ಕರ್ನಾಟಕವನ್ನು ಹಣಿಯೋದೂ ಸೇರಿದಂತೆ ಪ್ರಧಾನಿ ಎದುರು ಜಯಾ ಬೇಡಿಕೆಗಳ ಪಟ್ಟಿಯಲ್ಲಿ ಏನೆಲ್ಲ ಇವೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಭೇಟಿ ಸಾಕಾರಗೊಳ್ಳುತ್ತಲೇ ಕೇಂದ್ರವು ಉದ್ದೇಶಿಸಿರುವ ವಸ್ತು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಗೆ ಜಯಾ ಅವರ ಬೆಂಬಲ ಪಡೆದುಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗುವುದೇ ಎಂಬ ಪ್ರಶ್ನೆ ಎದ್ದಿತ್ತು.

ಆದರೆ ತಮಿಳುನಾಡು ಹಿತಾಸಕ್ತಿಗೆ ಪೂರಕವಾಗಿ ಜಿಎಸ್ಟಿ ತಿದ್ದುಪಡಿಯಾಗಬೇಕು ಎಂಬುದನ್ನೇ ಪ್ರಮುಖವಾಗಿ ಪ್ರಸ್ತಾಪಿಸಿರುವ ಜಯಲಲಿತಾ, ಇದರಿಂದ ರಾಜ್ಯದ ವಿತ್ತೀಯ ಸುರಕ್ಷತೆಗೆ ಆತಂಕ ಎದುರಾಗುತ್ತದೆ, ಪೆಟ್ರೊಲಿಯಂನಂಥ ಕೆಲವು ವಸ್ತುಗಳನ್ನು ಜಿಎಸ್ಟಿಯಿಂದ ಹೊರಗಿಡಬೇಕು ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ನ 71 ಸದಸ್ಯರಿಗೆ ಹೋಲಿಸಿದರೆ 74 ಸಂಸದರ ಬಲ ಪಡೆದುಕೊಂಡಿರುವ ಬಿಜೆಪಿ ಮೇಲುಗೈ ಸಾಧಿಸಿರುವುದಾದರೂ ಹೌದಾದರೂ ಜಿಎಸ್ಟಿ ಪಾಸಾಗಬೇಕಾದರೆ 245 ಬಲದ ರಾಜ್ಯಸಭೆಯಲ್ಲಿ ಎನ್ ಡಿಎಗೆ ಮಿತ್ರರು ಬೇಕು. ಈ ವಿಷಯದಲ್ಲಿ 12 ಸದಸ್ಯರ ಬಲವಿರುವ ಮಮತಾ ಬ್ಯಾನರ್ಜಿ ಬೆಂಬಲ ನೀಡಿರುವುದು ಆಶಾದಾಯಕ ವಿಷಯವೇ ಆದರೂ 12 ಸದಸ್ಯರ ಬಲದ ಜಯಾ ಬೆಂಬಲವೂ ನಿರ್ಣಾಯಕವಾಗುತ್ತದೆ.

ಆದರೆ…

ಬರೋಬ್ಬರಿ 29 ಅಂಶಗಳ, 90 ಪ್ಲಸ್ ಪುಟಗಳ ಬೇಡಿಕೆಯನ್ನೇ ಪ್ರಧಾನಿ ಮುಂದಿರಿಸಿರುವ ಜಯಲಲಿತಾ ಅವರನ್ನು ಖುಷಿಪಡಿಸುವುದು ಕೇಂದ್ರಕ್ಕೆ ಸುಲಭದ ವಿಷಯವೇನಲ್ಲ ಎಂಬುದು ಸ್ಪಷ್ಟವಾಗಿದೆ.

ಕರ್ನಾಟಕವು ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟುವುದನ್ನು ತಡೆಯಬೇಕು ಎಂಬುದೇ ಜಯಲಲಿತಾ ಅವರ ಪ್ರಮುಖ ಬೇಡಿಕೆ. ಕಾವೇರಿ ನಿರ್ವಹಣಾ ನಿಗಮವೊಂದರ ಸ್ಥಾಪನೆ ಆಗಬೇಕು ಎಂಬ ಆಗ್ರಹವೂ ಅಲ್ಲಿದೆ.

ಇದು ನಮ್ಮ ರಾಜ್ಯಕ್ಕೆ ಆಘಾತ ನೀಡುವ ವಿಷಯವಾದರೆ, ಅಂತಾರಾಷ್ಟ್ರೀಯ ಜಗಳಕ್ಕೂ ಕೈಹಾಕಬೇಕಾದ ಒತ್ತಡ ಜಯಾ ಬೇಡಿಕೆಗಳಲ್ಲಿದೆ.1974ರಲ್ಲಿ ಶ್ರೀಲಂಕಾ ತನ್ನ ಜತೆ ಸೇರಿಸಿಕೊಂಡಿರುವ ಕಚ್ಚಾತೀವು ದ್ವೀಪವನ್ನು ಮರಳಿ ತಮಿಳುನಾಡಿಗೆ ಕೊಡಿಸಬೇಕು. ಉಳಿದ ರಾಜ್ಯಗಳು ಏನಾದರೂ ಮಾಡಿಕೊಳ್ಳಲಿ, ಆದರೆ ವೈದ್ಯ ಮತ್ತು ದಂತವೈದ್ಯಕ್ಕೆ ದೇಶದಾದ್ಯಂತ ಏಕರೂಪದಲ್ಲಿ ನೀಟ್ ಪ್ರವೇಶಕ್ಕೆ ಆದೇಶಿಸಿರುವ ಸುಪ್ರೀ ತೀರ್ಪಿನಿಂದ ತಮಿಳುನಾಡಿಗೆ ವಿನಾಯ್ತಿ ಒದಗಿಸಬೇಕು. ಶ್ರೀಲಂಕಾದಿಂದ 92 ಬೋಟುಗಳು ಹಾಗೂ 21 ಮೀನುಗಾರರನ್ನು ಬಿಡಿಸಿಕೊಂಡು ಬರಲು ಕ್ರಮ ಕೈಗೊಳ್ಳಬೇಕು ಇಂಥವೆಲ್ಲ ಬೇಡಿಕೆಗಳು ಜಯಾರಿಂದ ಪ್ರಸ್ತಾಪವಾಗಿವೆ.

ಉಳಿದಂತೆ ಚೆನ್ನೈನ ಎರಡನೇ ಹಂತದ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಹಣಕಾಸು ನೆರವನ್ನೂ ಕೇಳಿದ್ದಾರೆ.

ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಅಲ್ಲೂ ಹಡಗು ಮಾರ್ಗ ವಿಸ್ತರಣೆ, ಬಂದರು ಅಭಿವೃದ್ಧಿ, ರಫ್ತು ನೋಡಿಕೊಳ್ಳುವುದಕ್ಕೊಬ್ಬ ವಿಶೇಷ ಅಧಿಕಾರಿ ಇತ್ಯಾದಿ ಬೇಡಿಕೆಗಳನ್ನು ಇರಿಸಿದ್ದಾರೆ.

ಜಯಲಲಿತಾ ಬೆಂಬಲಕ್ಕೆ ಮೋದಿ ಸರ್ಕಾರ ಇಷ್ಟೆಲ್ಲ ವ್ಯವಸ್ಥೆ ಮಾಡಬೇಕು. ಇವನ್ನೆಲ್ಲ ಹೆಚ್ಚು -ಕಡಿಮೆ ಈಡೇರಿಸಿಬಿಟ್ಟರೂ ಮತ್ತೊಂದು ಪಟ್ಟಿ ಸಿದ್ಧವಾಗಿರೋದಿಲ್ಲ ಎಂಬುದಕ್ಕೆ ಮತ್ಯಾವ ಖಾತ್ರಿಯೂ ಇಲ್ಲ!

Leave a Reply