ಜೆಡಿಎಸ್ ಭಿನ್ನರ ವಿರುದ್ಧ ಬುಸುಗುಡುತ್ತ ದೇವೇಗೌಡರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಅಮಾನತುಗೊಂಡ ಜೆಡಿಎಸ್ ಶಾಸಕರು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಬಿಚ್ಚಿಡುತ್ತ ದೇವೇಗೌಡರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕಾರಣ ಮಾಡಿಲ್ಲ ಎಂದು ಆರೋಪಿಸುತ್ತಿರುವಾಗ ಟಿವಿ9 ವಾಹಿನಿಯಲ್ಲಿ ಕುಳಿತ ದೇವೇಗೌಡರು ಪ್ರತಿಕ್ರಿಯೆ ಕೊಟ್ಟರು. ಮಾತಿನುದ್ದಕ್ಕೂ ತಾವು ಪಕ್ಷ ಕಟ್ಟಲು ಹಾಕಿದ ಶ್ರಮ, ತಮ್ಮ ಮಕ್ಕಳ ಪರವಾದ ಸಮರ್ಥನೆ, ಬಂಡಾಯ ಎದ್ದವರ ಮೇಲೆ ಸಿಟ್ಟು ಇವೇ ಪ್ರಮುಖಾಂಶಗಳಾಗಿದ್ದವು.

ಅವರ ಸಿಡಿಮಿಡಿ ಮಾತುಗಳು ಹೀಗಿವೆ-

-ಜನತಾ ಪರಿವಾರದ ಇತಿಹಾಸದ ಬಗ್ಗೆ ಇವರು ಮಾತಾನಾಡ್ತಿದ್ದಾರೆ. ಇವರಿಗೇನು ಗೊತ್ತು? ವಿಷಯ ಪೂರ್ತಿ ತಿಳಿಯದೇ ಏನೋ ಹೇಳ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿ ಫೋಟೊ ತೆಗೆದು ಹಾಕಿದಾಗ ಧ್ವನಿ ಎತ್ತಿದ್ದೆ ಅಂತಾರಾಲ್ಲಾ, ಆ ಫೋಟೊ ಕಟ್ಕಂಡು ಏನು ಮಾಡಲಿ. ಅವತ್ತು ದೇವೇಗೌಡರನ್ನು ಹೊರಗಟ್ಟಿದಾಗ ನನ್ನ ಜತೆ ಯಾರು ನಿಂತಿದ್ರು? ಬಿ. ಎಲ್. ಶಂಕರ್, ಉಗ್ರಪ್ಪ, ವೈಎಸ್ವಿ ದತ್ತ ಇವರೇ ಇದ್ದದ್ದು. ಆಗ ಎಲ್ಲಿದ್ರು ಇವರೆಲ್ಲಾ?

– ವೈ ಎಸ್ ವಿ ದತ್ತ ಬಗ್ಗೆ ಇವರೆಲ್ಲ ಹಗುರವಾಗಿ ಮಾತಾಡ್ತಿದಾರೆ. ಆದ್ರೆ ಆ ಹುಡುಗ ನಲ್ವತ್ತು ವರ್ಷಗಳಿಂದ ನನ್ನ ಜತೆಗಿದ್ದಾನ್ರೀ. ಆತನನ್ನು ಬೆಳೆಸ್ತೇನೇ..

– ನಾವು ರಾಜಕಾರಣದಿಂದ ದುಡ್ಡು ಮಾಡಿಲ್ಲ, ಬಿಸಿನೆಸ್ ಮಾಡಿ ದುಡ್ಡು ಮಾಡಿದ್ದೇವೆ ಅಂತಾರಲ್ಲಾ.. ನಾನೇನು ಇವರ ಆಸ್ತಿ ಕೆಳಕ್ಕೆ ಹೋಗಿದ್ನಾ? ಇವರು ಯಾರಿಗೆ ಟಾಂಗ್ ಕೊಡಲಿಕ್ಕೆ ಪ್ರಯತ್ನಿಸುತ್ತಿದ್ದಾರೆ. ನನಗೋ, ಕುಮಾರ ಸ್ವಾಮಿಗೋ ಅಥವಾ ರೇವಣ್ಣಗೊ..

– ಇವರು ಹೇಳ್ತಿರೋ ಸಿಂಧ್ಯಾ, ನಾಣಯ್ಯರನ್ನು ಎಂಎಲ್ಸಿ ಮಾಡಿದ್ದು ನಾನೇ. ಅವರನ್ನು ನನ್ನ ಜತೆಗೆ ಕರೆದೊಯ್ದಿದ್ದೆ. ಅವರು ಹಿರಿಯ ನಾಯಕರು ಅವರ ಬಗ್ಗೆ ಈಗಲೂ ನನಗೆ ಗೌರವ ಇದೆ.

– ರಾಜಕೀಯ ಚರ್ಚೆ ಮಾಡೋಕೆ 9 ದಿನ ಶ್ರೀಲಂಕಾಕ್ಕೆ ಹೋಗಬೇಕಿತ್ತೇನ್ರೀ? ಅಲ್ಲಿ ಕುಮಾರಸ್ವಾಮಿ ಅವರಿಗೆ ‘ನಿಮ್ಮಪ್ಪನ ಮಾತುಕೇಳ್ತಿರಾ? ಹಾಗೆ ಕೇಳಿದ್ರೆ ನೀವು ಮುಂದೆ ಬರಲ್ಲಾ’ ಅಂತಾ ಚರ್ಚೆ ಮಾಡಿದ್ರು.

– ಮುಂದಿನ ಚುನಾವಣೆಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡ್ತಿವಿ ಅಂತಿದ್ದಾರೆ. ಇದು ಕುಮಾರಸ್ವಾಮಿಗೆ ಬಿಟ್ಟ ವಿಚಾರ. ಇವರೊಂದಿಗೆ ಹೋಗಲು ಇಷ್ಟವಿದ್ದರೆ ಹೋಗಬಹುದು. ನಾನು ತಡೆಯಲ್ಲ. ಅವರಿಗೆ ಆ ಸ್ವಾತಂತ್ರ್ಯವಿದೆ. ಈಗ ಮಗನ ಸಿನಿಮಾ ಚಿತ್ರಿಕರಣದ ಹಿನ್ನೆಲೆಯಲ್ಲಿ ಹೊರಗೆ ಹೋಗಿದ್ದಾರೆ. ಬಂದ ನಂತರ ಅವರ ತೀರ್ಮಾನ ಬಿಟ್ಟಿದ್ದು. ಮಗ ಪಕ್ಷ ನಾಶ ಮಾಡ್ತಾನೆ ಅನ್ನೋ ಭಯ ನನಗಿಲ್ಲ. ಅವನ ಮೇಲೆ ನನಗೆ ನಂಬಿಕೆ ಇದೆ.

– ಶಾಸಕ ತಮ್ಮಣ್ಣ ಅವರನ್ನು ಹೊರಗಾಗ್ತೀನಿ ಅಂತಾ ಹೇಳೋ ಅಧಿಕಾರ ಇವರಿಗೆ ಕೊಟ್ಟಿದ್ಯಾರು? ಆ ಶಕ್ತಿ ಇದೆಯಾ ಅವರಿಗೆ? ಚೆಲುವರಾಯಸ್ವಾಮಿ ಅವರು ಮೊದಲ ಬಾರಿಗೆ ಸೋತಿದ್ದರು. ನಂತರ ದೊಡ್ಡಬಳ್ಳಾಪುರದಲ್ಲಿ ಬೈ ಎಲೆಕ್ಷನ್ನಿಗೆ ನಿಲ್ತೇನೆ ಅಂದ್ರೂ ಆಗ ಬೇಡ ಅಂದ್ರೂ, ನಂತರ ಅವರನ್ನು ಎಂಪಿ ಮಾಡಿದೆ. ಇನ್ನು ಮಂಡ್ಯದಲ್ಲಿ ಪುಟ್ಟರಾಜು ಸಂಸದರಾದ ಮೇಲೆ, ಚೆಲುವರಾಯಸ್ವಾಮಿಗೆ ಯಾವುದೇ ಕಾರಣಕ್ಕೂ ನೋವಾಗದಂತೆ ನಡೆದುಕೊಳ್ಳುವಂತೆ ನಾನು ಪುಟ್ಟರಾಜು ಅವರಿಗೆ ಹೇಳಿದ್ದೆ.

– ಇವರು ದೇವೇಗೌಡ ಮಾಡಿದ ಕಾರ್ಯದ ಬಗ್ಗೆ ಏನೂ ಹೇಳುತ್ತಿಲ್ಲ. ನಾನು ಡೆಲ್ಲಿಗೆ ಹೋದ ಮೇಲೆ ಮುಸಲ್ಮಾನರಿಗೆ, ಮಹಿಳೆಯರಿಗೆ ಇತರೆ ಸಮುದಾಯದವರಿಗೆ ಮೀಸಲು ಅವಕಾಶ ನೀಡಿದೆ. ಇದರಿಂದ ನಮ್ಮ ಸಮುದಾಯಕ್ಕೆ ಸ್ವಲ್ಪ ಕಡಿಮೆ ಲಾಭ ಆಗಿರಬಹುದು. ಆದರೆ, ಎಲ್ಲರಿಗೂ ಒಳ್ಳೆಯದಾಗುವ ಕಾರ್ಯ ಮಾಡಿದ್ದೇನೆ.

– ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ನಿಂತದ್ದು ನಮಗೂ ಇಷ್ಟವಿರಲಿಲ್ಲ. ಮೊಯ್ಲಿ ಅವರಿಂದ ಹಣ ಪಡೆದಿದ್ದಾರೆ ಎಂಬೆಲ್ಲಾ ಆಪಾದನೆಗಳು ಕೇಳಿಬಂದಿದ್ದರಿಂದ ನಿಲ್ಲಬೇಕಾಯಿತು.

– ರಾಮನಗರ, ಕನಕಪುರ ಕ್ಷೇತ್ರಗಳಿಗೂ ನನಗೂ ಜನ್ಮಾಂತರದ ಸಂಬಂಧವಿದೆ. ಅಲ್ಲಿ ಬಾಲಕೃಷ್ಣ ಅವರಿಂದಲೇ ಗೆದ್ದಿದ್ದಲ್ಲ. ಕುಮಾರಸ್ವಾಮಿ ಬಾಲಕೃಷ್ಣ ಗೆಲುವಿಗೆ ಶ್ರಮವಹಿಸಿದ್ದಾನೆ. ಬಾಲು ಸೋತ್ರೆ ನಾನು ಸೋತಂಗೆ ಅಂತಾ ಕಣ್ಣೀರಿಟ್ಟಿದ್ದಾನೆ.

– ಕುಮಾರಸ್ವಾಮಿ ಸ್ಟಾರ್ ಕ್ಯಾಂಪೇನರ್. ಚುನಾವಣೆ ವೇಳೆ ಬಿಜೆಪಿಯಿಂದ ಮೋದಿ, ಕಾಂಗ್ರೆಸ್ ಹೈಕಮಾಂಡ್ ಅವರವರ ಪಕ್ಷಕ್ಕೆ ಪ್ರಚಾರ ಮಾಡಿದರು. ನಾನು ಹಾಸಿಗೆ ಹಿಡಿದಿದ್ದಾಗ ಏಕಾಂಗಿಯಾಗಿ ಕುಮಾರಸ್ವಾಮಿ ಪ್ರಚಾರ ಮಾಡಿ ಹೋರಾಡಿದ್ದಾನೆ. ನಂತರ ಕುಮಾರಸ್ವಾಮಿ ವಿಷಯದಲ್ಲಿ ಯಾರು ಏನೇನು ಆಟ ಆಡಿದ್ರೂ ಅಂತಲೂ ನನಗೆ ಗೊತ್ತಿದೆ.

Leave a Reply