ಲಿಂಕ್ಡಿನ್ ತೆಕ್ಕೆಗೆ ಹಾಕಿಕೊಳ್ಳೊ ಮೂಲಕ ಸಾಮಾಜಿಕ ಜಾಲ ತಾಣಕ್ಕೆ ಕಾಲಿಟ್ಟಿದೆ ಮೈಕ್ರೋಸಾಫ್ಟ್

ಡಿಜಿಟಲ್ ಕನ್ನಡ ಟೀಮ್:

ಪ್ರಮುಖ ಸಾಮಾಜಿಕ ಜಾಲ ತಾಣಗಳಲ್ಲಿ ಒಂದಾದ ಲಿಂಕ್ಡಿನ್ ಅನ್ನು ಖ್ಯಾತ ಮೈಕ್ರೋಸಾಫ್ಟ್ ಕಂಪನಿ ಖರೀದಿಸಿದೆ. ಇದರೊಂದಿಗೆ ಮೈಕ್ರೋಸಾಫ್ಟ್ ಈಗ ಸಾಮಾಜಿಕ ಜಾಲ ತಾಣಕ್ಕೂ ಕಾಲಿಟ್ಟಿದೆ.

ವೃತ್ತಿಪರರ ಸಾಮಾಜಿಕ ಜಾಲ ತಾಣವಾಗಿರೋ ಲಿಂಕ್ಡಿನ್ ಅನ್ನು 26.2 ಬಿಲಿಯನ್ ಅಮೆರಿಕನ್ ಡಾಲರ್ ಬೆಲೆಗೆ ಮೈಕ್ರೋಸಾಫ್ಟ್ ಡೀಲ್ ಕುದುರಿಸಿಕೊಂಡಿದೆ. ಮೈಕ್ರೋಸಾಫ್ಟ್ ಪ್ರತಿಷ್ಠಿತ ಕಂಪನಿಯಾಗಿ ಬೆಳೆದಿತ್ತಾದರೂ ಕೇವಲ ಸಾಫ್ಟ್ ವೇರ್ ಕಂಪನಿಯಾಗಿ ಗುರುತಿಸಿಕೊಂಡಿತ್ತು. ಆದರೆ, ಫೇಸ್ ಬುಕ್ ಮತ್ತು ಗೂಗಲ್ ಕಂಪನಿಗಳಂತೆ ಸಾಮಾಜಿಕ ಜಾಲ ತಾಣ ಇಲ್ಲದ ಕೊರತೆ ಎದುರಿಸಿತ್ತು. ಈಗ ಲಿಂಕ್ಡಿನ್ ಖರೀದಿಯೊಂದಿಗೆ ಮೈಕ್ರೋಸಾಫ್ಟ್ ಈ ಕ್ಷೇತ್ರಕ್ಕೂ ಪ್ರವೇಶಿಸಿದೆ.

ಲಿಂಕ್ಡಿನ್ ಈಗಾಗಲೇ 200ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆದಾರರನ್ನು ಹೊಂದಿದೆ. ಅದರಲ್ಲೂ ಪ್ರತಿ ತಿಂಗಳಿಗೆ 105 ಮಿಲಿಯನ್ ನಿರಂತರ ಬಳಕೆದಾರರನ್ನು ಹೊಂದಿದೆ. ಮೊಬೈಲ್ ಟ್ರಾಫಿಕ್ ನಲ್ಲಿ ಶೇ. 60 ರಷ್ಟು ಪಾಲು ಹೊಂದಿದ್ದು, ತ್ರೈಮಾಸಿಕವಾಗಿ 45 ಬಿಲಿಯನ್ ಪೇಜ್ ವೀಕ್ಷಣೆ ಇದೆ. ಹೀಗಾಗಿ ಲಿಂಕ್ಡಿನ್ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ಮೈಕ್ರೋಸಾಫ್ಟ್ ಗೆ ಒಂದು ಬಲವಾದ ವೇದಿಕೆ ದೊರೆತಿದೆ.

ಮೈಕ್ರೋಸಾಫ್ಟ್ ಸಾಮಾಜಿಕ ಜಾಲತಾಣದ ಮೂಲಕ ತನ್ನ ಗ್ರಾಹಕರಿಗೆ ಸೇವೆ ವಿಸ್ತರಿಸಲು ಮುಂದಾಗಿದೆ. ಇದಕ್ಕೆ ನೆರವಾಗುವಂತೆ ಲಿಂಕ್ಡಿನ್ ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪುವ ಅವಕಾಶ ಕಲ್ಪಿಸಿಕೊಟ್ಟಿದೆ.

Leave a Reply