ಗೆದ್ದವರಿಗಿಲ್ಲದ ಗೌರವ- ಗೌಡರ ಏಕಸ್ವಾಮ್ಯ ಇದುವೇ ಬಂಡಾಯಕ್ಕೆ ಕಾರಣ: ಅಮಾನತಾದ ಜೆಡಿಎಸ್ ಭಿನ್ನರ ನುಡಿ

 

ಡಿಜಿಟಲ್ ಕನ್ನಡ ಟೀಮ್:

‘ನಾವಾಗಿ ಪಕ್ಷ ತೊರೆದೇನೂ ಹೋಗೋದಿಲ್ಲ. ಪಕ್ಷಕ್ಕೆ ಬೇಡವಾಗಿ ಹೊರಗೆ ಹಾಕುವುದಾದರೆ ನಮ್ಮ ರಾಜಕೀಯ ಭವಿಷ್ಯ ನಾವು ನೋಡಿಕೊಳ್ಳುತ್ತೇವೆ’- ಇದು ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಾನತುಗೊಂಡ 8 ಜೆಡಿಎಸ್ ಶಾಸಕರ ಒಟ್ಟಾರೆ ಮಾತು.

ಭಾನುವಾರದ ಜೆಡಿಎಸ್ ಸಭೆಯಲ್ಲಿ ಅಡ್ಡಮತದಾನಕ್ಕಾಗಿ ಎಂಟು ಶಾಸಕರನ್ನು ಅಮಾನತುಗೊಳಿಸಿದ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಮಾತುಗಳು ಚೆಲುವರಾಯಸ್ವಾಮಿ ಕಡೆಯಿಂದಲೇ ಬಂದವು. ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ಹಳೆ ಮುನಿಸಿನ ಇತಿಹಾಸಗಳನ್ನೆಲ್ಲ ಚೆಲುವರಾಯಸ್ವಾಮಿ ನೇತೃತ್ವದ ಶಾಸಕರು ತೆರೆದಿಟ್ಟರು.

ಆ ಪೈಕಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಮಾತುಗಳನ್ನು ಹಿಡಿದಿಡುವುದಾದರೆ- ‘ಎಂಎಲ್ಸಿ ಮತ್ತು ರಾಜ್ಯಸಭೆ ಚುನಾವಣೆಗಳ ವಿಷಯದಲ್ಲಿ ನಮ್ಮ ಯಾರ ಅಭಿಪ್ರಾಯವನ್ನು ಕೇಳಲಿಲ್ಲ. ಹೀಗೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ರೀತಿನೀತಿ ಮೊದಲಿನಿಂದಲೇ ಬೆಳೆದುಬಂದಿದ್ದರೂ ನಾವೆಲ್ಲ ಆ ನೋವು ನುಂಗಿಕೊಂಡಿದ್ದೆವು. ಆದರೆ ಮಂಡ್ಯದಲ್ಲಿ ಹಲವು ವರ್ಷಗಳಿಂದ ಜೆಡಿಎಸ್ ವಿರುದ್ಧವೇ ಕೆಲಸ ಮಾಡುತ್ತಿದ್ದ, ನನ್ನ ವಿರುದ್ಧ ದ್ವೇಷ ಸಾಧನೆಯಲ್ಲಿದ್ದ ಶ್ರೀಕಂಠೇಗೌಡರಿಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ಕೊಡಲಾಯಿತು. ಅಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಹೆಸರನ್ನು ನಾವು ಸೂಚಿಸಿದ್ದಕ್ಕೆ ಕಿಮ್ಮತ್ತು ಸಿಗಲಿಲ್ಲ. ಇನ್ನು ತಡಮಾಡುವುದು ಬೇಡವೆಂದು ಈ ನಿರ್ಧಾರ ತೆಗೆದುಕೊಂಡೆವು’ ಎಂದು ಫ್ಲಾಶ್ ಪಾಯಿಂಟ್ ಬಿಚ್ಚಿಟ್ಟ ಚೆಲುವರಾಯಸ್ವಾಮಿ ಮಾತಿನುದ್ದಕ್ಕೂ ಜೆಡಿಎಸ್ ಸಾಮಾನ್ಯ ಕಾರ್ಯಕರ್ತರಿಗೆ ಮನ್ನಣೆಯೇ ಇಲ್ಲ ಎಂಬಂಶವನ್ನು ಪ್ರತಿಪಾದಿಸಿದರು.

‘ಡಿ. ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರ ನಡುವೆ ವಾಗ್ಯುದ್ಧ ತಾರಕಕ್ಕೇರಿದಾಗ ಬೆನ್ನಿಗೆ ನಿಂತವನು ನಾನೇ ಅಲ್ಲವೇ? ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಚೇರಿಯಿಂದ ದೇವೇಗೌಡರ ಫೋಟೋ ತೆರವುಗೊಳಿಸಿದಾಗ, ‘ಇದೆಂಥ ಸಣ್ಣತನ ತೋರುತ್ತಿದ್ದೀರಿ’ ಎಂದು ಪ್ರತಿಭಟಿಸಿ ಫೋಟೋ ಮರು ಪ್ರತಿಷ್ಠಾಪಿಸಿದ್ದು ನಾನೇ ಅಲ್ಲವೇ’ ಅಂತ ತಮ್ಮ ನಿಷ್ಠೆ ಸಮರ್ಥಿಸಿಕೊಂಡರು ಚೆಲುರಾಯಸ್ವಾಮಿ.

ಇಷ್ಟೆಲ್ಲ ಆದರೂ ತಮಗೆ ಪಕ್ಷದಿಂದ ಏನೂ ಆಗಿಲ್ಲ. ತಾವೆಲ್ಲರೂ ತಮ್ಮದೇ ಬಲದಲ್ಲಿ ಆಯಾ ಕ್ಷೇತ್ರಗಳಲ್ಲಿ ವರ್ಚಸ್ಸು ಹೊಂದಿದ್ದೇವೆ. ಹಣಕಾಸಿನ ವಿಷಯದಲ್ಲೂ ತಮ್ಮದೇ ಉದ್ಯಮಮೂಲಗಳನ್ನು ನಂಬಿಕೊಂಡಿದ್ದೇವೆಯೇ ಹೊರತು ಪಕ್ಷವನ್ನಲ್ಲ ಎಂಬುದು ಇವರೆಲ್ಲರ ಪ್ರತಿಪಾದನೆಯಾಗಿತ್ತು. ಬಿಜೆಪಿ- ಕಾಂಗ್ರೆಸ್ ಎಲ್ಲ ಕಡೆಗಳಿಂದಲೂ ನಮಗೆ ಕಾಲಕಾಲಕ್ಕೆ ಬೇಡಿಕೆಗಳೂ ಬಂದಿದ್ದರೂ ತಾವು ಪಕ್ಷನಿಷ್ಠೆ ತೋರಿ ಉಳಿದುಕೊಂಡಿದ್ದೆವು ಎಂಬುದು ಎಚ್. ಸಿ. ಬಾಲಕೃಷ್ಣ, ಗೋಪಾಲಯ್ಯ ಸೇರಿದಂತೆ ಹಲವು ಶಾಸಕರ ಪ್ರತಿಪಾದನೆ.

‘ಪ್ರತಿಕೃತಿ ದಹನ, ಉಗ್ರ ಹೇಳಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಮಗೂ ಬರುತ್ತದೆ. ಆದರೆ ಗೌಡರ ಕುಟುಂಬದ ಬಗ್ಗೆ ನಮಗೆ ಗೌರವ ಇದೆ. ಅದೇ ಗೌರವ ನಮ್ಮ ಕುರಿತೂ ಇರಲಿ’ ಅಂತಂದ್ರು ಬಂಡಾಯ ಶಾಸಕರು.

ಆದರೆ ದೇವೇಗೌಡರಿಗೆ ಕಠಿಣ ಪ್ರಶ್ನೆಗಳನ್ನು ಕೇಳುವುದರಿಂದ ಹಿಂದೆ ಉಳಿಯಲಿಲ್ಲ. ‘ಒಕ್ಕಲಿಗರ ಪರ ಪಕ್ಷ ಜೆಡಿಎಸ್ ಎಂಬುದು ಹೌದು. ಆದರೆ ಯಾವ ಒಕ್ಕಲಿಗ ನಾಯಕರನ್ನು ಗೌಡರು ಬೆಳೆಸಿದ್ದಾರೆ. ಅವಕಾಶ ಇದ್ದಾಗ ನಿಗಮ- ಮಂಡಳಿಗಳಿಗೆ ನೇಮಿಸಿದ ಉದಾಹರಣೆಯಾದರೂ ಇದೆಯೇ? ಅದು ಹಾಗಿರಲಿ, ಪಿಜಿಆರ್ ಸಿಂಧ್ಯ, ಎಂ.ಸಿ. ನಾಣಯ್ಯ ಇಂಥವರನ್ನು ಉಳಿಸಿಕೊಂಡಿದ್ದರೆ ಅವರು ಪಕ್ಷಕ್ಕೊಂದು ಆಸ್ತಿಯಾಗಿ ಇರುತ್ತಿರಲಿಲ್ಲವೇ’ ಎಂಬ ಪ್ರಶ್ನೆಗಳನ್ನು ಎಸೆದರು ಚೆಲುವರಾಯಸ್ವಾಮಿ.

‘ನಲ್ವತ್ತು ಸ್ಥಾನಗಳಷ್ಟೇ ಜೆಡಿಎಸ್ ಗೆ ಬಂದಿರೋದ್ರಿಂದ ನಾನು ಅದೃಷ್ಟವಂತ. ಇಲ್ಲದಿದ್ದರೆ ನನ್ನನ್ನು ಬಿಟ್ಟು ನೀವೇ ತೀರ್ಮಾನ ತೆಗೆದುಕೊಂಡುಬಿಡುತ್ತಿದ್ದಿರಿ ಎಂದು ದೇವೇಗೌಡರು ಹಿಂದಿನ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಹೇಳಿದ್ದರು’ ಎನ್ನುವ ಮೂಲಕ ಗೌಡರ ಹಠವೇ ಸಮಸ್ಯೆಗಳಿಗೆ ಕಾರಣ ಎಂಬುದನ್ನು ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಇವಕ್ಕೆಲ್ಲ ಟಿವಿ9 ವಾಹಿನಿಯಲ್ಲಿ ಕುಳಿತು ದೇವೇಗೌಡರು ಪ್ರತಿಕ್ರಿಯೆ ನೀಡುತ್ತಿದ್ದದ್ದು ಸೋಮವಾರ ತೆರೆದುಕೊಂಡ ಇನ್ನೊಂದು ರಾಜಕೀಯ ಕತೆ…

Leave a Reply