ಮೂರು ದಶಕಗಳ ಹಿಂದೆ ಗೌಡರು ನುಡಿದಿದ್ದ ಭವಿಷ್ಯ ನಿಜ ಮಾಡಿದ್ದಾರೆ ‘ಒಪನ್ ಕಿಲ್ಲರ್’ ಡಿ.ಕೆ. ಶಿವಕುಮಾರ್!

ಪಿ. ತ್ಯಾಗರಾಜ್

ಮೂರು ದಶಕಗಳ ಹಿಂದೆಯೇ ದೇವೇಗೌಡರು ತಮ್ಮ ಆಪ್ತ ಬಳಗದಲ್ಲಿ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. ಆಗವರು ಒಂದು ಮಾತು ಹೇಳಿದ್ದರು – ‘ಈ ಹುಡುಗನ್ನ ಹಿಂಗೇ ಬಿಟ್ಟರೆ ಮುಂದೊಂದು ದಿನ ನಮ್ ಪಾರ್ಟಿಗೇ ಮುಳುಗು ನೀರಾಗುತ್ತಾನೆ. ಇವನನ್ನ ಈಗಲೇ ಮಟ್ಟ ಹಾಕಬೇಕು. ಇಲ್ಲದಿದ್ದರೆ ನಮ್ಮನ್ನು ನೆಟ್ಟಗೆ ಮಾಡ್ತಾನೆ.’

ಯೆಸ್, ಗೌಡರ ದೂರದೃಷ್ಟಿ ನಿಜವಾಗಿದೆ. ಅವರು ಆಗ ಅಂದುಕೊಂಡಿದನ್ನು ಈಗ ಮಾಡಿ ಮುಗಿಸಿದ್ದಾರೆ ಸಚಿವ ಡಿ.ಕೆ. ಶಿವಕುಮಾರ್!

ದೇವೇಗೌಡರ ಕುಟುಂಬ ಸದಸ್ಯರು ಮತ್ತು ಭಿನ್ನ ಶಾಸಕರ ನಡುವೆ ಮೂರು ವರ್ಷಗಳಿಂದಲೂ ಮನಸ್ತಾಪ ಇತ್ತು. ನಾಯಕರ ವರ್ತನೆಗೆ ಬೇಸತ್ತು ಮೇಲ್ಮನೆ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದಾಗಿ ಪಕ್ಷದಿಂದ ಅಮಾನತಾಗಿರುವ ಎಂಟು ಮಂದಿ ಭಿನ್ನ ಶಾಸಕರು ಹೇಳಿಕೊಂಡಿದ್ದಾರೆ. ಆದರೆ ಅವರನ್ನು ಆ ಮಟ್ಟಕ್ಕೆ ಸಜ್ಜುಗೊಳಿಸಿ, ಜೆಡಿಎಸ್ ಇಬ್ಭಾಗದ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಕೀರ್ತಿಯೋ, ಅಪಕೀರ್ತಿಯೋ ಅದು ಸಲ್ಲಬೇಕಾದದ್ದು ಮಾತ್ರ ಶಿವಕುಮಾರ್ ಅವರಿಗೇ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 1985 ರಲ್ಲಿ ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆಗೆ ಹೋದಾಗ ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಸಾತನೂರಿನಲ್ಲಿ ತಮಗೆ ಸಖತ್ ಫೈಟ್ ಕೊಟ್ಟ ಡಿ.ಕೆ. ಶಿವಕುಮಾರ್ ಬಗ್ಗೆ ಗೌಡರು ಮೇಲಿನ ಮಾತು ಹೇಳಿದ್ದರು. ಆಗ ಗೌಡರಿಗೆ 45 ಸಾವಿರ ಮತಗಳು ಬಿದ್ದಿದ್ದರೆ, ಕಣಕ್ಕಿಳಿದ ಮೊದಲ ಚುನಾವಣೆಯಲ್ಲೇ ಶಿವಕುಮಾರ್ 30 ಸಾವಿರ ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಶಿವಕುಮಾರ್ ಗೆ ಆಗಿನ್ನೂ ಬರೀ 24 ವರ್ಷ. ಒಕ್ಕಲಿಗ ಸಮುದಾಯದ ನಾಯಕತ್ವವೂ ಸೇರಿ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ ಸೂಕ್ಷ್ಮಮತಿ ಗೌಡರಿಗೆ ಅಗಲೇ ಮನಸಿನ ಮೂಲೆಯಲ್ಲೆಲ್ಲೋ ಶಿವಕುಮಾರ್ ರಾಜಕೀಯ ಭವಿಷ್ಯದ ಬಗ್ಗೆ ವಾಸನೆ ಬಡಿದಿತ್ತು. ಹೀಗಾಗಿ ಈ ಮಾತು ಹೊರಬಿದ್ದಿತ್ತು.

ಗೌಡರ ಮಾತು ನಿಜವಾಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. 1989 ರ ಚುನಾವಣೆಯಿಂದ ಆರಂಭವಾದ ಡಿಕೆಶಿ ವಿಜಯಯಾತ್ರೆ ಈವರೆಗೂ ನಿಂತಿಲ್ಲ. ಅದು 2004 ರಲ್ಲಿ ಕಾಂಗ್ರೆಸ್ ಧೂಳಿಪಟ ಆದಾಗಿರಬಹುದು, ಕುಮಾರಸ್ವಾಮಿಯಿಂದ ಅಧಿಕಾರ ಹರಣ ಕಾರಣಕ್ಕೆ 2008 ರಲ್ಲಿ ಯಡಿಯೂರಪ್ಪ ಬಿಜೆಪಿ ಪತಾಕೆ ಹಾರಿಸಿದಾಗಿರಬಹುದು ಡಿಕೆಶಿ ಕಣವಿಜೃಂಭಣೆ ಕೊಂಚವೂ ಅಲುಗಾಡಲಿಲ್ಲ. ಸತತ ಆರು ಗೆಲವು ದಾಖಲಿಸಿರುವ ಶಿವಕುಮಾರ್ 1999 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಮಣಿಸಿದ್ದು, ಗೌಡರ ಕುಟುಂಬದ ಕೆಂಗಣ್ಣಿಗೆ ಖಾರದಪುಡಿ ತೂರಿದಂತಾಗಿತ್ತು. ಈ ಮಧ್ಯೆ ಉಭಯತ್ರರ ನಡುವೆ ಬೀಜ ಮೊಳೆತು ವೃಕ್ಷವಾದ ರಾಜಕೀಯ ಹಗೆತನ ಕಾಲದ ಜತೆಗೆ ದೃಢವಾಗುತ್ತಾ ಖಡಾಖಡಿ ಎನ್ನುವ ಮಟ್ಟ ಮುಟ್ಟಿತು.

ಚುನಾವಣೆಯಿಂದ ಚುನಾವಣೆಗೆ ತನ್ನದೇ ಆದ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಡಿಕೆಶಿ ದೇವೇಗೌಡರ ಕುಟುಂಬ ಸದಸ್ಯರು ಕೊಟ್ಟ ಯಾವ ಒಳೇಟುಗಳಿಗೆ ಜಗ್ಗಲಿಲ್ಲ. ಗೌಡರ ಪಕ್ಷದ ಪಿ.ಜಿ.ಆರ್. ಸಿಂಧ್ಯ ಜತೆ ಒಳಒಪ್ಪಂದ ಕುದುರಿಸಿ ಇಬ್ಬರ ಗೆಲುವಿಗೆ ಭಂಗವಾಗದಂತೆ ನೋಡಿಕೊಂಡರು. ಪ್ರಧಾನಿ ಪಟ್ಟ ಬಲದಿಂದ ಪ್ರಾಪ್ತವಾಗಿದ್ದ ಅಧಿಕಾರ ಬಳಸಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೆಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರವೇ ಮಾಯ ಮಾಡಿದಾಗ ಎದೆಗುಂದದ ಡಿಕೆಶಿ ಪಕ್ಕದ ಕನಕಪುರದಲ್ಲಿ ಒಂದು ಕಾಲದ ಗೆಳೆಯ ಸಿಂಧ್ಯ ಅವರನ್ನೇ ಮಣಿಸಿ ವಿಧಾನಸಭೆ ಸದಸ್ಯತ್ವ ಅಲ್ಲಾಡದಂತೆ ನೋಡಿಕೊಂಡರು. ಅಷ್ಟೇ ಅಲ್ಲ ಮೊದಲಿಗೆ ಗೌಡರ ಕುಟುಂಬದ ತಂತ್ರಗಳಿಗೆ ರಕ್ಷಣಾತ್ಮಕ ಪ್ರತಿತಂತ್ರ ರಚನೆಗೆ ಸೀಮಿತವಾಗಿದ್ದ ರಾಜಕೀಯ ಜಾಣ್ಮೆಯನ್ನು ಮುಂದೆ ಗೌಡರ ಪ್ರಾಬಲ್ಯ ಮುರಿಯಲೂ ಬಳಸಿಕೊಂಡರು.

ಗೌಡರ ಮತ್ತೊಂದು ಟಾರ್ಗೆಟ್ ಆಗಿದ್ದ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಪ್ರಬಲ ಸಚಿವ, ಮಿಗಿಲಾಗಿ ಅವರ ನೀಲಿಕಂಗಳ ಹುಡುಗನಾಗಿ ಮೆರೆದ ಶಿವಕುಮಾರ್ ತಮಗಿದ್ದ ಅಧಿಕಾರ ಬಲದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗಿದ್ದ ರಾಜಕೀಯ ಹಿಡಿತದ ಬೇರುಗಳನ್ನು ಸಡಿಲಗೊಳಿಸಲು ಶುರುಮಾಡಿದರು. ಒಂದು ಹಂತಕ್ಕೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದ್ದು ಡಿ.ಕೆ. ಶಿವಕುಮಾರ್ ರಾಜಕೀಯ ನೆರಳಾದ ಸಹೋದರ ಡಿ.ಕೆ. ಸುರೇಶ್ ಅವರಿಂದ. ಅಣ್ಣನಿಗಿಂತಲೂ ಒಂದು ಕೈ ಮೇಲೆಯೇ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಕಲೆ ಕರಗತ ಮಾಡಿಕೊಂಡಿರುವ ಸುರೇಶ್ ಬೆಂಗಳೂರು ಹೊರವಲಯವನ್ನು ಗೌಡರ ಕುಟುಂಬ ಮುಕ್ತ ಕಾಯಕದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಡಿ.ಕೆ. ಶಿವಕುಮಾರ್ ಕನಕಪುರ ರಸ್ತೆ ಬಿಟ್ಟು ಬೇರೆ ಕಡೆ ಓಡಾಡಲಿ ನೋಡುತ್ತೇವೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದರು. ಅದನ್ನು ಅಷ್ಟೇ ಸವಾಲಿಂದ ಸ್ವೀಕರಿಸಿದ್ದ ಡಿಕೆಶಿ ಇದೀಗ ಇಡೀ ಬೆಂಗಳೂರು ಗ್ರಾಮಾಂತರವನ್ನೇ ತಮ್ಮ ಕಬ್ಜಕ್ಕೆ ತೆಗೆದುಕೊಂಡಿದ್ದಾರೆ. ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ. ಕನಕಪುರ ಶಿವಕುಮಾರ್ ಕೈಯಲ್ಲೇ ಇದೆ. ಸೋದರ ಸಂಬಂಧಿ ಡಿ.ಕೆ. ರವಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ಮೇಲ್ಮನೆಯಲ್ಲಿದ್ದಾರೆ. ಅತ್ತ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೀಶ್ವರ್ ಜತೆ ಒಳಒಪ್ಪಂದ. ಇತ್ತ ಕುಮಾರಸ್ವಾಮಿ ಕೈತಪ್ಪಿದ ರಾಮನಗರದಲ್ಲಿ ಯೋಗೀಶ್ವರ್ ಸಹೋದರ ಸಿ.ಪಿ. ಗಿರೀಶ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷ.

ಹೀಗಿರುವಾಗ ಬಂದ ವಿಧಾನಸಭೆಯಿಂದ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯನ್ನು ಶಿವಕುಮಾರ್ ಜೆಡಿಎಸ್ ಒಡೆದು ಹಾಕಲು ಬಳಸಿಕೊಂಡಿದ್ದಾರೆ. ಜತೆಗೆ ತಮ್ಮ ಹಿಡಿತವನ್ನು ಬೆಂಗಳೂರು ಗ್ರಾಮಾಂತರದಿಂದ ಹಳೇ ಮೈಸೂರು ಭಾಗಕ್ಕೂ ವಿಸ್ತರಿಸಲು ನೋಡುತ್ತಿದ್ದಾರೆ. ಜೆಡಿಎಸ್ ಬಳಗದ ಮಂಡ್ಯ ಸೀಮೆ ರಮೇಶ್ ಬಂಡಿಸಿದ್ದೇಗೌಡ, ನಾಗಮಂಗಲದ ಚಲುವರಾಯಸ್ವಾಮಿ, ರಾಮನಗರದ ಮಾಗಡಿ ಬಾಲಕೃಷ್ಣ, ಚನ್ನಪಟ್ಟಣದ ಪುಟ್ಟಣ್ಣ, ಬೆಂಗಳೂರಿನ ಜಮೀರ್ ಅಹಮದ್, ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ಇದೀಗ ಶಿವಕುಮಾರ್ ಆಪ್ತವಲಯದಲ್ಲಿದ್ದಾರೆ.

ಬರೀ ಚುನಾವಣೆ ಗೆಲ್ಲುವುದಷ್ಟೇ ಡಿಕೆಶಿ ಆದ್ಯತೆ ಆಗಿರಲಿಲ್ಲ. ಹಾಗೇನಾದರೂ ಆಗಿದ್ದರೆ ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಗೆಲುವಿಗಷ್ಟೇ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸುತ್ತಿದ್ದರು. ಆದರೆ ಮೇಲ್ಮನೆಯಲ್ಲಿ ಬಿಜೆಪಿ ಎರಡನೇ ಅಭ್ಯರ್ಥಿ ಗೆಲುವಿಗೆ ತಮ್ಮ ಹಿಡಿತದಲ್ಲಿದ್ದ ಪಕ್ಷೇತರರ ಮತಗಳನ್ನು ಖಚಿತ ಮಾಡಿಕೊಡುತ್ತಿರಲಿಲ್ಲ. ಅವರ ಹಣೆಬರಹ ಅವರದು ಎಂದು ಸುಮ್ಮನಾಗುತ್ತಿದ್ದರು. ಆದರೆ ಜೆಡಿಎಸ್ಸಿಗೆ ಮುಖಭಂಗ ಆಗಬೇಕು, ತಮ್ಮ ವಿರುದ್ಧ ಹಗೆ ಸಾಧಿಸುತ್ತಿರುವ ಗೌಡರ ಕುಟುಂಬದವರಿಗೆ ತಕ್ಕ ಪಾಠ ಕಲಿಸಬೇಕು ಎಂಬ ಹಠಕ್ಕೆ ಬಿದ್ದಿದ್ದರಿಂದ ಚುನಾವಣೆಯ ವಿಸ್ತಾರ ಸೋಲು-ಗೆಲವನ್ನು ಮೀರಿ ಜೆಡಿಎಸ್ ಇಬ್ಭಾಗದೊಂದಿಗೆ ತಾರ್ಕಿಕ ಅಂತ್ಯ ಕಂಡಿದೆ. ಗೌಡರ ಕುಟುಂಬ ಮತ್ತು ಭಿನ್ನರ ನಡುವೆ ತಾರಕಕ್ಕೇರಿರುವ ವಾಗ್ಸಮರದ ಹಿಂದೆ ಡಿಕೆಶಿ ಆಶಯ ಕಿಲಕಿಲ ನಗುತ್ತಿದೆ.

1 COMMENT

Leave a Reply