ಮೂವರ ಪ್ರಾಣ ರಕ್ಷಿಸಿದ ಈತ ಪ್ರವಾಸಿಗರ ಬ್ಯಾಗು ಕಾಪಾಡಲು ಹೋಗಿ ಪ್ರಾಣತೆತ್ತ, ಪ್ರಾಣ ಉಳಿಸಿಕೊಂಡವರಿಗಿರಲಿಲ್ಲ ಕೃತಜ್ಞತೆ

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಜಮ್ಮ- ಕಾಶ್ಮೀರದ ಜೇಲಂ ನದಿಯಲ್ಲಿ ಅಂಬಿಗನೊಬ್ಬನ ಜೀವ ಗುರುವಾರ ಕೊಚ್ಚಿಕೊಂಡುಹೋಗಿದೆ, ಶವವಿನ್ನೂ ಸಿಕ್ಕಿಲ್ಲ. ಇದೇಕೆ ಉಲ್ಲೇಖಿಸಬೇಕಾದ ಸುದ್ದಿಯಾಗುತ್ತಿದೆ ಎಂದರೆ ಇದರ ಹಿಂದೆ ಸಂವೇದನಾರಹಿತ ನಡೆಯೊಂದು ಮನುಷ್ಯ ಹೇಗಿರಬಾರದು ಎಂಬ ಎಚ್ಚರಿಕೆ ನೀಡುತ್ತಿದೆ.

ಪ್ರವಾಸಿಗರನ್ನು ಕೂರಿಸಿಕೊಂಡು ಹೋಗಿದ್ದ ಗುಲಾಂ ಮೊಹಮದ್ ಎಂಬಾತನ ಬೋಟ್ ಅವಘಡದಲ್ಲಿ ಮೂವರು ಪ್ರವಾಸಿಗರು ನೀರಿಗೆ ಬಿದ್ದರು. ಈತ ಆ ಮೂವರನ್ನು ಎಳೆದು ದಡಕ್ಕೆ ತಂದ. ಅಲ್ಲಿಗೆ ಎಲ್ಲವೂ ಮಂಗಳವಾಗಬೇಕಿತ್ತು. ಆದರೆ, ಪ್ರವಾಸಿಗರಲ್ಲೊಬ್ಬರು ‘ಅಯ್ಯೋ ನನ್ನ ಬ್ಯಾಗು ಬಿದ್ದುಹೋಗಿದೆ, ನನಗದು ಬೇಕು’ ಎಂದಿದ್ದಕ್ಕೆ ಮತ್ತೆ ನದಿಗೆ ಹಾರಿದವನು ವಾಪಸು ಬಂದಿಲ್ಲ. ಇತ್ತ ಪ್ರವಾಸಿಗರು ತಮ್ಮ ಪಾಡಿಗೆ ರಿಕ್ಷಾ ಹತ್ತಿ ನಿರ್ಗಮಿಸಿದ್ದಾರೆ ಅನ್ನೋದು ಸ್ಥಳೀಯರ ದೂರು.

55 ವರ್ಷದ ಗುಲಾಮ್ ಮೊಹ್ಮದ್ ಇದೀಗ ತನ್ನ ಕರ್ತವ್ಯಪ್ರಜ್ಞೆಗೆ ಹೆಸರಾಗುತ್ತಿದ್ದರೆ, ಅವನಿಂದ ಉಪಕೃತರಾದ ಆ ಮೂವರು ಪ್ರವಾಸಿಗರು ಈ ದುರಂತಕ್ಕೆ ಯಾವ ಮಾನವೀಯ ಸ್ಪಂದನೆಯನ್ನೂ ತೋರಿಸದೇ ತಮ್ಮ ಪಾಡಿಗೆ ಎದ್ದು ಹೋಗಿದ್ದು ಸಂವೇದನಾಶೂನ್ಯ ವರ್ತನೆಗೆ ಉದಾಹರಣೆ ಆಗಿದೆ.

ಗುಲಾಂ ಕುಟುಂಬದ ಹೊಟ್ಟೆ ತುಂಬಿಸುವ ದುಡಿಮೆಗಾರನಾಗಿದ್ದ ಎಂದು ಆತನ ಕುಟುಂಬ ರೋದಿಸುತ್ತಿದೆ. ನೌಕಾಪಡೆ ಪರಿಣತ ಈಜುಗಾರರು ಮತ್ತು ಪೋಲೀಸರು ಸೇರಿ ಹುಡುಕಿದರೂ ಆತನ ಶವ ಪತ್ತೆಯಾಗಲೇ ಇಲ್ಲ.

Leave a Reply