 3, ಬಿಜೆಪಿ 1) ಸ್ಥಾನಗಳನ್ನು ಬಾಚಿಕೊಂಡವು. ಈ ಫಲಿತಾಂಶದೊಂದಿಗೆ ಬಿಜೆಪಿ ರಾಜ್ಯಸಭೆಯಲ್ಲಿ ಮೇಲುಗೈ ಸಾಧಿಸದಿದ್ದರೂ, ಕಾಂಗ್ರೆಸ್ ನಡುವಣ ಅಂತರವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದಕ್ಕೆ ತೃಪ್ತವಾಗಬೇಕಿದೆ.

ಈ ಚುನಾವಣೆಯಲ್ಲಿ ಕ್ರಾಂಗ್ರೆಸ್ ಗೆ ಸಾಧ್ಯವಾದಷ್ಟು ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ತನ್ನಿಂದಾದ ಎಲ್ಲ ಕಸರತ್ತು ನಡೆಸಿತು. ತಮ್ಮ ಪಕ್ಷದ ಅಭ್ಯರ್ಥಿ ಇಲ್ಲದಿದ್ದರೂ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿತ್ತು. ಅದರೊಂದಿಗೆ ಶತಾಯಗತಾಯ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸದಂತೆ ರಣತಂತ್ರ ಹೂಡಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಕಪಿಲ್ ಸಿಬಲ್ ಗೆ ಪ್ರತಿಸ್ಪರ್ಧಿಯಾಗಿ ಪ್ರೀತಿ ಮಹಾಪಾತ್ರ ಅವರ ಬೆನ್ನಿಗೆ ನಿಂತಿತ್ತು. ಅದೇ ಜಾರ್ಖಂಡ್ ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಎರಡೂ ಸ್ಥಾನಗಳನ್ನು ತಾನೇ ದಕ್ಕಿಸಿಕೊಳ್ಳಬೇಕೆಂಬ ಹಠದಲ್ಲಿದ್ದದ್ದು ಸ್ಪಷ್ಟ. ವಿಧಾನಸೌಧದ ಎದುರು ಪ್ರತಿಭಟನೆ ಮಾಡಿ ಸರ್ಕಾರದ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಳೆ ಪ್ರಕರಣವೊಂದರಲ್ಲಿ ಜೆಎಂಎಂ ಪಕ್ಷದ ಶಾಸಕರ ಏಕಾಏಕಿ ಬಂಧನಕ್ಕೆ ಇವತ್ತೇ ಆದೇಶ ಬಂದು ಅಲ್ಲೋಲಕಲ್ಲೋಲವಾಯಿತು. ಈ ಎಲ್ಲ ಬೆಳವಣಿಗೆಗಳು ರಾಜ್ಯಸಭೆ ಚುನಾವಣೆಗೆ ಟ್ವಿಸ್ಟ್ ನೀಡಿ ಸ್ಪರ್ಧೆ ರಂಗೇರುವಂತೆ ಮಾಡಿತ್ತು. ಇಲ್ಲಿನ 2 ಸ್ಥಾನಗಳ ಪೈಕಿ ಬಿಜೆಪಿಯ ಮುಖ್ತರ್ ಅಬ್ಬಾಸ್ ನಕ್ವಿ ಸುಲಭವಾಗಿ ಒಂದು ಸ್ಥಾನ ಗೆದ್ದುಕೊಂಡರು. ಎರಡನೇ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಹೇಶ್ ಪೊದಾರ್ ತಮ್ಮ ಪ್ರತಿಸ್ಪರ್ಧಿ ಜಾರ್ಖಂಡ್ ಮುಕ್ತಿ ಮೋರ್ಚಾದ ಬಸಂತ್ ಸೊರೆನ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ನಡೆಸಿದ ಕಾರ್ಯತಂತ್ರ ಯಶಸ್ವಿಯಾಗಿದೆ. ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ನ ಇಬ್ಬರೂ ಶಾಸಕರು ಮತ ಚಲಾಯಿಸಿದದರೂ, ತಮ್ಮ ಅಭ್ಯರ್ಥಿ ಗೆಲ್ಲಿಸಲು ಮಾತ್ರ ಸಾಧ್ಯವಾಗಲಿಲ್ಲ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕ್ರಾಂಗ್ರೆಸ್ ಗೆ ಮಾಯಾವತಿ ನೇತೃತ್ವದ ಬಿಎಸ್ಪಿಯಿಂದ ತಕ್ಕ ಮಟ್ಟಿಗೆ ಸಾಥ್ ಸಿಕ್ಕಿತು. ಉತ್ತರ ಪ್ರದೇಶದಲ್ಲಿ 11 ಸ್ಥಾನಗಳಿಗೆ 12 ಸ್ಪರ್ಧಿಗಳು ಕಣಕ್ಕಿಳಿದಿದ್ದರು. ಆ ಪೈಕಿ ನಿರೀಕ್ಷೆಯಂತೆ ಎಸ್ಪಿ 7, ಬಿಎಸ್ಪಿ 2, ಕಾಂಗ್ರೆಸ್ ಮತ್ತು ಬಿಜೆಪಿ 1 ಸ್ಥಾನವನ್ನು ಸುಲಭವಾಗಿ ಪಡೆದವು.

ಇಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು, ಕಾಂಗ್ರೆಸ್ ನ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಗೆಲವು. ಸಿಬಲ್ ಆಯ್ಕೆಯಲ್ಲಿ ಬಿಎಸ್ಪಿ ನೆರವು ಗಣನೀಯ ಪಾತ್ರ ವಹಿಸಿದೆ. ಆ ಮೂಲಕ ಪ್ರೀತಿ ಮಹಾಪಾತ್ರ ಅವರಿಗೆ ಬೆಂಬಲ ನೀಡುವ ಬಿಜೆಪಿ ರಣತಂತ್ರ ಫ್ಲಾಪ್ ಆಯಿತು. ಇನ್ನು ಬಿಜೆಪಿಯ ಶಾಸಕರೊಬ್ಬರು ಎಸ್ಪಿಗೆ ಅಡ್ಡ ಮತದಾನ ಮಾಡಿದ್ದು ಅಚ್ಚರಿ ಎನಿಸಿತು.

ಮತ್ತೊಂದೆಡೆ ಉತ್ತರಾಖಂಡದಲ್ಲಿ ನಡೆದ 1 ಸ್ಥಾನದ ಸ್ಪರ್ಧೆಯಲ್ಲಿ ಕಾಂಗ್ರೆಸ್ ನ ಪ್ರದೀಪ್ ತಮ್ತಾಗೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ ಎದುರಾಗಿತ್ತು. ಆದರೆ ತಮ್ತಾ ಈ ಇಬ್ಬರು ಪ್ರತಿಸ್ಪರ್ಧಿಗಳನ್ನು ಮಣಿಸುವಲ್ಲಿ ಸಫಲರಾದರು. ಪ್ರದೀಪ್ ತಮ್ತಾ ಜಯದಲ್ಲಿ ಮಾಯಾವತಿ ಬೆಂಬಲ ಟ್ರಂಪ್ ಕಾರ್ಡ್ ಆಗಿ ಪರಿಗಣಿಸಿದೆ.

ಮಧ್ಯಪ್ರದೇಶದ 3 ಸ್ಥಾನಗಳ ಪೈಕಿ ನಿರೀಕ್ಷೆಯಂತೆ ಬಿಜೆಪಿಯ ಎಂ.ಜೆ ಅಕ್ಬರ್ ಮತ್ತು ಅನಿಲ್ ಮದಾದೇವ್ ದವೆ ಗೆಲವು ಸಾಧಿಸಿದರು. ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ವಿವೇಕ್ ತಂಖಾ ಅವರಿಗೆ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ವಿನೋದ್ ಗೊಠಿಯಾರಿಂದ ಸ್ಪರ್ಧೆ ಏರ್ಪಟ್ಟಿತ್ತು. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ 1 ಮತದ ಕೊರತೆ ಎದುರಿಸಿತ್ತಾದರೂ ವಿವೇಕ್ (62 ಮತ), ವಿನೋದ್ (50) ಅವರನ್ನು ಮಣಿಸಿದರು. ಇಲ್ಲೂ ಕಾಂಗ್ರೆಸ್ ಗೆ ಅಭಯವಾಗಿ ನಿಂತಿದ್ದು ಮತ್ತದೇ ಬಿಎಸ್ಪಿ. ಇದರೊಂದಿಗೆ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು ಮಾಯಾವತಿ ಎಂಬುದರಲ್ಲಿ ಅನುಮಾನವಿಲ್ಲ.

ಇನ್ನು ಹರ್ಯಾಣದ ವಿಷಯಕ್ಕೆ ಬರೋದಾದ್ರೆ, ಇಲ್ಲಿ ಕಾಂಗ್ರೆಸ್ ಗೆ ತಮ್ಮದೇ ಪಕ್ಷದ ಶಾಸಕರಿಂದ ದೋಖಾ ಆಗಿದೆ. ಎರಡು ಸ್ಥಾನಗಳ ಪೈಕಿ ಒಂದನ್ನು ಬಿಜೆಪಿಯ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಚೌಧರಿ ವಿರೇಂದರ್ ಸಿಂಗ್ ಸುಲಭವಾಗಿ ಗೆದ್ದುಕೊಂಡಿದ್ದರು. ಇಲ್ಲಿ ರೋಚಕತೆ ಏರ್ಪಟ್ಟಿದ್ದು ಎರಡನೇ ಸ್ಥಾನಕ್ಕೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಪೈಕಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಭಾಷ್ ಚಂದ್ರ ಮೇಲುಗೈ ಸಾಧಿಸಿದರು. ಇವರು ಜೀ ಮಾಧ್ಯಮ ಸಮೂಹದ ಮುಖ್ಯಸ್ಥರು ಎಂಬುದು ಗಮನಾರ್ಹ. ಸುಭಾಷ್ ಅವರ ಗೆಲುವಿಗೆ ಕಾಂಗ್ರೆಸ್ ಶಾಸಕರ ಕೊಡುಗೆ ಮಹತ್ವದ ಪಾತ್ರ ವಹಿಸಿತ್ತು. ಕಾರಣ 14 ಕಾಂಗ್ರೆಸ್ ಶಾಸಕರ ಮತಗಳು ತಪ್ಪು ಗುರುತಿನ ಪರಿಣಾಮ ಅಸಿಂಧುವಾದವು. ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಡಲಾಗಿದೆ ಎಂದೂ ಕೇಳಿಬರುತ್ತಿದೆ. ಅಂತಿಮವಾಗಿ ಇದರ ಲಾಭವಾಗಿದ್ದು ಸುಭಾಷ್ ಚಂದ್ರ ಅವರಿಗೆ.

ರಾಜಸ್ಥಾನದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೇರಿದಂತೆ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಗೆ ಮೂರು ಸ್ಥಾನಗಳಲ್ಲಿ ಜಯ ಸುಲಭವಾಗಿತ್ತಾದರೂ ಕಡೆಯ ಸ್ಥಾನಕ್ಕೆ ಬಿಜೆಪಿಯ ಒಪಿ ಮಾತೂರ್ ಅವರಿಗೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ನೀಡಿದ್ದರು. ಈ ಸ್ಪರ್ಧೆಯಲ್ಲಿ ಮಾತೂರ್ ಜಯ ಗಳಿಸುವಲ್ಲಿ ಸಫಲರಾದರು.

Leave a Reply