ಬಾಹ್ಯಾಕಾಶದಲ್ಲೂ ಭಾರತದ ಪಾರಮ್ಯ: ಹವಾಗುಣ ಬದಲಾವಣೆ, ಪ್ರಮಾಣೀಕರಿಸುವುದು 60 ದೇಶಗಳ ಹೊಣೆ

author-ananthramuಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಸ್ವಿಟ್ಜರ್ಲೆಂಡ್, ಅಮೆರಿಕ ಮತ್ತು ಮೆಕ್ಸಿಕೋ ಭೇಟಿ ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಒಟ್ಟು 48 ದೇಶಗಳ ಸದಸ್ಯರಿರುವ ಪರಮಾಣು ಪೂರೈಕೆ ದೇಶಗಳ ಗುಂಪಿಗೆ (ಎನ್.ಎಸ್.ಜಿ.) ಭಾರತವೂ ಸೇರಲು ಸಹಕರಿಸಿ ಎಂದು ಮೋದಿಯವರು ಕೇಳಿದಾಗ ಚೀನಾ, ನ್ಯೂಜಿಲೆಂಡ್, ಐರ್ಲೆಂಡ್, ಟರ್ಕಿ, ದಕ್ಷಿಣ ಆಫ್ರಿಕ, ಆಸ್ಟ್ರಿಯಾ ದೇಶಗಳ ವಿರೋಧವನ್ನು ಲೆಕ್ಕಿಸದೆ ಈ ಮೂರೂ ದೇಶಗಳು ಮೋದಿಯ ಹೆಗಲ ಮೇಲೆ ಕೈಇಟ್ಟವು. ನಮ್ಮ ಪ್ರಧಾನಿ ವಿಶ್ವಾಸದಿಂದ ಹಿಂತಿರುಗಿದ್ದಾರೆ. ಈ ಭೇಟಿಯನ್ನು ಪೂರ್ತಿ ರಾಜಕೀಯದ್ದು ಎನ್ನುವಂತಿಲ್ಲ. ಏಕೆಂದರೆ ಪರಮಾಣು ಶಕ್ತಿಯ ಸದ್ಬಳಕೆಗೆ ಇದು ಒಳ್ಳೆಯ ಪ್ರಸ್ತಾಪ; ಇದಕ್ಕೆ ತಂತ್ರಜ್ಞಾನದ ಆಯಾಮವೂ ಇದೆ.

ಇದರಷ್ಟೇ ಮಹತ್ವದ ಇನ್ನೊಂದು ಅಧಿವೇಶನ ಹೆಚ್ಚು ಸುದ್ದಿಮಾಡದೆ ಜಾರಿಹೋಯಿತು. ಮೋದಿ ಅವರ ವಿದೇಶ ಪ್ರವಾಸದ ಮುನ್ನಾ ದಿನವೇ, ಅಂದರೆ ಈ ತಿಂಗಳ 3ರಂದು ಅರವತ್ತು ರಾಷ್ಟ್ರಗಳು ದೆಹಲಿಯಲ್ಲಿ ಸಭೆಸೇರಿದ್ದವು. ಸಭೆ ಕರೆದದ್ದು ಭಾರತದ ಹೆಮ್ಮೆಯನ್ನು ಆಕಾಶದೆತ್ತರಕ್ಕೂ ಏರಿಸಿರುವ ಇಸ್ರೋ ಸಂಸ್ಥೆ-ಇದಕ್ಕೆ ಕೈಜೋಡಿಸಿದ್ದು ಫ್ರಾನ್ಸ್ ನ ಸ್ಪೇಸ್ ಏಜೆನ್ಸಿ. ಪರಮಾಣು ಪೂರೈಕೆದಾರರ ಗುಂಪಿಗೆ ಭಾರತವನ್ನು ಪರಿಗಣಿಸಬಾರದೆಂದು ಕ್ಯಾತೆ ತೆಗೆಯುತ್ತಿರುವ ಚೀನಾ, ದೆಹಲಿಯ ಸಮಾವೇಶದಲ್ಲಿ ಸೊಲ್ಲೆತ್ತಲಿಲ್ಲ. ಸ್ಪೇಸ್ ಫೇರಿಂಗ್(ಅಂತರಿಕ್ಷ ಸಂಶೋಧನೆಯಲ್ಲಿ ಗಾಢವಾಗಿ ತೊಡಗಿರುವ ದೇಶಗಳು) ರಾಷ್ಟ್ರಗಳದ್ದೂ ಒಂದು ದೊಡ್ಡ ಬಳಗವಿದೆ. ಅಂತರಿಕ್ಷದಲ್ಲಿ ಇವು ಸಕ್ರಿಯವಾಗಿವೆ. ಅವುಗಳ ಮಾತಿಗೂ ವೈಜ್ಞಾನಿಕ, ತಾಂತ್ರಿಕ, ರಾಜಕೀಯ ಕಿಮ್ಮತ್ತಿದೆ. ಭೂಮಿಗೆ ಒದಗಿರುವ ದುರ್ಗತಿ-ಹವಾಗುಣ ಬದಲಾವಣೆಗೆ ಕಾರಣವಾಗಿರುವ ಘೋರ ಸತ್ಯ ನಮ್ಮ ಕಣ್ಣೆದುರಿಗಿದೆ. ಈ ಸತ್ಯವನ್ನು ಮಾಪನ ಮಾಡಿ ಮುಂದಿಡುವುದು ಸಾಧ್ಯವಾಗುವುದು ಉಪಗ್ರಹಗಳಿಂದ ಮಾತ್ರ. ಈ ಸತ್ಯವು ಸ್ಪೇಸ್ ಫೇರಿಂಗ್ ದೇಶಗಳು ದಡಬಡನೆ ಭಾರತದ ಕಡೆಗೆ ಓಗೊಟ್ಟು ಬರಲು ಕಾರಣವಾಯಿತು. ಎಲ್ಲ ದೇಶಗಳಿಗಿಂತ ತನ್ನ ವಾಯುಗೋಳವನ್ನು ಗಬ್ಬುಮಾಡಿಕೊಂಡಿರುವ ಚೀನಾ ಇಲ್ಲಿ ನಿಷ್ಠುರ ಸತ್ಯವನ್ನು ಹೇಳಲೇಬೇಕಾಯಿತು. 1957ರಲ್ಲಿ ರಷ್ಯದ ಸ್ಪೂಟ್ನಿಕ್ ಉಡಾವಣೆಯೊಂದಿಗೆ ಆಕಾಶಯುಗ ಪ್ರಾರಂಭವಾಗಿದ್ದು ಹಳೆಯ ಮಾತು. ಈಗ ಅಂತರಿಕ್ಷದ ಖದರ್ ಬೇರೆಯದೇ ಆಗಿದೆ.

ಸದ್ಯಕ್ಕೆ ಎಲ್ಲ ರಾಷ್ಟ್ರಗಳ ಒಂದು ಸಾವಿರಕ್ಕೂ ಮಿಕ್ಕಿ ಉಪಗ್ರಹಗಳು (ಅಂತರಿಕ್ಷ ದೂರದರ್ಶಕ ಹಬಲ್ ಇತ್ಯಾದಿ ಸೇರಿದಂತೆ) ತಮ್ಮ ಕಕ್ಷೆಯಲ್ಲಿ ಭೂಮಿಯನ್ನು ಪರಿಭ್ರಮಿಸುತ್ತಿವೆ. ಒಂದೊಂದು ದೇಶವೂ ಅದಕ್ಕೆ ಬೇಕಾದ ಸೆನ್ಸಾರುಗಳನ್ನು ಇಟ್ಟು ಅದಕ್ಕೆ ಬೇಕಾದ ಮಾಹಿತಿಯನ್ನು ಪಡೆಯುತ್ತಿದೆ. 1975ರಲ್ಲಿ ಆರ್ಯಭಟ ಉಪಗ್ರಹವನ್ನು ಕಕ್ಷೆಗೆ ಸೇರಿಸಿದಂದಿನಿಂದ ಭಾರತದ 80ಕ್ಕೂ ಮಿಕ್ಕಿ ಉಪಗ್ರಹಗಳು ಕಕ್ಷೆಗೆ ಸೇರಿವೆ, ಸದ್ಯದಲ್ಲಿ ಎರಡು ಡಜನ್ ಉಪಗ್ರಹಗಳು ಕಾರ್ಯಶೀಲವಾಗಿವೆ. ದೂರಸಂಪರ್ಕ, ಭೂಸಂಪನ್ಮೂಲ ಸರ್ವೇ, ಹವಾಗುಣ ಅಧ್ಯಯನ, ಸಾಗರದ ಉಷ್ಣತೆಯ ಸರ್ವೇ, ಪವನವಿಜ್ಞಾನ ಅಧ್ಯಯನ, ಖಗೋಳ ವಿಜ್ಞಾನದ ಸಂಶೋಧನೆಗಳು ಇವೇ ಮುಂತಾದವು ಹೆಚ್ಚು ಕಡಿಮೆ ಎಲ್ಲ ದೇಶಗಳ ಉಪಗ್ರಹಗಳ ಗುರಿ.

CLIMATE

ಇದುವರೆಗೆ 6,600 ಉಪಗ್ರಹಗಳು ಕಕ್ಷೆಗೆ ಸೇರಿವೆಯೆಂದು ಅಂದಾಜು. ಮುದಿಯಾಗಿ, ನಿಷ್ಕ್ರಿಯವಾಗಿ ಆಯುಷ್ಯ ಕಳೆದುಕೊಂಡ ಉಪಗ್ರಹಗಳ ಲೆಕ್ಕವನ್ನು ಆಚೆಗಿಟ್ಟರೆ ಸುಮಾರು ನಲವತ್ತು ದೇಶಗಳಿಗೆ ಸೇರಿದ ಸಾವಿರಕ್ಕೂ ಮಿಕ್ಕಿ ಉಪಗ್ರಹಗಳು ಕಕ್ಷೆಯಲ್ಲಿ ಭರದಿಂದ ಸಾಗುತ್ತಿವೆ. ಟ್ರಾಫಿಕ್ ಜಾಮ್ ಆಗದಂತೆ ಬೇರೆ ಬೇರೆ ಎತ್ತರಗಳಲ್ಲಿ ಅವುಗಳ ಕಕ್ಷೆ ಇದೆ (ಕನಿಷ್ಠ 150 ಕಿಲೋ ಮೀಟರ್, ಗರಿಷ್ಠ 35,786 ಕಿಲೋ ಮೀಟರ್).

ದೆಹಲಿಯಲ್ಲಿ ಜೂನ್ 3ರಂದು ತುರ್ತಾಗಿ ಸಭೆ ಸೇರಿದ್ದಕ್ಕೆ ನಿರ್ದಿಷ್ಟ ಕಾರಣವಿದೆ. ಭಾರತ ಅಂತರಿಕ್ಷ ಸಾಧನೆಯಲ್ಲಿ ಸಾಕಷ್ಟು ಮುಂದಿದೆ. ಚಂದ್ರಯಾನ ಮಾಡಿದ್ದು, ಮೊದಲ ಯತ್ನದಲ್ಲೇ ಮಂಗಳಯಾನವನ್ನು ಯಶಸ್ವಿಯಾಗಿ ಸಾಧಿಸಿದ್ದು, 2008ರಲ್ಲಿ ಒಟ್ಟಿಗೆ ಹತ್ತು ಅನ್ಯ ದೇಶೀಯ ಉಪಗ್ರಹಗಳನ್ನು ಒಂದೇ ರಾಕೆಟ್ ಬಳಸಿ ಹಾರಿಸಿದ್ದು, ಇದೀಗ ಇದೇ ತಿಂಗಳು ಕೆನಡ, ಅಮೆರಿಕ, ಇಂಡೊನೇಷ್ಯ ಮತ್ತು ಜರ್ಮನಿಗೆ ಸೇರಿದ ಒಟ್ಟು 22 ಉಪಗ್ರಹಗಳನ್ನು ಮತ್ತೆ ಒಂದೇ ರಾಕೆಟ್ ಬಳಸಿ ಕಕ್ಷೆಗೆ ಸೇರಿಸುವ ತಯಾರಿಯಲ್ಲಿ ಇರುವುದು ಎಲ್ಲ ದೇಶಗಳಿಗೂ ಗೊತ್ತು. ಭರವಸೆ ಇಡಬಹುದಾದ ದೇಶ ಎಂಬ ನಂಬಿಕೆಯನ್ನು ಗಳಿಸಿದೆ.

ರಿಯೋ ಡಿ ಜನೈರೋನಲ್ಲಿ 1992ರ ಭೂಶೃಂಗ ಸಭೆ ಆದಮೇಲೆ ಅವೆಷ್ಟೋ ಶೃಂಗ ಸಭೆಗಳು ನಡೆದಿವೆ. ಆದರೆ ಕಳೆದ ಏಪ್ರಿಲ್ 22 ರಂದು (ವಿಶ್ವ ಭೂದಿನ) ಪ್ಯಾರಿಸ್ಸಿನಲ್ಲಾದ ಶೃಂಗಸಭೆ 195 ರಾಷ್ಟ್ರಗಳಿಗೂ ಬಿಸಿಮುಟ್ಟಿಸಿತ್ತು. ಜಾಗತಿಕ ಉಷ್ಣತೆಯ ಏರಿಕೆ ನಮ್ಮ ಆಹಾರ ಬೆಳೆಗಳಿಗೆ ಕುತ್ತು ತರುತ್ತದೆಂಬುದನ್ನು ಮನಗಂಡು ಕೊನೆಯ ಪಕ್ಷ ಕೈಗಾರಿಕಾ ಯುಗಕ್ಕೆ ಮುನ್ನ ವಾಯುಗೋಳದಲ್ಲಿದ್ದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣಕ್ಕಿಂತ 1.5 ಡಿಗ್ರಿ ಸೆಂ. ಹೆಚ್ಚಳಕ್ಕೆ ತಂದರೂ ಸಾಕು, ಜಗತ್ತು ಬಚಾವಾಗುತ್ತದೆ ಎಂಬ ಆಶಾಭಾವನೆ ವಿಶ್ವಸಂಸ್ಥೆಗಿದೆ. ನಿಜ, ನಮ್ಮ ಕಣ್ಣಮುಂದೆಯೇ ಭೂಮಿಗೆ ಒಂದಲ್ಲ ನೂರಾರು ಆಪತ್ತುಗಳು ಎರಗಿವೆ. ಹಿಮಾಲಯದ ಹಿಮನದಿಗಳು ಕರಗುತ್ತಿವೆ, ಗಂಗೋತ್ರಿ ಹಿಮನದಿ 1817ರಿಂದ ಈವರೆಗೆ ಮೂರು ಕಿಲೋ ಮೀಟರ್ ಹಿಂದೆ ಸರಿದಿದೆ, ಉತ್ತರ ಧ್ರುವದ ಬಳಿಯ ಅಲಾಸ್ಕ ಸುತ್ತಮುತ್ತ ಮೀಥೇನ್ ಉತ್ಸರ್ಜನೆ ಹೆಚ್ಚಾಗುತ್ತಿದೆ. ಹಿಮದ ವಿಸ್ತಾರ ಕರಗಿ ಹಿಮಕರಡಿಗಳು ಕಂಗೆಟ್ಟಿವೆ. ಸಾಗರಗಳಲ್ಲೋ ಪದೇಪದೇ ಚಂಡಮಾರುತಗಳಾಗುತ್ತಿವೆ. ಹಿಂದೆಂದೂ ಕಾಣದಷ್ಟು ಬರ ತನ್ನ ಕಬಂಧ ಬಾಹುವನ್ನು ಎಲ್ಲ ದೇಶಗಳಿಗೂ ವಿಸ್ತರಿಸುತ್ತಿದೆ. ಆಸ್ಟ್ರೇಲಿಯದ ಗ್ರೇಟ್ ಬ್ಯಾರಿಯರ್ ರೀಫ್ ಸೇರಿದಂತೆ ನೂರಾರು ಹವಳ ದ್ವೀಪಗಳು ಸಾಗರದಲ್ಲಿ ಆಮ್ಲೀಯತೆ ಹೆಚ್ಚಿದ್ದರಿಂದ ಬಿಳಿಚಿಕೊಳ್ಳುತ್ತಿದೆ. ಕಾಡ್ಗಿಚ್ಚು ಪ್ರಸಂಗಗಳು ಅನೂಹ್ಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಕಾರ್ಬನ್ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ನೀರಿನ ಬಾಷ್ಪ ಎಲ್ಲವೂ ಭೂತಾಪಮಾನವನ್ನು ಹೆಚ್ಚಿಸುತ್ತಿವೆ. ಇವಕ್ಕೆ ಬ್ರೇಕ್ ಹಾಕುವ ಸಮಯ ಬಂದಿದೆ.

ಈಗ ಭೂಮಿಗೆ ಆಗಿರುವ ಡ್ಯಾಮೇಜನ್ನು ಅಂಕೆಅಂಶಗಳ ಮೂಲಕ ತರೆದಿಡಲು ‘ಡೆಡಿಕೇಟೆಡ್’ ಉಪಗ್ರಹಗಳೇ ಬೇಕಾಗಿಲ್ಲ. ಇಸ್ರೋ ಸಂಸ್ಥೆ ಹೇಳುವಂತೆ ಹವಾಗುಣ ಬದಲಾವಣೆಗೆ ಕಾರಣವಾಗುವ ಸುಮಾರು 50 ಅಂಶಗಳಲ್ಲಿ 25 ಅಂಶಗಳನ್ನು ಈಗ ಕ್ರಿಯಾಶೀಲವಾಗಿರುವ ಬೇರೆ ಬೇರೆ ದೇಶದ ಉಪಗ್ರಹಗಳಿಂದಲೇ ಅರಿಯಬಹುದು. ಸಾಗರದಲ್ಲಿ ಉಷ್ಣತೆಯ ಏರುಪೇರನ್ನು ಅಳೆಯಲು ನಮ್ಮದೇ ಆದ ಓಷನ್ ಸ್ಯಾಟ್ ಉಪಗ್ರಹವಿದೆ. ಧ್ರುವಪ್ರದೇಶಗಳಲ್ಲಿ ಹಿಮದ ವಿಸ್ತೀರ್ಣ ಹಿಗ್ಗುತ್ತಿದೆಯೇ ಕುಗ್ಗುತ್ತಿದೆಯೇ ಎನ್ನುವುದನ್ನು ನಿಂಬಸ್ ಉಪಗ್ರಹದಲ್ಲಿ ಇಟ್ಟಿರುವ ಸೆನ್ಸಾರ್‍ಗಳೇ ಅಳೆಯಬಲ್ಲವು. ಕಾರ್ಬನ್ ಡೈ ಆಕ್ಸೈಡ್ ಚಕ್ರವನ್ನು ಸಂಪೂರ್ಣವಾಗಿ ಅಳೆಯಲು ‘ಆರ್ಬಿಟಿಂಗ್ ಕಾರ್ಬನ್ ಅಬ್‍ಸರ್ವೇಟರಿ’ ಎನ್ನುವ ಉಪಗ್ರಹ ಈಗಾಗಲೇ ಕಾರ್ಯಶೀಲವಾಗಿದೆ. 1990ರಿಂದ ಜಾಗತಿಕವಾಗಿ 14.5 ದಶಲಕ್ಷ ಹೆಕ್ಟೇರು ಉಷ್ಣವಲಯದ ಕಾಡುನಾಶವಾಗಿದೆ ಎಂದು ಉಪಗ್ರಹಗಳು ತೆಗೆದ ಛಾಯಾಚಿತ್ರಗಳನ್ನಾಧರಿಸಿ ವಿಶ್ವಸಂಸ್ಥೆಯೇ ವರದಿಮಾಡಿದೆ.

ಈಗ ಈ ಎಲ್ಲ ಉಪಗ್ರಹಗಳು ಕೊಡುವ ಮಾಹಿತಿಯಿಂದ ಭೂಮಿಯ ಮೇಲಾಗಿರುವ ಆಕ್ರಮಣವನ್ನು ಉಪಗ್ರಹಗಳ ಮಾಹಿತಿಯ ಕ್ರೋಡೀಕರಣದಿಂದ, ದೃಶ್ಯರೂಪದಲ್ಲಿ ತೆರೆದಿಡಬಹುದು. ಈ ಕೆಲಸ ಮೊದಲಾಗಬೇಕು ಎನ್ನುವುದು ಎಲ್ಲ ದೇಶಗಳ ಅರಿವಿಗೆ ಬಂದಿದೆ. ಭಾರತ ಇದಕ್ಕೆ ಮುನ್ನುಡಿ ಬರೆದಿದೆ. ಇದಿಷ್ಟೇ ಸಾಕು ನಮ್ಮ ಪ್ರಜ್ಞೆಯನ್ನು ಮತ್ತೆ ಮತ್ತೆ ಜಾಗೃತಗೊಳಿಸಲು.

ಯೂಟ್ಯೂಬಿನಿಂದ ಆಯ್ದ ಹವಾಮಾನ ಕಾಳಜಿಯ ದೃಶ್ಯಗುಚ್ಛ…

Leave a Reply