ಕಾನೂನು ಮೀರಿ ಸಂಕಷ್ಟಕ್ಕೆ ಸಿಕ್ಕಾಗ ಏನ್ಮಾಡ್ಬೇಕು? ಅರವಿಂದ ಕೇಜ್ರಿವಾಲರ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಬಯ್ಯಬೇಕು!

ಡಿಜಿಟಲ್ ಕನ್ನಡ ಟೀಮ್:

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ಸಿಟ್ಟು ಬಂದಿದೆ. ಸಿಟ್ಟು ಬಂದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿಯವರನ್ನು ಬಯ್ಯುವುದು ಅವರು ಪಾಲಿಸಿಕೊಂಡು ಬಂದಿರುವ ನಿಯಮ.

ಆಗಿರುವುದೇನು?

ಅರವಿಂದ ಕೇಜ್ರಿವಾಲರ ಆಪ್ ಸರ್ಕಾರ ತನ್ನ 21 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿತ್ತು. ಸಂಸದೀಯ ಕಾರ್ಯದರ್ಶಿ ಹುದ್ದೆಯೇ ವೇತನ- ಸೌಲಭ್ಯಗಳನ್ನು ಹೊಂದಿರುವ ಲಾಭದಾಯಕ ಹುದ್ದೆ ಎಂದು ಕಾನೂನಿನ ಪ್ರಕಾರ ವ್ಯಾಖ್ಯಾನಕ್ಕೆ ಒಳಪಟ್ಟಿದೆ. ಹೀಗಾಗಿ, ಶಾಸಕರಾಗಿರುವಾಗಲೇ ಸರ್ಕಾರದ ಇನ್ನೊಂದು ಲಾಭದಾಯಕ ಹುದ್ದೆ ಸ್ವೀಕರಿಸಿರುವುದರಿಂದ ಇವರನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿಯೊಂದು ಚುನಾವಣಾ ಆಯೋಗದ ಎದುರು ಸಲ್ಲಿಕೆಯಾಗಿತ್ತು.

ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಆಪ್ ಸರ್ಕಾರ ಮಾಡಿದ್ದೇನೆಂದರೆ ಈ ನಿಯಮಕ್ಕೆ ತಿದ್ದುಪಡಿ ತಂದು, ಈ ತಿದ್ದುಪಡಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಬೇಕು ಎಂದು ಲೆಫ್ಟಿನೆಂಟ್ ಜಂಗ್ ಬಳಿ ಕಳುಹಿಸಿದರು. ಇದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಬಳಿ ಹೋದಾಗ ಅದು ತಿರಸ್ಕೃತಗೊಂಡಿತು.

ಇದೀಗ ಕ್ರುದ್ಧರಾಗಿ ಕೇಜ್ರಿವಾಲ್ ಹೇಳುತ್ತಿರುವುದೇನೆಂದರೆ- ‘ನರೇಂದ್ರ ಮೋದಿ ನಮ್ಮ ಹಿಂದೆ ಬಿದ್ದಿದ್ದಾರೆ. ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದು ರೂಢಿಯಲ್ಲಿದೆ. ಲಾಭದಾಯಕ ಹುದ್ದೆ ಎಂಬ ಕಾರಣ ನೀಡಿ ನಮ್ಮನ್ನು ಮಾತ್ರ ಗುರಿ ಮಾಡುತ್ತಿದ್ದಾರೆ. ಕಾರ್ಯದರ್ಶಿಗಳಾದವರ್ಯಾರೂ ಈ ಹುದ್ದೆಗೆ ಒಂದು ರುಪಾಯಿಯನ್ನು ಪಡೆಯುತ್ತಿಲ್ಲ. ಯಾವ ಹೆಚ್ಚುವರಿ ಸೌಲಭ್ಯವೂ ಇಲ್ಲದೇ ಸಮಾಜಸೇವೆ ಮಾಡುತ್ತಿದ್ದಾರೆ. ಇಂಥವರನ್ನು ನರೇಂದ್ರ ಮೋದಿ ಸರ್ಕಾರ ಗುರಿ ಮಾಡುತ್ತಿದೆ. ಅವರಿಗೆ ಕುಳಿತರೂ ನಿಂತರೂ ಆಪ್ ದುಃಸ್ವಪ್ನವಾಗಿ ಕಾಡುತ್ತಿದೆ.’

ಆದರೆ ಈ ವಾದವನ್ನು ಬಿಜೆಪಿ ತಳ್ಳಿಹಾಕಿದೆ. ಸಂಸದೀಯ ಕಾರ್ಯದರ್ಶಿ ಹುದ್ದೆ ಲಾಭದಾಯಕ ಎಂಬ ವ್ಯಾಖ್ಯಾನ ಕಾನೂನಿನಲ್ಲೇ ಇದೆ. ಈ ಹುದ್ದೆಯಲ್ಲಿರುವವರಿಗೆ ಕಾರು, ಭತ್ಯೆಗಳೆಲ್ಲ ಸಿಗುತ್ತವೆ. ಈ ಲಾಭಗಳನ್ನೆಲ್ಲ ನಾವು ತೆಗೆದುಕೊಂಡಿಲ್ಲ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಕೇಜ್ರಿವಾಲ್ ಉದಾಹರಿಸುತ್ತಿರುವ ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳಗಳ ವಿಷಯದಲ್ಲಿ ಇಂಥ ಸಾಹಸಗಳು ಹೈಕೋರ್ಟ್ ನಲ್ಲಿ ಪ್ರಶ್ನೆಗೆ ಒಳಗಾಗಿವೆ. ಅಲ್ಲದೇ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಂವಿಧಾನಿಕ ತಪ್ಪೆಸಗಿರುವುದು ಸ್ಪಷ್ಟ. ಸೇವಾ ಉದ್ದೇಶವೇ ಆಗಿದ್ದರೆ ಮೊದಲು ಕಾನೂನಿನ ತಿದ್ದುಪಡಿ ಮಾಡಿ ನಂತರ ನೇಮಕ ಮಾಡಬೇಕಿತ್ತೇ ಹೊರತು ಬರೋಬ್ಬರಿ 21 ಶಾಸಕರನ್ನು ಹುದ್ದೆಯಲ್ಲಿ ಕೂರಿಸಿ, ನಂತರವಷ್ಟೇ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಕಾಯ್ದೆ ಜಾರಿ ಮಾಡಿ ಎಂದು ಕೇಳಿದರೆ ಆಗುತ್ತದೆಯೇ? – ಇವೆಲ್ಲ ಬಿಜೆಪಿ ಎತ್ತಿರುವ ಪ್ರಶ್ನೆಗಳು.

ಇವೆಲ್ಲವಕ್ಕೂ ಕಾರಣವಾಗಿದ್ದು ಪ್ರಶಾಂತ್ ಪಟೇಲ್ ಎಂಬ ಯುವ ನ್ಯಾಯವಾದಿ ಹಾಕಿದ ಅರ್ಜಿ. ಕೇಜ್ರಿವಾಲ್ ಬುಸುಗುಡುವಿಕೆಗೆ ಪ್ರಶಾಂತ್ ಪ್ರತಿಕ್ರಿಯೆ ಹೀಗಿದೆ- ‘ಲಾಭದಾಯಕ ಹುದ್ದೆ ಹೊಂದಿರುವ 21 ಶಾಸಕರನ್ನು ಅನರ್ಹಗೊಳಿಸಬೇಕೇ ಎಂಬ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಚುನಾವಣಾ ಆಯೋಗ. ಹೀಗೆ ಅನರ್ಹಗೊಳಿಸುವುದಕ್ಕೆ ಅನುವಾಗದಂತೆ ಪೂರ್ವಾನ್ವಯ ತಿದ್ದುಪಡಿ ತಿರಸ್ಕರಿಸಿರುವುದು ರಾಷ್ಟ್ರಪತಿ. ಹೀಗಿರುವಾಗ ನರೇಂದ್ರ ಮೋದಿ ಅಥವಾ ಬಿಜೆಪಿಯನ್ನು ಬಯ್ಯುತ್ತಿರುವುದು ವಿಷಯವನ್ನು ಬೇರೆಡೆ ಒಯ್ಯುವ ಯತ್ನವಷ್ಟೆ. ಅರವಿಂದ ಕೇಜ್ರಿವಾಲರು ದೂಷಿಸುವುದಾದರೆ ಅಂಬೇಡ್ಕರರನ್ನು ದೂಷಿಸಬೇಕಾಗುತ್ತದೆ. ಏಕೆಂದರೆ ಅಂಬೇಡ್ಕರ್ ಪ್ರಣೀತ ಸಂವಿಧಾನಕ್ಕೆ ಅಪಚಾರ ಎಸಗಿರುವುದರಿಂದಲೇ ಆಪ್ ಸರ್ಕಾರದ ವಿರುದ್ಧ ನಾನು ದಾವೆ ಹೂಡಿದ್ದೇನೆ’ ಎಂದಿದ್ದಾರವರು.

ಹಾಗೆ ನೋಡಿದರೆ ‘ಸಮಾಜ ಸೇವೆ’ ಕತೆ ಹೇಳುವ ವಿಶ್ವಾಸಾರ್ಹತೆ ಆಪ್ ಸರ್ಕಾರಕ್ಕೆ ಉಳಿದಿಲ್ಲ. ಏಕೆಂದರೆ ಇಲ್ಲಿನ ಶಾಸಕರು ಅಧಿಕಾರಕ್ಕೆ ಬರುತ್ತಲೇ ಶೇ. 500ರಷ್ಟು ತಮ್ಮ ವೇತನ-ಭತ್ಯೆ ಏರಿಸಿಕೊಂಡಿದ್ದಾರೆ. ಸಾಮಾನ್ಯರ ಹಣದಿಂದ ರೂಪುಗೊಂಡ ಪಕ್ಷ ಎಂಬುದೆಲ್ಲ ಭಾಷಣಕ್ಕಷ್ಟೆ. ಎಲ್ಲ ಪಕ್ಷಗಳೂ ಮಾಡುವಂತೆ ತಮ್ಮ ಸರ್ಕಾರದ ವಾರ್ಷಿಕ ಸಾಧನೆಗಳನ್ನು ದೇಶದ ಪ್ರಮುಖ ಪತ್ರಿಕೆಗಳಲ್ಲಿ, ದೆಹಲಿ ಹೊರಗೂ ಪ್ರಸಾರವಾಗುವಂತೆ ಕೋಟ್ಯಂತರ ರುಪಾಯಿ ಸಾರ್ವಜನಿಕ ಹಣವನ್ನು ಆಪ್ ಸಹ ಜಾಹೀರಾತಿಗೆ ಸುರಿದಿದೆ.

ಅಂದಹಾಗೆ, ಇಷ್ಟು ಪ್ರಮಾಣದಲ್ಲಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿ ಆಗಿಸುವ ಹಿಕಮತ್ತಾದರೂ ಏನು? 2003ರಲ್ಲಿ ಜಾರಿಗೆ ಬಂದ ತಿದ್ದುಪಡಿ ಪ್ರಕಾರ ಸದನ ಬಲದ ಶೇ. 15ಕ್ಕಿಂತ ಹೆಚ್ಚು ಮಂದಿಯನ್ನು ಸಚಿವರನ್ನಾಗಿಸುವಂತಿಲ್ಲ. ಉಳಿದ ಶಾಸಕರನ್ನು ಖುಷಿಪಡಿಸಬೇಕಲ್ಲ? ಅದಕ್ಕೆ ರಾಜಕೀಯ ಪಕ್ಷಗಳು ನಾನಾ ಮಾರ್ಗ ಹುಡುಕಿಕೊಳ್ಳುತ್ತವೆ. ಭಾರೀ ಶಾಸಕರ ಸಂಖ್ಯೆಯಿಂದ ಆರಿಸಿ ಬಂದಿರುವ ಆಪ್ ಸರ್ಕಾರ ತನ್ನ ಶಾಸಕರನ್ನು ಖುಷಿಯಲ್ಲಿಡುವುದಕ್ಕೆ ಈ ಮಾರ್ಗ ಆರಿಸಿಕೊಂಡಿದೆಯಷ್ಟೆ.

ಇನ್ನುಳಿದಂತೆ, ಭತ್ಯೆ- ಸವಲತ್ತುಗಳೆಲ್ಲ ಈ ಹುದ್ದೆಗೆ ಲಭ್ಯವಿದೆ ಆದರೆ ಪಡೆದಿಲ್ಲ ಎಂಬ ವಾದವು, ನಾನು ಅಕ್ರಮವಾಗಿ ಪಿಸ್ತೂಲು ಇರಿಸಿಕೊಂಡಿದ್ದೆ ಆದರೆ ಕೊಲೆ ಮಾಡಲಿಲ್ಲವಲ್ಲ ಎಂಬ ವಾದದಷ್ಟೇ ಪರಿಪೂರ್ಣ.

ಇನ್ನು, ಕಾಂಗ್ರೆಸ್ ಸಹ ಈ ವಿಷಯದಲ್ಲಿ ಆಮ್ ಆದ್ಮಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ನ ಅಜಯ್ ಮಕೆನ್ ಹೇಳಿದ್ದು- ‘ನಾನೂ ಸಂಸದೀಯ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದೇನೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಅಲ್ಲಿ ಅಂಥ ಕೆಲಸದ ಒತ್ತಡವೇನೂ ಇರುವುದಿಲ್ಲ. ಒಬ್ಬರೋ ಇಬ್ಬರೋ ಈ ಹುದ್ದೆಯಲ್ಲಿದ್ದರೆ ಒಂದು ಅರ್ಥ. ಬರೋಬ್ಬರಿ 21 ಮಂದಿಗೆ ಆ ಹುದ್ದೆಯಲ್ಲೇನು ಕೆಲಸ? ಇದು ಗೂಟದ ಕಾರು ದೊರಕಿಸಿಕೊಳ್ಳುವುದಕ್ಕೆ ಮಾಡಿದ ಕ್ರಮ. ಆಮ್ ಆದ್ಮಿ ಬಹಳ ಖಾಸ್ ಆದ್ಮಿ ಆಗುತ್ತಿದೆ ಅಷ್ಟೆ.’

Leave a Reply