ಸಂಪುಟ ಪುನಾರಚನೆ ಸಂಬಂಧ ಸಿದ್ದರಾಮಯ್ಯ ಅತಿರೇಕದ ವರ್ತನೆ ಬಗ್ಗೆ ಹೈಕಮಾಂಡ್ ಕೆಂಡಾಮಂಡಲ!

ಡಿಜಿಟಲ್ ಕನ್ನಡ ವಿಶೇಷ:

‘ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡರು’ ಅನ್ನುತ್ತಾರಲ್ಲ ಹಂಗಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕತೆ. ಸಂಪುಟ ಪುನಾರಚನೆ ವಿಚಾರದಲ್ಲಿ ಅವರು ತೋರಿದ ಅತಿ ಉತ್ಸಾಹ, ಏಕಪಕ್ಷೀಯ ಅತಿರೇಕದ ವರ್ತನೆ ಇದೀಗ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.

ತಮ್ಮೊಡನೆ ಸಮಾಲೋಚನೆ ನಡೆಸದೆ ಸಂಪುಟ ಪುನಾರಚನೆ ಬಗ್ಗೆ ‘ಕಾಮರಾಜ ಸೂತ್ರ’ ಸೇರಿದಂತೆ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಿದ್ದು, ಜತೆಗೆ ಮಂತ್ರಿ ಪರಿಷತ್ ಸಭೆ ನಡೆಸಿ, ಸಚಿನ ಸ್ಥಾನ ಕಳೆದುಕೊಳ್ಳಲು ಸಜ್ಜಾಗಿರುವಂತೆ ಸೂಚಿಸಿದ್ದು ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆರಳಿಸಿದೆ.

ಮೇಲ್ಮನೆ ಮತ್ತು ರಾಜ್ಯಸಭೆ ಚುನಾವಣೆ ಬೆನ್ನಲ್ಲೇ ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗಳ ಆಪ್ತವಲಯದಿಂದ ಹೊರಬಿದ್ದು, ಕಾಮರಾಜ ಸೂತ್ರ, ಎರಡಂಕಿಗೂ ಹೆಚ್ಚು ಮಂತ್ರಿಗಳಿಗೆ ಕೊಕ್ ಎಂದೆಲ್ಲ ರೆಕ್ಕೆಪುಕ್ಕಗಳೊಡನೆ ಹರಿದಾಡಿದವು. ಈ ಸುದ್ದಿ ಹೊರಬಿದ್ದಾಗ ಸೋನಿಯಾ ಗಾಂಧಿ ಅವರು ಶಿಮ್ಲಾದಲ್ಲಿದ್ದರು. ಸಂಪುಟ ಪುನಾರಚನೆ ವಿಚಾರ ತಿಳಿದು ಹಲವರು ಹಿರಿಯ ಮಂತ್ರಿಗಳು ದಿಲ್ಲಿಗೆ ದೌಡಾಗಿ  ಸೋನಿಯಾ ಗಾಂಧಿಗೆ ಆಪ್ತರಾದ ಹೈಕಮಾಂಡ್ ಪ್ರತಿನಿಧಿಗಳಲ್ಲಿ ತಮ್ಮ ಪದವಿ ಉಳಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಈ ಯಾವ ವಿಚಾರವೂ ದಿಲ್ಲಿ ನಾಯಕರಿಗೆ ಗೊತ್ತಿರಲಿಲ್ಲ. ಪದವಿ ಕಳೆದುಕೊಳ್ಳುವ ಭೀತಿಯವರು ಈ ರೀತಿ ದುಂಬಾಲು ಬಿದ್ದಾಗಲಷ್ಟೇ ಸಂಪುಟ ಪುನಾರಚನೆ ವಿಚಾರ ಅವರ ಗಮನಕ್ಕೆ ಬಂದಿದೆ.  ಸೋನಿಯಾ ಗಾಂಧಿ ಅವರು ಊರಲ್ಲಿ ಇಲ್ಲದ ಸಂದರ್ಭದಲ್ಲಿ, ಅದೂ ಯಾರ ಗಮನಕ್ಕೂ ಬಾರದೆ ಇಷ್ಟೆಲ್ಲ ಬೆಳವಣಿಗೆಗಳು ನಡೆದಿರುವುದು ಅವರನ್ನು ನಖಶಿಖಾಂತ ಉರಿಸಿದೆ. ತಕ್ಷಣವೇ ಅವರು ಶಿಮ್ಲಾದಲ್ಲಿದ್ದ ಸೋನಿಯಾ ಗಾಂಧಿ ಅವರಿಗೆ ಈ ಬಗ್ಗೆ ದೂರಿದ್ದು, ಸೋನಿಯಾ ಗಾಂಧಿ ಅವರು ಕೂಡ ಸಿದ್ದರಾಮಯ್ಯ ವರ್ತನೆ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಈ ಮಧ್ಯೆ, ಸಂಪುಟ ಪುನಾರಚನೆ ಸಂಬಂಧ ಸಿದ್ದರಾಮಯ್ಯ ಅವರು ಬುಧವಾರ ಮಂತ್ರಿ ಪರಿಷತ್ ಸಭೆ ನಡೆಸಿ, ‘ಕೆಲವರನ್ನು ಸಂಪುಟದಿಂದ ಕೈಬಿಡುವುದು ಅನಿವಾರ್ಯವಾಗಿದೆ. ಈ ರೀತಿ ಸಂಪುಟದಿಂದ ಕೈಬಿಟ್ಟವರನ್ನು ಪಕ್ಷದ ಸಂಘಟನೆ ಕೆಲಸಕ್ಕೆ ನಿಯೋಜಿಸಲಾಗುವುದು. ಈ ಪ್ರಕ್ರಿಯೆಗೆ ಎಲ್ಲರ ಸಹಕಾರ ಬೇಕು. ಇದು ಹೈಕಮಾಂಡ್ ನಿರ್ಣಯ’ ಎಂದೆಲ್ಲ ಕೇಳಿದ್ದಾರೆ. ಆದರೆ ಈ ವಿಷಯ ಹೈಕಮಾಂಡ್ ಗೇ ಗೊತ್ತೇ ಇಲ್ಲ. ಎಲ್ಲರನ್ನು ಕತ್ತಲಲ್ಲಿಟ್ಟು ಏಕಪಕ್ಷೀಯ ನಿಲುವು ಪ್ರದರ್ಶಿಸಿದ್ದಾರೆ. ಇದೂ ಕೂಡ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡಿನ ಅನೇಕ ನಾಯಕರನ್ನು ಕೆಂಡಾಮಂಡಲ ರನ್ನಾಗಿಸಿದೆ ಎಂದು ದಿಲ್ಲಿ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ತಮ್ಮ ಅನುಮತಿ ಇಲ್ಲದೇ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದ್ದು, ವಿಧಾನ ಪರಿಷತ್ 7 ನೇ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಿದ್ದು, ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದಿಂದ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಂದನ್ನೂ ಗೆಲ್ಲದೇ ಹೋದದ್ದು ಕೂಡ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ.

ವರಿಷ್ಠರ ಅಸಮಾಧಾನದ ನಡುವೆಯೂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸಂಬಂಧ ಪಟ್ಟಿ ಹಿಡಿದುಕೊಂಡು ಗುರುವಾರ ಸಂಜೆ ದಿಲ್ಲಿಗೆ ತೆರಳಿದ್ದಾರೆ. ಬುಧವಾರವಷ್ಟೇ ಶಿಮ್ಲಾದಿಂದ ದಿಲ್ಲಿಗೆ ಆಗಮಿಸಿರುವ ಸೋನಿಯಾ ಗಾಂಧಿ ಅವರು ಆರೋಗ್ಯ ತಪಾಸಣೆ ಸಂಬಂಧ ಶುಕ್ರವಾರ ರಾತ್ರಿ ಅಮೆರಿಕಕ್ಕೆ ತೆರಳುವವರಿದ್ದಾರೆ. ಎರಡು ವಾರಗಳ ನಂತರವಷ್ಟೇ ಅವರು ಮರಳಲಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯನವರು ಸೋನಿಯಾ ಅವರನ್ನು ಭೇಟಿ ಮಾಡಿ ಪಟ್ಟಿ ಅಂತಿಮ ಮಾಡಿಕೊಳ್ಳಬೇಕಿದೆ. ಸಿದ್ದರಾಮಯ್ಯ ವರ್ತನೆ ಬಗ್ಗೆ ಮುನಿದಿರುವ ಸೋನಿಯಾ ಅವರು ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರು ಅಂದುಕೊಂಡಿರುವಂತಾಗಲಿ, ಬಿಂಬಿಸಿಕೊಂಡಿರುವಂತಾಗಲಿ ಡಜನ್ ಗಟ್ಟಲೇ ಬದಲಾವಣೆ ಸಾಧ್ಯತೆಗಳು ಕಡಿಮೆ. ಏಕೆಂದರೆ ಸಿದ್ದರಾಮಯ್ಯನವರು ಕೈಬಿಡಬೇಕು ಎಂದು ಕೊಂಡಿರುವ ಕೆಲವು ಸಚಿವರನ್ನು ಉಳಿಸಿಕೊಳ್ಳಲು ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ ಪಟ್ಟು ಹಿಡಿದು ಕೂತಿದ್ದಾರೆ. ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಆಮಿಷಕ್ಕೂ ಅವರು ಬಗ್ಗಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರು ಸಂಪುಟ ಪುನಾರಚನೆಗೆ ಒಂದೊಮ್ಮೆ ಒಪ್ಪಿದರೂ ಅಲ್ಪಪ್ರಮಾಣದ ಬದಲಾವಣೆಗಳಷ್ಟೇ ಆಗಬಹುದು, ಅದೂ ಈಗಲೇ ಆಗುತ್ತದೋ ಅಥವಾ ಸೋನಿಯಾ ಗಾಂಧಿ ಅವರು ಅಮೆರಿಕದಿಂದ ಮರಳಿದ ನಂತರ ಆಗುತ್ತದೋ ಎಂಬುದು ಖಚಿತವಿಲ್ಲ.

ಈ ಹಿಂದೆ ಸಿದ್ದರಾಮಯ್ಯ ಅವರು ಮಂತ್ರಿ ಮಂಡಳ ಪುನಾರಚನೆ ಸಂಬಂಧ ಮೂರು ಬಾರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದರೂ ಅವರು ಅವಕಾಶ ಮಾಡಿಕೊಟ್ಟಿರಲಿಲ್ಲ. ಬರ ಪರಿಹಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ, ದಿಲ್ಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಾಗ ಸಿದ್ದರಾಮಯ್ಯ ಸೋನಿಯಾ ಭೇಟಿಗೆ ಯತ್ನಿಸಿದ್ದರು. ಅಲ್ಲದೇ ಸಂಪುಟ ಪುನಾರಚನೆ ವಿಷಯ ಚರ್ಚಿಸಲೆಂದೇ ಒಮ್ಮೆ ಅಲ್ಲಿಗೇ ತೆರಳಿದ್ದರು. ಆದರೆ ಈ ಯಾವ ಸಂದರ್ಭದಲ್ಲೂ ಸೋನಿಯಾ ಅವರನ್ನು ಭೇಟಿ ಮಾಡದೆ ವಾಪಸ್ಸು ಕಳುಹಿಸಿದ್ದರು.

ಸಂಪುಟ ಪುನಾರಚನೆ ಯಾವಾಗ ಆಗುತ್ತದೋ ಗೊತ್ತಿಲ್ಲ. ಆದರೆ ಪುನಾರಚನೆ ವಿಚಾರ ಅನೇಕ ಸಚಿವರಿಗೆ ‘ಜಾಪಾಳ ಮಾತ್ರೆ’, ಅದೇ ಕಾಲಕ್ಕೆ ಆಕಾಂಕ್ಷಿಗಳಿಗೆ ‘ಕೈಗೆ ಸಿಗದ ಹಲ್ವಾ’ ಆಗಿ ಪರಿಣಮಿಸಿದೆ. ಸುದ್ದಿ ಹರಿದಾಡಿದ ರಭಸ ನೋಡಿದರೆ ಇಷ್ಟೊತ್ತಿಗಾಗಲೇ ಸಂಪುಟ ಪುನಾರಚನೆ ಆಗಿ, ಅಸಮರ್ಥರು ಗೇಟ್ ಪಾಸ್ ತಗೊಂಡು, ಈ ಸರಕಾರದ ವರ್ಚಸ್ಸು ಬದಲಿಸುವವರು ಪದವಿಯಲ್ಲಿ ವಿರಾಜಮಾನರಾಗಬೇಕಿತ್ತು. ಆದರೆ ‘ಎತ್ತು ಏರಿಗೆಳೆದರೆ ಕೋಣ ನೀರಿಗಿಳಿಯಿತು’ ಎಂಬಂತೆ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವೆ ರಾರಾಜಿಸುತ್ತಿರುವ ಸಮನ್ವಯದ ಕೊರತೆ ಸಂಪುಟ ಪುನಾರಚನೆಗೆ ಇನ್ನೂ ದಿಕ್ಕು ತೋರಿಲ್ಲ.

ಮೊದಲಿಗೆ ಸಿದ್ದರಾಮಯ್ಯ ಅವರು ಮಂಗಳವಾರವೇ ಹೈಕಮಾಂಡ್ ಬಳಿ ಪಟ್ಟಿ ಇತ್ಯರ್ಥ ಮಾಡಿಕೊಂಡು, ಪುನಾರಚನೆಗೆ ಮುಹೂರ್ತ ನಿಗದಿ ಮಾಡುತ್ತಾರೆ ಎಂಬ ಸುದ್ದಿ ಹರಿಯಬಿಡಲಾಗಿತ್ತು. ಸೋನಿಯಾಗಾಂಧಿ ಅವರು ದಿಲ್ಲಿಯಲ್ಲಿ ಇಲ್ಲದಿದ್ದರೂ ಮಂಗಳವಾರ ಸಿದ್ದರಾಮಯ್ಯನವರು ಅವರನ್ನು ಭೇಟಿ ಮಾಡುತ್ತಾರೆ ಎಂಬ ಸುದ್ದಿ ಅದೇಕೆ ಚಿಮ್ಮಿತೋ ಗೊತ್ತಿಲ್ಲ. ವಿಷಯ ಹೊರಬಿದ್ದಿದ್ದೇ ತಡ ಹಿರಿಯ ಸಚಿವರು ದಿಲ್ಲಿಯಾತ್ರೆ ಕೈಗೊಂಡು ಪದವಿ ಉಳಿಸಿಕೊಳ್ಳಲು ಸೋನಿಯಾ ಆಪ್ತರ ಬಳಿ ಅಲವತ್ತುಕೊಳ್ಳುತ್ತಿದ್ದರೆ, ಆಕಾಂಕ್ಷಿಗಳು ಸಿದ್ದರಾಮಯ್ಯನವರನ್ನು ಪ್ರದಕ್ಷಿಣೆ ಹಾಕುತ್ತಿದ್ದಾರೆ.

ಇದರ ಮಧ್ಯೆ ಹೊರಬಿದ್ದ ಸಿದ್ದರಾಮಯ್ಯನವರು ಕಾಮರಾಜ ಸೂತ್ರದ ಪ್ರಕಾರ ಎಲ್ಲ ಸಚಿವರ ರಾಜೀನಾಮೆ ಪಡೆದು, ಹೊಸದಾಗಿ ಸಂಪುಟ ರಚನೆ ಮಾಡುತ್ತಾರೆ ಎಂಬ ಸುದ್ದಿ ಗುಲ್ಲಿಗಷ್ಟೇ ಸೀಮಿತ. ಇದನ್ನು ಹಬ್ಬಿಸಿದ್ದರ ಹಿಂದಿನ ಉದ್ದೇಶ ಈಗಿರುವ ಸಚಿವರಲ್ಲಿ ತಳಮಳ ಸೃಷ್ಟಿ ಮಾಡುವುದಷ್ಟೇ. ಏಕೆಂದರೆ ಕಾಮರಾಜ ಸೂತ್ರ ಪ್ರಕಾರ ಸಿದ್ದರಾಮಯ್ಯ ಅವರೂ ಸೇರಿ ಎಲ್ಲರೂ ರಾಜೀನಾಮೆ ಕೊಡಬೇಕಾಗುತ್ತದೆ. ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವೆ ಆರಾಮ ವಲಯ ಪಲ್ಲಟ ಆಗಿರುವುದರಿಂದ ಸಿಎಂ ಅಂತಹ ರಿಸ್ಕಿಗೆ ಕೈ ಹಾಕುವುದಿಲ್ಲ ಎಂದು ಯಾರೂ ಊಹಿಸಬಹುದಾದ ವಿಚಾರ.

1 COMMENT

  1. ಕಾಂಗ್ರೆಸ್ ಒಳ ಹೂರಣ ಚೆನ್ನಾಗಿ ಕಟ್ಟಿಕೊಟ್ಟ ಮುಂಗಾರು ಹಬ್ಬದ ಊಟದಂತಿದೆ ವಿಶ್ಲೇಷಣೆ.

Leave a Reply