ಜಿಎಸ್ಟಿಗೆ ಬೆಂಬಲ ಸಿಗ್ತಿದೆ ಅಂದ್ರು ಜೇಟ್ಲಿ, ಪದವೀಧರ ಕ್ಷೇತ್ರದ ಫಲಿತಾಂಶದಿಂದ ಜೆಡಿಎಸ್ಗೆ ತುಸು ಸಮಾಧಾನ, ಹಣ ಬೇಡಿಕೆ ಇಟ್ಟ ಶಾಸಕರ ವಿರುದ್ಧ ದೂರು ದಾಖಲು, ಕೈರಾನಾ ಹಿಂಸಾಚಾರ ಹಿಂದು ಮುಸ್ಲಿಂ ಸಮಸ್ಯೆ ಅಲ್ಲ ಅಂತು ಬಿಜೆಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನಗರ ಪರಿವೀಕ್ಷಣೆ ಕೈಗೊಂಡರು. ಕುಂಛಿತಗೊಂಡಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಬಳಿ ಅತೃಪ್ತಿಯನ್ನೂ ವ್ಯಕ್ತಪಡಿಸಿದರು.

ಡಿಜಿಟಲ್ ಕನ್ನಡ ಟೀಮ್:

ತ.ನಾಡು ಬಿಟ್ಟು ಉಳಿದವರು ಜಿಎಸ್ ಟಿಗೆ ಬೆಂಬಲಿಸಿದ್ದಾರೆ ಎಂದ ಜೇಟ್ಲಿ

ಕೇಂದ್ರ ಸರ್ಕಾರದ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆಗೆ ತಮಿಳು ನಾಡು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಂದ ಸಮ್ಮತಿ ಸಿಕ್ಕಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ತಿಳಿಸಿದ್ದಾರೆ.

ಈ ಬಗ್ಗೆ ಅರುಣ್ ಜೇಟ್ಲಿ ಕೊಲ್ಕತ್ತಾದಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರ ಜತೆ ಸಭೆ ನಡೆಸಿದರು. ಸಭೆ ಮುಕ್ತಾಯದ ನಂತರ ಮುಂದಿನ ಹಣಕಾಸು ವರ್ಷದಿಂದ ಅಂದರೆ, 2017ರ ಏಪ್ರಿಲ್ 1 ರಿಂದ ಈ ಜಿಎಸ್ ಟಿ ಮಸೂದೆ ಜಾರಿಗೊಳಿಸುವ ನಂಬಿಕೆ ಹೊಂದಿದ್ದೇನೆ ಎಂದರು.

ಈ ಮಸೂದೆಯಲ್ಲಿ ತೆರಿಗೆ ದರದ ಬಗ್ಗೆ ಕಾಂಗ್ರೆಸ್ ತಕರಾರು ಹೊಂದಿತ್ತು. ಆದರೆ ಸಭೆಯಲ್ಲಿ ಎಲ್ಲ ರಾಜ್ಯಗಳು ತಗಾದೆ ಎತ್ತದೇ ಒಪ್ಪಿಗೆ ಸೂಚಿಸಿವೆ. ಇದರೊಂದಿಗೆ ಕೇಂದ್ರ ಸರ್ಕಾರ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆ ಮಾಡುವ ವಿಶ್ವಾಸ ಹೊಂದಿದೆ.

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಲ್ಲೂ ಜಿಎಸ್ಟಿಗೆ ತಿದ್ದುಪಡಿ ಆಗಬೇಕು ಎಂದಿದ್ದಾರೆ.

ಜೆಡಿಎಸ್ ಆತ್ಮಸ್ಥೈರ್ಯ ತುಂಬಿದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ

ಭಿನ್ನಮತಿಯ ಶಾಸಕರ ಬಂಡಾಯದಿಂದ ಮುಖಭಂಗ ಅನುಭವಿಸಿದ್ದ ಜೆಡಿಎಸ್ ಗೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಆತ್ಮಸ್ಥೈರ್ಯ ತುಂಬಿದೆ. ಕಾರಣ, ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 2 ಸ್ಥಾನ ಪಡೆದುಕೊಂಡಿದೆ. ಮತ್ತೆರಡು ಸ್ಥಾನಗಳು ಬಿಜೆಪಿ ಪಾಲಾಗಿವೆ.

ಪ್ರಜ್ಞಾವಂತ ಮತದಾರರ ಚುನಾವಣೆ ಎಂದೇ ಪರಿಗಣಿಸಲಾಗುವ ಈ ಚುನಾವಣೆಯಲ್ಲಿ ಜೆಡಿಎಸ್, ಆಡಳಿತ ಕಾಂಗ್ರೆಸ್ ಪಕ್ಷಕ್ಕಿಂತ ಮೇಲುಗೈ ಸಾಧಿಸಿದೆ. ಅದರಲ್ಲೂ ದಕ್ಷಿಣ ಪಧವಿದರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀಕಂಠೇಗೌಡ 23,619 ಮತಗಳನ್ನು ಪಡೆದು ಜಯ ಗಳಿಸಿರುವುದು ಪಕ್ಷದಲ್ಲಿ ಹೊಸ ಸ್ಫೂರ್ತಿ ತುಂಬಿದೆ.

ಜೆಡಿಎಸ್ ಭಿನ್ನಮತಿಯರ ಸಾರಥ್ಯ ವಹಿಸಿದ್ದ ಚೆಲುವರಾಯಸ್ವಾಮಿ ಇದೇ ಶ್ರೀಕಂಠಗೌಡ ಅವರ ವಿಷಯಕ್ಕಾಗಿಯೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು. ಹೀಗಾಗಿ ಈ ಚುನಾವಣೆಯಲ್ಲಿ ಪಕ್ಷ ವಿರೋಧಿ ಪ್ರಚಾರವನ್ನೂ ಮಾಡಿದ್ದರು.

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ನ ಬಸವರಾಜ್ ಹೊರಟ್ಟಿ ಸತತವಾಗಿ 7ನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ಗೆಲುವಿನ ದಾಖಲೆ ಮಾಡಿದ್ದರು. ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಅರುಣ್ ಶಹಪೂರ್ 1847 ಮತಗಳ ಅಂತರದಿಂದ ಜಯ ಸಾಧಿಸಿ ಸತತವಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರೆ, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹನುಮಂತ ನಿರಾಣಿ ಅವರು 43065 ಮತ ಪಡೆದು ಹಾಲಿ ಸದಸ್ಯ ಮಹಾಂತೇಶ ಶಿವಾನಂದ ಕೌಜಲಗಿ ವಿರುದ್ಧ ಜಯ ಸಾಧಿಸಿದರು.

ರೇವಣ್ಣ ಏನಂದ್ರು…?

ಸೋಮವಾರ ಜೆಡಿಎಸ್ ಭಿನ್ನಮತಿಯ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ ದೇವೇಗೌಡ ಹಾಗೂ ರೇವಣ್ಣ ವಿರುದ್ಧ ಕಿಡಿಕಾರಿ ಹಲವು ಪ್ರಶ್ನೆಗಳನ್ನು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳವಾರ ವಿಧಾನಸೌಧದಲ್ಲಿ ಎಚ್. ಡಿ. ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದರು.

ಕುಮಾರಸ್ವಾಮಿಯವರ ಮಾರ್ಗಕ್ಕೆ ನೀವೇ ಅಡ್ಡಿಯಾಗಿದ್ದೀರಿ ಎಂಬ ದೂರಿದೆಯಲ್ಲ?, ಜೆಡಿಎಸ್ ನಲ್ಲಿ ಭಿನ್ನಮತಕ್ಕೆ ಕಾರಣವೇ ರೇವಣ್ಣ ಮತ್ತು ದೇವೇಗೌಡರು ಎಂಬ ಬಂಡಾಯ ಶಾಸಕರ ದೂರಿಗೆ ಏನನ್ನುತ್ತೀರಿ?, ಎಂಟು ಶಾಸಕರ ಮೇಲೆ ಮುಂದಿನ ಕ್ರಮ ಏನು ತಗೋಬೇಕಂದಿದ್ದೀರಿ… ಹೀಗೆಲ್ಲ ಪ್ರಶ್ನೆಗಳ ಸರಮಾಲೆಯನ್ನೇ ಪತ್ರಕರ್ತರು ಇಟ್ಟುಕೊಂಡಿದ್ದರು.

ಆದರೆ ಏನೇ ಕೆದಕಿದರೂ ಎಚ್. ಡಿ. ರೇವಣ್ಣ ಮಾತ್ರ ತಾವು ಏನು ಹೇಳಬೇಕಂದುಕೊಂಡಿದ್ದರೋ ಅದನ್ನೇ ತಿರುವಿ- ಮುರುವಿ ಹೇಳಿದರೇ ಹೊರತು ಮತ್ಯಾವ ಸ್ಫೋಟಕ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ. ವಿವರ ಇಲ್ಲಿದೆ.

ಹಣ ಬೇಡಿಕೆ ಇಟ್ಟ ಶಾಸಕರ ವಿರುದ್ಧ ದೂರು

ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆಗೆ ಶಾಸಕರು ಹಣ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಸಭೆ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಎಸ್.ಮೂರ್ತಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಾಸಕ ಮಲ್ಲಿಕಾರ್ಜುನ ಕೂಬಾ ಹಾಗೂ ಮತ್ತಿತರ ವಿರುದ್ಧ ಈ ದೂರು ದಾಖಲಾಗಿದೆ.

ವಿಧಾನ ಸಭೆಯ ಕೆಲ ಸದಸ್ಯರು ಮತಕ್ಕಾಗಿ ಹಣ ಕೇಳಿದ ಬಗ್ಗೆ ಸುದ್ದಿ ವಾಹಿನಿಗಳು ನಡೆಸಿದ್ದ ಕುಟುಕು ಕಾರ್ಯಾಚರಣೆ ಜತೆಗೆ, ಜಾತ್ಯತೀತ ಜನತಾದಳ ನೀಡಿದ್ದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಪ್ರಕರಣವನ್ನು ಸಿಬಿಐಗೆ ವಹಿಸಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಆದೇಶದಂತೆ ವಿಧಾನ ಸಭಾ ಕಾರ್ಯದರ್ಶಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದರು.

ಕೈರಾನಾದಲ್ಲಿ ಹಿಂದು ಕಾರ್ಡ್ ವಾಪಸ್

ಉತ್ತರ ಪ್ರದೇಶದ ಕೈರಾನಾ ಹಳ್ಳಿಯಿಂದ ಕುಟುಂಬಗಳ ಬಲವಂತ ವಲಸೆ ಪ್ರಕರಣ ಹಿಂದು ಮತ್ತು ಮುಸಲ್ಮಾನ ಸಮುದಾಯದ ನಡುವಣ ಕೋಮುಗಲಭೆಯಲ್ಲ ಎಂದು ಯುಪಿ ಬಿಜೆಪಿ ನಾಯಕ ಹುಕುಮ್ ಸಿಂಗ್ ತಿಳಿಸಿದ್ದಾರೆ. ಕಳೆದವಾರ ಈ ಪ್ರಕರಣವನ್ನು ಬೆಳಕಿಗೆ ತಂದವರು ಈ ಹುಕುಮ್ ಸಿಂಗ್. ನಿರ್ದಿಷ್ಟ ಸಮುದಾಯ ಈ ಹಳ್ಳಿಯಿಂದ ಹಿಂದುಗಳನ್ನು ಬಲವಂತವಾಗಿ ಎತ್ತಂಗಡಿ ಮಾಡಿಸಲಾಗಿದೆ ಎಂದು 346 ಕುಟುಂಬಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇವರೆ. ಅಲ್ಲದೆ ಕಂಧ್ಲಾ ಪ್ರದೇಶದಿಂದ 63 ಮಂದಿ ವಲಸೆ ಹೋಗಿರುವುದಾಗಿಯೂ ಸೋಮವಾರ ತಿಳಿಸಿದ್ದರು.

ಈ ಬಗ್ಗೆ ಹುಕುಮ್ ಸಿಂಗ್ ಮಂಗಳವಾರ ನೀಡಿದ ಸ್ಪಷ್ಟನೆ ಹೀಗಿತ್ತು: ‘ನನ್ನ ತಂಡದಲ್ಲಿದ್ದವರು ತಪ್ಪಾಗಿ ಈ ಪಟ್ಟಿಯಲ್ಲಿರುವವರು ಹಿಂದು ಕುಟುಂಬದವರು ಎಂಬ ಅಂಶ ಸೇರಿಸಿದ್ದಾರೆ. ಇದು ಹಿಂದು ಮತ್ತು ಮುಸಲ್ಮಾನರ ನಡುವಣ ವಿಷಯವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಈ ಪ್ರದೇಶದಲ್ಲಿ ಬಲವಂತವಾಗಿ ಹೊರದಬ್ಬಲಾಗಿರುವ ಕುಟುಂಬಗಳ ಪಟ್ಟಿ ಅಷ್ಟೆ. ಇಲ್ಲಿ ಕೋಮುವಾದವಿಲ್ಲ ಆದರೆ, ಕಾನೂನು ಸುವ್ಯವಸ್ಥೆ ವೈಫಲ್ಯ ಖಂಡಿತವಾಗಿಯೂ ಇದೆ.’

ಆಪ್ ಸಚಿವ ಗೋಪಾಲ ರೈ ರಾಜಿನಾಮೆ

ದೆಹಲಿಯ ಸಾರಿಗೆ ಸಚಿವ ಗೋಪಾಲ ರೈ ರಾಜಿನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಈಗ ಸತ್ಯೇಂದ್ರ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಆ್ಯಪ್ ಆಧಾರಿತ ಬಸ್ ಸಾರಿಗೆ ವ್ಯವಸ್ಥೆ ಯೋಜನೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಗೋಪಾಲ ರೈ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ನೀಡಿರಬಹುದು ಎಂಬ ವದಂತಿಗಳು ಹರಡಿದ್ದವು.

ಆದರೆ, ಈ ಬಗ್ಗೆ ಗೋಪಾಲ್ ರೈ ಸ್ಪಷ್ಟನೆ ನೀಡಿರುವುದು ಹೀಗೆ:

‘ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದೇನೆ. ಕಳೆದ ವಾರವಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಹಾಗಾಗಿ ನನಗೆ ಈ ಜವಾಬ್ದಾರಿಯಿಂದ ಬಿಡುಗಡೆ ಬೇಕಿತ್ತು. ಅದರಿಂದ ರಾಜಿನಾಮೆ ನೀಡಿದ್ದೇನೆ.’

ಇನ್ನುಳಿದಂತೆ

  • ಗೃಹ ಕಾರ್ಯದರ್ಶಿಗೆ ಅನುಪಮಾ ಶೆಣೈ ಸಲ್ಲಿಸಿರೋ ರಾಜಿನಾಮೆಯಲ್ಲಿ ಈ ಹಿಂದೆ ಹೇಳಿದ್ದ ವೈಯಕ್ತಿಕ ಕಾರಣ ಇಲ್ಲ. ಲಿಕ್ಕರ್ ಲಾಬಿ ತಡೆಯಲು ಹೋದಾಗ ಪೋಲೀಸ್ ಅಧಿಕಾರಿಗಳು, ಉಸ್ತುವಾರಿ ಸಚಿವರಿಂದ ಪ್ರತಿರೋಧ ಎದುರಾಗಿದ್ದೇ ನಿರ್ಧಾರಕ್ಕೆ ಕಾರಣ ಎಂದಿರುವುದು ವಿವಾದವನ್ನು ಲಂಬಿಸಿದೆ.
  • ವಿಜಯ್ ಮಲ್ಯರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಬೇಕೆಂಬ ಜಾರಿ ನಿರ್ದೇಶನಾಲಯದ ವಾದವನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.

Leave a Reply