ಕಾಶ್ಮೀರಿ ಪಂಡಿತರ ಈ ಮಹಾಕುಂಭಮೇಳದ ಮಹತ್ವವೇನು ಗೊತ್ತೇ? ನಿರಾಶ್ರಿತರನ್ನು ಬೇರಿಗೆ ಬೆಸೆಯುತ್ತಿರುವ ಇದರ ಪುಣ್ಯಫಲ ತಿಳಿದಿರಲಿ!

ಡಿಜಿಟಲ್ ಕನ್ನಡ ವಿಶೇಷ:

ಕಾಶ್ಮೀರಿ ಪಂಡಿತರ ಪಾಲಿಗೆ ಮಂಗಳವಾರ ನಿಜಕ್ಕೂ ಮಂಗಳಕರವಾಗಿತ್ತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಮ್ಮ ಬೇರಿನ ಜತೆ ಬೆರೆಯಲು ಒದಗಿದ ಅವಕಾಶವಾಗಿತ್ತದು. ಸಿಂಧು ಮತ್ತು ಜೇಲಂ ನದಿಗಳ ಸಂಗಮ ಸ್ಥಾನದಲ್ಲಿಸುಮಾರು 12 ಸಾವಿರ ಕಾಶ್ಮೀರಿ ಪಂಡಿತ ಶ್ರದ್ಧಾಳುಗಳು ಪವಿತ್ರ ಸ್ನಾನದಲ್ಲಿ ನೆಂದರು. ಅದು ಮೈ ತೋಯಿಸುವ ಸ್ನಾನ ಮಾತ್ರ ಆಗಿರಲು ಹೇಗೆ ಸಾಧ್ಯ? ಭಾವುಕರಾಗಿ ಮನಸ್ಸನ್ನೂ ತೋಯಿಸಿಕೊಂಡಿದ್ದಿರಬೇಕು. ಇಸ್ಲಾಮಿಕ್ ಉಗ್ರ ಪ್ರತ್ಯೇಕತಾವಾದಕ್ಕೆ ಕಣಿವೆಯಿಂದ ಹೊರದಬ್ಬಿಸಿಕೊಂಡು ತಮ್ಮದೇ ದೇಶದಲ್ಲಿ ನಿರಾಶ್ರಿತರಾದ ಕಾಶ್ಮೀರಿ ಪಂಡಿತರಿಗೆ ತಮ್ಮ ಮೂಲನೆಲೆಯನ್ನು ಸ್ಪರ್ಶಿಸುವ ಅವಕಾಶ ಮಾಡಿಕೊಟ್ಟಿತು ಸಿಂಧು- ಜೇಲಂ ಸಂಗಮದಲ್ಲಿ 75 ವರ್ಷಗಳ ನಂತರ ನಡೆದ ಮಹಾಕುಂಭಮೇಳ… ಅವಿಭಜಿತ ಭಾರತದಲ್ಲಾಗಿತ್ತು ಈ ಹಿಂದಿನ ಕುಂಭಮೇಳ. ಅದಾದ ನಂತರ ಸಿಂಧು ತೀರದಲ್ಲಿ ಸಾಕಷ್ಟು ರಕ್ತ ಹರಿದಿದೆ!

ಏನೀ 75 ವರ್ಷಗಳ ಲೆಕ್ಕಾಚಾರ? ಸಮುದಾಯದ ಪಂಚಾಂಗದ ಪ್ರಕಾರ ಆಕಾಶಕಾಯಗಳ ಸಮೀಕರಣ 75 ವರ್ಷಗಳ ಹಿಂದೆ, 1941ರಲ್ಲಿ ಹೇಗಿತ್ತೋ ಅದೇ ಲೆಕ್ಕಾಚಾರ ನಿನ್ನೆ ಮಂಗಳವಾರ ಕೂಡಿತಂತೆ. ಇದಕ್ಕೆ ಪೂರ್ವಭಾವಿಯಾಗಿ ಸರ್ಕಾರ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡು, ಈ ಯಾತ್ರೆ ಸರಾಗವಾಗಿ ನಡೆಯುವಂತೆ ನೋಡಿಕೊಂಡಿತು. 10 ದಿನಗಳ ಕಾಲ ಆಚರಣೆಗಳು ನಡೆಯಲಿವೆ.

ಕಾಶ್ಮೀರದ ಗಂದೇರ್ಬಾಲ್ ಜಿಲ್ಲೆಯ ಸೈದಿಪುರ ಗ್ರಾಮದಲ್ಲಿ ಜೇಲಂ ಮತ್ತು ಸಿಂಧು ನದಿಯ ಸಂಗಮ ಕ್ಷೇತ್ರವಿದೆ. ಮಹಾಕುಂಭಮೇಳದ ಸಮಿತಿಯವರು ನದಿ ಮಧ್ಯೆ ದ್ವೀಪದಂತಹ ಪ್ರದೇಶದಲ್ಲಿರುವ ಶಿವಲಿಂಗ ಮತ್ತು ಪವಿತ್ರ ಮರಕ್ಕೆ ಪೂಜೆ ಸಲ್ಲಿಸುತ್ತಾರೆ. ನೀರಿನ ಮಟ್ಟ ಎಷ್ಟೇ ಹೆಚ್ಚಾದರೂ ಈ ಮರ ಮಾತ್ರ ಮುಳುಗುವುದಿಲ್ಲ ಎಂಬ ನಂಬಿಕೆ ಇದೆ. ಉಳಿದಂತೆ ಭಕ್ತ ಸಮೂಹ ಪವಿತ್ರ ಸ್ನಾನ ಮಾಡುತ್ತದೆ. ಆ ಮೂಲಕ ತಮ್ಮ ಕರ್ಮಗಳನ್ನು ಕಳೆದುಕೊಳ್ಳುವ ನಂಬಿಕೆ ಇದೆ. ಮೃತರ ಅಸ್ಥಿ ವಿಸರ್ಜನೆ ಕ್ರಮವೂ ಇಲ್ಲಿದೆ. ಮಹಾಕುಂಭಮೇಳದ ಪ್ರಾರಂಭಾರ್ಥವಾಗಿ ಸುದೀರ್ಘ 12 ಗಂಟೆಗಳ ಕಾಲ ನಡೆಯಿತು.

ಕೇವಲ ಭಕ್ತಿ ಪ್ರದರ್ಶನವಲ್ಲದೇ, ಕಾಶ್ಮೀರಿ ಪಂಡಿತರ ಪಾಲಿಗೆ ಇಂಥ ಯಾತ್ರೆಗಳು ವಿಶೇಷ ಅರ್ಥ ಹೊಂದಿವೆ. ಯಾವ ತಪ್ಪೂ ಇಲ್ಲದೇ ಮುಸ್ಲಿಂ ಹಿಂಸಾತಿರೇಕದಿಂದ ಲಕ್ಷಗಳ ಸಂಖ್ಯೆಯಲ್ಲಿ ತಾಯ್ನೆಲ ಬಿಟ್ಟುಬಂದ ಪಂಡಿತ ಸಮುದಾಯದ ಒಂದು ತಲೆಮಾರಿಗೆ ಇದು ತಮ್ಮ ಬೇರುಗಳನ್ನು ತಡಕುವ ಕಾಲ. ನಿರಾಶ್ರಿತರಾಗಿರುವಾಗಲೇ ರೂಪುಗೊಂಡಿರುವ ಸಮುದಾಯದ ಇನ್ನೊಂದು ತಲೆಮಾರು ತನ್ನ ಹಿರಿಯರ ನೆನಪುಗಳೊಂದಿಗೆ, ಭಾವಬಿಂದುಗಳೊಂದಿಗೆ ಮುಖಾಮುಖಿಯಾಗಿ, ತಾನು ಕಳೆದುಕೊಳ್ಳುತ್ತಿರುವುದೇನನ್ನು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೂ ಈ ಯಾತ್ರೆ ಅವಕಾಶ ಒದಗಿಸುತ್ತದೆ.

ಕಾಶ್ಮೀರಿ ಪಂಡಿತರಿಗೆ ಕಣಿವೆಯಲ್ಲಿ ಮರುವಾಸಕ್ಕೆ ಅನುವು ಮಾಡಿಕೊಡುವ ಪ್ರಸ್ತಾವ ಲಾಗಾಯ್ತಿನಿಂದ ಇದೆ. ಬಿಜೆಪಿ- ಪಿಡಿಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈ ಪ್ರಕ್ರಿಯೆ ಚುರುಕುಗೊಂಡಿದೆ. ಪಂಡಿತರಿಗೆ ಪ್ರತ್ಯೇಕ ಕಾಲೊನಿ ನಿರ್ಮಿಸುವ ಬಿಜೆಪಿ ಪ್ರಸ್ತಾಪಕ್ಕೆ ಉಳಿದ ರಾಜಕೀಯ ಪಕ್ಷಗಳಿಂದ ಪ್ರತಿರೋಧವೂ ಬಂದಿದೆ. ಅದೇನೇ ಇದ್ದರೂ ಹಿಂಸಾಚಾರ-ಅತ್ಯಾಚಾರಗಳಿಗೆ ಒಳಗಾದ ಒಂದು ಸಮುದಾಯವನ್ನು ಪರಿಸ್ಥಿತಿ ತಿಳಿಯಾಗಿದೆ ಎಂದು ಹೇಳಿ ಅಲ್ಲಿ ಪ್ರತಿಷ್ಠಾಪಿಸಿಬಿಡಲಾಗುವುದಿಲ್ಲ. ಏಕೆಂದರೆ ಇದು ಕೇವಲ ಜಾಗ ತುಂಬುವ ಪ್ರಕ್ರಿಯೆ ಅಲ್ಲ. ಇಷ್ಟು ವರ್ಷಗಳ ಉಗ್ರವಾದಕ್ಕೆ ಘಾಸಿಯಾಗಿರುವ ಮನಸ್ಸುಗಳೂ ಅಲ್ಲಿ ಮತ್ತೆ ಸ್ಥಳ ಕಂಡುಕೊಳ್ಳಬೇಕು.

ಈ ನಿಟ್ಟಿನಲ್ಲಿ ಜೂನ್ 10ಕ್ಕೆ ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಆಚರಿಸಿದ ಖೀರ್ ಭವಾನಿ ಉತ್ಸವ ಹಾಗೂ ಈಗಿನ ಕುಂಭಮೇಳಗಳು ಪ್ರಾಮುಖ್ಯ ಪಡೆಯುತ್ತವೆ. 10ನೇ ಶತಮಾನದ ಶೈವ ಸಂತ ಕಾಶ್ಮೀರದ ಅಭಿನವ ಗುಪ್ತ ಸಂಬಂಧವೂ ಕಾಶ್ಮೀರದ ಅಭಿನವ ಗುಪ್ತ ಗುಹೆಗೆ ಯಾತ್ರೆ ಕಾರ್ಯವನ್ನು ಆರೆಸ್ಸೆಸ್ ಹಮ್ಮಿಕೊಳ್ಳುತ್ತಿದೆ. ನಿರೀಕ್ಷೆಯಂತೆ ಕೆಲವು ಮುಸ್ಲಿಂ ಸಂಘಟನೆಗಳು ಇಂಥ ಪ್ರಯತ್ನಗಳಿಗೆ ಪ್ರತಿರೋಧ ವ್ಯಕ್ತಪಡಿಸಿವೆ. ತಮ್ಮದೇ ಆಗಿದ್ದ ಕಾಶ್ಮೀರದಲ್ಲಿ ತುಂಡರಿಸಿದ ಜೀವಬಳ್ಳಿಗಳನ್ನು ಹುಡುಕಿಕೊಳ್ಳುವ ಇಂಥ ಪ್ರಯತ್ನಗಳನ್ನು ಜಮ್ಮು-ಕಾಶ್ಮೀರದ ಜನಸಂಖ್ಯಾ ಸಂರಚನೆ ಬದಲಿಸುವ ಕೇಸರೀಕರಣ ಯತ್ನ ಎಂದು ವಿಶ್ಲೇಷಿಸುವ ‘ಸೆಕ್ಯುಲರ್ ವಿಶ್ಲೇಷಕ’ರೂ ಇದ್ದಾರೆ.

ಇಂಥ ಪ್ರತಿರೋಧಗಳನ್ನು ಅರ್ಥಮಾಡಿಕೊಂಡಾಗ ಕಾಶ್ಮೀರಿ ಪಂಡಿತರ ಮಹಾಕುಂಭಮೇಳಕ್ಕೆ ಯಾತ್ರೆಗೂ ಮೀರಿದ ಗುರುತಿನ ಹುಡುಕಾಟವಿದೆ. ಇಷ್ಟಕ್ಕೂ ಕಾಶ್ಮೀರಿ ಪಂಡಿತರ ಮರುವಸತಿ ಎಂದರೆ ಕೇವಲ ಅವರ ಜೀವಂತ ದೇಹಗಳನ್ನು ಅಲ್ಲಿ ತೆಗೆದುಕೊಂಡು ಹೋಗಿ ಮನೆಗಳಲ್ಲಿ ಇಡುವುದಲ್ಲ. ಬದಲಿಗೆ ಅವರ ಶ್ರದ್ಧಾಬಿಂದುಗಳು, ಪೂಜಾ ಪದ್ಧತಿ ಇವೆಲ್ಲವಕ್ಕೂ ಅವಕಾಶವಿದ್ದರೆ ಮಾತ್ರ ಅದು ಬದುಕು ಎನ್ನಿಸಿಕೊಳ್ಳುತ್ತದೆ. ಅಂಥ ಬದುಕಿನ ಹಕ್ಕು ಪಡೆದುಕೊಳ್ಳುವುದಕ್ಕೆ ಇಂಥ ಯಾತ್ರೆಗಳು ಬಲ ತುಂಬಲಿ.

Leave a Reply