ಜಿಎಸ್ಟಿ ಹೋರಾಟದಲ್ಲಿ ಪಕ್ಕಾ ಆಯ್ತು ಕಾಂಗ್ರೆಸ್ ಸೋಲು, ಬಿಜೆಪಿ ಸಮೀಪಿಸಿದೆ ಗೆಲುವಿನ ಹೊಸ್ತಿಲು

ಡಿಜಿಟಲ್ ಕನ್ನಡ ಟೀಮ್:

‘ಕಾಂಗ್ರೆಸ್ ಆಡಳಿತ ರಾಜ್ಯಗಳಿಂದಲೂ ಸಹ ವಸ್ತು ಮತ್ತು ಸೇವೆಗಳ ತೆರಿಗೆ ನೀತಿ (ಜಿಎಸ್ಟಿ) ಗೆ ವಿರೋಧವಿಲ್ಲ. ಕೆಲವು ‘ನಟ್ ಬೋಲ್ಟ್’ ಬಿಗಿ ಮಾಡುವ ಕ್ರಮಗಳ ಸೂಚನೆ ಬಂದಿದ್ದು, ಆ ಬಗ್ಗೆ ಕೇಂದ್ರ ಪರಾಮರ್ಶೆಗೆ ಸಿದ್ಧವಿದೆ. ಹೀಗಾಗಿ ತಮಿಳುನಾಡು ಹೊರತುಪಡಿಸಿದರೆ ಜಿಎಸ್ಟಿಗೆ ಯಾವ ರಾಜ್ಯಗಳಿಂದಲೂ ವಿರೋಧವಿಲ್ಲ’

ಕೋಲ್ಕತಾದಲ್ಲಿ ಮಂಗಳವಾರ ಎಲ್ಲ ರಾಜ್ಯಗಳ ವಿತ್ತ ಸಚಿವರ ಸಭೆಯ ನಂತರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ರಾಜ್ಯ ವಿತ್ತ ಸಚಿವರ ಎಂಪವರ್ಡ್ ಸಮಿತಿ ಅಧ್ಯಕ್ಷತೆ ವಹಿಸಿರುವ ಪಶ್ಚಿಮ ಬಂಗಾಳದ ವಿತ್ತ ಸಚಿವ ಅಮಿತ್ ಮಿತ್ರಾ ಇವರಿಬ್ಬರೂ ತಮ್ಮ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟಪಡಿಸಿರುವ ಅಂಶ ಇದು.

ಸೇವಾ ತೆರಿಗೆ, ವ್ಯಾಟ್, ಸೆಸ್ ಎಂದೆಲ್ಲ ಹತ್ತೆಂಟು ರೀತಿಯ ವಸೂಲಿ ತೆಗೆದು ದೇಶಾದ್ಯಂತ ಒಂದು ತೆರಿಗೆ ನೀತಿ ತರುವ ಜಿಎಸ್ಟಿ ವಿಷಯದಲ್ಲಿ ಕಾಂಗ್ರೆಸ್ ವ್ಯಕ್ತಪಡಿಸಿದ್ದ ಪ್ರಮುಖ ತಕರಾರು ಯಾವುದಾಗಿತ್ತು? ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಲ್ಲೇ ಜಿಎಸ್ಟಿಯ ತೆರಿಗೆ ಪರಿಮಿತಿಯನ್ನು ಶೇ. 18ಕ್ಕೆ ನಿಗದಿಗೊಳಿಸಬೇಕು ಎನ್ನುವುದು. ಕೇಂದ್ರದ ಎನ್ ಡಿ ಎ ತೀವ್ರ ಆಕ್ಷೇಪ ಹೊಂದಿದ್ದ ಈ ಸಲಹೆಯನ್ನು ಮಂಗಳವಾರದ ಸಭೆಯಲ್ಲಿ ಯಾವ ರಾಜ್ಯಗಳೂ ಪ್ರತಿಪಾದಿಸಲಿಲ್ಲ ಎಂಬುದು ಮುಖ್ಯಾಂಶ. ಕಾಂಗ್ರೆಸ್ ಆಡಳಿತವೇ ಇರುವ ಕರ್ನಾಟಕ, ಮೇಘಾಲಯ, ಹಿಮಾಚಲ ಪ್ರದೇಶಗಳೂ ಸಹ ಇದಕ್ಕೆ ಪಟ್ಟು ಹಿಡಿಯದೇ ಜಿಎಸ್ಟಿ ಪರವಾಗಿದ್ದವು ಎಂಬ ಅಂಶ ಬಿಜೆಪಿ ಆಡಳಿತದ ಕೇಂದ್ರಕ್ಕೆ ಮಂದಹಾಸ ಮೂಡಿಸಿದೆ.

ಹಾಗಾದರೆ ಎಲ್ಲವೂ ಅಖೈರಾಗಿಬಿಟ್ಟಿದೆಯೇ?

ಹಾಗೇನೂ ಇಲ್ಲವಾದರೂ, ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯಗಳೆಲ್ಲ ಇಟ್ಟಿರುವ ಬೇಡಿಕೆಗಳು ತೀರ ಅಡ್ಡಗಾಲಾಗಿರುವಂಥದ್ದೇನಲ್ಲ. ಜಿಎಸ್ಟಿಯಿಂದ ರಾಜ್ಯಗಳಿಗೆ ನಷ್ಟವಾಗದಂತೆ ರೆವೆನ್ಯು ನ್ಯೂಟ್ರಲ್ ರೇಟ್ ನಿಗದಿಪಡಿಸುವುದಿನ್ನೂ ಬಾಕಿ ಇದೆ. ಅಂತೆಯೇ ಉಭಯರ ನಿಯಂತ್ರಣ ವ್ಯಾಪ್ತಿ ಬಗೆಗೂ ಕೆಲವು ವಿಷಯಗಳು ಬಗೆಹರಿಯಬೇಕಿವೆ. 1.5 ಕೋಟಿ ರುಪಾಯಿ ವಾರ್ಷಿಕ ವಹಿವಾಟಿನ ವ್ಯಾಪಾರಿ ರಾಜ್ಯದ ತೆರಿಗೆ ವ್ಯಾಪ್ತಿಗೆ ಬರುವುದಾಗಿ ಕೇಂದ್ರ ಸ್ಪಷ್ಟಪಡಿಸಿದ್ದರೂ ಈ ಮಿತಿ ಮೀರಿದ ವ್ಯಾಪಾರಿಗಳ ವಿಷಯದಲ್ಲಿ ತಾಳಬೇಕಾದ ನೀತಿ ಬಗ್ಗೆ ಸ್ಪಷ್ಟತೆ ಮೂಡಬೇಕಿದೆ. ಇದನ್ನು ಜುಲೈನಲ್ಲಿ ನಡೆಯುವ ಇನ್ನೊಂದು ಎಂಪವರ್ಡ್ ಸಮಿತಿ ಸಭೆಯಲ್ಲಿ ಬಗೆಹರಿಸಲಾಗುವುದೆಂಬ ವಿಶ್ವಾಸ ಕೇಂದ್ರದ್ದು.

ಕಾಂಗ್ರೆಸ್ ನ ಮುಖ್ಯ ಆಗ್ರಹವಾಗಿದ್ದ ಶೇ. 18ರ ಮಿತಿಗೆ ಯಾರ ಬೆಂಬಲವೂ ಇಲ್ಲವಾಗಿರುವುದರಿಂದ ಹಾಗೂ ಸಭೆಯಲ್ಲಿ ಭಾಗವಹಿಸಿದ್ದ 22 ರಾಜ್ಯಗಳಲ್ಲಿ ಬಹುಮತದ ರಾಜ್ಯಗಳು- ಈ ಮಿತಿ ನಿಗದಿ ಅಧಿಕಾರವನ್ನು ಜಿಎಸ್ಟಿ ಸಮಿತಿಗೇ ಬಿಡುವ ಬಗ್ಗೆ ಒಲವು ತೋರಿಸಿರುವುದರಿಂದ, ಜಿಎಸ್ಟಿ ವಿಷಯದಲ್ಲಿ ಕಾಂಗ್ರೆಸ್ ಪ್ರತಿಪಾದನೆ ನೆಲೆ ಕಳೆದುಕೊಂಡಿದೆ.

ಇದರೊಂದಿಗೆ, ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಜಿಎಸ್ಟಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಪಾಸುಮಾಡಿ, ಏಪ್ರಿಲ್ 2017ರಿಂದ ಜಾರಿಗೆ ತರುವ ಆಶಯ ವಿತ್ತ ಸಚಿವ ಅರುಣ್ ಜೇಟ್ಲಿ ಅವರದ್ದು. ಆದರೆ ಈ ವಿಧೇಯಕಕ್ಕೆ ಬಹುಮತದ ರಾಜ್ಯಗಳು ತಮ್ಮಲ್ಲಿನ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಅನುಮೋದಿಸಬೇಕಾಗುತ್ತದೆ. ಜಿಎಸ್ಟಿ ಪರ್ವದ ಪ್ರಾರಂಭದಲ್ಲಿ ರಾಜ್ಯಗಳು ನಷ್ಟ ಅನುಭವಿಸಿದರೆ ಐದು ವರ್ಷಗಳವರೆಗೆ ಕೇಂದ್ರ ಅದನ್ನು ಸರಿದೂಗಿಸುವ ಭರವಸೆಯನ್ನೂ ಕೊಡಲಿದೆ ಎಂದಿದ್ದಾರೆ ಜೇಟ್ಲಿ.

ರಾಜ್ಯಗಳ ಸಮ್ಮತಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೂ ಸೇರಿದಂತೆ ರಾಜ್ಯಸಭೆಯಲ್ಲಿ ಹೆಚ್ಚಾಗಿರುವ ಬಿಜೆಪಿ ಬಲ ಇವೆಲ್ಲ ಕೇಂದ್ರದ ಜಿಎಸ್ಟಿ ಕನಸಿಗೆ ಕಸುವು ತಂದಿದೆ. ಪೂರ್ತಿ ಹೋರಾಟ ಗೆದ್ದಾಯ್ತು ಎಂದೇನಲ್ಲ. ಆದರೆ ಕಾಂಗ್ರೆಸ್ ಅನ್ನು ಒಬ್ಬಂಟಿಯಾಗಿಸುವಲ್ಲಿ ಯಶಸ್ವಿಯಾಗಿದೆ.

ಇಷ್ಟಕ್ಕೂ ಈ ಜಿಎಸ್ಟಿ ಏಕೆ ಅಗತ್ಯ? ಇದರ ಅಂತರಾಳವಾದರೂ ಏನು? ಎಂಬೆಲ್ಲ ವಿವರ ಮಾಹಿತಿಗಳಿಗೆ ಇಲ್ಲಿದೆ ಹಳೆಓದು-ಮರುಓದು: ಮೋದಿ ಸರ್ಕಾರಕ್ಕೆ ಜಿಎಸ್ಟಿ ಏಕೆ ನಿರ್ಣಾಯಕ ಗೊತ್ತಾ?

Leave a Reply