ದುಬಾರಿಯಾಗುತ್ತಿದೆ ಆಹಾರ, ಕುಸಿದಿದೆ ಅನಿವಾಸಿಗಳ ಹಣದ ಹರಿವು, ಕೈಗಾರಿಕ ಉತ್ಪನ್ನ ಪ್ರಮಾಣವೂ ಇಳಿಮುಖ

ಡಿಜಿಟಲ್ ಕನ್ನಡ ಟೀಮ್:

ಆಹಾರ ಮತ್ತು ತೈಲ ಬೆಲೆ ಏರಿಕೆಯ ಪರಿಣಾಮ ಮೇ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ಪ್ರಮಾಣ 5.76ಕ್ಕೆ ಏರಿದೆ. ಇದು ಸತತ ಎರಡನೇ ತಿಂಗಳಲ್ಲಿನ ಏರಿಕೆಯಾಗಿದ್ದು, 21 ತಿಂಗಳ ನಂತರ ದಾಖಲಾದ ದೊಡ್ಡ ಪ್ರಮಾಣದ ಹಣದುಬ್ಬರ.

ಈಗಾಗಲೇ, ಅನಿವಾಸಿ ಭಾರತೀಯರ ಹಣ ರವಾನೆ ಪ್ರಮಾಣದಲ್ಲಿನ ಭಾರಿ ಕುಸಿತ, ಭಾರತದ ಕೈಗಾರಿಕಾ ಉತ್ಪನ್ನ ಕುಸಿತ ಆರ್ಥಿಕ ಪರಿಸ್ಥಿತಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಧ್ಯೆ ಹಣದುಬ್ಬರ ಸಮಸ್ಯೆ ಆರ್ ಬಿ ಐ ಚಿಂತೆ ಹೆಚ್ಚಿಸಿದೆ. ಏಪ್ರಿಲ್ ನಲ್ಲಿ ಗ್ರಾಹಕ ಹಣದುಬ್ಬರದ ಪ್ರಮಾಣ ಶೇ. 5.47 ರಷ್ಟು ದಾಖಲಾಗಿತ್ತು. ಹೀಗಾಗಿ ಮೇ ತಿಂಗಳಲ್ಲಿ ಹಣದುಬ್ಬರ ಶೇ. 5.52 ರಷ್ಟು ತಲುಪುವ ನಿರೀಕ್ಷೆ ಇತ್ತು. ಆದರೆ ಹಣದುಬ್ಬರ ನಿರೀಕ್ಷೆಯನ್ನೂ ಮೀರಿ ಸಾಗಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಆಹಾರ ಪದಾರ್ಥಗಳ ಹಣದುಬ್ಬರ ಶೇ.7.55 ರಷ್ಟು ಹೆಚ್ಚಾಗಿದೆ. ಕಳೆದ ತಿಂಗಳು ಇದರ ಪ್ರಮಾಣ ಶೇ.6.40 ರಷ್ಟಿತ್ತು. ಆ ಪೈಕಿ ತರಕಾರಿಗಳ ಬೆಲೆ ಏರಿಕೆಯಲ್ಲಿ ಶೇ. 10.77 ರಷ್ಟು ಹಣದುಬ್ಬರ ಹೆಚ್ಚಿದೆ. ಇದು ಏಪ್ರಿಲ್ ನಲ್ಲಿ ಶೇ.4.98 ರಷ್ಟಿತ್ತು. ಇದರೊಂದಿಗೆ ತರಕಾರಿಗಳ ಬೆಲೆ ಏರಿಕೆ ದುಪ್ಪಟ್ಟಾಗಿದೆ.

ಕುಸಿದ ಅನಿವಾಸಿ ಭಾರತೀಯರ ಹಣ ರವಾನೆ..

ತೈಲ ಬೆಲೆ ಕುಸಿತದಿಂದ ಅನಿವಾಸಿ ಭಾರತೀಯರ ಹಣ ರವಾನೆ ಪ್ರಮಾಣ ಶೇ. 87 ರಷ್ಟು ಕುಸಿದಿದೆ ಎಂದು ಕಳೆದ ವಾರ ಆರ್ ಬಿಐ ಬಿಡುಗಡೆ ಮಾಡಿದ ವರದಿ ತಿಳಿಸಿತ್ತು.

ಅನಿವಾಸಿ ಭಾರತೀಯರ ಹಣ ರವಾನೆ ಪ್ರಮಾಣದಲ್ಲಿ ಶೇ.60 ರಷ್ಟು ಗಲ್ಫ್ ರಾಷ್ಟ್ರಗಳಿಂದ ಹರಿದುಬರುತ್ತದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತದ ಪರಿಣಾಮ ಹಣ ರವಾನೆ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಈ ಹಣ ರವಾನೆಯಾದ ಪ್ರಮಾಣ 2,406 ಮಿಲಿಯನ್ ಅಮೆರಿಕನ್ ಡಾಲರ್. ಈ ವರ್ಷ ಏಪ್ರಿಲ್ ನಲ್ಲಿ ಇದರ ಪ್ರಮಾಣ ಕೇವಲ 302 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಇದರಲ್ಲಿ ಅನಿವಾಸಿ ರುಪಾಯಿ ಖಾತೆ ವಿಭಾಗದಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಈ ವಿಭಾಗದಲ್ಲಿ 2,200 ಮಿಲಿಯನ್ ಡಾಲರ್ ಹಣ ರವಾನೆಯಾಗಿತ್ತು. ಆದರೆ ಕಳೆದ ಏಪ್ರಿಲ್ ನಲ್ಲಿ ಕೇವಲ 203 ಮಿಲಿಯನ್ ಡಾಲರ್ ರವಾನೆಯಾಗಿದೆ.

ವರ್ಷವಾರು ಪ್ರಮಾಣ ನೋಡುವುದಾದರೆ, ಅಲ್ಲೂ ನಮಗೆ ಕಾಣುವುದು ಗಣನೀಯ ಇಳಿಕೆ ಪ್ರಮಾಣ. 2013-14 ರಲ್ಲಿ ಅನಿವಾಸಿ ಭಾರತೀಯರ ಹಣ ರವಾನೆ ಪ್ರಮಾಣ ಇದ್ದದ್ದು 38,406 ಮಿಲಿಯನ್ ಡಾಲರ್ ನಷ್ಟು. ಇದು 2014-15 ಕ್ಕೆ 15,977 ಮಿಲಿಯನ್ ಡಾಲರ್ ಗೆ ಇಳಿದಿತ್ತು.

ಕಡಿಮೆಯಾದ ಕೈಗಾರಿಕ ಉತ್ಪನ್ನ ಪ್ರಮಾಣ..

ಪ್ರಸಕ್ತ ಸಾಲಿನ ಆರಂಭಿಕ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಕೈಗಾರಿಕ ಉತ್ಪನ್ನ ಪ್ರಮಾಣ ಕುಸಿತ ಕಂಡಿದೆ. ಕೈಗಾರಿಕ ಉತ್ಪನ್ನ ಪ್ರಮಾಣ ಏಪ್ರಿಲ್ ನಲ್ಲಿ ಶೇ.0.8 ರಷ್ಟು ಕುಸಿತ ಕಂಡಿದೆ. ಭಾರತದ ಕೈಗಾರಿಕಾ ಉತ್ಪನ್ನ (ಐಐಪಿ) ದ ಅಂಕಿ ಅಂಶಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೈಗಾರಿಕ ವಲಯ ಸರ್ಕಾರಕ್ಕೆ ಮನವಿ ಮಾಡಿದೆ.

ಒಟ್ಟಾರೆ ಸರಕು ಉತ್ಪನ್ನ ಮತ್ತು ತಯಾರಿಕಾ ಚಟುವಟಿಕೆಯಲ್ಲಿನ ಇಳಿಕೆ, ಸರ್ಕಾರ ಉತ್ಪನ್ನಗಳ ಪ್ರಚಾರ ಕ್ರಮಗಳಲ್ಲಿನ ವೈಫಲ್ಯಗಳಿಂದ ಈ ಕುಸಿತ ಕಂಡಿದೆ ಎನ್ನಲಾಗಿದೆ. ಬೇಡಿಕೆ ಪೂರೈಕೆ ಮತ್ತು ಆರ್ಥಿಕತೆಯಲ್ಲಿನ ಅಸಮತೋಲನದ ಬಗ್ಗೆ ಈ ಭಾರತದ ಕೈಗಾರಿಕಾ ಉತ್ಪನ್ನದ ಅಂಕಿ ಅಂಶಗಳು ಸೂಚಿಸಿವೆ.

ಭಾರತದ ಜಿಡಿಪಿ ಹೆಚ್ಚಾಗಿದೆ ಎಂಬ ಸಂಭ್ರಮದ ನಡುವೆ ನಾವು ಯೋಚಿಸಬೇಕಿರುವ ಇಳಿತದ ಅಂಕಿಅಂಶಗಳಿವು.

Leave a Reply