ನಗೆ ಚಟಾಕಿ, ಆಣೆ, ದೇವರ ಆಶೀರ್ವಾದಗಳಿಂದಲೇ ಮುಖ್ಯ ವಿಷಯ ಹಾರಿಸಿದ ರೇವಣ್ಣ

(ಕಡತ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಸೋಮವಾರ ಜೆಡಿಎಸ್ ಭಿನ್ನಮತಿಯ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ ದೇವೇಗೌಡ ಹಾಗೂ ರೇವಣ್ಣ ವಿರುದ್ಧ ಕಿಡಿಕಾರಿ ಹಲವು ಪ್ರಶ್ನೆಗಳನ್ನು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳವಾರ ವಿಧಾನಸೌಧದಲ್ಲಿ ಎಚ್. ಡಿ. ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದರು.

ಕುಮಾರಸ್ವಾಮಿಯವರ ಮಾರ್ಗಕ್ಕೆ ನೀವೇ ಅಡ್ಡಿಯಾಗಿದ್ದೀರಿ ಎಂಬ ದೂರಿದೆಯಲ್ಲ?, ಜೆಡಿಎಸ್ ನಲ್ಲಿ ಭಿನ್ನಮತಕ್ಕೆ ಕಾರಣವೇ ರೇವಣ್ಣ ಮತ್ತು ದೇವೇಗೌಡರು ಎಂಬ ಬಂಡಾಯ ಶಾಸಕರ ದೂರಿಗೆ ಏನನ್ನುತ್ತೀರಿ?, ಎಂಟು ಶಾಸಕರ ಮೇಲೆ ಮುಂದಿನ ಕ್ರಮ ಏನು ತಗೋಬೇಕಂದಿದ್ದೀರಿ… ಹೀಗೆಲ್ಲ ಪ್ರಶ್ನೆಗಳ ಸರಮಾಲೆಯನ್ನೇ ಪತ್ರಕರ್ತರು ಇಟ್ಟುಕೊಂಡಿದ್ದರು.

ಆದರೆ ಏನೇ ಕೆದಕಿದರೂ ಎಚ್. ಡಿ. ರೇವಣ್ಣ ಮಾತ್ರ ತಾವು ಏನು ಹೇಳಬೇಕಂದುಕೊಂಡಿದ್ದರೋ ಅದನ್ನೇ ತಿರುವಿ- ಮುರುವಿ ಹೇಳಿದರೇ ಹೊರತು ಮತ್ಯಾವ ಸ್ಫೋಟಕ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ.

ಪ್ರಾರಂಭದಲ್ಲಿ ತಾವು ಇಂಧನ ಸಚಿವರಾಗಿದ್ದ ಕಾಲದ ಸಾಧನೆಗಳ ಪಟ್ಟಿಯನ್ನೇ ಬಿಚ್ಚುವುದಕ್ಕೆ ಸಮಯ ವ್ಯಯಿಸಿದರು. ‘ಆ ಕತೆ ಕೇಳಿ ಏನ್ಮಾಡೋಣ ಸಾರ್? ಈಗಿನ ವಿದ್ಯಮಾನದ ಬಗ್ಗೆ ಹೇಳಿ’ ಅಂದ್ರು ಪತ್ರಕರ್ತರು. ‘ಕೇಳಿ ಬ್ರದರ್… ನನ್ ಕತೆ ಹೇಳಿಬಿಡ್ತೇನೆ. ಬಂಡಾಯ ಶಾಸಕರ ಮೇಲೆ ಮುಂದಿನ ಕ್ರಮ, ಪಕ್ಷದ ನಡೆ ಇವೆಲ್ಲ ಮಾತಾಡೋಕೆ ನಾನೇನು ರಾಷ್ಟ್ರೀಯ ಅಧ್ಯಕ್ಷನೇ, ರಾಜ್ಯಾಧ್ಯಕ್ಷನೇ? ಅದ್ನೆಲ್ಲ ಹುದ್ದೆಯಲ್ಲಿರೋ ದೊಡ್ಡವರು ನೋಡ್ಕೋತಾರೆ. ನನ್ನ ಬಗ್ಗೆ ಮಾತ್ರ ಮಾತಾಡ್ತೀನಿ’ ಅಂತ ಎಲ್ಲರ ಆಕ್ಷೇಪಗಳ ನಡುವೆಯೂ ಹರಟೆ ಕೊಚ್ಚಿದರು ರೇವಣ್ಣ. ನಡು ನಡುವೆ ಪರಿಚಿತ ಪತ್ರಕರ್ತರ ಹೆಸರು ಕರೆಯುತ್ತ ಅವರೊಂದಿಗೆ ಇನ್ಯಾವುದೋ ಲಹರಿ ಕೆದಕುತ್ತ ತಮಾಷೆ ಮಾಡುವ ಉತ್ಸಾಹ ತೋರಿದರಷ್ಟೆ.

ಬಂಡಾಯ ಶಾಸಕರ ಬಗ್ಗೆ ಅವರದ್ದು ವೇದಾಂತಿ ನಿಲುವು. ‘ನಾನು ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ.. ಎಂದಿಗೂ ಅಧಿಕಾರ ಹಸ್ತಕ್ಷೇಪ ಮಾಡಿಲ್ಲ.. ನನ್ನ ಬೈಯ್ಯೋದ್ರಿಂದ ಸಂತೋಷ ಸಿಗೋದಾದ್ರೆ ದಿನವು ಬೈಯಲಿ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ.. ಇಲ್ಲಿಯವರೆಗೂ ನಾನು ಚುನಾವಣೆಗೆ ಐದು ಪೈಸೆಯೂ ಹಣ ಪಡೆದಿಲ್ಲ, ಧರ್ಮಸ್ಥಳ ಮಂಜುನಾಥಸ್ವಾಮಿ, ಮೈಸೂರು ಚಾಂಮುಂಡೇಶ್ವರಿ ಸನ್ನಿಧಾನದಲ್ಲಿ ಆಣೆ ಮಾಡಲು ಸಿದ್ಧ..’ ಇವಿಷ್ಟೇ ರೇವಣ್ಣ ನಿಲುವು. ಜಪ್ಪಯ್ಯ ಅಂದರೂ ಅವರು ಆ ಟ್ರ್ಯಾಕ್ ಬಿಡಲೊಲ್ಲರು. ರೇವಣ್ಣ ವರ್ಸಸ್ ಕುಮಾರಸ್ವಾಮಿ ಕಥಾನಕವೇನಾದರೂ ರೂಪುಗೊಂಡಿದೆಯೇ ಎಂಬುದರ ಸುಳಿವನ್ನು ರೇವಣ್ಣ ಬಾಯಲ್ಲಿ ತರುವುದಕ್ಕೆ ಏನೇ ಒದ್ದಾಡಿದರೂ ‘ಬ್ರದರ್…’ ಅಂತ ಬೇರೆ ಕತೆ ಹೆಣೆಯುತ್ತಲೇ ಹೋದರು ರೇವಣ್ಣ.

‘ನೋಡಿ.. ಕಳೆದ ಆರು ತಿಂಗಳಲ್ಲಿ ಎಲ್ಲೂ ನನ್ನನ್ನು ದೂಷಿಸದವರು ಈಗ ಏಕಾಏಕಿ ಬಯ್ತಿದಾರೆ. ನಾನು ಅದಕ್ಕೆ ಏನೂ ಹೇಳಲ್ಲ. ದೇವ್ರು ಅವರನ್ನೆಲ್ಲ ಚೆನ್ನಾಗಿ ಇಟ್ಟಿರ್ಲಿ. ಸಿಎಂ ಸಿದ್ದರಾಮಯ್ಯ ಹತ್ತಿರ ಹೋಗ್ತಿದ್ದದ್ದು ನನ್ನ ಕ್ಷೇತ್ರದ ಕೆಲಸಕ್ಕೆ ಹೊರತೂ ಇನ್ಯಾವ ವ್ಯಾಪಾರಕ್ಕಲ್ಲ. ಹಾಗೇನಾದರೂ ಇದ್ದರೆ ಸಿದ್ದರಾಮಯ್ಯನವರು ಹೇಳಲಿ. ಸಿದ್ದರಾಮಯ್ಯ ಅಂತಲ್ಲ, ಚೆಲುವರಾಯಸ್ವಾಮಿ ಸೇರಿದಂತೆ ಯಾರ ವಿರುದ್ಧವೂ ನಾನು ವೈಯಕ್ತಿಕ ದಾಳಿ ಮಾಡಲ್ಲ….’ ಎಂದ ರೇವಣ್ಣ, ‘ಏನ್ ಪಾಪ ಮಾಡಿವ್ನಿ ಅಂತ ನೀವು ಪ್ರೆಸ್ನೋರು ಹಿಂಗೆ ಸವಾಲು ಹಾಕ್ತಿದಿರಪ್ಪಾ… ಬ್ರದರ್ಸ್, ನೀವೆಲ್ಲ ಸಲಹೆ ಕೊಡ್ಬೇಕ್ರಪಾ ನಂಗೆ..’ ಅಂತ ತಮಾಷೆ ಧ್ವನಿಯಲ್ಲಿ ಸಮಾರೋಪಗೈದರು.

ಈ ಎಲ್ಲ ತಮಾಷೆ- ಹರಟೆ ಸ್ವರೂಪಗಳ ನಡುವಲ್ಲಿ ರೇವಣ್ಣ ಹೇಳಿರುವ ಮಾತುಗಳು ಇಷ್ಟು:

  • 1977ರಿಂದಲೇ ನನಗೆ ರಾಜಕೀಯ ಗೊತ್ತಿದೆ. 1986 ರಲ್ಲೇ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದೆ. ನನ್ನ ತಂದೆ ಮಾತಿಗೆ ಎಂದಿಗೂ ಇಲ್ಲ ಎಂದಿಲ್ಲ. ನಾನು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ.
  • ನಮ್ಮದು ಚಿಕ್ಕ ಪಕ್ಷ, ಪಾಪದ ಪಕ್ಷ. ನಮ್ಮ ನಾಯಕರು ದೇವೇಗೌಡ್ರ ಮತ್ತು ಕುಮಾರಸ್ವಾಮಿ. ಅವರು ಏನು ಹೇಳ್ತಾರೋ ಅದನ್ನ ಕೇಳ್ತೀನಿ. ಮನೆಗೆ ಹೋಗು ಅಂದ್ರೆ ಹೋಗ್ತೀನಿ. ಅವರೇ ಎಲ್ಲ ತೀರ್ಮಾನ ತೆಗೆದುಕೊಳ್ತಾರೆ.
  • ಮಂಡ್ಯ ಜಿಲ್ಲೆಗೆ ದೇವೇಗೌಡರ ಕುಟುಂಬ ಏನು ಮಾಡಿದೆ ಅಂತಾ ಕೇಳ್ತಾರೆ… ನಾನು ಮಂತ್ರಿ ಆಗಿದ್ದಾಗ ಕೆ.ಆರ್ ಪೇಟೆ ಸಬ್ ಸ್ಟೇಷನ್ ಸೇರಿದಂತೆ ಕೆಇಬಿ ಕಚೇರಿ, ಇಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸಿದ್ದೇನೆ. ಎಸ್.ಎಂ ಕೃಷ್ಣ ಅವರು ಮಂಡ್ಯ ಪ್ಯಾಕೇಜ್ ಎಂದು 500 ಕೋಟಿ ಕೊಟ್ಟಿದ್ದರು, ನಾವು 600 ಕೋಟಿ ಕೊಟ್ಟೆವು. ಮಾಗಡಿಗೂ ಹೆಚ್ಚು ಹಣ ನೀಡಿದ್ದೇವೆ. ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಮಾಡಿ ಜಿಲ್ಲಾ ಕೇಂದ್ರವನ್ನು ಸ್ಥಾಪಿಸಿದವರ್ಯಾರು?
  • ಚೆಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಬಗ್ಗೆ ನಾನು ಎಲ್ಲಿಯೂ ಕೆಟ್ಟದ್ದಾಗಿ ಮಾತನಾಡಿಲ್ಲ. ವೈಯಕ್ತಿಕವಾಗಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಭಿನ್ನಮತಿಯರು ಹೋಗುವ ಮೂಲಕ ಕಾಂಗ್ರೆಸ್ ಗೆ ಶನಿ ದೃಷ್ಠಿ ಬಿದ್ದಿದೆ ಅಂದೆ. ಅದು ಒಳ್ಳೆಯದೂ ಆಗಲಿ, ಕೆಟ್ಟದ್ದಾಗಲಿ ಅಂತಾ ನಿರ್ದಿಷ್ಟವಾಗಿ ಹೇಳಿಲ್ಲ. ಚೆಲುವರಾಯಸ್ವಾಮಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ನಾನು ಬೆಂಬಲ ನೀಡಿಲ್ವೇ? ಅವರ ಗೆಲುವಿಗಾಗಿ ಅಲ್ಲಿ ಹೋಗಿ ಕೆಲಸ ಮಾಡಿದ್ದೇನೆ.
  • ಬಾಲಕೃಷ್ಣ ಅವರು ನಾನು ಚುನಾವಣೆಯಲ್ಲಿ ದುಡ್ಡು ಪಡೆದಿಲ್ಲ ಎಂದು ಆಣೆ ಮಾಡಲು ಹೇಳಿದ್ದರು. ಅದಕ್ಕೆ ಸಿದ್ಧ. 40 ವರ್ಷಗಳ ರಾಜಕೀಯದಲ್ಲಿ ನಾನು ಯಾವುದೇ ಚುನಾವಣೆಯಲ್ಲೂ ಹಣ ಪಡೆದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿ, ಮೈಸೂರು ಚಾಂಮುಡೇಶ್ವರಿ ಮೇಲೆ ಆಣೆ ಮಾಡಲು ಸಿದ್ಧ. ಈ ಚುನಾವಣೆಯಲ್ಲಿ ರಾಮಮೂರ್ತಿ ಅವರು ಹಣ ನೀಡದೇ ಗೆದ್ದಿದ್ದಾರೆ ಎಂದು ಬಂದು ಆಣೆ ಮಾಡಲು ಸಿದ್ಧರಿದ್ದಾರಾ? ಬಾಲಕೃಷ್ಣ ನನ್ನ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡಿದ್ದಾರೆ. ಅವರೇನು ಸತ್ಯಹರಿಶ್ಚಂದ್ರರಲ್ಲ.
  • ಕುಮಾರಸ್ವಾಮಿ ಅವರನ್ನು ಕೊಡಿ ಮುಖ್ಯಮಂತ್ರಿ ಮಾಡ್ತೇವೆ ಅಂದಿದ್ದಾರೆ. ಸಂತೋಷ.. ಅವರು ಬಂದ್ರೆ ಕರೆದುಕೊಂಡು ಹೋಗಿ ಸಿಎಂ ಮಾಡಲಿ. ನಾನು ಹಸ್ತಕ್ಷೇಪ ಮಾಡಿದ್ದೇನೆ ಎಂಬ ಆರೋಪ ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನ್ನ ಕ್ಷೇತ್ರದ ಕೆಲಸಗಳಿಗೆ ಸಿಎಂ ಭೇಟಿ ಮಾಡಿದ್ದೇನೆ ಹೊರತು ಬೇರೆ ಯಾವುದೇ ಕಾರಣಕ್ಕಾಗಿಯಲ್ಲ.
  • ಕಳೆದ 6 ತಿಂಗಳಿಂದ ಭಿನ್ನಮತಿಯರು ನನ್ನ ವಿರುದ್ಧ ಮಾತನಾಡಿಲ್ಲ. ಈಗ ಯಾವ ಕಾರಣಕ್ಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ನನ್ನನ್ನು ಬೈಯ್ಯುವುದರಿಂದ ಅವರಿಗೆ ಸಂತೋಷ ಸಿಗೋದಾದ್ರೆ ದಿನಾ ಬೈಯಲಿ. ನಾನು ಅವರ ಭವಿಷ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಕೇಳ್ಕೋತೀನಿ.
  • ಜನರ ಮತ್ತು ದೇವರ ಆಶೀರ್ವಾದದೊಂದಿಗೆ 2018 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ. ಪದವಿಧರರು, ಶಿಕ್ಷಕರಿಗೆ ರಾಷ್ಟ್ರೀಯ ಪಕ್ಷಗಳ ಮೇಲೆ ಬೇಸರ ಬಂದಿದೆ ಅಂದ್ರೆ, ಅದರರ್ಥ ಪ್ರಜ್ಞಾವಂತ ಜನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸುತ್ತಾರೆ.

Leave a Reply