ಒತ್ತಡ ನಿರ್ವಹಣೆಯೂ ಸ್ಥೈರ್ಯದ ಒಂದು ಭಾಗವೆಂಬ ಪಾಠ ಹೇಳುತ್ತಿದೆಯೇ ಅನುಪಮಾ ಶೆಣೈ ರಾಜಿನಾಮೆ ವಿದ್ಯಮಾನ?

author-geetha‘when injustice becomes law; Rebellion becomes duty.’ (1200 shares)

‘If voting changed anything they would make it illegal’ (492 shares)

‘If you ever let your head down, it should be just to admire your shoes’ (200 shares)

‘ಅನ್ಯಾಯ ಕಾನೂನಾದಾಗ, ಹೋರಾಟವೇ ನಮ್ಮ ಜವಾಬ್ದಾರಿ’

‘ಮತದಾನದಿಂದ ಬದಲಾವಣೆಯಾಗುವುದಾದರೆ ಮತದಾನವನ್ನೇ ಕಾನೂನು ಬಾಹಿರ ಮಾಡುತ್ತಾರೆ..’

‘ನಿನ್ನ ಚಪ್ಪಲಿಯನ್ನು ಮೆಚ್ಚುವುದಕ್ಕಷ್ಟೇ ತಲೆ ತಗ್ಗಿಸಬೇಕು..’

ಅಬ್ಬ ಎಂಥಹ ಹೇಳಿಕೆಗಳು!.. ಫೇಸ್ ಬುಕ್ಕಿನಲ್ಲಿ ದಿನಕ್ಕೊಂದರಂತೆ ಅವಳ ಸ್ಟೇಟಸ್, ಐದು ಸಾವಿರ ಸ್ನೇಹಿತರು. ಸ್ನೇಹಿತರಾಗಿಲ್ಲದವರು ಮೆಸೇಜ್ ಹಾಕಿ ತಮ್ಮ ಮೆಚ್ಚುಗೆ ತಿಳಿಸಿ ಧನ್ಯರಾದರು.

ಮಿನಿಸ್ಟರ್ ಒಬ್ಬರ ಕರೆಯನ್ನು ಹೋಲ್ಡ್ ಮಾಡಿದಕ್ಕೆ ವರ್ಗಾವಣೆಯ ಶಿಕ್ಷೆ. ‘ಹಾಕಿದ ಕಡೆ ಹೋಗುತ್ತೇನೆ.. ನನ್ನ ಕೆಲಸ ನಾನು ಮಾಡುತ್ತೇನೆ’ ಎಂದು ಹೊರಟಾಗ ಆಕೆಯನ್ನು ಕುರಿತು ಭಾರೀ ಮೆಚ್ಚುಗೆ ಜನರಲ್ಲಿ. ಗಂಡಸರಲ್ಲೂ ಇಲ್ಲದ ಧೈರ್ಯ ಸ್ಥೈರ್ಯವಿರುವ ಹೆಣ್ಣು ಎಂದು ನಾವೆಲ್ಲಾ ಉಬ್ಬಿದ್ದು.

ಹೋದ ಕಡೆಯೂ ಅಷ್ಟೇ. ಒಳ್ಳೆ ಅಧಿಕಾರಿ. ಆ ಲಾಬಿ, ಈ ಲಾಬಿ ಅಂತ ಕೇರ್ ಮಾಡದ ನಿಷ್ಠ ಪೊಲೀಸ್ ಅಧಿಕಾರಿ ಎಂಬ ಮನ್ನಣೆ.

ಒಂದು ದೂರಿನ ಆಧಾರದ ಮೇಲೆ ಅವರು ಎದುರು ಹಾಕಿಕೊಂಡಿದ್ದು ಪ್ರಭಾವಿ ಲಿಕ್ಕರ್ ಲಾಬಿಯನ್ನು. ಅವರುಗಳು ಇವರ ವಿರುದ್ಧ ಪ್ರತಿಭಟಿಸಿ ರಸ್ತೆಗಿಳಿದಾಗ ರಾಜಿನಾಮೆ ಇತ್ತು ಕಾಣೆಯಾದರು.

ಅದು ಮೊದಲ ಶಾಕ್ !

ನಂತರ ಎಫ್.ಬಿಯಲ್ಲಿ ನಿರಂತರವಾಗಿ ಸ್ಟೇಟಸ್ ಹಾಕಿದರು. ಗಂಟೆಗೊಂದರಂತೆ ಸ್ಟೇಟಸ್! ಮಧ್ಯರಾತ್ರಿ ಹೊತ್ತಿಗೆ ಮಕ್ಕಳು ನೋಡಬಾರದಂತಹ ಸಿಡಿ ಹಾಕುವುದಾಗಿ ಪ್ರಕಟಣೆ!

ಆಮೇಲೆ ಎರಡು ದಿನ ಏನಿಲ್ಲ. ನಂತರ ಬಂದು, ವಾಹಿನಿಗಳು ಮುಖಕ್ಕಿಟ್ಟ ಮೈಕಿನಲ್ಲಿ ಆ ಎಫ್.ಬಿ ಖಾತೆ ನನ್ನದಲ್ಲವೇ ಅಲ್ಲ ಎಂದು ಆಕೆ ನೀಡಿದ ಹೇಳಿಕೆ, ನಾನು ಕಟ್ಟಿದ ಗೋಪುರ ಅಲುಗಾಡಿಸಿತು. ಆಕೆಗಿಂತ ಆಕೆಯ ತಮ್ಮ, ತಾಯಿ ಮಾತು. ಜೀವಕ್ಕೆ ಬೆದರಿಕೆ ಇದೆ.. ಎಂಬ ಆಪಾದನೆ; ದುಃಖ.

‘ಇಂದಿನ ಪರಿಸ್ಥಿತಿಯಲ್ಲಿ ದೂರು ದಾಖಲಿಸಿದರೆ ನ್ಯಾಯ ಸಿಗುತ್ತದೆ ಅಂತೀರಾ?’ ಎಂದು ಆಕೆಯೇ ಪತ್ರಕರ್ತರನ್ನು ಪ್ರಶ್ನಿಸಿ, ವ್ಯಂಗ್ಯ ನಗೆ ಬೀರಿ ಕಾರು ಹತ್ತಿದಾಗ ನಾನು ಕಟ್ಟಿದ್ದ ಗೋಪುರ ಕುಸಿದು ಬಿತ್ತು.

ಆಕೆ ಯಾರೆಂದಿರಾ?..

‘ಅನುಪಮಾ ಶೆಣೈ…’ ಕೂಡ್ಲಗಿಯ ಡೆಪ್ಯುಟಿ ಸಬ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್ (ಆಗಿದ್ದವರು!)

ಲಿಕ್ಕರ್ ಲಾಬಿ, ಮೈನಿಂಗ್, ರಾಜಕೀಯ ಕೈವಾಡ.. ಇವುಗಳ ವಿರುದ್ಧ ಆಕೆಯ ಹೋರಾಡುತ್ತಾರೆ. ನಾವೆಲ್ಲಾ ಬೆಂಬಲಕ್ಕೆ ನಿಲ್ಲುತ್ತೇವೆ, ನಿಂತಿದ್ದೇವೆ ಎಂದುಕೊಂಡಿದ್ದ ಲಕ್ಷಾಂತರ ಮಂದಿಗೆ ನಿರಾಸೆಯಾಯಿತು.

‘ವೈಯಕ್ತಿಕ ಕಾರಣಕ್ಕೆ ರಾಜೀನಾಮೆ’ ಎಂದು ಎರಡು ವಾಕ್ಯದ ರಾಜೀನಾಮೆ ಪತ್ರವನ್ನು ಸರ್ಕಾರ ಅಂಗೀಕರಿಸಿತು.

ನಿರಾಸೆ ತಾಳರಾದೆ.. ಅವರನ್ನು ಬೆಂಬಲಿಸುತ್ತಿದ್ದವರು ಕೋಪಗೊಂಡರು. ‘ಯಾವುದಾದರೂ ರಾಜಕೀಯ ಪಕ್ಷ ಸೇರುತ್ತಿದ್ದಾರೆಯೇ ಅನುಪಮಾ?..’ ಅಥವಾ ನಿಜವಾಗಿ ಅಷ್ಟೊಂದು ಹೆದರಿಕೊಂಡಿದ್ದಾರೆಯೇ? ಯಾರಿಗೆ ಗೊತ್ತು?

ನಂತರ ಬಂದ ಸುದ್ದಿ. ಜೂನ್ 5ನೇ ತಾರೀಖು ಕೊಟ್ಟ ರಾಜೀನಾಮೆ ಪತ್ರ (ಮೊದಲನೇ ಪತ್ರ) ಅಂಗೀಕಾರವಾಗಿರಲಿಲ್ಲ.. ಏಕೆಂದರೆ ಅದರಲ್ಲಿ ಅನುಪಮಾ ಅವರು ರಾಜೀನಾಮೆಗೆ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿದ್ದರು. ಅವರ ಕೈಬರಹದಲ್ಲಿ ಆ ಪತ್ರವಿದೆ. ಲಿಕ್ಕರ್ ಲಾಬಿ, ಜಿಲ್ಲಾ ಉಸ್ತುವಾರಿ ಸಚಿವರು, ಹಲವು ಮಂದಿ ರಾಜಕೀಯ ಪ್ರಭಾವಿ ವ್ಯಕ್ತಿಗಳು, ಪಿಎಸ್ಐ, ಸಿಪಿಐ.. ಎಲ್ಲರ ಕುಮ್ಮಕ್ಕಿನಿಂದ ತಮ್ಮ ವಿರುದ್ಧ ಆಗುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಶಕ್ತಳಲ್ಲದ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬರೆದಿದ್ದಾರೆ.

ಸಚಿವರನ್ನು ಹೆದರಿಸುವ ಹಾಗೆ ಇಲ್ಲ. ಎಂದು ಅವರ ಮೇಲಾಧಿಕಾರಿಗಳು ಆ ಪತ್ರವನ್ನು ಅಂಗೀಕರಿಸಲಿಲ್ಲ..

‘ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ಕೊಡುತ್ತಿದ್ದೇನೆ’ ಎಂಬ ವಾಕ್ಯದ ರಾಜೀನಾಮೆಯನ್ನು ಆಕೆಯಿಂದ ಬರೆಸಿ ಅದನ್ನು ಅಂಗೀಕರಿಸಲಾಯಿತು ಮುಗಿಯಿತು. ಅನುಪಮಾ ಶೆಣೈ ಹೋರಾಟ ಮಾಡಿದ್ದರೆ ಬೆಂಬಲಿಸುತ್ತೇವೆ ಎಂದು ನಾವೆಲ್ಲಾ ನಿಂತಿದ್ದೆವು. ಮಿಡಿಯಾ ಅವರ ಹಿಂದೆ ಇರುವ ವಾಗ್ದಾನ ಮಾಡಿತ್ತು. ಆದರೂ ಆಕೆ ಹಿಂದೆ ಸರಿದದ್ದು ನಮಗೆಲ್ಲಾ ಬೇಸರ ನಿರಾಸೆಯಾಯಿತು. ನಮ್ಮಂತ ಲಕ್ಷಾಂತರ ಜನರ ಬೆಂಬಲವಿದ್ದೂ ಆಕೆ ಹಾಗೆ ಮಾಡಿದ್ಯಾಕೆ? ಈ ಲೇಖನ ಬರೆಯಲು ಶುರು ಮಾಡಿದಾಗ ನನಗೆ ಅನಿಸಿದ್ದು ಹಾಗೆಯೇ.. ಆದರೆ ಬರೆಯುತ್ತಾ ಬರೆಯುತ್ತಾ ಆಕೆಯ ಗೊಂದಲಗಳು, ಭೀತಿಗಳು ಸ್ಪಷ್ಟವಾಗುತ್ತಾ ಹೋಯಿತು.

ಬೆಂಬಲಿಸುತ್ತೇವೆ ಅಂದರೆ ಏನು? ಸದಾ ಆಕೆಯ ಹಿಂದೆ ಇರಲು ಸಾಧ್ಯವೇ? ಇನ್ನೊಂದು ‘ಬ್ರೇಕಿಂಗ್ ಸ್ಟೋರಿ’ ಸಿಕ್ಕರೆ ಮಿಡಿಯಾ ಅದರ ಹಿಂದೆ ಹೋಗುತ್ತದೆ. ಪ್ಲಕಾರ್ಡ್ ಹಿಡಿದು, ನಮ್ಮ ಕೆಲಸ ಬಿಟ್ಟು, ನಾವಾದರೂ ಎಷ್ಟು ದಿನ ಅವರೊಂದಿಗೆ ಇರಲು ಸಾಧ್ಯ? ಲಕ್ಷ ಜನ ಲಕ್ಷ ಸಲಹೆ ಕೊಡುತ್ತೇವೆ. ಆಕೆ ಪಾಲಿಸುವುದು ಯಾವುದನ್ನು?

ಆಕೆ ಹೆಣ್ಣು ಎಂದು ಈ ತಾಪತ್ರಯವೇ? ಅಷ್ಟೊಂದು ಮಂದಿ ಪೊಲೀಸ್ ಸಿಬ್ಬಂದಿಗಳಿದ್ದಾರೆ, ಅಧಿಕಾರದಲ್ಲಿದ್ದಾರೆ. ಅವರ್ಯಾರಿಗೂ ಇಲ್ಲದ ತಾಪತ್ರಯ ಇವರಿಗೆ ಯಾಕೆ ಬಂತು? ಗಂಡಸರು ವ್ಯವಸ್ಥೆಯೊಂದಿಗೆ ಬೇಗ ರಾಜಿ ಮಾಡಿಕೊಂಡು ಬಿಡುತ್ತಾರಾ? ಅಲ್ಲೊಬ್ಬರು ಇಲ್ಲೊಬ್ಬರು ದಕ್ಷ ಪೊಲೀಸ್ ಅಧಿಕಾರಿಗಳು ಎಂದು ಹೆಸರು ಪಡೆದಿದ್ದಾರೆ. ಅವರಿಗೆ ಈ ತಾಪತ್ರಯ, ಕಿರುಕುಳ ಇರಲಿಲ್ಲವೇ? ಅವರುಗಳು ಅದನ್ನು ಹೇಗೆ ನಿಭಾಯಿಸಿದರು? ಇನ್ನೂ ಅಧಿಕಾರದಲ್ಲಿ ಇರುವವರು ಹೇಗೆ ನಿಭಾಯಿಸುತ್ತಿದ್ದಾರೆ? ಅವರು ಈ ಯುವ ಅಧಿಕಾರಿಯ ಬೆಂಬಲಕ್ಕೆ ಯಾಕೆ ನಿಲ್ಲಲಿಲ್ಲ? ಅಥವಾ ಎಲ್ಲರೂ ರಾಜಿ ಮಾಡಿಕೊಂಡು ಬಿಟ್ಟಿದ್ದಾರೆಯೇ? ವ್ಯವಸ್ಥೆಯ, ರಾಜಕೀಯದ ಕರಾಳ ಹಸ್ತದ ನೆರಳಿನಲ್ಲಿ ಅವರೆಲ್ಲಾ ಅವರ ನೆಲೆಯನ್ನು ಕಂಡುಕೊಂಡಿದ್ದಾರೆಯೇ?

ಗಂಡಸರಿಗೆ ಸಂಸಾರವನ್ನು ಸಾಕುವ ಹೊಣೆ ಇರುವುದರಿಂದ ಅವರು ಬೇಗ ಹೊಂದುಕೊಂಡುಬಿಡುತ್ತಾರೆಯೇ? ಬೇರೆ ಯಾರೂ ಬೇಡ ಕೂಡ್ಲಗಿಯ ಅನುಪಮಾ ಶೆಣೈ ಅವರ ಮೇಲಾಧಿಕಾರಿಗಳು ಅದೇ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ?

ಸಮಾಜವನ್ನು ವ್ಯವಸ್ಥೆಯನ್ನು ದೂರಿ ಪ್ರಯೋಜನವಿಲ್ಲ.. ಏಕೆಂದರೆ ಅದು ನಾವೇ ಹಾಗೂ ನಮ್ಮಿಂದಲೇ..

ಅಷ್ಟೊಂದು ಮಂದಿ ಗಂಡಸರು ನಿಭಾಯಿಸುತ್ತಿರುವ ಕೆಲಸವನ್ನು ಹೆಂಗಸರಿಗೆ ನಿಭಾಯಿಸಲು ಏಕೆ ಆಗುತ್ತಿಲ್ಲ? ದೈಹಿಕವಾಗಿ ಗಂಡಸಿನಷ್ಟು ಶಕ್ತಳಲ್ಲದೇ ಹೋದರೂ (ಸೂಕ್ತ ಟ್ರೈನಿಂಗ್ ಪಡೆದರೆ ಅದು ಅಸಾಧ್ಯವೇನಲ್ಲ) ಮಾನಸಿಕವಾಗಿ ಹೆಣ್ಣು ಹೆಚ್ಚು ಧೃಡತೆ ಇರುವವಳು. ಹಾಗಾದರೆ ಈ ಬಗೆಯ ಒತ್ತಡವನ್ನು ಅವಳಿಗೆ ಏಕೆ ತಡೆದುಕೊಳ್ಳಲು ಆಗುವುದಿಲ್ಲ? ರಾಜಿ ಮಾಡಿಕೊಳ್ಳದೆ ಇರುವುದರಿಂದಲೇ ಅವಳು ಹೊರಬರುತ್ತಾಳೆ ಎನ್ನುವುದಾದರೆ.. ಅಧಿಕಾರದಲ್ಲಿ ಇರುವ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ರಾಜಕಾರಣಿಗಳು ಉತ್ತರಿಸಬೇಕಾಗುತ್ತದೆ. ಈ ಬಗೆಯ ಅಭದ್ರತೆಯ ವಾತಾವರಣವಿದ್ದರೆ ಹೆಣ್ಣು ಮಕ್ಕಳು ಈ ಕ್ಷೇತ್ರದಿಂದ ದೂರ ಉಳಿಯುತ್ತಾರೆ. ಹಾಗಾಗಬಾರದು. ಅನುಪಮಾ ಶೆಣೈ ರಾಜೀನಾಮೆ ನೀಡಿದ್ದರೂ ಅವರು ಯಾವುದೇ ಲಿಖಿತ ದೂರು ನೀಡದಿದ್ದರೂ ಈ ಇಡೀ ಪ್ರಸಂಗದ ಬಗ್ಗೆ ತನಿಖೆ ಆಗಬೇಕು.

ರಾಜಕಾರಣದ ನೆರಳು ಇಲ್ಲದೆ ಪೊಲೀಸ್ ಇಲಾಖೆ ಕೆಲಸ ಮಾಡುವಂತಿರಬೇಕು. ವ್ಯವಸ್ಥೆಯ ಭಾಗವಾಗಿದ್ದು ವ್ಯವಸ್ಥೆಯನ್ನು ಸರ್ಕಾರವನ್ನು ದೂರಬಾರದು ಎಂದರೆ ಹೇಗೆ ಸಾಧ್ಯ? ಸರ್ಕಾರವನ್ನು ನಡೆಸುತ್ತಿರುವವರು ಎಲ್ಲಿಂದಲೋ ಇಳಿದು ಬಂದವರಲ್ಲವಲ್ಲ! ನ್ಯಾಯ, ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು.

ಅನುಪಮಾ ಶೆಣೈ ಹೊರಗೆ ಬಂದಿದ್ದಾರೆ. ಆದರೆ ಹೋರಾಟ ಮುಂದುವರಿಸಲಿ ಎಂಬುದು ನಮ್ಮೆಲ್ಲರ ಆಶಯ.

ಅಂದ ಹಾಗೆ ಸೋನಿಯಾ ನಾರಂಗ್ ಈಗ ಎಲ್ಲಿದ್ದಾರೆ?

2 COMMENTS

  1. “ಅಂದ ಹಾಗೆ ಸೋನಿಯಾ ನಾರಂಗ್ ಈಗ ಎಲ್ಲಿದ್ದಾರೆ?”

    ಇಡೀ ಪರಿಸ್ಥಿತಿಯ ವ್ಯಂಗ್ಯವನ್ನು ಇದೊಂದು ವಾಕ್ಯದಲ್ಲಿ ಹಿಡಿದಿಟ್ಟಿದ್ದೀರಿ. Hats off to you.

  2. n i a ನಲ್ಲಿದ್ದಾರೆ p u c ಪ್ರಶ್ನೆ ಪತ್ರಿಕೆಯ ತನಿಕೆಯನ್ನು ಮುಗಿಸಿ

Leave a Reply to srini Cancel reply