ಸಿಇಟಿ ವೈದ್ಯಕೀಯ ಕೋರ್ಸಿಗೆ ₹ 5 ಲಕ್ಷ ಶುಲ್ಕ ಎಂದ ಖಾಸಗಿ ಕಾಲೇಜುಗಳು, ಉಡ್ತಾ ಲೀಕ್, ಎನ್ ಎಸ್ ಜಿ ವಿಷಯದಲ್ಲಿ ಚೀನಾ ಒತ್ತಡದಾಟ, ದಿನಾಂತ್ಯದ ಎಲ್ಲ ಸುದ್ದಿಗಳು…

ಜೂನ್ 16ರಿಂದ 26 ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ಕಲೆ- ಕಲಾಕುಸುರಿ ಮೇಳ ನಡೆಯಲಿದೆ. ಸಂಪೂರ್ಣ್ ಎಂಬ ಸ್ವಯಂಸೇವಾ ಸಂಸ್ಥೆ ‘ಮರಳಿ ಪ್ರಕೃತಿಯತ್ತ’ ಎಂಬ ಘೋಷಣೆ ಅಡಿ ಆಯೋಜಿಸಿರುವ ಮೇಳದಲ್ಲಿ 19 ರಾಜ್ಯಗಳಿಂದ 140 ಕುಶಲಕರ್ಮಿಗಳು ಭಾಗವಹಿಸುತ್ತಾರೆ.

ಡಿಜಿಟಲ್ ಕನ್ನಡ ಟೀಮ್:

ಸಿಇಟಿ ಮೂಲಕ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳು ₹ ಐದು ಲಕ್ಷ ನೀಡಬೇಕೆಂದು ಖಾಸಗಿ ಕಾಲೇಜುಗಳು ಪಟ್ಟು ಹಿಡಿದಿವೆ. ಇದರಿಂದ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ ಎಂದಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಅವರು ಹೇಳಿದಿಷ್ಟು…

‘ಈವರೆಗೆ ಸಿಇಟಿ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯುತ್ತಿದ್ದ ವಿದ್ಯಾರ್ಥಿಗಳು ವರ್ಷಕ್ಕೆ ₹60 ಸಾವಿರ ಹಾಗೂ ಕಾಮೆಡ್-ಕೆ ಮೂಲಕ ಪ್ರವೇಶ ಪಡೆಯುತ್ತಿದ್ದವರು ₹4.60 ಲಕ್ಷ ಶುಲ್ಕ ನೀಡಬೇಕಿತ್ತು. ಕೇಂದ್ರ ಸರ್ಕಾರ ದೇಶಾದ್ಯಂತ ವೈದ್ಯಕೀಯ ಕೋರ್ಸುಗಳಿಗೆ ಏಕರೂಪ ಪ್ರವೇಶ ಪದ್ಧತಿ (ನೀಟ್) ಜಾರಿಗೆ ತಂದಿದ್ದು, ಇದು ಎಲ್ಲ ಖಾಸಗಿ ಕಾಲೇಜುಗಳಿಗೂ ಅನ್ವಯವಾಗಿದೆ. ಖಾಸಗಿ ಕಾಲೇಜುಗಳು ನೀಟ್ ಅಡಿಯಲ್ಲೂ ಸೀಟುಗಳನ್ನು ನೀಡಬೇಕಿದೆ. ಹೀಗಾಗಿ ರಾಜ್ಯ ಸರ್ಕಾರದ ಸಿಇಟಿ ವತಿಯಿಂದ ಶೇಕಡಾ ನಲವತ್ತರಷ್ಟು ಸೀಟು ನೀಡಲು ಸಿದ್ಧ ಆದರೆ, ಪ್ರವೇಶ ಶುಲ್ಕ ₹ 5 ಲಕ್ಷ ನೀಡಬೇಕು ಎಂಬುದು ಖಾಸಗಿ ಕಾಲೇಜುಗಳ ಪಟ್ಟು.

ಖಾಸಗಿ ಕಾಲೇಜುಗಳು ಹೆಚ್ಚು ಶುಲ್ಕ ಕೇಳುತ್ತಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಕೈಗೆಟುಕುವುದು ಕಷ್ಟವಾಗಿದೆ. ಆದ್ದರಿಂದ ಈ ಹಿಂದೆ ಸಿಇಟಿಗೆ ನೀಡುವ ಪ್ರಮಾಣದಲ್ಲಿ ಸೀಟು ಕೊಡಿ. ಜತೆಗೆ ಪ್ರವೇಶ ಶುಲ್ಕ ಕಡಿಮೆ ಮಾಡಿ ಎಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಲಿದ್ದು, ವಿದ್ಯಾರ್ಥಿಗಳು ಎಷ್ಟು ಶುಲ್ಕ ಪಾವತಿ ಮಾಡಬೇಕು ಎಂಬುದರ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೇವೆ.

ಈ ಮಧ್ಯೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಸುಮಾರು 2200 ಮಂದಿಗೆ ಸಿಇಟಿ ಶುಲ್ಕದಡಿಯೇ ಪ್ರವೇಶ ಸಿಗಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವವರಿಗೆ ಕಡಿಮೆ ದರದಲ್ಲಿ (₹ 16 ಸಾವಿರ) ದರದಲ್ಲಿ ಸೀಟು ಸಿಗಲಿದೆ.

ರೈತರಿಗೆ ಬೆಳೆ ವಿಮೆ ಲಾಭ ದೊರಕಿಸಲು ಸರ್ಕಾರ ನಿರ್ಧಾರ

ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ 15 ಲಕ್ಷ ರೈತರಿಗೆ ಬೆಳೆ ವಿಮೆ ಯೋಜನೆಯ ಲಾಭ ದೊರಕಿಸಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

‘ಈ ವರ್ಷ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಯೋಜನೆಯಡಿ ₹ 693 ಕೋಟಿ ನೆರವು ದೊರೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರೈತರಿಗೆ ಬೆಳೆ ವಿಮೆ ಲಭ್ಯವಾಗುತ್ತಿರುವುದು ಇದೇ ಮೊದಲು. ಬರಗಾಲದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಕುಡಿಯುವ ನೀರಿಗೂ ಸಮಸ್ಯೆಯಾದ ಪರಿಣಾಮ ಹಿಂಗಾರು ಬೆಳೆಗೆ ಆಣೆಕಟ್ಟುಗಳಲ್ಲಿದ್ದ ನೀರನ್ನು ಒದಗಿಸಲಿಲ್ಲ. ಹಾಗಾಗಿ ರೈತರು ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ’ ಎಂದರು.

ಈ ಮಧ್ಯೆ, ರಾಜ್ಯದಲ್ಲಿ ಎರಡು ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದೆ ಬಂದಿದ್ದರೂ ರಾಜ್ಯ ಸರ್ಕಾರ ಜಾಗ ಅದಕ್ಕೆ ಅಗತ್ಯವಾದ ಜಾಗ ನೀಡಿಲ್ಲ, ಈ ಕುರಿತ ಪ್ರಸ್ತಾವನೆ ಕಳಿಸಿಲ್ಲ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಖಾತೆ ಸಚಿವ ಅನಂತಕುಮಾರ್ ಹೇಳುತ್ತಿರುವುದು ಸುಳ್ಳು. ಈಗಾಗಲೇ ಆ ಕುರಿತು ನಮ್ಮ ಬಳಿ ಜಾಗ ಇದೆ ಎಂದು ಪ್ರಸ್ತಾವನೆ ಕಳಿಸಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳೂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಸಚಿವರು ಸ್ಪಷ್ಟನೆ ನೀಡಿದರು.

 

ಬಿಡುಗಡೆಗೂ ಮುನ್ನವೇ ಅಂತರ್ಜಾಲದಲ್ಲಿ ಉಡ್ತಾ ಪಂಜಾಬ್

ಕೆಲವು ವಾರಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ಉಡ್ತಾ ಪಂಜಾಬ್ ಚಿತ್ರ ಮತ್ತೊಂದು ಆಘಾತ ಅನುಭವಿಸಿದೆ. ತೆರೆಗೆ ಬರಲು ಎರಡು ದಿನ ಬಾಕಿ ಇರುವಾಗಲೇ ಇಡೀ ಚಿತ್ರ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ.

ಆರಂಭದಲ್ಲಿ ಸೆಂಟ್ರಲ್ ಬೋರ್ಡ್ ಫಾರ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ)ನ ಕತ್ತರಿ ಪ್ರಯೋಗದ ಹೋರಾಟದಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿ ಮೇಲುಗೈ ಸಾಧಿಸಿದ್ದ ಚಿತ್ರ ತಂಡ ದೇಶದಾದ್ಯಂತ ನಾಳೆ ಚಿತ್ರ ಬಿಡುಗಡೆ ಮಾಡಲು ಹವಣಿಸಿತ್ತು. ಆದರೆ, ಬುಧವಾರ ಟೊರೆಂಟ್ ನಲ್ಲಿ ಇಡೀ ಚಿತ್ರ ಸೋರಿಕೆಯಾಗಿತ್ತು.

ಸೆನ್ಸಾರ್ ಮಂಡಳಿಯ ಪ್ರತಿ ಅಂತರ್ಜಾಲದಲ್ಲಿ ಸೋರಿಕೆಯಾಗಿತ್ತಾದರೂ ಚಿತ್ರ ತಂಡ ಕಾಪಿ ರೈಟ್ ಹಕ್ಕಿನ ಮೂಲಕ ಆ ಚಿತ್ರದ ಲಿಂಕ್ ಅನ್ನು ತೆಗೆಸಿದೆ. ಸೆನ್ಸಾರ್ ಪ್ರತಿ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯದ ಹಿಂದೆ ಸಿಬಿಎಫ್ಸಿ ಕೈವಾಡ ಇದೆಯೇ ಎಂಬ ಅನುಮಾನಗಳು ಹುಟ್ಟುಕೊಂಡಿವೆ. ಈ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಚಿತ್ರ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಮುಂಬೈನಲ್ಲಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

ಮತ್ತೊಂದೆಡೆ ಉಡ್ತಾ ಪಂಜಾಬ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಎನ್ಜಿಒ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿದೆ.

ಷರತ್ತು ಒಪ್ಪಿದರೆ ಮಾತ್ರ ಭಾರತಕ್ಕೆ ಚೀನಾ ಬೆಂಬಲ

ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದದ ನಿಯಮ ಪಾಲನೆ ಮತ್ತು ಚೀನಾ ಜತೆಗೆ ವಿಭಿನ್ನ ವಿದೇಶಾಂಗ ನೀತಿಯನ್ನು ಹೊಂದಲು ಭಾರತ ಒಪ್ಪಿದರೆ, ಎನ್ಎಸ್ಜಿ ಸದಸ್ಯತ್ವಕ್ಕೆ ಬೆಂಬಲ ನೀಡಲು ಚೀನಾ ಸಿದ್ಧ. ಇದು ಚೀನಾ ಮಾಧ್ಯಮಗಳು ಭಾರತಕ್ಕೆ ನೀಡಿರುವ ಸೂಚನೆ.

ಮತ್ತೊಂದೆಡೆ ಪರಮಾಣು ಪೂರೈಕೆ ಸಮೂಹದ ಸದಸ್ಯತ್ವ ಪಡೆಯಲು ಭಾರತ ತೀರಾ ಹತ್ತಿರದಲ್ಲಿದೆ ಎಂಬ ಅಂಶವನ್ನು ಚೀನಾ ಒಪ್ಪಿಕೊಂಡಿದೆ. ಆದರೆ, ಭಾರತ ಈ ಸದಸ್ಯತ್ವ ಪಡೆದರೆ, ಭಾರತ ಮತ್ತು ಪಾಕಿಸ್ತಾನ ನಡುವಣ ಪರಮಾಣು ಸಮತೋಲನ ಮುರಿದು ಬೀಳುತ್ತೆ ಎಂದು ಹೇಳಿದೆ. ಇದರ ಪರಿಣಾಮವಾಗಿ ದಕ್ಷಿಣ ಏಷ್ಯಾ ಹಾಗೂ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿಗೆ ಧಕ್ಕೆಯಾಗಬಹುದು ಎಂದು ಚೀನಾ ರಾಗ ತೆಗೆದಿದೆ.

 

ತೆರಿಗೆದಾರರ ಭಯ ಹೊಗಲಾಡಿಸಿ ಅಂದ್ರೂ ಪ್ರಧಾನಿ

ತೆರಿಗೆದಾರರ ಮನಸಿನಲ್ಲಿರುವ ಗೊಂದಲ ಮತ್ತು ಭಯವನ್ನು ಹೋಗಲಾಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತೆರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ. ತಮ್ಮ ಆಡಳಿತ ಸುಧಾರಿಸಿಕೊಳ್ಳಲು ಆದಾಯ, ಹೊಣೆಗಾರಿಕೆ, ಪ್ರಾಮಾಣಿಕತೆ, ಮಾಹಿತಿ ಮತ್ತು ಡಿಜಿಟಲಿಕರಣ (RAPID) ಎಂಬ ಐದು ಆಧಾರ ಸ್ತಂಭಗಳನ್ನು ಅವಡಿಸಿಕೊಳ್ಳುವಂತೆ ಹೇಳಿದರು. ದೇಶದಲ್ಲಿನ 5.43 ಕೋಟಿ ತೆರಿಗೆದಾರರ ಸಂಖ್ಯೆಯನ್ನು 10 ಕೋಟಿಗೆ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಕಮಲ್ ನಾಥ್ ರಿಂದ ಪಂಜಾಬ್ ಉಸ್ತುವಾರಿ ಜವಾಬ್ದಾರಿ ವಾಪಸ್

ಪಂಜಾಬ್ ಚುನಾವಣೆಯಲ್ಲಿ ರಾಜ್ಯ ಉಸ್ತುವಾರಿಯನ್ನು ಕಮಲ್ ನಾಥ್ ಅವರಿಗೆ ನೀಡಿದ್ದು ವಿವಾದಕ್ಕೆ ಕಾರಣವಾದ್ದರಿಂದ ಈ ಜವಾಬ್ದಾರಿಯನ್ನು ಹಿಂಪಡೆಯಲಾಗಿದೆ. 1984ರಲ್ಲಿ ಸಿಖ್ ವಿರೋಧಿ ಗಲಭೆಯಲ್ಲಿ ಕಮಲ್ ನಾಥ್ ಅವರ ಕೈವಾಡವಿದೆ ಎಂಬ ಆರೋಪ ಇರುವುದರಿಂದ ಇವರಿಗೆ ಜವಾಬ್ದಾರಿ ನೀಡಿದ್ದು ಟೀಕೆಗೆ ಗುರಿಯಾಗಿತ್ತು. ಈ ಆರೋಪದ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ತಿಳಿದಿದ್ದರೂ ಈ ನಿರ್ಧಾರ ಕೈಗೊಂಡಿತ್ತು. ಆದರೆ, ಅವರ ನೇಮಕಕ್ಕೆ ಇಷ್ಟು ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದಿವೆ ಪಕ್ಷದ ಮೂಲಗಳು.

ಇದೇ ವೇಳೆ ಪಂಜಾಬ್ ಉಸ್ತುವಾರಿಯನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ನೀಡುವ ಸಾಧ್ಯತೆಗಳಿವೆ ಎಂಬ ವರದಿಗಳು ಬಂದಿವೆ.

 

ಆಪ್ ವಕ್ತಾರ ಸ್ಥಾನದಿಂದ ಅಲ್ಕಾ ಅಮಾನತು

ದೆಹಲಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷ ಅಲ್ಕಾ ಲಂಬಾ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ತೆಗೆದುಹಾಕಿದೆ. ಸಾರಿಗೆ ಸಚಿವರಾಗಿದ್ದ ಗೋಪಾಲ್ ರೈ ರಾಜಿನಾಮೆ ಕುರಿತಂತೆ ಅಲ್ಕಾ ನೀಡಿದ ಹೇಳಿಕೆ ಪಕ್ಷ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ.

ಬೆನ್ನು ನೋವು ಹಾಗೂ ಆರೋಗ್ಯದ ಸಮಸ್ಯೆಯಿಂದ ರಾಜಿನಾಮೆ ನೀಡಿರುವುದಾಗಿ ಗೋಪಾಲ್ ರೈ ಸಮರ್ಥನೆ ನೀಡಿದ್ದರು. ಆದರೆ ಅಲ್ಕಾ, ಸಾರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯಲು ಗೋಪಾಲ್ ರೈ ರಾಜಿನಾಮೆ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು.

 

ನಾಲ್ವರು ನುಸುಳುಕೋರರ ಹತ್ಯೆ

ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮವಾಗಿ ಗಡಿಯಲ್ಲಿ ನುಸುಳುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಗಡಿ ನುಸುಳುವ ಪ್ರಯತ್ನ ನಡೆಯಲಾಗಿದೆ. ಈ ಕಾರ್ಯಾಚರಣೆ ವೇಳೆ ಭಾರತದ ಒರ್ವ ಯೋಧ ಮೃತಪಟ್ಟಿರುವ ಮಾಹಿತಿ ಬಂದಿದೆ.

Leave a Reply