ಮತ್ತೆ ಮರುಕಳಿಸಿದ ಛಿದ್ರರೋಗ, ಪ್ರತಿಷ್ಠೆ-ಲೋಭವೇ ದಳ ಇಬ್ಭಾಗದ ನಿಜ ರಾಗ!

author-thyagaraj‘ಬಂಡೆಗೆ ಹೋಗಿ ಹಣೆ ಬಡಿಯಲಿ, ಬಂಡೆಯೇ ಬಂದು ಹಣೆಗೆ ಬಡಿಯಲಿ ನೋವಾಗುವುದು ಮಾತ್ರ ಹಣೆಗೆಯೇ.’ ಅದೇ ರೀತಿ ಎಂಟು ಮಂದಿ ಭಿನ್ನ ಶಾಸಕರನ್ನು ಜೆಡಿಎಸ್ ನಿಂದ ಆಚೆಗೆ ಅಟ್ಟಲಿ ಅಥವಾ ಆಚೆಗೆ ಅಟ್ಟಿಸಿಕೊಳ್ಳುವ ಪರಿಸ್ಥಿತಿಯನ್ನು ಅವರೇ ನಿರ್ಮಾಣ ಮಾಡಿಕೊಂಡಿರಲಿ ಹಾನಿ ಆಗಿರುವುದು ಮಾತ್ರ ಜೆಡಿಎಸ್ಸಿಗೇ.

ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಎಂಟು ಮಂದಿಯನ್ನು ಪಕ್ಷದಿಂದ ಅಮಾನತು ಮಾಡಿರುವುದರ ಹಿಂದೆ ಕಾರ್ಯಕರ್ತರ ರೊಚ್ಚು ಶಮನದ ಸಂದೇಶ ಅಡಗಿದೆ. ಇಷ್ಟೆಲ್ಲ ಆದ ನಂತರವೂ ಭಿನ್ನರನ್ನು ಸಹಿಸಿಕೊಂಡರೆ ಅದು ನಾಯಕರ ಲೋಪದ ಸಂಕೇತವಾಗುತ್ತದೆ ಎಂಬ ಪ್ರಜ್ಞೆ ಇದರ ಹಿಂದೆ ಕೆಲಸ ಮಾಡಿದೆ. ಆದರೆ ಈ ಯಾವ ಕ್ರಮಗಳಿಂದಲೂ ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂಬುದು ಅಷ್ಟೇ ಸತ್ಯ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಳೆದ ವಿಧಾನಸಭೆ ಚುನಾವಣೆಯಿಂದಲೇ ಶುರುವಾಗಿದ್ದ ಆಂತರಿಕ ಕಲಹ ಎರಡು ವರ್ಷದ ಹಿಂದೆ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ಮೇಲ್ಮನೆಗೆ ನಡೆದ ಚುನಾವಣೆಯ ‘ವ್ಯವಹಾರ’ ಸಂಬಂಧ ತಾರಕಕ್ಕೇರಿತ್ತು. ರಾಜ್ಯಸಭೆಗೆ ಕುಪೇಂದ್ರರೆಡ್ಡಿ, ಮೇಲ್ಮನೆಗೆ ಶರವಣ ಆಯ್ಕೆಯ ‘ಲಾಭ’ ಹಂಚಿಕೆ ಆಗಲಿಲ್ಲ ಎಂದು ಭಿನ್ನರು ಮುನಿದಿದ್ದರು. ಅದು ಹಾಗೆಯೇ ಮುಂದುವರಿದು ಈಗಿನ ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆ ಅಡ್ಡಮತದಾನದ ಮೂಲಕ ಸ್ಫೋಟಗೊಂಡಿದೆ. ಅಡ್ಡಮತದಾನ ಮಾಡಿದ ಎಂಟು ಶಾಸಕರನ್ನು ಸಸ್ಪೆಂಡ್ ಮಾಡಿದ್ದರೂ ಜೆಡಿಎಸ್ ಪರಿಸ್ಥಿತಿ ಮಾತ್ರ ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆಯಂತಾಗಿದೆ.

ಇಂಥ ಸನ್ನಿವೇಶದಲ್ಲಿ ನಾಯಕರು ಭಿನ್ನರನ್ನು ದೂರುವುದು, ಮುಖಂಡರು ಭಿನ್ನರನ್ನು ಅಚಾ ಅನ್ನುವುದು ಇದ್ದದ್ದೇ. ಯಾರು ಯಾರನ್ನೇ ಬೈಯ್ದುಕೊಳ್ಳಲಿ, ತಾವು ಬಂಗಾರಕ್ಕಿಂತ ಗುಲಗಂಜಿ ಗಾತ್ರ ದೊಡ್ಡವರು ಎಂದು ಸಮರ್ಥಿಸಿಕೊಳ್ಳಲಿ, ಅದರಿಂದ ಪಕ್ಷಕ್ಕೂ ಲಾಭವಿಲ್ಲ, ವೈಯಕ್ತಿಕವಾಗಿ ಅವರಿಗೂ ಲಾಭವಿಲ್ಲ. ಜೆಡಿಎಸ್ ಗೆ ಅಟಕಾಯಿಸಿಕೊಂಡಿದ್ದ ಅಷ್ಟಶನಿಗಳು ಈಗ ಕಾಂಗ್ರೆಸ್ ಗೆ ವರ್ಗಾವಣೆ ಆಗಿವೆ ಎಂದು ಹೇಳಿ ರೇವಣ್ಣ ಅವರು ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು. ಆದರೆ ಆಗಿರೋ ಹಾನಿ ಏನು ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಗೌಡರ ಪಾಳೆಗಾರಿಕೆ ಬಗ್ಗೆ ಭಿನ್ನರು ದೂರಬಹುದು. ಆದರೆ ತಾವೇನು ಕಳೆದುಕೊಂಡಿದ್ದೇವೆ ಎಂಬುದು ಅವರಿಗೂ ಗೊತ್ತು. ಇಲ್ಲಿ ಆರೋಪಗಳ ವರ್ಗಾವಣೆ ಆಗುತ್ತದೆಯೇ ಹೊರತು ಭವಿಷ್ಯದ ಬಗ್ಗೆ ಎರಡೂ ಗುಂಪು ಅಂತರಂಗದಲ್ಲಿ ಆತಂಕಿತವಾಗಿವೆ ಎಂಬುದು ಮಾತ್ರ ಬಹಿರಂಗ ಸತ್ಯ. ಇದು ನಾಯಕರು ಮತ್ತು ಭಿನ್ನರು ಇಬ್ಬರಿಗೂ ಅನ್ವಯವಾಗುತ್ತದೆ. ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆಯ ಲಾಭಕ್ಕೆ ನಾಯಕರು ಮತ್ತು ಭಿನ್ನರು ಪ್ರತ್ಯೇಕ ನೆಲೆಗಟ್ಟಲ್ಲಿ ಹಪಾಹಪಿಗೆ ಬಿದ್ದಿದ್ದರಿಂದ ಜೆಡಿಎಸ್ ಇದೀಗ ಮತ್ತೊಂದು ಹೋಳಿನ ಹೊಸ್ತಿಲಲ್ಲಿದೆ.

ಆಗಾಗ್ಗೆ ಛಿದ್ರವಾಗುವುದನ್ನೇ ರಕ್ತಗುಣ ಮಾಡಿಕೊಂಡಿರುವ ಜನತಾ ಪರಿವಾರ ಲಾಗಾಯ್ತಿನಿಂದಲೂ ಪ್ರತಿ ಬಾರಿ ಈ ರೋಗ ಕಾಣಿಸಿಕೊಂಡಾಗಲೆಲ್ಲ ಚೇತರಿಸಿಕೊಂಡಿದ್ದಕ್ಕಿಂಥ ಸೊರಗಿದ್ದೇ ಹೆಚ್ಚು. ಅದು 1988 ರಲ್ಲಿರಬಹುದು, 1999 ರಲ್ಲಿಬಹುದು. ಈಗಲೂ ಅಷ್ಟೇ. ಪರಿಸ್ಥಿತಿ ಭಿನ್ನವಿಲ್ಲ. ದೇವೇಗೌಡರ ಕುಟುಂಬ ಮತ್ತು ಉಳಿದ ನಾಯಕರ ನಡುವಣ ನಂಬಿಕೆ ಮತ್ತು ವಿಶ್ವಾಸವನ್ನು ಅನುಮಾನ ಆಳಿದ್ದರಿಂದ ಈ ಪರಿಸ್ಥಿತಿ ಬಂದಿದೆ. ಒಣಪ್ರತಿಷ್ಠೆ, ಸ್ವಾರ್ಥ, ಲೋಭ ಈ ಪರಿಸ್ಥಿತಿಯನ್ನು ತಂದಿಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸಮಸ್ಯೆ ಅನೇಕ ಬಾರಿ ಉಚ್ಛ್ರಾಯ ಸ್ಥಿತಿಗೆ ಹೋದದುಂಟು. ಆಗೆಲ್ಲ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಚದ್ದೂ ಉಂಟು. ಆದರೆ ನಾಯಕರು ಮತ್ತು ಭಿನ್ನ ನಾಯಕರು ಪ್ರತಿಷ್ಠೆಗೆ ಜೋತು ಬಿದ್ದಿದ್ದರಿಂದ ಪಕ್ಷ ಕವಲು ದಾರಿಯಲ್ಲಿ ಬಂತು ನಿಂತಿದೆ.

ನಿಜ, ಒಂದು ಮನೆಯ ಕಲಹ ನೆರೆಹೊರೆಯವರ ಹಸ್ತಕ್ಷೇಪಕ್ಕೆ ಆಸ್ಪದ ಮಾಡಿಕೊಡುವುದುಂಟು. ಅದು ಒಳ್ಳೆಯದಕ್ಕೂ ಇರಬಹುದು, ಕೆಟ್ಟದ್ದಕ್ಕೂ ಇರಬಹುದು. ಆದರೆ ರಾಜಕೀಯದಲ್ಲಿ ಆಸ್ಪದ ಇರುವುದು ಮಾತ್ರ ಎರಡನೇಯದಕ್ಕೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಬಹುದು, ದೇವೇಗೌಡರ ಕುಟುಂಬದ ಪಾರಂಪರಿಕ ರಾಜಕೀಯ ಶತ್ರು ಡಿ.ಕೆ. ಶಿವಕುಮಾರ್ ಇರಬಹುದು, ಜೆಡಿಎಸ್ ಒಳಘರ್ಷಣೆಯಿಂದ ಕಾಂಗ್ರೆಸ್ ನೀರು ಕಾಯಿಸಿಕೊಂಡರಲ್ಲದೆ, ಅದನ್ನು ತಾರ್ಕಿಕ ಅಂತ್ಯಕ್ಕೂ ತಂದು ನಿಲ್ಲಿಸಿದ್ದಾರೆ. ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆ ಸೋಲಿಗಿಂತ ಜೆಡಿಎಸ್ ನಾಯಕರನ್ನು ಪತರುಗುಟ್ಟಿಸಿರುವ ವಿಚಾರ ಇದೇ ಆಗಿದೆ. ಒಂದು ಚುನಾವಣೆ ಸೋತರೆ ಮತ್ತೊಂದು ಬರುತ್ತದೆ. ಆದರೆ ಪಕ್ಷ ಇಬ್ಭಾಗವಾದರೇ..?

ನಿಜಕ್ಕೂ ಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಪ್ರಶ್ನೆ ಇದು. ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್ ಹಾನಿ ಪ್ರಮಾಣದ ವ್ಯಾಖ್ಯಾನ ಪ್ರತ್ಯೇಕವಾಗಿ ನಿಲ್ಲುತ್ತದೆ. ಕಾಂಗ್ರೆಸ್ ಅಥವಾ ಬಿಜೆಪಿ ಒಬ್ಬ ಶಾಸಕನನ್ನು ಕಳೆದುಕೊಂಡರೆ ಅಲ್ಲಿ ನಾಲ್ಕಾರು ಪರ್ಯಾಯ ನಾಯಕರು ಗೋಚರಿಸುತ್ತಾರೆ. ಆತನಿಲ್ಲದಿದ್ದರೂ ಕ್ಷೇತ್ರ ಉಳಿದುಕೊಂಡಿರುತ್ತದೆ. ಶಾಸಕನನ್ನು ತೂಗುವ ನಾಲ್ಕಾರು ಮಂದಿಯ ಪಾರುಪತ್ಯೆಯಲ್ಲಿ. ಆದರೆ ಜೆಡಿಎಸ್ ಪರಿಸ್ಥಿತಿ ಹಾಗಿಲ್ಲ. ಒಬ್ಬ ಶಾಸಕ ಹೋದರೆ ಇಡೀ ಕ್ಷೇತ್ರವೇ ಆತನ ಜತೆ ಹೋದಂತೆ. ಮತ್ತೆ ಕ್ಷೇತ್ರವನ್ನು ಕಟ್ಟಿ, ಸುಪರ್ದಿಗೆ ಪಡೆಯುವಲ್ಲಿ ಏಳು ಕೆರೆ ಬೆವರು ಬೇಕು. ಸೀಮಿತ ಸಂಪನ್ಮೂಲ, ಬಸವಳಿದ ಜನರ ಭಾವನೆ ನಡುವೆ ಈ ಕಾಯಕ ಅಷ್ಟು ಸುಲಭವಲ್ಲ. ಜೆಡಿಎಸ್ ನ ದೌರ್ಬಲ್ಯ ಇರುವುದೇ ಇಲ್ಲಿ.

ದೇವೇಗೌಡರು ನಿಜಕ್ಕೂ ವ್ಯಾಕುಲರಾಗಿದ್ದಾರೆ. ಚಲುವರಾಯಸ್ವಾಮಿ, ಜಮೀರ್ ಅಹಮದ್, ಬಾಲಕೃಷ್ಣ, ಅಖಂಡ ಶ್ರೀನಿವಾಸ್, ಇಕ್ಬಾಲ್ ಅನ್ಸಾರಿ ಅವರ ಭಿನ್ನರಾಗ ಮೊದಲಿಂದಲೂ ಗೊತ್ತೇ ಇತ್ತು. ಆದರೆ
ಉಳಿದ ಮೂವರು ಅದರಲ್ಲೂ ಪರಮಾಪ್ತ ಗೋಪಾಲಯ್ಯ ಹೀಗೆ ಕಟುಕಾತ್ಮನಾಗಿ ಕೈ ಕೊಡುತ್ತಾರೆ ಎಂದು ಅವರು ಕನಸಿನಲ್ಲಿಯೂ ಎಣಿಸಿರಲಿಲ್ಲ. ಕ್ರಿಮಿನಲ್ ಪ್ರಕರಣದ ಸುಳಿಯಲ್ಲಿ ಮುಳುಗುತ್ತಿದ್ದ ಗೋಪಾಲಯ್ಯ ಬೆನ್ನಿಗೆ ಗೌಡರು, ಕುಮಾರಸ್ವಾಮಿ ನಿಂತಿದ್ದೇ ಅಲ್ಲದೇ, ಅವರ ಪತ್ನಿ ಹೇಮಲತಾ ಅವರನ್ನು ಬೆಂಗಳೂರು ಉಪಮೇಯರ್ ಮಾಡಿದ್ದರು. ಅಂತ ಗೋಪಾಲಯ್ಯ ಕೊಟ್ಟಿರುವ ಕತ್ತರಿಶಾಟ್ ಗೌಡರು ತಮ್ಮ ರಾಜಕೀಯ ಪಟ್ಟುಗಳನ್ನು ಒಮ್ಮೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.

ಆದರೆ ಈ ಬೆಳವಣಿಗೆಯಿಂದ ಜೆಡಿಎಸ್ಗೆ  ಒಂದು ಅನುಕೂಲ ಆಗಿದೆ. ಹಿಂದೆ ದೇವೇಗೌಡರು ಮತ್ತು ಕುಮಾರಸ್ವಾಮಿ ನಡುವೆ ಇದ್ದ ವ್ಯತ್ಯಾಸದ ಅಂತರ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹಿಂದಾದರೆ ಅದು ಯಾವುದೇ ಚುನಾವಣೆ ಇರಲಿ, ದೇವೇಗೌಡರದು ಒಂದು ದಿಕ್ಕು, ಕುಮಾರಸ್ವಾಮಿಯವರದು ಮತ್ತೊಂದು ದಿಕ್ಕು ಎಂಬಂತಿರುತ್ತಿತ್ತು. ಒಳಗುಂಪುಗಳ ಪಾರಮ್ಯಕ್ಕೆ ಇದು ಇಂಬುಗೊಟ್ಟಿತ್ತು. ಆದರೆ ಈಗಿನ ರಾಜ್ಯಸಭೆ ಮತ್ತು ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಗೌಡರು ಮತ್ತು ಕುಮಾರಸ್ವಾಮಿ ಜಂಟಿ ಕಾರ್ಯಾಚರಣೆಗೆ ಇಳಿದಿದ್ದರು. ಇವರೆಣೆದ ತಂತ್ರಗಾರಿಕೆ ಗೆಲುವು ತಂದುಕೊಡದಿದ್ದರೂ, ತಂದೆ-ಮಗನ ನಡುವೆ ಒಂದು ಹಂತದ ಹೊಂದಾಣಿಕೆಯನ್ನಂತೂ ಏರ್ಪಡಿಸಿದೆ. ಆದರೆ ಭಿನ್ನ ಶಾಸಕರ ವಿಮುಖತೆಯಿಂದ ಪಕ್ಷಕ್ಕೆ ಆಗಿರುವ ಹಾನಿಯನ್ನು ತಕ್ಷಣಕ್ಕೆ ತುಂಬಲು ಈ ಹೊಂದಾಣಿಕೆಗೆ ಸಾಧ್ಯವಿಲ್ಲದಿದ್ದರೂ, ಕಾರ್ಯಕರ್ತರ ಆತ್ಮಸ್ಥೈರ್ಯ ಕುಸಿತ ತಡೆಯಲಂತೂ ಅಡ್ಡಿಯಿಲ್ಲ.

ಪಕ್ಷದಿಂದ ಅಮಾನತಾಗುವುದು ಭಿನ್ನ ಶಾಸಕರಿಗೆ ಮೊದಲೇ ಗೊತ್ತಿತ್ತು. ಅವರು ಎಲ್ಲಕ್ಕೂ ಸಿದ್ಧರಾಗಿಯೇ ಅಡ್ಡಮತದಾನಕ್ಕೆ ಕೈ ಹಾಕಿದ್ದಾರೆ. ಮುಂದಿನ ಚುನಾವಣೆ ಟಿಕೆಟ್ ಸೇರಿದಂತೆ ಕಾಂಗ್ರೆಸ್ಸಿನಲ್ಲಿ ಸಿಕ್ಕಿರುವ ಒಂದಷ್ಟು ಭರವಸೆಗಳು ಇವರನ್ನು ಈ ಸಾಹಸಕ್ಕೆ ಪ್ರೇರೇಪಿಸಿರುವುದು. ಮೊದಲೇ ಗೌಡರ ಕುಟುಂಬ ಸದಸ್ಯರ ವಿರುದ್ಧ ಬಹಿರಂಗವಾಗಿಯೇ ಹರಿಹಾಯುತ್ತಿದ್ದ ಭಿನ್ನರು ಈಗ ಅದನ್ನು ಮತ್ತಷ್ಟು ತೀವ್ರಗೊಳಿಸಲು ಅಮಾನತು ಆದೇಶವನ್ನು ಅಸ್ತ್ರ ಮಾಡಿಕೊಳ್ಳಬಹುದು. ಇಲ್ಲವೇ ಗೌಡರ ವಿರುದ್ಧ ರಾಜಕೀಯ ಹಗೆ ತೀರಿಸಿಕೊಳ್ಳಲು ಇವರನ್ನೇ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಸ್ತ್ರ ಮಾಡಿಕೊಳ್ಳಬಹುದು. ಅತ್ತ ದೇವೇಗೌಡರ ಬಳಗ ಕೂಡ ಭಿನ್ನರ ನಡೆಯನ್ನೇ ರಾಜಕೀಯ ವೈರಿಗಳ ವಿರುದ್ಧ ವಾಗ್ದಾಳಿಗೆ ಬಳಸಿಕೊಳ್ಳಬಹುದು. ಪಕ್ಷದ ರಾಜ್ಯಸಭೆ ಹಾಗೂ ಮೇಲ್ಮನೆಯ ಎರಡನೇ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಜಂಟಿ ತಂತ್ರ ರೂಪಿಸಿದ್ದನ್ನು ಬೈಗುಳಾಸ್ತ್ರವಾಗಿ ಈಗಾಗಲೇ ಕೈಗೆತ್ತಿಕೊಂಡಿದೆ. ಎದುರಾಳಿಗಳ ಕೈಯಲ್ಲೂ ಅಷ್ಟೇ ಪ್ರಬಲ ಅಸ್ತ್ರಗಳು ಇರುವುದರಿಂದ ಚುನಾವಣೆ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮರ ಮತ್ತಷ್ಟು ಪ್ರಖರವಾಗಲಿದೆ.

ಲಗೋರಿ : ಒಮ್ಮೆ ಕಳೆದುಕೊಂಡದ್ದು ಮುಂದೆ ಗಳಿಸುವ ಲೆಕ್ಕಕ್ಕೆ ಯಾವತ್ತೂ ಜಮೆ ಆಗುವುದಿಲ್ಲ.

Leave a Reply