ಜೆಡಿಎಸ್ ನ 8 ಶಾಸಕರು ಅಮಾನತು, ಸೈನಾ ನೆಹ್ವಾಲ್ ಮುಡಿಗೆ ಆಸ್ಟ್ರೇಲಿಯನ್ ಓಪನ್, ‘ಸಂಪ್ರದಾಯಬದ್ಧ’ ಸಿಎಂ ಹೊಸಕಾರು, ಕೋಲಾರ ಶಾಶ್ವತ ನೀರಿನಾಗ್ರಹಕ್ಕೆ ಚಿತ್ರರಂಗದ ಬೆಂಬಲ, ಪ್ರತ್ಯೇಕತಾವಾದಿಗಳ ಬಗ್ಗೆ ಮುಫ್ತಿ ಮೃದು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ….

ಯಾರಿಗ್ಹೇಳಣಾ ನಮ್ಮ ಪ್ರಾಬ್ಲಮ್ಮು.. ಜೆಡಿಎಸ್ ಸಭೇಯಲ್ಲಿ ದೇವೇಗೌಡರ ಒಂದು ಭಾವಭಂಗಿ

ಡಿಜಿಟಲ್ ಕನ್ನಡ ಟೀಮ್:

ಜಮೀರ್ ಅಹ್ಮದ್,  ಚೆಲುವರಾಯಸ್ವಾಮಿ, ಎಚ್. ಸಿ. ಬಾಲಕೃಷ್ಣ ಸೇರಿದಂತೆ  ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ 8 ಶಾಸಕರನ್ನು ಜೆಡಿಎಸ್ ಭಾನುವಾರ ಅಮಾನತುಗೊಳಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಿತು. ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಘೋಷಣೆ- ಗದ್ದಲಗಳು ಶುರುವಾಗಿ ಕೆಲಕಾಲ ವೇದಿಕೆಯಲ್ಲಿದ್ದ ನಾಯಕರ ಮಾತುಗಳು ಕೇಳದ ಸ್ಥಿತಿ ನಿರ್ಮಾಣವಾಗಿತ್ತು. ಶಾಸಕರ ಅಮಾನತು ನಿರ್ಧಾರ ಪ್ರಕಟಿಸಿದ ವೈ. ಎಸ್. ವಿ ದತ್ತ, ಇವರು ಬಹಳ ಕಾಲದಿಂದಲೂ ಮಾಡುತ್ತಿರುವ ಪಕ್ಷವಿರೋಧಿ ಚಟುವಟಿಕೆಗಳನ್ನು ಗಮನಿಸಿ ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಮನವಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಉಪಸ್ಥಿತಿ ಇತ್ತು. ಎಚ್. ಡಿ. ರೇವಣ್ಣ ಮಾತನಾಡುತ್ತ ‘ಇವರೆಲ್ಲ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಟಿಕೇಟಿನಿಂದ ಗೆದ್ದುಬರಲಿ’ ಅಂತ ಸವಾಲು ಹಾಕಿದರು. ಆದರೆ ಕುಮಾರಸ್ವಾಮಿ ಮಾತ್ರ ಸಭೆಯಲ್ಲಿ ಹಾಜರಿರದೇ ಇದ್ದದ್ದು ಗಮನಾರ್ಹ. ಅವರು ಮಗನ ಚಿತ್ರೀಕರಣ ಪ್ರಯುಕ್ತ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

  • ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕೋಲಾರದ ಜನರಿಗೆ ಭಾನುವಾರ ಕನ್ನಡ ಚಿತ್ರರಂಗ ಜತೆಯಾಯಿತು. ಚಿತ್ರರಂಗದ ಪ್ರಮುಖರಾದ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಮುಂತಾದವರು ಜನರ ನಡುವೆ ತೆರಳಿ ‘ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂಬ ಸಂದೇಶ ಸಾರಿದರು.
  •  ಮುಖ್ಯಮಂತ್ರಿಗಳ ಸೇವೆಗೆ ಹೊಸಕಾರು ಬಂದಿದೆ. ಈ ಕಾರು ಬದಲಾವಣೆಗೆ ಈ ಹಿಂದಿನ ಕಾರಿನ ಮೇಲೆ ಕಾಗೆ ಕುಳಿತಿದ್ದೇ ಕಾರಣವೇ ಎಂಬುದು ಸಾಮಾಜಿಕ ತಾಣಗಳಲ್ಲಿ ವಿಪರೀತ ಚರ್ಚೆಯಾಗುತ್ತಿರುವ ಅಂಶ. ಇಲ್ಲ, ಇದು ಕಾಕತಾಳೀಯ ಅಷ್ಟೇ, ಇಲ್ಲಿ ಶಕುನ ನಂಬಿಕೆಗಳೇನಿಲ್ಲ ಎಂದು ಸಿಎಂ ಪರ ವಕ್ತಾರರು ಹೇಳುತ್ತಿದ್ದಾರೆ. ಆದರೆ ಪೂಜೆಗೊಂಡಿರುವ ಕುರುಹಾಗಿ ಹಾರ ಸಿಂಗಾರ, ಓಂ ಮುದ್ರೆ ಎಲ್ಲವನ್ನೂ ಹೊತ್ತು ನಳನಳಿಸುತ್ತಿರುವ ಕಾರು ಮಾತ್ರ ವ್ಯಂಗ್ಯದ ನಗೆ ಬೀರುತ್ತಿರುವಂತೆ ಕಂಡರೆ ಅಚ್ಚರಿ ಏನಿಲ್ಲ.

cm car

  • ಚೀನಾದ ಸುನ್ ಯೂ ಅವರನ್ನು ಮೂರು ಪಂದ್ಯಗಳ ಫೈನಲ್ ನಲ್ಲಿ ಸೋಲಿಸುವ ಮೂಲಕ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಆಸ್ಟ್ರೇಲಿಯನ್ ಒಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದು ರಿಯೋ ಒಲಿಂಪಿಕ್ಸ್ ಗೆ ಉತ್ತಮ ಬಲ ಒದಗಿಸಿದೆ. 2014ರಲ್ಲಿ ಇದೇ ಪ್ರಶಸ್ತಿಯನ್ನು ಸೈನಾ ಗೆದ್ದಿದ್ದರು.
  •  ಅಲಹಾಬಾದ್ ನಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ತಯಾರಿಯೇ ಪ್ರಮುಖ ಚರ್ಚೆಯ ಅಂಶವಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ರವಿಶಂಕರ್ ಪ್ರಸಾದ್ ಮಾತ್ರ ಸರ್ಕಾರದ ಈವರೆಗಿನ ಸಾಧನೆಗಳನ್ನು ಮತ್ತೊಮ್ಮೆ ಮಾಧ್ಯಮದ ಮುಂದೆ ಬಣ್ಣಿಸಿ, ‘ಇವೆಲ್ಲ ಸಭೆಯಲ್ಲಿ ಚರ್ಚೆಯಲ್ಲಾದವು. ಇಪ್ಪತ್ತನೇ ಶತಮಾನ ಆರಂಭವಾದಾಗ ಭಾರತದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿತ್ತು. ನಂತರದ ಹತ್ತು ವರ್ಷದ ಯುಪಿಎ ಸರ್ಕಾರದಲ್ಲಿ ವಿಕಾಸಪರ್ವ ಕೊನೆಗೊಂಡಿತು. ಈಗ ನಾವು ನಿರ್ಧಾರಿತ ನಾಯಕತ್ವ ಕೊಡುತ್ತಿದ್ದೇವೆ’ ಎಂಬ ಅಭಿಮತ ವ್ಯಕ್ತವಾಗಿದೆ. ಕಾಂಗ್ರೆಸ್ ಕ್ಷೀಣಗೊಳ್ಳುತ್ತಿರುವುದರ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಪ್ರಸ್ತಾಪಿಸಿ, ಇದು ಅವರ ತಪ್ಪು ಸಿದ್ಧಾಂತಗಳಿಂದ ಆದದ್ದು ಎಂದಿದ್ದಾರೆ ಎಂದು ತಿಳಿಸಿದರು. ಇದರೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಗಳು, ಅದರಲ್ಲೂ ಹಿಂಸೆಯ ವಾತಾವರಣ ಇರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರ ವಿಫಲವಾಗಿದ್ದು, ಇಲ್ಲಿ ಸರ್ಕಾರ ಸ್ಥಾಪನೆ ಬಿಜೆಪಿ ಗುರಿ ಎಂದಿದ್ದಾರೆ.
  • ಜಮ್ಮು-ಕಾಶ್ಮೀರದಲ್ಲಿ ಮತ್ತೆ ಸೈದ್ಧಾಂತಿಕ ತಿಕ್ಕಾಟ ಪ್ರಾರಂಭವಾಗಿದೆ. ಪ್ರಸ್ತಾವಿತ ಸೈನಿಕ ಕಾಲೊನಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸೈಯದ್ ಶಾ ಗಿಲಾನಿ ಮತ್ತಿತರ ಪ್ರತ್ಯೇಕತಾವಾದಿ ನಾಯಕರನ್ನು ಗೃಹಬಂಧನದಲ್ಲಿರಿಸಲು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಿರಾಕರಿಸಿದ್ದಾರೆ. ಇತ್ತ, ಭವಾನಿ ದೇವಸ್ಥಾನದಲ್ಲಿ ವಾರ್ಷಿಕ ಕಾರ್ಯಕ್ರಮ ಆರಂಭವಾಗಿದ್ದು ಅಲ್ಲಿ ಪೂಜೆಗಾಗಿ ಕಾಶ್ಮೀರಿ ಪಂಡಿತರು ಕಣಿವೆಗೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಹ ಪಂಡಿತರ ಪೂಜಾ ಸಂಭ್ರಮದಲ್ಲಿ ಪಾಲ್ಗೊಂಡರು. ಪಂಡಿತರು ಕಾಶ್ಮೀರಕ್ಕೆ ತೆರಳುತ್ತಿದ್ದ ಬಸ್ಸಿನ ಮೇಲೆ ಅಪರಿಚಿತರು ಕಲ್ಲೆಸೆದು ಇಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದಾರೆ.

Leave a Reply