ಚೀನಾ ವಿದ್ಯಾರ್ಥಿಗಳಿಗೆ ಸುಲಭಕ್ಕೆ ಸಾಲ ಸಿಗುತ್ತೆ, ಬೆತ್ತಲೆ ಫೋಟೊ ಅಡವಿಡಬೇಕಷ್ಟೆ!

ಡಿಜಿಟಲ್ ಕನ್ನಡ ಟೀಮ್:

ಮಾನ್ಯತೆ ಪಡೆದ ಬ್ಯಾಂಕುಗಳಾಚೆ ಸಾಲ ಪಡೆಯುವ ಸ್ಥಿತಿ ನಮ್ಮಲ್ಲೂ ಇದೆ. ಸಣ್ಣಪುಟ್ಟ ವ್ಯಾಪಾರಿಗಳು ಮೀಟರ್ ಬಡ್ಡಿ ವ್ಯವಸ್ಥೆಯನ್ನೇ ನೆಚ್ಚಿಕೊಂಡು ದುಡಿದಿದ್ದೆಲ್ಲ ಬಡ್ಡಿ ಕಟ್ಟುವ ಸ್ಥಿತಿ ಇರೋದು ಗೊತ್ತಿದೆ. ಆದರೆ ಆನ್ಲೈನ್ ಪ್ರಪಂಚದಲ್ಲಿ ಸಾಲವೆಂಬುದು ಯಾವೆಲ್ಲ ಸ್ವರೂಪ ಪಡೆಯುತ್ತಿದೆ ನೋಡಿ. ಚೀನಾದ ಕೆಲವು ಪ್ರಾಂತ್ಯಗಳಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಾಲ ಕೊಡುವ ಆನ್ಲೈನ್ ಕಂಪನಿಗಳು ಹುಟ್ಟಿಕೊಂಡಿವೆ.

ಈ ಸಾಲಗಳಿಗೆ ಗ್ಯಾರಂಟಿ ಏನು? ಕೈಸಾಲ ಪಡೆಯುವವರು ನಮ್ಮಲ್ಲಿ ಮೊಬೈಲ್ ಫೋನ್ ಅಡವಿಟ್ಟೋ, ಆಭರಣ ಅಡವಿಟ್ಟೋ ಪಡೆದುಕೊಂಡಾರು. ಮೀಟರ್ ಬಡ್ಡಿ ದಂದೆಯಲ್ಲಿ ವಸೂಲಿ ತೋಳ್ಬಲ ಹಾಗೂ ಮರ್ಯಾದೆ ಹರಾಜು ಹಾಕುವ ಹೆದರಿಕೆ ಕೆಲಸ ಮಾಡುತ್ತೆ.

ಈ ಮರ್ಯಾದೆ ಹರಾಜು ಹಾಕುವ ಪ್ರಕ್ರಿಯೆಯನ್ನು ಚೀನಾದ ಆನ್ಲೈನ್ ಸಾಲ ಕಂಪನಿಗಳು ಹೊಸ ಎತ್ತರಕ್ಕೆ ಏರಿಸಿವೆ! ಅಲ್ಲಿ ಸಾಲಕ್ಕೆ ಅಡಮಾನವಾಗಿ ಇರಿಸಿಕೊಳ್ಳೋದು ಸಾಲಗಾರರ ಬೆತ್ತಲೆ ಚಿತ್ರವನ್ನು.

ನಿಜ ಕಣ್ರಿ, ಚೀನಾದ ಕೆಲವು ಆನ್ ಲೈನ್ ಸಂಸ್ಥೆಗಳು ಅಲ್ಲಿನ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸಾಲ ನೀಡುತ್ತವೆ. ಅದಕ್ಕೆ ಪ್ರತಿಯಾಗಿ ಅವರು ಪಡೆಯೋದು ಅವರ ಬೆತ್ತಲೆ ಫೋಟೊ ಹಾಗೂ ವಿಡಿಯೋವನ್ನು. ಕಾರಣ, ಸಾಲ ಪಡೆದವರು ಮರುಪಾವತಿ ಮಾಡದಿದ್ದರೆ, ಅವರಿಗೆ ಬೆತ್ತಲೆ ಫೋಟೊ ಪ್ರಕಟಿಸುತ್ತೇವೆ ಎಂಬ ಅಸ್ತ್ರ ಪ್ರಯೋಗಿಸುತ್ತಾರೆ.

ಆ ಸಾಲ ಪದ್ಧತಿ ಇರೋದು ಹೀಗೆ:

ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಸಾಲ ಬೇಕೆಂದರೆ, ಆಕೆ ತಮ್ಮ ಕಾಲೇಜು ಐಡಿ ಕಾರ್ಡ್ ಹಿಡಿದಿರುವ ಬೆತ್ತಲೆ ಫೋಟೊ ಅನ್ನು ಕಂಪನಿಯ ಆನ್ಲೈನ್ ವಿಳಾಸಕ್ಕೆ ಅಪ್ ಲೋಡ್ ಮಾಡಬೇಕು. ಇದರ ಜತೆಗೆ ತಮ್ಮ ಮನೆಯ ವಿಳಾಸ, ಮೊಬೈಲ್ ನಂಬರ್ ಹಾಗೂ ಕುಟುಂಬಸ್ಥರ ವಿವರಣೆ ನೀಡಬೇಕು.

ಈ ವಿಧಾನದಲ್ಲಿ ವಿದ್ಯಾರ್ಥಿಗಳಿಗೆ 15 ಸಾವಿರ ಯುವಾನ್ ವರೆಗೂ ಸಾಲ ನೀಡಲಾಗುವುದು. ನಂತರ 36 ತಿಂಗಳವರೆಗೂ ಕಂತಿನ ಮೂಲಕ ಕಟ್ಟಬೇಕು. ಇಲ್ಲಿ ವಿದ್ಯಾರ್ಥಿಗಳು ಯಾವ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಸಾಲದ ಪ್ರಮಾಣ ನಿಗದಿಯಾಗುತ್ತದೆ.

ಈ ರೀತಿಯಾಗಿ ಪಡೆದ ಸಾಲದ ಬಡ್ಡಿ ಕಮ್ಮಿಯೇನಿಲ್ಲ. ಕೆಲವೊಮ್ಮೆ ಇದರ ಪ್ರಮಾಣ ಶೇ.30 ರಷ್ಟು ಹೆಚ್ಚಿರುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟದಿದ್ದರೆ, ಸಾಲದ ಪ್ರಮಾಣ ಹೆಚ್ಚುತ್ತಾ ಸಾಗುತ್ತದೆ. ಉದಾಹರಣೆಗೆ ಲಿಲಿ ಎಂಬ ವಿದ್ಯಾರ್ಥಿನಿ 500 ಯುವಾನ್ ಸಾಲ ಪಡೆದಿದ್ದಳು. ಸರಿಯಾಗಿ ಬಡ್ಡಿ ಕಟ್ಟದ ಪರಿಣಾಮ ಅಂತಿಮವಾಗಿ ಆಕೆಯ ಸಾಲದ ಮೊತ್ತ ಏರಿದ್ದು 55 ಸಾವಿರ ಯುವಾನ್ ಗೆ ಎಂಬುದು ಅಲ್ಲಿನ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿರೋ ಅಂಶ.

ಇಲ್ಲಿ ಸಾಲ ಪಡೆದವರು ಮತ್ತು ನೀಡಿದ ಸಂಸ್ಥೆ ನಡುವೆ ಚಾಟ್ ಬಾಕ್ಸ್ ಸಂಪರ್ಕ ಇರುತ್ತದೆ. ಸಾಲ ಪಡೆದ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಬಡ್ಡಿ ಕಟ್ಟದಿದ್ದರೂ ಅವರ ಬೆತ್ತಲೆ ಫೊಟೊ ಅಥವಾ ವಿಡಿಯೋವನ್ನು ಎಚ್ಚರಿಕೆ ಸಂದೇಶವಾಗಿ ಅವರಿಗೆ ಕಳುಹಿಸಿ, ಇದನ್ನು ನಿಮ್ಮ ಕುಟುಂಬಸ್ಥರೂ ಸೇರಿದಂತೆ ಎಲ್ಲರಿಗೂ ಕಳುಹಿಸಲಾಗುವುದು ಎಂಬ ಬೆದರಿಕೆಯನ್ನು ಹಾಕುತ್ತಾರೆ. ಈ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರೂ ಸಾಲ ಪಡೆದಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇಂಥ ಆನ್ಲೈನ್ ಸಾಲ ಕಂಪನಿಗಳು ಇಂಟರ್ನೆಟ್ ಯುಗದ ನಮ್ಮ ಯುವಜನರಿಗೆ ಅಟಕಾಯಿಸಿಕೊಂಡರೂ ಅದರಲ್ಲಿ ಆಶ್ಚರ್ಯವೇನಿಲ್ಲ, ಎಚ್ಚರ!

Leave a Reply