ನರೇಂದ್ರ ಮೋದಿಯವರು ಕೇಳಿಸಿಕೊಳ್ಳಬೇಕಾದ ಸ್ಮೃತಿ ಇರಾನಿ ಪಾಠ: ಮಹಿಳೆಯರನ್ನು ಡಿಯರ್ ಎಂದು ಸಂಬೋಧಿಸದಿರಿ!

ಡಿಜಿಟಲ್ ಕನ್ನಡ ವಿಶೇಷ:

ಎಲ್ಲ ಶುರುವಾಗಿದ್ದು ಬಿಹಾರದ ಶಿಕ್ಷಣ ಸಚಿವ ಅಶೋಕ್ ಚೌಧರಿ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರಿಗೆ ಡಿಯರ್ ಎಂದು ಸಂಬೋಧಿಸಿ ಪ್ರಶ್ನೆಯೊಂದನ್ನು ಎತ್ತಿದ್ದರಿಂದ. ‘ಡಿಯರ್ ಸ್ಮೃತಿ ಜೀ.., ನೀವು ಭಾಷಣ ಮತ್ತು ರಾಜಕೀಯಗಳ ನಡುವೆ ಸಮಯ ತೆಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಯೋಚಿಸಿ’ ಎಂದ ಅಶೋಕ್ ಚೌಧರಿ, 2015ರ ವೇಳೆಗೆಲ್ಲ ಶಿಕ್ಷಣ ನೀತಿ ಸಿದ್ಧವಿರುತ್ತದೆ ಅಂತ ಸಚಿವೆ ಈ ಹಿಂದೆ ಹೇಳಿದ್ದರ ಬಗ್ಗೆ ಮಾಧ್ಯಮ ವರದಿಯ ಕೊಂಡಿಯನ್ನೂ ಲಗತ್ತಿಸಿದ್ದರು.

dear2

ಟ್ವಿಟ್ಟರ್ ನಲ್ಲಿ ಯಾವತ್ತೂ ಸಮರೋತ್ಸಾಹಿಯೇ ಆಗಿರುವ ಸಚಿವೆ ಸ್ಮೃತಿ ಇರಾನಿ ಬುಸುಗುಟ್ಟಿದರು. ‘ನೀವು ಯಾವಾಗಿನಿಂದ ಮಹಿಳೆಯರನ್ನು ಡಿಯರ್ ಎಂದು ಕರೆಯಲು ಆರಂಭಿಸಿದಿರಿ’ ಎಂದು ಪ್ರಶ್ನಿಸಿದರು. ಅದಕ್ಕೆ ಅಶೋಕ್ ಚೌಧರಿ ಮರುಪ್ರತಿಕ್ರಿಯೆ ತರ್ಕಬದ್ಧವಾಗಿತ್ತು. ‘ಡಿಯರ್ ಎಂಬುದನ್ನು ಸರ್ಕಾರಿ ಸಂವಾದಗಳಲ್ಲಿ ಗೌರವಾರ್ಥವಾಗಿ ಬಳಸುತ್ತಾರೆ. ಇಲ್ಲಿ ಯಾವುದೇ ಅಗೌರವದ ಉದ್ದೇಶವಿಲ್ಲ. ಇಷ್ಟಕ್ಕೂ ನೀವು ಕೇಳಿದ ಪ್ರಶ್ನೆಗೆ ಉತ್ತರಿಸುವುದು ಬಿಟ್ಟು, ಬೇರೆ ಗದ್ದಲ ಏಕೆ’ ಅಂತ.

ಟ್ವಿಟ್ಟರ್ ಸಹ ಸ್ಮೃತಿಯವರ ಸಲ್ಲದ ಜಗಳಕ್ಕೆ ರೇಜಿಗೆ ಬಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಟ್ವಿಟ್ಟರ್ ನಲ್ಲಿ ಡಿಯರ್ ದೀಪಿಕಾ ಪಡುಕೋಣೆ, ಡಿಯರ್ ಪ್ರಿಯಾಂಕಾ ಚೋಪ್ರಾ ಎಂದೆಲ್ಲ ಸಂಬೋಧಿಸಿದ್ದನ್ನು ಹಲವು ಟ್ವೀಟಿಗರು ಗಣಿಗಾರಿಕೆ ಮಾಡಿ ತೆಗೆದು ಸಚಿವೆಯ ಎದುರಿಟ್ಟರು. ಸ್ಮೃತಿ ಇರಾನಿ ಅವರ ಕಚೇರಿ ಪತ್ರಗಳಲ್ಲೇ ಪ್ರಿಯ ಎಂಬ ಸಂಬೋಧನೆ ಇರುವುದನ್ನೂ ತೋರಿಸಲಾಯಿತು.

dear

dear1

dear3

ಇಲ್ಲೆಲ್ಲ ನಿರುತ್ತರರಾಗುತ್ತಲೇ ಸ್ಮೃತಿ ಇರಾನಿ ‘ಸಂತ್ರಸ್ತ ಸಿಂಡ್ರೋಮ್’ಗೆ ಒಳಗಾಗಿ ಫೇಸ್ಬುಕ್ ನಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ. ‘ಎಷ್ಟೆಲ್ಲ ನಿಂದನೆ- ಅವಹೇಳನ ಅನುಭವಿಸುವ ಹೆಂಗಸರು ಬಾಯಿಮುಚ್ಚಿಕೊಂಡು ಯಾಕಿರಬೇಕು’ ಎಂಬುದು ಅವರ ಫೇಸ್ಬುಕ್ ಬರಹದ ಒಟ್ಟಾರೆ ವಾದ. ಖಂಡಿತ ಬಾಯಿ ಮುಚ್ಚಿಕೊಂಡಿರಬಾರದು. ಹಾಗಂತ ನನ್ನ ಬದುಕಿನಲ್ಲಿ ಅವಮಾನಗಳನ್ನು ಅನುಭವಿಸಿದ್ದೇನೆ ಎಂಬ ಕಾರಣಕ್ಕೆ ಪ್ರಶ್ನಿಸಿದವರನ್ನೆಲ್ಲ ಕೀಚಕರನ್ನಾಗಿ ಕಾಣಬೇಕೆ? ಬಾಲ್ಯದಲ್ಲೊದಗಿದ ಕಷ್ಟಕ್ಕೆ ಬಿಹಾರದ ಶಿಕ್ಷಣ ಮಂತ್ರಿ ಕಾರಣರೇ?

ಇನ್ನು ಕೆಲಸ ವಿಷಯ ಬಿಟ್ಟು ಬೇರೆಯದನ್ನು ಚರ್ಚಿಸಿ ವಿವಾದ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಯಾಗಿ ಅವರು ತಮ್ಮ ಸಾಧನೆಯ ಉದ್ದದ ಪಟ್ಟಿ ಕೊಟ್ಟಿದ್ದಾರೆ, ಫೈನ್. ಆದರೆ ಇವ್ಯಾವುದೂ ಡಿಯರ್ ಎಂಬ ಸಂಬೋಧನೆ ವಿರುದ್ಧ ತಿರುಗಿ ಬಿದ್ದಿದ್ದಕ್ಕೆ ಸಮರ್ಥನೆ ಆಗುವುದಿಲ್ಲವಲ್ಲ..

ಅವರ ಫೇಸ್ ಬುಕ್ ಪೋಸ್ಟ್ ನ ಆಯ್ದ ಪ್ರಮುಖ ಅಂಶ ಹೀಗಿದೆ:

‘ಟ್ವಿಟರ್ ನಲ್ಲಿ ನನ್ನ ಜತೆ ಜಗಳ ನಡೆಸಿದ ರಾಜಕಾರಣಿಯೊಬ್ಬರು ಕ್ಷಮೆ ಕೇಳಿದ ಪ್ರಸಂಗ ಒಂದು ಕಡೆ. ಅದೇ ನಾಯಕರ ಕ್ಷೇತ್ರವಾದ ಬಿಹಾರದ ಭಾಗಲ್ಪುರದಿಂದ ಕಳೆದ ರಾತ್ರಿ ಮರಳುವಾಗ ಅವರ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ನಾನು ಉತ್ತರ ನೀಡಲೇಬೇಕಾಗಿದೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದಿದ್ದೇನೆ. ಈ ವಾತಾವರಣದಲ್ಲಿ ಶಾಲೆ, ಕಾಲೇಜುಗಳಿಗೆ ಹೋಗುವಾಗ, ಮಾರುಕಟ್ಟೆಗೆ ಹೋದಾಗ ಯಾವುದಾದರು ಹುಡುಗ ಅಥವಾ ಹುಡುಗರ ಗುಂಪು ತನ್ನ ಬಗ್ಗೆ ಮಾತನಾಡಿದರೆ ತಲೆ ತಗ್ಗಿಸಿ ಸುಮ್ಮನೆ ಹೋಗುವಂತೆ ಸಾಕಷ್ಟು ಹೆಣ್ಣು ಮಕ್ಕಳು ಕೇಳುವ ಬುದ್ಧಿವಾದವನ್ನು ಕೇಳಿದ್ದೇನೆ. ಅಲ್ಲಿ ನಮಗೆ ಎಷ್ಟೇ ಅಪಮಾನವಾದರೂ ನಾವು ಯಾವುದಕ್ಕೂ ಸ್ಪಂದಿಸದೇ ನಮ್ಮ ದಾರಿ ಹಿಡಿಯಬೇಕು ಎಂಬ ಸಲಹೆ. ಯಾಕೆ ಸ್ಪಂದಿಸಬಾರದು? ತಿರುಗಿ ಪ್ರಶ್ನಿಸಬಾರದೇಕೆ? ಎಂದು ಕೇಳಿದರೆ, ನಮಗೆ ಸಿಗುವ ಉತ್ತರ ‘ಅದರಿಂದ ಅವರಿಗೇನು ತೊಂದರೆ ಆಗಲ್ಲ. ಆಗುವುದೆಲ್ಲಾ ನಿನಗೆ’ ಎಂದು.

ನಂತರ ಬೆಳೆದು ಕಿರುತೆರೆ ನಟಿಯಾದೆ. ನೆಲೆ ನಿಲ್ಲಲು ಪರದಾಟ ನಡೆಸುತ್ತಿದ್ದಾಗ ಸಿಕ್ಕ ಸಲಹೆ, ಪಾರ್ಟಿಗಳಿಗೆ ಹೋಗಬೇಕು, ಹೆಚ್ಚು ಜನರೊಂದಿಗೆ ಬೆರೆಯಬೇಕು. ಆಗ ನಿನಗೆ ಕೆಲಸ ಸಿಗುತ್ತದೆ. ಅಲ್ಲಿ ನಿನ್ನನ್ನು ಹಿಯಾಳಿಸಿದರೂ ಸೌಮ್ಯವಾಗಿ ಅದನ್ನು ನಿಭಾಯಿಸಬೇಕು ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.

ನಂತರ ರಾಜಕೀಯ ಪ್ರವೇಶ. ಯಶಸ್ಸಿನ ಸಂದರ್ಭದಲ್ಲಿದ್ದಾಗ ರಾಜಕೀಯ ಹೋರಾಟ ಎದುರಾಗುತ್ತದೆ. ಅದನ್ನು ಸ್ವೀಕರಿಸಲೇಬೇಕು (ಚಾಂದನಿ ಚೌಕ್ ಮತ್ತು ಅಮೇಟಿಯ ಸವಾಲು ಸುಲಭದ್ದಾಗಿರಲಿಲ್ಲ ಸ್ನೇಹಿತರೆ). ತಳಮಟ್ಟದಿಂದ ಕೆಲಸ ಮಾಡಬೇಕಿತ್ತು. ರಾಜ್ಯ ಯುವ ಸಂಘದ ಉಪಾಧ್ಯಕ್ಷೆಯಾಗಿ, ರಾಜ್ಯ ಕಾರ್ಯದರ್ಶಿಯಾಗಿ, 5 ಬಾರಿ ಕಾರ್ಯಕಾರಿ ಸದಸ್ಯೆಯಾಗಿ, 2 ಬಾರಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ. ನಂತರ ರಾಜ್ಯಸಭೆಗೆ ಆಯ್ಕೆಯಾದ ಯುವ ಸದಸ್ಯೆಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ನಂತರ ಮಾನವ ಸಂಪನ್ಮೂಲ ಸಚಿವೆಯ ಜವಾಬ್ದಾರಿ.

ಈ ಸಂದರ್ಭದಲ್ಲೂ ಪರಿಸ್ಥಿತಿ ತಕ್ಷಣವೇ ಬದಲಾಯಿತು. ನಿನ್ನನ್ನು ಎಷ್ಟೇ ಹಿಯಾಳಿಸಿದರೆ, ನಿರ್ಲಕ್ಷಿಸು. ರಾಜಕೀಯ ರಂಗದಲ್ಲಿ ನಿನ್ನ ಸೇವೆ ಮುಂದುವರಿಸು ಎಂಬ ಅದೇ ಸಲಹೆ.

ಪ್ರತಿಯೊಂದು ಹಂತದಲ್ಲೂ ಹೆಣ್ಣುಮಕ್ಕಳು ಬೇರೆಯವರ ಮಾತಿಗೆ ತಲೆ ತಗ್ಗಿಸಿಯೇ ನಡೆಯಬೇಕು. ಇದು ಕೇವಲ ನನ್ನ ಅನುಭವವಲ್ಲ. ಇತರೆ ಕೆಲಸ ಮಾಡುವ ಮಹಿಳೆಯರ ಪರಿಸ್ಥಿತಿಯೂ ಇದೆ. ಹಾಗಾಗಿ ನಾನು ನೇರವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದಾಗಲೆಲ್ಲಾ ಕೇವಲ ನಿನ್ನ ಬಗ್ಗೆಯೇ ಯಾಕೆ ಮಾತನಾಡುತ್ತೀಯಾ ಎಂಬ ಪ್ರಶ್ನೆ ಬರುತ್ತದೆ. ಈ ನಿಟ್ಟಿನಲ್ಲಿ ನಾನು ಮಾಡಿರುವ ಕೇಲಸದ ಪಟ್ಟಿಯೂ ಹೀಗಿದೆ. ಒಂದು ವರ್ಷದಲ್ಲಿ 4.17 ಲಕ್ಷ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕೇಂದ್ರೀಯ ವಿದ್ಯಾಲಯಗಳಲ್ಲಿ ಮಕ್ಕಳ ಹಾಜರಾತಿ ಬಗ್ಗೆ ಪೋಷಕರಿಗೆ ಮಾಹಿತಿ. ವಿದ್ಯಾರ್ಥಿ ವೇತನ ಮೂಲಕ ಹೆಣ್ಣು ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹದಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಇಷ್ಟು ದಿನ ತಲೆತಗ್ಗಿಸಿ ನಡೆಯುತ್ತಿದ್ದ ಹೆಣ್ಣು ಮಕ್ಕಳು ತಲೆ ಎತ್ತಿ ನಡೆಯುವಂತೆ ಮಾಡಲು, ಕೆಲಸದ ಸ್ಥಳಗಳಲ್ಲಿ ಸಹವರ್ತಿಗಳ ತಪ್ಪನ್ನು ಪ್ರಶ್ನಿಸಲು ಈ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದು ಹೆಣ್ಣು ಮಕ್ಕಳು ಅವರಿಗೆ ಅಪಮಾನವಾದರೆ ಬಾಯಿ ಮುಚ್ಚಿಕೊಳ್ಳುವುದು ಬೇಕಿಲ್ಲ.’

Leave a Reply