ಕೈರಾನಾ ವಲಸೆ: ಬಿಜೆಪಿಯಿಂದ ಹಿಂದು ಹಿತಾಸಕ್ತಿ ರಾಗ, ಒಂದೇ ತಿಂಗಳಲ್ಲಿ ಡ್ರಗ್ ಸಮಸ್ಯೆ ಬಗೆಹರಿಸ್ತಾರಂತೆ ರಾಹುಲ್ ಗಾಂಧಿ!, ಉಡ್ತಾ ಪಂಜಾಬ್ ಒಂದೇ ಕಟ್, ಕಾಗೋಡು ಕೋಪಗೊಂಡಿದ್ದೇಕೆ?…

ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮಿ ಕಳಸಾ- ಬಂಡೂರಿ ಹೋರಾಟದ ರೂಪುರೇಷೆಗೆ ಪೂರ್ವಭಾವಿ ಸಭೆಯನ್ನು ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದರು. ಹೋರಾಟಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಅಂಶ ಮುಂದಿರಿಸಿಕೊಂಡು ಜುಲೈ 16ಕ್ಕೆ ಪ್ರತಿಭಟನೆ ಸಭೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶ ಶಾಮ್ಲಿ ಜಿಲ್ಲೆಯ ಕೈರಾನಾ ಗ್ರಾಮದಿಂದ ನೂರಾರು ಹಿಂದು ಕುಟುಂಬಗಳ ಸಾಮೂಹಿಕ ವಲಸೆಯಾಗಿರುವ ವರದಿ ಸಾಕಷ್ಟು ರಾಜಕೀಯ ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಮುಂದಿನ ವರ್ಷವೇ ಉತ್ತರ ಪ್ರದೇಶ ಚುನಾವಣೆ ಎದುರಾಗಲಿದ್ದು, ಈ ವಿಷಯ ಮತ್ತಷ್ಟು ರಾಜಕೀಯ ಕಾವು ಪಡೆಯುತ್ತಿದೆ. ಈ ವಿಷಯವನ್ನು ಬಿಜೆಪಿ ಪ್ರಮುಖ ಚರ್ಚೆಯಾಗಿ ಕೈಗೆತ್ತಿಕೊಳ್ಳುವ ಸೂಚನೆ ಸಿಕ್ಕಿದೆ.

ಈ ಬಗ್ಗೆ ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಅವರು ಹೇಳಿದ ಮಾತುಗಳು ಹೀಗಿವೆ:

‘ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಉತ್ತಮವಲ್ಲ. ಪಕ್ಷದ ಅಧ್ಯಕ್ಷರು 7 ಸದಸ್ಯರ ಸಮಿತಿ ರಚಿಸಿದ್ದು, ಈ ಸಮಿತಿ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಲಿದೆ. ಈ ಸಮಿತಿ ವರದಿ ನೀಡಿದ ನಂತರ ಈ ಸೂಕ್ಷ್ಮ ವಿಚಾರದ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಿಂಸಾಚಾರದಿಂದ ಕೈರಾನಾದಲ್ಲಿ ವಲಸೆಯಾಗಿದ್ದು, ಇದೊಂದು ಗಂಭೀರ ವಿಚಾರ. ಅಲ್ಲಿ ಹಿಂಸಾಚಾರದ ವಾತಾವರಣವಿದೆ. ದೇಶದ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಕೊರತೆ ಮತ್ತು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ.’

ಈ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ  ಧ್ರುವೀಕರಣ ಮಾಡುವುದೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು ಹೀಗೆ: ‘ಸಮಾಜವಾದಿ ಪಕ್ಷ ಸರ್ಕಾರದ ಕಾನೂನು ಸುವ್ಯವಸ್ಥೆ ದುರ್ಬಲವಾಗಿದೆ. ಅಲ್ಲದೆ ಉ.ಪ್ರದ ಅಭಿವೃದ್ಧಿ ನಮ್ಮ ಕರ್ತವ್ಯವಾಗಲಿದೆ. ಮಥುರಾ ಹಾಗೂ ಕೈರಾನಾ ಪ್ರಕರಣಗಳು ತೀವ್ರ ಗಂಭೀರದ ವಿಚಾರವಾಗಿವೆ. ಕೋಮುವಾದದ ಬಗ್ಗೆ ನಾವು ಮಾತನಾಡುವುದಿಲ್ಲ. ಆದರೆ ಇದು ರಾಷ್ಟ್ರದ ಹಿತಾಸಕ್ತಿಯ ವಿಷಯ.’

ಪಂಜಾಬ್ ಮಾದಕ ವ್ಯಸನ ಸಮಸ್ಯೆ: ನಗೆಪಾಟಲಿಗೆ ಸಿಲುಕಿತು ರಾಹುಲ್ ಗಾಂಧಿ ಹೇಳಿಕೆ

ಪಂಜಾಬ್ ಮಾದಕ ವ್ಯಸನ ಸಮಸ್ಯೆ ತೀವ್ರತೆ ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಇದೇ ವಿಷಯವನ್ನು ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ರೆಡಿಯಾಗ್ತಿರೋದು ಸ್ಪಷ್ಟವಾಗಿದೆ. ಈ ಬಗ್ಗೆ ಸೋಮವಾರ ಪಂಜಾಬ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಒಂದೇ ತಿಂಗಳಲ್ಲಿ ಈ ಸಮಸ್ಯೆ ಬಗೆ ಹರಿಸ್ತೇವೆ’ ಎಂದು ಘೋಷಣೆ ಮಾಡಿದ್ದಾರೆ.

‘ಪಂಜಾಬ್ ಅಧಿಕಾರದಲ್ಲಿರುವ ಅಕಾಲಿ ದಳ ನೇತೃತ್ವದ ಸರ್ಕಾರ ಮಾದಕ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ. ಅದರಿಂದ ಲಾಭ ಪಡೆಯುತ್ತಿದೆ. ನಮ್ಮನ್ನು ನೀವು ಅಧಿಕಾರಕ್ಕೆ ತಂದರೆ ಕೇವಲ ಒಂದು ತಿಂಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬಲ್ಲೇವು. ಇಲ್ಲಿ ಪೊಲೀಸರಿಗೆ ಮುಕ್ತವಾಗಿ ಅಧಿಕಾರ ನೀಡಬೇಕು. ಹಾಗೆ ಮಾಡಿದ್ದಲ್ಲಿ ನಾಲ್ಕು ವಾರಗಳಲ್ಲಿ ಮಾದಕ ವಸ್ತುಗಳ ವ್ಯವಹಾರ ಅಂತ್ಯಗೊಳ್ಳುತ್ತದೆ’ ಎಂದಿದ್ದಾರೆ ರಾಹುಲ್ ಗಾಂಧಿ.

ನಿಜ, ಪಂಜಾಬ್ ನಲ್ಲಿ ಮಾರಕವಾಗಿ ಪರಿಣಮಿಸಿರುವ ಡ್ರಗ್ಸ್ ಸಮಸ್ಯೆ ಬಗೆಹರಿಸುವ ಉತ್ಸಾಹ ಎಲ್ಲಾ ರಾಜಕಾರಣಿಗಳಿಗೆ ಇರಲೇಬೇಕು. ಹೀಗಾಗಿ ಸಮಸ್ಯೆ ಬಗೆಹರಿಸಲು ರಾಹುಲ್ ಗಾಂಧಿ ಉತ್ಸುಕತೆ ತೋರಿರುವುದು ತಪ್ಪಲ್ಲ. ಆದರೆ, ರಾಜಕೀಯ ತಿಕ್ಕಾಟ, ಟೀಕೆಗಾಗಿ ಇಷ್ಟು ದೊಡ್ಡ ಸಮಸ್ಯೆಯನ್ನು ಒಂದೇ ತಿಂಗಳಲ್ಲಿ ನಿರ್ಮೂಲನೆ ಮಾಡುತ್ತೇವೆ ಎಂಬ ರಾಹುಲ್ ಗಾಂಧಿ ಅವರ ಬಾಲಿಶ ಹೇಳಿಕೆ ಕೇವಲ ರಾಜಕೀಯ ಪ್ರಚಾರಕ್ಕೆ ಎಂಬುದು ಸ್ಪಷ್ಟಪಡಿಸುತ್ತದೆ. ಅಲ್ಲದೆ, ರಾಹುಲ್ ಅವರ ಈ ಮಾತು ನಗೆಪಾಟಲಿಗೂ ಸಿಲುಕಿದೆ.

ಈ ಮಧ್ಯೆ, ‘ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಎಂದು ಭಾರತ ನೆಲದಲ್ಲೇ ವ್ಯವಹಾರ ನಡೆಸಲು ಹೇಳುತ್ತಿದ್ದು, ಇಲ್ಲಿ ಮಾದಕ ವಸ್ತುಗಳ ವ್ಯವಹಾರ ಜೋರಾಗಿ ನಡೆಯುತ್ತಿದೆ’ ಎಂದು ಪ್ರಧಾನಿ ವಿರುದ್ಧ ಹರಿಹಾಯಲು ಮರೆಯಲಿಲ್ಲ ರಾಹುಲ್.

1 ಕಟ್ ನೊಂದಿಗೆ ಉಡ್ತಾ ಪಂಜಾಬ್ ಗೆ ಗ್ರೀನ್ ಸಿಗ್ನಲ್ ಕೊಡ್ತು ಬಾಂಬೆ ಹೈಕೋರ್ಟ್

ಕಳೆದ ಒಂದು ವಾರದಿಂದ ಸಾಕಷ್ಟು ವಿವಾದ ಸೃಷ್ಠಿಸಿದ್ದ ಉಡ್ತಾ ಪಂಜಾಬ್ ಗೆ ಬಾಂಬೆ ಹೈ ಕೋರ್ಟ್ 1 ಕಟ್ ಗೆ ಸೂಚನೆ ನೀಡಿದ್ದು, ನಿಗದಿಯಂತೆ ಜೂನ್ 17 ಕ್ಕೆ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಸೆಂಟ್ರಲ್ ಬೋರ್ಡ್ ಫಾರ್ ಫಿಲ್ಮ್ ಸರ್ಟಫಿಕೇಶನ್ (ಸಿಬಿಎಫ್ ಸಿ) ವಿರುದ್ಧದ ಹೋರಾಟದಲ್ಲಿ ಚಿತ್ರ ತಂಡ ಜಯ ಸಾಧಿಸಿದೆ.

ಮತ್ತೊಂದೆಡೆ, ಸೋಮವಾರ ನ್ಯಾಯಾಲಯದ ತೀರ್ಪು ಹೊರಬರುವ ಮುನ್ನ ಪ್ರತಿಕ್ರಿಯೆ ನೀಡಿದ್ದ ಸಿಬಿಎಫ್ ಸಿ ಮುಖ್ಯಸ್ಥ ಫಹ್ಲಾಜ್ ನಿಹಲಾನಿ, ‘ಮಂಡಳಿಯು 13 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸುವ ಮೂಲಕ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ. ಆ ಮೂಲಕ ಮಂಡಳಿಯ ಕಾರ್ಯ ಅಂತಿಮಗೊಂಡಿದ್ದು, ಚಿತ್ರ ತಂಡ ಟ್ರಿಬ್ಯುನಲ್ ಅಥವಾ ನ್ಯಾಯಾಲಯದ ಮೊರೆ ಹೋಗಬಹುದು’ ಎಂದಿದ್ದರು.

ಮಧ್ಯಾಹ್ನ ಪ್ರಕಟವಾದ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದಿಷ್ಟು…

‘ಚಿತ್ರದಲ್ಲಿ ಪಂಜಾಬ್ ರಾಜ್ಯಕ್ಕೆ ಧಕ್ಕೆಯಾಗುವಂತಹ ಯಾವುದೇ ಅಂಶಗಳಿಲ್ಲ. ಪಂಜಾಬ್ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ಚಿತ್ರವನ್ನು ನಿರ್ಮಿಸಿಲ್ಲ. ಕಲಾತ್ಮಕ ಸ್ವಾತಂತ್ರ್ಯ ಉಲ್ಲಂಘನೆಯಾಗ ಹಿನ್ನೆಲೆಯಲ್ಲಿ ಚಿತ್ರವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಚಿತ್ರವು ಮಾದಕ ವ್ಯಸನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿಲ್ಲ. ಹೀಗಾಗಿ ಮುಂದಿನ ಎರಡು ದಿನಗಳಲ್ಲಿ ಸಿಬಿಎಫ್ ಸಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅನುಮತಿ ನೀಡಬೇಕು.’

ಚಿತ್ರದಲ್ಲಿ ಶಾಹಿದ್ ಕಪೂರ್ ನಿರ್ವಹಿಸಿರುವ ಟಾಮಿ ಸಿಂಗ್ ಪಾತ್ರ, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ದೃಶ್ಯಕ್ಕೆ ಕತ್ತರಿ ಹಾಕಲು ನ್ಯಾಯಾಲಯ ಸೂಚಿಸಿದೆ.

ಭಾರತ ವಶವಾಯ್ತು ಏಕದಿನ ಸರಣಿ

ದುರ್ಬಲ ಜಿಂಬಾಬ್ವೆ ವಿರುದ್ಧ ನಿರೀಕ್ಷೆಯಂತೆ ಎರಡನೇ ಪಂದ್ಯದಲ್ಲೂ ಜಯ ದಾಖಲಿಸಿದ ಭಾರತ ಕ್ರಿಕೆಟ್ ತಂಡ 3 ಏಕದಿನ ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಸುಲಭ ಜಯ ತನ್ನದಾಗಿಸಿಕೊಂಡಿತು. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 34.3 ಓವರ್ ಗಳಲ್ಲಿ 126 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತ 26.5 ಓವರ್ ಗಳಲ್ಲಿ 2 ವಿಕೆಟ್ ಗೆ 129 ರನ್ ಗಳಿಸಿತು. ಇದರೊಂದಿಗೆ ಅಂತಿಮ ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ. ಭಾರತದ ಪರ 3 ವಿಕೆಟ್ ಪಡೆದ ಯುಜ್ವೇಂದ್ರ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ 34.3 ಓವರ್ ಗಳಲ್ಲಿ 126 (ವುಸಿ ಸಿಬಾಂದ 53, ಚಿಬಾಬಾ 21, ಚಹಲ್ 25ಕ್ಕೆ 3)

ಭಾರತ 26.5 ಓವರ್ ಗಳಲ್ಲಿ 129 (ರಾಯಡು ಅಜೇಯ 41, ಕರುಣ್ 39, ರಾಹುಲ್ 33, ಸಿಕಂದರ್ 7ಕ್ಕೆ 1)

ವಿಧಾನ ಪರಿಷತ್ತಿಗೆ ಬಸವರಾಜ್ ಹೊರಟ್ಟಿ ಆಯ್ಕೆ

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ನ ಬಸವರಾಜ್ ಹೊರಟ್ಟಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಆ ಮೂಲಕ 7ನೇ ಬಾರಿಗೆ ಆಯ್ಕೆಯಾದ ಇತಿಹಾಸವನ್ನು ನಿರ್ಮಿಸಿದ್ದಾರೆ. ಆರಂಭದಲ್ಲಿ ಪ್ರತಿಸ್ಫರ್ಧಿ ಮಾ.ನಾಗರಾಜ್ ಅವರಿಂದ ಸ್ಪರ್ಧೆ ಎದುರಾದರೂ ನಂತರ ಹೊರಟ್ಟಿ ಅವರು ಮುನ್ನಡೆ ಸಾಧಿಸಿ 7,480 ಮತಗಳನ್ನು ಪಡೆದು ಜಯ ಸಾಧಸಿದರು.

ಎಪಿಎಲ್ ಕಾರ್ಡು ಪಡಿಯೋದು ಸುಲಭ

ಬಡತನ ರೇಖೆಗಿಂತ ಮೇಲಿನ ಕುಟುಂಬದವರು ಇನ್ಮುಂದೆ ಮನೆಯಲ್ಲೇ ಕುಳಿತು ಎಪಿಎಲ್ ಕಾರ್ಡ್ ಪಡೆಯುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಇದ್ದರೆ ಅದರ ಸಂಖ್ಯೆಯನ್ನು ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಅರ್ಜಿ ನಮೂನೆಯಲ್ಲಿ ದಾಖಲಿಸಿದರೆ ಸಾಕು. ಅದು ಎಪಿಎಲ್ ಪಡಿತರ ಚೀಟಿಯಾಗಿ ಮಾರ್ಪಡುತ್ತದೆ. ಬಿಪಿಎಲ್ ಪಡಿತರ ಚೀಟಿಗಳನ್ನು ಕ್ರಮ ಬದ್ಧಗೊಳಿಸಲು ಆಧಾರ್ ಕಾರ್ಡ್ ಗಳನ್ನು ಜೋಡಿಸಲಾಗುತ್ತಿದೆ. ಈಗಾಗಲೇ ಶೇ. 87 ರಷ್ಟು ಮಂದಿ ಆಧಾರ್ ಕಾರ್ಡುಗಳನ್ನು ಪಡಿತರ ಚೀಟಿಗೆ ಲಿಂಕ್ ಮಾಡಿದ್ದು, ಆ ಪೈಕಿ ಶೇಕಡಾ 76 ರಷ್ಟು ಕಾರ್ಡುಗಳು ಹೊಂದಿಕೆಯಾಗಿವೆ.

ಆಧಾರ್ ಕಾರ್ಡುಗಳನ್ನು ಒದಗಿಸಲು ಜೂನ್ ಹದಿನೈದರವರೆಗೆ ಕಾಲಾವಕಾಶ ನೀಡಲಾಗಿತ್ತು.ಇದನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಬಹುತೇಕ ನಕಲಿ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಲಿವೆ. ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹರು ಪಡೆದಿದ್ದರೆ ಅಂತವರ ಮಾಹಿತಿ ನೀಡಿದರೆ ಮಾಹಿತಿದಾರರಿಗೆ ನಾಲ್ಕು ನೂರು ರೂಪಾಯಿ ಬಹುಮಾನ ನೀಡಲಾಗುವುದು.

ಗ್ರಾಮಾಂತರ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ 300 ಹಾಗೂ ನಗರ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ 500 ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಒದಗಿಸಲು ಸೂಚಿಸಲಾಗಿತ್ತು. ಈ ಪ್ರಮಾಣವನ್ನು ಕ್ರಮವಾಗಿ 500 ಹಾಗೂ 800 ಕ್ಕೆ ಹೆಚ್ಚಿಸಲಾಗಿದೆ ಎಂದರು ಸಚಿವ ದಿನೇಶ್ ಗುಂಡೂರಾವ್.

ಜೆಡಿಎಸ್ ಶಾಸಕರ ಅಡ್ಡಮತದಾನ: ಕಾಗೋಡು ತಿಮ್ಮಪ್ಪ ಅಸಮಾಧಾನ

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್ ಶಾಸಕರ ವಿರುದ್ಧ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದಿದ್ದಾರೆ.

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ, ಅವರಿಗೆ ರಾಜಕೀಯ ಪಕ್ಷಗಳು ಮಣೆ ಹಾಕದಿದ್ದರೆ, ಇಂತಹ ಪರಿಸ್ಥಿತಿಯೇ ನಿರ್ಮಾಣವಾಗುತ್ತದೆ. ಜನರಿಗಾಗಿ ದುಡಿದವರಿಗೆ ಟಿಕೇಟ್ ನೀಡುವ ಬದಲು ಲೋಡುಗಟ್ಟಲೆ ದುಡ್ಡು ಹೊಡೆಯುವವರಿಗೆ ಟಿಕೇಟ್ ನೀಡುವುದರಿಂದ ಇಂತಹ ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆ ನಡೆಯುತ್ತವೆ.

ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ವಿಧಾನಸಭೆಯ ಒಳಗೆ ನಡೆಯುವ ಚಟುವಟಿಕೆಗಳಿಗೆ ನಾನು ಕ್ರಮ ಕೈಗೊಳ್ಳಬಹುದೇ ಹೊರತು, ವಿಧಾನಸಭೆಯಿಂದ ಹೊರಗೆ ನಡೆಯುವ ಚಟುವಟಿಕೆಗಳಿಗಲ್ಲ. ಈ ಬಗ್ಗೆ ಏನೇ ಕ್ರಮಕೈಗೊಳ್ಳುವ ಅಧಿಕಾರ ಕೇವಲ ಚುನಾವಣ ಆಯೋಗಕ್ಕಿದೆ ಎಂದರು.

ಈ ಮಧ್ಯೆ, ಸರ್ಕಾರಕ್ಕೆ ಮೂರು ವರ್ಷ ತುಂಬಿದ್ದು ಸರ್ಕಾರ ಜನಸಾಮಾನ್ಯನನ್ನು ತಲುಪುವಲ್ಲಿ ವಿಫಲವಾಗಿದೆ. ಮುಂದಿನ ಎರಡು ವರ್ಷದಲ್ಲಾದರೂ ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸ ಜನರನ್ನು ತಲುಪಬೇಕು ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಸುಳ್ಳು ಜಾಹಿರಾತಿಗೆ ಕಂಪನಿ, ಸೆಲೆಬ್ರೆಟಿಗಳೇ ಹೊಣೆ: ರಾಮ್ ವಿಲಾಸ್ ಪಾಸ್ವಾನ್

Central Minister, Dept. of Consumer Affairs, Food and Public Disಇನ್ಮುಂದೆ ಸುಳ್ಳು ಜಾಹಿರಾತು ನೀಡುವ ಕಂಪೆನಿ ಹಾಗೂ ಸೆಲೆಬ್ರೆಟಿಗಳು ನೇರ ಹೊಣೆಗಾರರಾಗುತ್ತಾರೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು. ಈಗಾಗಲೇ ಸಂಸತ್ತಿನ ಸ್ಥಾಯಿ ಸಮಿತಿಯಿಂದ ಇದಕ್ಕೆ ಅನುಮತಿ ದೊರೆತಿದೆ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ 1 ಕೋಟಿ, ರಾಜ್ಯ ಮಟ್ಟದಲ್ಲಿ 10 ಕೋಟಿ, ರಾಷ್ಟ್ರ ಮಟ್ಟದಲ್ಲಿ 10 ಕೋಟಿಗೂ ಹೆಚ್ಚಿನ ವಂಚನೆ ಪ್ರಕರಣಗಳನ್ನು ದಾಖಲಿಸಲಾಗುವುದು. ಜತೆಗೆ 1986ರ ಗ್ರಾಹಕರ ರಕ್ಷಣೆ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು.

ಪ್ರಸ್ತುತ ರಾಷ್ಟ್ರದಲ್ಲಿ 3.7 ಕೋಟಿ ಎಲ್‍ಪಿಜಿ ಸಂಪರ್ಕಗಳಿದ್ದು , ಅದನ್ನು ಮುಂದಿನ ಮೂರು ವರ್ಷದಲ್ಲಿ 5 ಕೋಟಿಗೂ ಹೆಚ್ಚಿಸುವ ಗುರಿ ಇದೆ. ನಮ್ಮ ಇಲಾಖೆಯಿಂದ 6.2 ಕೋಟಿ ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿದ್ದರಿಂದ 10,000 ಸಬ್ಸಿಡಿ ಹಣ ಉಳಿತಾಯವಾಗಿದೆ. ಆಹಾರ ಭದ್ರತಾ ಕಾಯ್ದೆ 33 ರಾಜ್ಯಗಳಲ್ಲಿ ಜಾರಿಯಲ್ಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಮಾಡಿದ ಪರಿಣಾಮ ವಿದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತಿದೆ. ರಾಷ್ಟ್ರದಲ್ಲಿ ಸುರಕ್ಷಾ ಭೀಮಾ ಸೇರಿದಂತೆ ಎಸ್ಸಿ, ಎಸ್ಟಿ ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಅಂಬೇಡ್ಕರ್ ಅವರು ಹುಟ್ಟಿದ ಸ್ಥಳ, ಅವರು ನೆಲೆಸಿದ್ದ ಸ್ಥಳ ಹಾಗೂ ಇಂಗ್ಲೆಂಡ್ ನಲ್ಲಿ ಅವರು ತಂಗಿದ್ದ ನಿವಾಸ ಸೇರಿದಂತೆ ಒಟ್ಟು 5 ಸ್ಥಳಗಳನ್ನು ಸ್ಮಾರಕವನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಲಂಡನ್ ಅವರ ಮನೆಯನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

Leave a Reply