ಈ ದೇಶದಲ್ಲಿ ದಿನಕ್ಕೆ 400 ಮಂದಿ ಸಾಯ್ತಿರೋದು ಉಗ್ರರ ದಾಳಿಗೂ ಅಲ್ಲ, ರೋಗದ ಕಾರಣಕ್ಕೂ ಅಲ್ಲ..

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಜನರ ಸಾವಿನ ಪ್ರಮಾಣದಲ್ಲಿ ರಸ್ತೆ ಅಪಘಾತದ ಪಾಲು ದೊಡ್ಡದಾಗಿದೆ. ಅದೂ 2015 ರಲ್ಲಿ ಪ್ರತಿ ದಿನಕ್ಕೆ 400 ಜನರ ಪ್ರಾಣ ಕಸಿಯುವಷ್ಟು ಮಟ್ಟಿಗೆ. ಹೌದು, ಇಂತಹ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಂಚಾರ ಸಚಿವಾಲಯದ ವರದಿ.

ಇದಕ್ಕೂ ಹಿಂದಿನ ವರ್ಷದ ವರದಿ ಪ್ರಕಾರ ರಸ್ತೆ ಅಪಘಾತದಲ್ಲಿ ಪ್ರತಿ ದಿನಕ್ಕೆ 1374 ಮಂದಿ ಎಂಬಂತೆ ಒಟ್ಟು 5,01,423 ಜನ ಪ್ರಾಣ ಕಳೆದುಕೊಂಡಿದ್ದರು. ದಿನದ ಲೆಕ್ಕ ಪರಿಗಣಿಸಿದಾಗ 2014 ರಲ್ಲಿ 382 ಹಾಗೂ 2011 ರಲ್ಲಿ 390 ರ ಸರಾಸರಿಯಲ್ಲಿ ಸಾವು ಸಂಭವಿಸಿತ್ತು. ಇದರಿಂದ ಕಳೆದ 2 ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ ಎಂಬುದು ಸಾಬೀತಾಗಿದೆ.

ಈ ವರದಿಯ ಅಂಕಿ ಅಂಶಗಳನ್ನು ಗುರುವಾರ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಂಚಾರ ಸಚಿವ ನಿತೀನ್ ಗಡ್ಕರಿ ಪ್ರಕಟಿಸಿದರು. ಈ ವರದಿ ಪ್ರಕಟಿಸುವಾಗ ಬಹುಶಃ ಸಚಿವರ ಮನಸ್ಸಿನಲ್ಲಿ ನೋವಿತ್ತು ಎಂಬುದನ್ನು ಅವರ ಮಾತುಗಳೇ ತಿಳಿಸುತ್ತವೆ. ಗಡ್ಕರಿ ಈ ವರದಿ ಬಿಡುಗಡೆ ಮಾಡಿ ಹೇಳಿದಿಷ್ಟು.

‘ಈ ವರದಿ ನೋಡಿದ ಜನರು ನಮ್ಮನ್ನು ಸಹಜವಾಗಿಯೇ ಟೀಕಿಸುತ್ತಾರೆ. ಟೀಕಿಸಲಿ, ಆದರೂ ಈ ವರದಿಯನ್ನು ಬಿಡುಗಡೆ ಮಾಡುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ರಸ್ತೆ ಅಪಘಾತ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೂ ಕಮ್ಮಿಯಾಗಿಲ್ಲ. ಈ ಸಾವಿನ ಪ್ರಮಾಣ ಯುದ್ಧ, ರೋಗ ಅಥವಾ ಉಗ್ರರ ದಾಳಿಯಿಂದಲ್ಲ, ಬದಲಿಗೆ ರಸ್ತೆ ಅಪಘಾತದಿಂದ. ಇದು ಮನಸಿಗೆ ಬಹಳ ನೋವು ತರುವ ಅಂಶ.’

ಈ ವರದಿಯ ಪ್ರಮುಖ ಅಂಶಗಳು ಹೀಗಿವೆ:

  • ಅಪಘಾತದಲ್ಲಿ ಮೃತಪಟ್ಟವರ ಸಾಲಿನಲ್ಲಿ ಉತ್ತರ ಪ್ರದೇಶ (17,666) ಅಗ್ರಸ್ಥಾನದಲ್ಲಿದೆ. ತಮಿಳುನಾಡು (15,642), ಮಹಾರಾಷ್ಟ್ರ (13,212) ನಂತರ ದ ಸ್ಥಾನಗಳಲ್ಲಿವೆ.
  • ಪ್ರತಿ ಗಂಟೆಗೆ 57 ಅಪಘಾತ ಹಾಗೂ 17 ಸಾವು ಸಂಭವಿಸುತ್ತಿವೆ. ಆ ಪೈಕಿ ಶೇ. 54 ರಷ್ಟು ಮಂದಿ 15 – 34 ವಯೋಮಾನದವರು ಸಾವನ್ನಪ್ಪುತ್ತಿದ್ದಾರೆ.
  • ಶೇ.77 ರಷ್ಟು ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದ ಸಂಭವಿಸುತ್ತಿವೆ. ರಸ್ತೆ ನಿರ್ಮಾಣದ ವೇಳೆ ಎಂಜಿನಿಯರ್ ಗಳ ಪ್ರಮಾದವೂ ಇದಕ್ಕೆ ಪ್ರಮುಖ ಕಾರಣ.
  • ವಾಹನಗಳ ಅಪಘಾತ ಪಟ್ಟಿಯಲ್ಲಿ ದ್ವಿಚಕ್ರವಾಹನ ಅಗ್ರಸ್ಥಾನದಲ್ಲಿದೆ. ಕಾರು, ಜೀಪ್ ಮತ್ತು ಟ್ಯಾಕ್ಸಿಗಳು ನಂತರದ ಸ್ಥಾನ ಪಡೆದಿವೆ. ದ್ವಿಚಕ್ರ ವಾಹನಗಳ ಅಪಘಾತ ಪ್ರಮಾಣದಲ್ಲಿ ಪ್ರತಿ ವರ್ಷ ಗಣನೀಯ ಪ್ರಮಾಣದ ಏರಿಕೆಯಾಗುತ್ತಿವೆ. 2013 ರಲ್ಲಿ ಶೇ. 26.3, 2014 ರಲ್ಲಿ ಶೇ. 27.3 ಮತ್ತು 2015 ರಲ್ಲಿ ಶೇ.28.8 ರಷ್ಟು ಹೆಚ್ಚಳವಾಗಿದೆ.
  • ರಾಜ್ಯವಾರು ಅಪಘಾತಗಳ ಪಟ್ಟಿಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಈ ರಾಜ್ಯದಲ್ಲಿ ಒಟ್ಟು 69,059 ಅಪಘಾತಗಳು ಸಂಭವಿಸಿದೆ. ಮಹಾರಾಷ್ಟ್ರ (63,805), ಮಧ್ಯಪ್ರದೇಶ (54,947) ಕರ್ನಾಟಕ (44,011), ಕೇರಳ (39.014), ಉತ್ತರ ಪ್ರದೇಶ (32,385), ಆಂಧ್ರಪ್ರದೇಶ (24,258), ರಾಜಸ್ಥಾನ (24,072), ಗುಜರಾತ್ (23,183), ತೆಲಂಗಾಣ (21,252), ಚತ್ತೀಸ್ಗಡ (14,446), ಪಶ್ಚಿಮ ಬಂಗಾಳ (13,208) ಮತ್ತು ಹರ್ಯಾಣ (11,174) ನಂತರದ ಸ್ಥಾನದಲ್ಲಿವೆ.

1 COMMENT

Leave a Reply