ಭಾರತ- ಅಮೆರಿಕ ಮಿಲಿಟರಿ ಸಹಯೋಗ ಬಲು ಜೋರು, ಹಾಗಂತ ಚೀನಾ ಏನ್ ಕಡ್ಲೆಪುರಿ ತಿಂತಿಲ್ಲ ಹುಷಾರು!

ಚೈತನ್ಯ ಹೆಗಡೆ

ಸೌತ್ ಚೀನಾ ಸೀ…

ಜೂನ್ 10ರಿಂದ ದಕ್ಷಿಣ ಚೀನಾ ಸಮುದ್ರ ಎಂದು ಗುರುತಿಸಿಕೊಳ್ಳುವ ಸಮುದ್ರ ಭಾಗಕ್ಕೆ ಅತಿ ಹತ್ತಿರದಲ್ಲಿ ಭಾರತ- ಅಮೆರಿಕ- ಜಪಾನ್ ಗಳ ಯುದ್ಧನೌಕೆಗಳು ಜಂಟಿಯಾಗಿ ತಾಲೀಮಿನಲ್ಲಿ ತೊಡಗಿಕೊಂಡಿವೆ.

ಹಾಗಂತ ಇದು ತುಂಬ ಹೊಸ ವಿದ್ಯಮಾನ ಎಂದೇನೂ ಉತ್ಪ್ರೇಕ್ಷೆ ಮಾಡಬೇಕಿಲ್ಲ. ಆದರೆ ಹಿಂದಿಗಿಂತ ಮಹತ್ತ್ವ ಇದ್ದೇ ಇದೆ. 2002ರಿಂದಲೇ ಅಮೆರಿಕ ಮತ್ತು ಭಾರತಗಳು ನಡೆಸಿಕೊಂಡು ಬರುತ್ತಿದ್ದ ಈ ಸಾಗರ ವ್ಯಾಯಾಮವು ‘ಮಲ್ಬಾರ್ ಸಮರಾಭ್ಯಾಸ’ ಎಂದೇ ಹೆಸರಾಗಿದೆ. ಆದರೆ ಈ ಬಾರಿ ಜಪಾನ್ ಇದರಲ್ಲಿ ಸೇರಿಕೊಂಡಿದೆ. ಅಷ್ಟೇ ಅಲ್ಲ ಮೋದಿ- ಒಬಾಮಾ ಮಿಲಿಟರಿ ಮೈತ್ರಿ ಎಷ್ಟರಮಟ್ಟಿಗೆ ಹೊಳಪು ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಜಗತ್ತೇ ಸಾಕ್ಷಿಯಾಗಿದೆ. ಮೊನ್ನಿನ ಭಾಷಣದಲ್ಲಿ ಪ್ರಧಾನಿ ಮೋದಿ ತುಂಬ ಸ್ಪಷ್ಟವಾಗಿ, ‘ಭಾರತ ಚೆನ್ನಾಗಿದ್ದರೆ ಅಮೆರಿಕಕ್ಕೆ ಕಾರ್ಯತಂತ್ರ ದೃಷ್ಟಿಯಿಂದ ಲಾಭವಿದೆ. ನಾವಿಬ್ಬರೂ ಸೇರಿ ಸಮುದ್ರ ಮಾರ್ಗವನ್ನು ಫೆಸಿಫಿಕ್ ಕಡಲಾಚೆಗೂ ಮುಕ್ತವಾಗಿ ಇಡಬಹುದು’ ಎಂದೆಲ್ಲ ಹೇಳಿರುವುದು ಚೀನಾದ ಸಮುದ್ರ ಸ್ವಾಮ್ಯವನ್ನು ತಡೆಯೋಣ ಎಂಬ ನೇರ ಅರ್ಥವನ್ನೇ ಸಾರಿದೆ. ಇದರ ಬೆನ್ನಲ್ಲಿ ಆಗುತ್ತಿರುವ ಸಮರಾಭ್ಯಾಸ ಹಾಗೂ ಈ ಬಾರಿ ಜಪಾನ್ ಅನ್ನು ಸೇರಿಸಿಕೊಂಡಿರೋದು ಇವೆರಡೂ ಮುಖ್ಯ ಅಂಶ. ಏಕೆಂದರೆ ದಕ್ಷಿಣ ಚೀನಾ ಸಮುದ್ರದ ಕಾರ್ಯವ್ಯಾಪ್ತಿ ವಿಷಯದಲ್ಲಿ ಚೀನಾದ ಜತೆ ತಕರಾರು ಇರಿಸಿಕೊಂಡಿರುವು ದೇಶಗಳ ಪೈಕಿ ಜಪಾನ್ ಪ್ರಮುಖ.

ಅದೇಕೆ ಸೌತ್ ಚೀನಾ ಸೀ ಈಗ ಈ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ? ಇದಕ್ಕೂ ಮೊದಲು ಅಮೆರಿಕಕ್ಕಾಗಲೀ, ಭಾರತಕ್ಕಾಗಲೀ ಈ ಸಮುದ್ರ ಭಾಗ ಆತಂಕ ಹುಟ್ಟಿಸಿರಲಿಲ್ಲವೇಕೆ? ಹಾಗಾದರೆ ಚೀನಾ ವಿರುದ್ಧ ಭಾರತ- ಅಮೆರಿಕಗಳದ್ದು ಕಾಲು ಕೆರೆದು ಜಗಳಕ್ಕೆ ಹೋಗುವ ಮನಸ್ಥಿತಿಯೇ?

ಇಲ್ಲ..

ಸೌತ್ ಚೀನಾ ಸೀ ಮೇಲೆ ಚೀನಾ ಪಾರುಪತ್ಯ ಈ ರೀತಿ ಬೆಳೆದಿರಲಿಲ್ಲ. ಇಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುತ್ತ, ಸುತ್ತಲಿನ ರಾಷ್ಟ್ರಗಳನ್ನೆಲ್ಲ ಹೆದರಿಸುತ್ತ ಈ ಸಮುದ್ರಭಾಗವನ್ನು ಚೀನಾ ಸಂಪೂರ್ಣ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದು ಜಾಗತಿಕ ವ್ಯಾಪಾರ ಮಾರ್ಗದ ಮೇಲೆ ಭಾರಿ ಪರಿಣಾಮ ಬೀರುವಂಥದ್ದು. ಈ ಸೌತ್ ಚೀನಾ ಸಮುದ್ರದ ನಂತರವೇ ಪೆಸಿಫಿಕ್ ಸಾಗರ ಇರೋದು. ಸೌತ್ ಚೀನಾ ಸಮುದ್ರ ಕೇವಲ ಚೀನಾ ಕೈಯಲ್ಲಿ ಮಾತ್ರ ಸೇರಿದರೆ ಅತ್ತ ಪೆಸಿಫಿಕ್ ನಿಂದ ಬರುವ ಯಾರನ್ನೂ ತಡೆಯಬಲ್ಲ ಶಕ್ತಿ ಅದಕ್ಕೆ ದಕ್ಕುತ್ತದೆ.

South-China-Sea

ಹೀಗಾಗಿಯೇ…

ದಕ್ಷಿಣ ಚೀನಾ ಸಮುದ್ರದ ಹತ್ತಿರದಲ್ಲಿ ಅಭ್ಯಾಸಕ್ಕಿಳಿದಿರುವ ಅಮೆರಿಕ-ಭಾರತ- ಜಪಾನ್ ಯುದ್ಧ ನೌಕೆಗಳು ಅಲ್ಲಿ ಜಲಾಂತರ್ಗಾಮಿಗಳನ್ನು ಹುಡುಕಿ ಹೊಡೆಯುವ, ಹಡಕಿನಿಂದ ಯುದ್ಧವಿಮಾನಗಳನ್ನು ಬಾನಿಗೇರಿಸುವ, ಹಡಗಿನಿಂದ ಕ್ಷಿಪಣಿ ಚಿಮ್ಮುವ ಅಣಕು ಕಸರತ್ತುಗಳನ್ನೆಲ್ಲ ಮಾಡುತ್ತವೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, ಇಂಥ ಎಲ್ಲ ಅಣಕು ಕಾರ್ಯಾಚರಣೆಗಳಲ್ಲಿ ಗುರಿಯಾಗಿಸುವ ಸಬ್ಮೆರಿನ್ ಇತ್ಯಾದಿಗಳನ್ನು ಚೀನಿಯರದ್ದು ಎಂಬಂತೆ ಅಣಕು ಪ್ರತಿಕೃತಿಗಳನ್ನು ಇರಿಸಿ ತಾಲೀಮು ಮಾಡಲಾಗುತ್ತದೆ.

ಹಾಗಾದರೆ, ಭಾರತ- ಅಮೆರಿಕಗಳು ಇಷ್ಟೆಲ್ಲ ರಕ್ಷಣಾ ಸಹಯೋಗದಲ್ಲಿ ಕೈಜೋಡಿಸಿರಬೇಕಾದರೆ ಚೀನಾವೇನು ಕೈಕಟ್ಟಿ ಕುಳಿತಿದೆಯೇ?

ಸಾಧ್ಯವೇ ಇಲ್ಲ…

ವಿವಾದಿತ ಸೌತ್ ಚೀನಾ ಸಾಗರದಾಳದಲ್ಲಿ, ಮೂರು ಸಾವಿರ ಮೀಟರ್ ಗಳ ಅಡಿಯಲ್ಲಿ ‘ಸಾಗರ ಕೇಂದ್ರ’ವೊಂದನ್ನು ನಿರ್ಮಿಸುತ್ತಿದೆ ಚೀನಾ. ಆಳ ಸಮುದ್ರದಲ್ಲಿರುವ ಖನಿಜಗಳು ಮತ್ತು ನೈಸರ್ಗಿಕ ಸಂಪತ್ತಿನ ಅನ್ವೇಷಣೆಗೆ ಈ ಯೋಜನೆ ಎಂದು ಹೇಳಲಾಗುತ್ತಿದ್ದರೂ ಅಲ್ಲಿ ಅಣ್ವಸ್ತ್ರ ಜಲಾಂತರ್ಗಾಮಿ ಸೇರಿದಂತೆ ಭಾರಿ ಮಿಲಿಟರಿ ತಾಣವೊಂದನ್ನು ಚೀನಾ ನಿರ್ಮಿಸಲಿದೆ ಎಂದೇ ರಕ್ಷಣಾ ವಿಶ್ಲೇಷಕರೆಲ್ಲರ ವ್ಯಾಖ್ಯಾನ. ಈ ಮಾರ್ಚ್ ನಲ್ಲಿ ಬಿಡುಗಡೆಗೊಂಡ ತನ್ನ ಪಂಚವಾರ್ಷಿಕ ಯೋಜನೆಗಳ ಪಟ್ಟಿಯಲ್ಲೇ ಇದನ್ನು ಚೀನಾ ಆದ್ಯತೆಯನ್ನಾಗಿ ಪ್ರಕಟಿಸಿದೆ.

ದಕ್ಷಿಣ ಚೀನಾ ಸಾಗರದಾಳದ ಸಂಪತ್ತು ಮತ್ತು ಮಿಲಿಟರಿ ಪಾರಮ್ಯ ಎರಡನ್ನೂ ಒಟ್ಟಿಗೇ ಸಾಧಿಸಹೊರಟಂತಿದೆ ಚೀನಾ. ಏಕೆಂದರೆ ಅಮೆರಿಕದ ಸಂಸ್ಥೆಗಳ ಅಂದಾಜಿನ ಪ್ರಕಾರವೇ ಇದರ ಒಡಲಲ್ಲಿ 11 ಬಿಲಿಯನ್ ಬ್ಯಾರೆಲ್ ತೈಲ ಮತ್ತು 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ನಿಕ್ಷೇಪ ಇದೆ. 2012ರಲ್ಲಿ ಚೀನಾದ ಕಂಪನಿ ಹಾಕಿರುವ ಅಂದಾಜು ಇನ್ನೂ ದೊಡ್ಡದು. ಆ ಪ್ರಕಾರ 125 ಬಿಲಿಯನ್ ಬ್ಯಾರೆಲ್ ತೈಲ ಹಾಗೂ 500 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ನಿಕ್ಷೇಪ ಇದೆ!

‘ಮಿಲಿಟರಿ ಅಭ್ಯಾಸಗಳ ಮೂಲಕ ಅಮೆರಿಕವೇನು ನಮ್ಮನ್ನು ಹೆದರಿಸಲು ನೋಡುತ್ತಿದೆಯೇ?’ ಎಂದು ಆಕ್ಷೇಪಿಸುತ್ತಲೇ ತಾನು ಮಾಡಬೇಕಾದ್ದನ್ನು ಮಾಡಿಕೊಂಡೇ ಇದೆ ಆ ದೇಶ. ಸೌತ್ ಚೀನಾ ಸೀ ಭಾಗದ 3200 ಎಕರೆಗಳಷ್ಟು ಪ್ರದೇಶವನ್ನು ತನ್ನದಾಗಿಸಿಕೊಂಡಿರು ಚೀನಾ ಅಲ್ಲೆಲ್ಲ ದೊಡ್ಡ ದೊಡ್ಡ ಕೃತಕ ದ್ವೀಪಗಳನ್ನು ಕಟ್ಟಿದೆ. ಇಲ್ಲಿನ ತುಂಡು ತುಂಡು ಸ್ಪಾರ್ಟ್ಲಿ ದ್ವೀಪಗಳ ಕುರಿತು ಚೀನಾದೊಂದಿಗೆ ಪಿಲಿಪ್ಪೀನ್ಸ್, ವಿಯೆಟ್ನಾಂ, ಜಪಾನ್ ಎಲ್ಲವೂ ಕಿತ್ತಾಡಿಕೊಂಡಿವೆ.

south china

ಸೂಯೆಜ್ ಕಾಲುವೆಗಿಂತ ಹತ್ತುಪಟ್ಟು ಹೆಚ್ಚು ವ್ಯಾಪಾರಿ ನೌಕೆಗಳ ಸಾಗಾಟಕ್ಕೆ ಅನುವು ಮಾಡಿಕೊಟ್ಟಿರುವ, ಮತ್ಸ್ಯ ಸಂಪತ್ತು ಹೇರಳವಾಗಿರುವ, ನೈಸರ್ಗಿಕ ಸಂಪತ್ತಿನ ಅಂದಾಜು ಆಗರವಾಗಿರುವ ಸೌತ್ ಚೀನಾ ಸೀ ಭವಿಷ್ಯದ ಕುರುಕ್ಷೇತ್ರದಂತೆ ಭಾಸವಾಗುತ್ತಿದೆ. ಭವಿಷ್ಯದಲ್ಲೇನಾದರೂ ಇದಕ್ಕಾಗಿ ಮಿಲಿಟರಿ ಸಂಘರ್ಷ ಆಗಿದ್ದೇ ಆದರೆ ಅದರಲ್ಲಿ ಭಾರತವೂ ಪಾಲ್ಗೊಂಡಿರುತ್ತದೆ ಎಂಬುದು ಈಗಿನ ಚಿತ್ರಣ. ಹೀಗೆಲ್ಲ ಅಮೆರಿಕ- ಭಾರತ- ಜಪಾನ್- ವಿಯೆಟ್ನಾಂ ಎಂದೆಲ್ಲ ತನ್ನ ವಿರುದ್ಧ ಗುಂಪುಗೂಡುತ್ತಿರುವುದನ್ನು ಕಾಣುತ್ತಲೇ ಸೌತ್ ಚೀನಾ ಸಮುದ್ರವನ್ನು ಇನ್ನಷ್ಟು- ಮತ್ತಷ್ಟು ಆತುಕೊಳ್ಳುತ್ತಿರುವ ಚೀನಾ ಹೇಳುತ್ತಿದೆ- ‘ಚರಿತ್ರೆಯಲ್ಲಿ ನಮ್ಮನ್ನು ಯಾರೂ ಏಕಾಂಗಿಯಾಗಿಸಿದ ಉದಾಹರಣೆ ಇಲ್ಲ. ಈಗಲೂ ಆಗುವುದಿಲ್ಲ, ಭವಿಷ್ಯದಲ್ಲೂ ನಮ್ಮನ್ನು ಒಬ್ಬಂಟಿ ಆಗಿಸಲಾರಿರಿ…’

ಸೌತ್ ಚೀನಾ ಸೀ  ಕುರಿತು ಯೂಟ್ಯೂಬಿನಿಂದ ಆಯ್ದ ಕೊಂಡಿ.

Leave a Reply