ಕ್ಲಾಸಿಕ್‍ಗಳು ಕನ್ನಡ ಸಿನಿಮಾ ಆಗಬೇಕು, ಅದಕ್ಕೆ ‘ಸುಬ್ಬಣ್ಣ’ ಪ್ರೇರಣೆ ಆಗಬೇಕು

sridharamurthyಎನ್.ಎಸ್.ಶ್ರೀಧರ ಮೂರ್ತಿ

‘ಮಾಸ್ತಿಯವರನ್ನು ಕನ್ನಡದ ಆಸ್ತಿ’ ಎಂದು ಕರೆಯೋದು ಒಂದು ರೀತಿಯಲ್ಲಿ ನಾಣ್ಣುಡಿಯೇ ಆಗಿ ಬಿಟ್ಟಿದೆ. ಅವರ ಕೃತಿಗಳು ಎಷ್ಟು ದೊಡ್ಡದೋ ಬದುಕಿದ ರೀತಿ ಕೂಡ ಅಷ್ಟೇ ದೊಡ್ಡದು. ಕನ್ನಡ ಸಣ್ಣಕಥೆಗಳ ಪಿತಾಮಹ ಎಂದೂ ಕೂಡ ಅವರನ್ನು ಕರೆದಿದ್ದೇವೆ. ಮಾಸ್ತಿಯವರ 125ನೇ ಜನ್ಮದಿನ ಆಚರಣೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರ ಎಷ್ಟು ಕಥೆಗಳು ಸಿನಿಮಾ ಆಗಿವೆ ಎಂದು ಹುಡುಕಿದಾಗ ಆಶ್ಚರ್ಯಕ್ಕಿಂತಲೂ ಆಘಾತವೇ ಆಯಿತು. 82 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಾಸ್ತಿಯವರ ಒಂದೇ ಒಂದು ಕಥೆ ಕೂಡ ಚಲನಚಿತ್ರವಾಗಿಲ್ಲ. ಮಾಗಿದ ಅನುಭವವನ್ನು ತುಂಬಿಕೊಂಡ ಅವರ ಕಥೆಗಳೆಲ್ಲವೂ ಹಾಗೆ ನೋಡಿದರೆ ಸಿನಿಮಾ ಆಗಲು ಅರ್ಹವಾಗಿದ್ದವು.  ಸಿನಿಮಾವಾಗಿ ಬಂದಿರುವುದು ಅವರ ನಾಟಕ ‘ಕಾಕನ ಕೋಟೆ’ ಮಾತ್ರ. ಏಕೆ ಹೀಗಾಯಿತು ಎನ್ನುವುದಕ್ಕಿಂತ ಹೀಗಾಗ ಬಾರದಿತ್ತು ಎನ್ನಿಸುವುದು ಮಾತ್ರ ಖಚಿತ.  ಪಿ.ಶೇಷಾದ್ರಿಯವರು ಮೂಲತ: ಕಿರುತೆರೆ ಧಾರಾವಾಹಿ ಆಗಿಸಿ ಈಗ ಸಿನಿಮಾ ರೂಪ ನೀಡಿರುವ ಮಾಸ್ತಿಯವರ ನೀಳ್ಗತೆ ಆಧರಿತ ‘ಸುಬ್ಬಣ್ಣ’ ನನ್ನ ಕುತೂಹಲವನ್ನು ಸೆಳೆದಿದ್ದು ಹೀಗೆ.

‘ಸಿನಿಮಾ ಕುರಿತು ಹಲವು ಸಾಧ್ಯತೆಗಳ ಚರ್ಚೆ ನಡೆಯುತ್ತಿರುವ ಕಾಲದಲ್ಲಿ ಕಿರುತೆರೆಗೆ ಅದರಲ್ಲಿಯೂ ಹದಿಮೂರು ವರ್ಷಗಳ ಹಿಂದೆ ರೂಪುಗೊಂಡು ನಂತರ ಹೃಸ್ವಗೊಂಡ ಕಾರಣದಿಂದ ಉಂಟಾಗಿರುವ ತಾಂತ್ರಿಕ ತೊಡಕುಗಳನ್ನು ಬಿಟ್ಟರೆ ‘ಸುಬ್ಬಣ್ಣ’ವನ್ನು ಸಿನಿಮಾ ಎಂದು ಒಪ್ಪಿಕೊಳ್ಳುವುದರಲ್ಲಿ ನನಗೆ ಯಾವ ಕೊರತೆಯೂ ಕಾಣುತ್ತಿಲ್ಲ. ಮಾಸ್ತಿಯವರ ‘ಸುಬ್ಬಣ್ಣ’ ರಚನೆಗೊಂಡಿದ್ದು 1928ರಲ್ಲಿ, ಅದು ಹೇಳುತ್ತಿರುವುದೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ಕಥೆಯನ್ನು. ಅವರ ಆಸ್ಥಾನದಲ್ಲಿ ಇದ್ದ ಪುರಾಣದ ನಾರಾಯಣ ಶಾಸ್ತ್ರಿಗಳ ಮಗ ಸುಬ್ಬಣ್ಣ ಹಿರಿಯರಂತೆ ಸಂಸ್ಕೃತ ಕಲಿಯದೆ ಸಂಗೀತ ಕಲಿಯಲು ಹೋಗಿ ತನ್ನ ಜೀವನದಲ್ಲಿ ಅನುಭವಿಸಿದ ನೋವುಗಳ ಚಿತ್ರಣ ಇಲ್ಲಿದೆ. ಇದಕ್ಕೆ ಪ್ರೇರಣೆಯಾಗಿದ್ದೂ ಕೂಡ ಅವರ ಸ್ನೇಹಿತರಾದ ನವರತ್ನ ರಾಮರಾಯರು ಹೇಳಿದ್ದ ನೈಜ ಘಟನೆ. ಇಲ್ಲಿರುವುದು ಸಂಗೀತಗಾರನ ಹುಡುಕಾಟವಲ್ಲ. ಕಷ್ಟದ ಮೇಲೆ ಕಷ್ಟವನ್ನು ಕಂಡವನ ಬದುಕಿನಲ್ಲಿ ಸಂಗೀತದಿಂದಲೇ ದೊರಕಿದ ಮುಕ್ತಿಯ ಕಥನ. ಮಾಸ್ತಿಯವರ ಕ್ಲಾಸಿಕ್ ಎಂದೇ ವಿಮರ್ಶಕರಿಂದ ಪ್ರಶಂಸೆಗೆ ಒಳಗಾದ ಕೃತಿ ಇದುವರೆಗೂ ಇಪ್ಪತ್ತು ಮುದ್ರಣಗಳನ್ನು ಕಂಡ ಜನಮನ್ನಣೆಯನ್ನೂ ಪಡೆದಿದೆ. ಇದನ್ನು ವಸ್ತುವಾಗಿ ಆರಿಸಿಕೊಂಡಿರುವ ಶೇಷಾದ್ರಿಯವರು ಮಾಸ್ತಿಯವರ ಕಥನ ಕ್ರಮಕ್ಕೆ ಹೊಂದುವಂತೆ ಹಿರಿತನದ ಕಥೆಯನ್ನಾಗಿಸಿದ್ದಾರೆ. ಅವನ ಬಾಳು ದೈನ್ಯದ ತಪಸ್ಸಾಯಿತು ಎನ್ನುವ ಮಾಸ್ತಿಯವರ ಮಾತು ಚಿತ್ರದ ತಾತ್ವಿಕತೆಯಾಗಿದೆ.

ಕಥೆಯ ವಿವರಗಳಲ್ಲಿ ಶೇಷಾದ್ರಿಯವರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಮೂಲಕೃತಿಯಲ್ಲಿರುವ  ಐದು ಸಾವಿನ ಪ್ರಸಂಗಗಳು ಬಂದರೆ ಇಲ್ಲಿ ಅದು ಎರಡಕ್ಕೆ ಸೀಮಿತವಾಗಿದೆ. ಕಾದಂಬರಿಯಲ್ಲಿ ಕಲ್ಕತ್ತದಲ್ಲಿ ಸುಬ್ಬಣ್ಣನ ಬದುಕು ಅರಳಿದರೆ ಇಲ್ಲಿ ಅದು ಕಾಶಿಯಲ್ಲಿ ಕೇಂದ್ರೀಕೃತವಾಗಿದೆ. ವಾಯಲಿನ್ ವಾದಕನಾದ ಸುಬ್ಬಣ್ಣ ಚಿತ್ರದಲ್ಲಿ ಹಾಡುಗಾರನೂ ಆಗಿದ್ದಾನೆ.. ಆದರೆ ಕೃತಿಯ ಮೂಲದೃವ್ಯದಲ್ಲಿ ಶೇಷಾದ್ರಿ ಮಾಸ್ತಿಯವರಿಗೆ ನಿಷ್ಠರಾಗಿದ್ದಾರೆ. ಉದಾಹರಣೆಗೆ ಸುಬ್ಬಣ್ಣನ ಸಂಗೀತಕ್ಕೆ ಪ್ರೋತ್ಸಾಹ ನೀಡುವ ವೇಶ್ಯೆ ನೀಲಸಾನಿಯ ಜೊತೆಗಿನ ಅವನ ಸಂಬಂಧ ಎಂತಹದು ಎನ್ನುವುದನ್ನು ಮಾಸ್ತಿ ಊಹೆಗೆ ಬಿಟ್ಟಿದ್ದಾರೆ. ಚಿತ್ರದಲ್ಲಿಯೂ ಈ ಊಹಾತ್ಮಕತೆ ಸಮರ್ಥವಾಗಿ ಬಂದಿದೆ. ಮಗನಿಗೆ ಮನೆಯಲ್ಲಿ ತುಪ್ಪ ದೊರಕದು ಎನ್ನುವ ಹಂಗಿನ ಬಾಳು ಮನೆಯನ್ನು ಬಿಡಲು ಕಾರಣವಾಗುತ್ತದೆ. ಈ ಗಾಢತೆ ಚಿತ್ರದಲ್ಲಿಯೂ ಇದೆ. ಕಾದಂಬರಿಯಲ್ಲಿ ಸುಬ್ಬಣ್ಣ ಕಲ್ಕತ್ತೆಯಲ್ಲಿ ಮೂವತ್ತು ವರ್ಷ ಬಾಳುತ್ತಾನೆ. ಆ ದೀರ್ಘತೆ ಇಲ್ಲಿಲ್ಲ ಆದರೆ ಇರುವ ಕೆಲವೇ ದೃಶ್ಯಗಳಲ್ಲಿ  ಬದುಕಿನ ಏರಿಳಿತದ ಚಿತ್ರಣವಿದೆ. ಗಂಗೆಯ ಪ್ರವಾಹ ಇದಕ್ಕೆ ರೂಪಕವಾಗಿ ನಿಲ್ಲುತ್ತದ. ಮಗನ ಸಾವಿನಲ್ಲಿ ‘ಗಿಳಿಯು ಪಂಜರದೊಳಿಲ್ಲ’ ಕೀರ್ತನೆ ಬಳಸಿರುವ ಕ್ರಮ ಪರಿಣಾಮಕಾರಿಯಾಗಿದೆ. ಮಗನ ಸಾವಿನ ಸುದ್ದಿಯನ್ನೂ ತಿಳಿದ ನಂತರವೂ ಸಂಗೀತ ಕಚೇರಿ ಮುಂದುವರೆಸುವ ಸನ್ನಿವೇಶದಲ್ಲಿ ಆದರ್ಶಕ್ಕಿಂತ ದೃಡತೆ ಕಾಡುತ್ತದೆ.  ಚಿತ್ರದಲ್ಲಿ ಅನೇಕ ಕಡೆ ಇಂತಹ ಕುಸರಿ ಕೆಲಸವನ್ನು ನೋಡಬಹುದು.ಕಾದಂಬರಿಯಲ್ಲಿನ ಸಣ್ಣ ಮನಸ್ಸಿನ ವ್ಯಕ್ತಿಯಾಗಿ ಕಾಣಿಸುವ ಸುಬ್ಬಣ್ಣನ ತಾಯಿಯ ಪಾತ್ರಕ್ಕೆ  ಶೇಷಾದ್ರಿ ಚಿತ್ರದಲ್ಲಿ ಘನತೆಯನ್ನು ತಂದಿದ್ದಾರೆ. ಮಡದಿ ಲಲಿತೆಯ ಪಾತ್ರಕ್ಕೂ ಸ್ವಂತಿಕೆ ತಂದಿದ್ದಾರೆ. ಇದೆರಡೂ ಗುಣಾತ್ಮಕ ಬೆಳವಣಿಗೆಗಳೇ ಸರಿ. ತಾಂತ್ರಿಕ ಮಿತಿಗಳನ್ನು ಹೊರತು ಪಡಿಸಿದರೆ ಚಿತ್ರಕ್ಕೆ ತನ್ನದೇ ಆದ ಕ್ರಮದಲ್ಲಿ ಕ್ಲಾಸಿಕ್ ಆಗ ಬಹುದಾದ ಲಕ್ಷಣಗಳಿವೆ. ಕೃತಿಯಲ್ಲಿ ಮಾಸ್ತಿಯವರು ಆಡಿಸಿರುವ ‘ಮನುಷ್ಯ ಆಯಸ್ಸನ್ನು ಎಲ್ಲಿ ಬೇಕಾದರೂ ಕಳೆಯ ಬಹುದು.ಅದಕ್ಕೆ ಅವನು ಕಷ್ಟ ಪಡಬೇಕಾದುದಿಲ್ಲ. ಕಷ್ಟವಿರುವುದೆಲ್ಲಾ ಸರಿಯಾದ ರೀತಿಯನ್ನು ಹುಡುಕುವುದರಲ್ಲಿ’ ಎನ್ನುವ ಜೀವನ ಸೂತ್ರವನ್ನು ಗ್ರಹಿಸಿ ಶೇಷಾದ್ರಿ ದೃಶ್ಯರೂಪವನ್ನು ಕಟ್ಟಿದ್ದಾರೆ.

ಶಾಸ್ತ್ರಿಯ ಭಾಷೆಯ ಸ್ಥಾನಮಾನದಲ್ಲಿ ದೊರೆತ ಸೌಲಭ್ಯಗಳಲ್ಲಿ ಕ್ಲಾಸಿಕ್‍ಗಳನ್ನು ಚಲನಚಿತ್ರವಾಗಿಸುವುದು ಎನ್ನುವ ಅಂಶ ಕೂಡ ಸೇರಿದೆ. ತಮಿಳಿನಾಡಿನಲ್ಲಿ ಇದನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಆದರೆ ಕನ್ನಡದ ಮಟ್ಟಿಗೆ ಇಂತಹ ಯೋಚನೆ ಕೂಡ ಆರಂಭವಾಗಿಲ್ಲ. ಸಿನಿಮಾ ಎನ್ನುವುದು ಭವಿಷ್ಯದ  ಮಾಧ್ಯಮ ಎನ್ನುವುದನ್ನು ಇಲ್ಲಿ ನೆನಪಿಟ್ಟುಕೊಳ್ಳ ಬೇಕು. ಯೋಜನೆಯ ಉದ್ದೇಶ ಕೂಡ ಅದೇ. ಪಂಪ, ಕುಮಾರ ವ್ಯಾಸರನ್ನು ಸಿನಿಮಾ ಮೂಲಕ ಹಿಡಿದಿಡುವುದರಿಂದಲೇ ಮುಂದಿನ ಪೀಳಿಗೆಗೆ ತಲುಪಿಸುವುದು ಪರಿಣಾಮಕಾರಿಯಾದ ಸಾಧ್ಯತೆ. ಕ್ಲಾಸಿಕ್‍ಗಳ ಸಾರ ಸಂಗ್ರಹ ಸಿನಿಮಾವಾದರೂ ಸಾಕು ಅದರಿಂದ ಆಗುವ ಲಾಭ ಗಮನಾರ್ಹವಾದದ್ದು.  ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಬರುವ ಕಂದ ಪದ್ಯವನ್ನು ಹುಣಸೂರು ಕೃಷ್ಣಮೂರ್ತಿಗಳು ‘ಕುಲದಲ್ಲಿ ಕೀಳ್ಯಾವುದೋ’ಎನ್ನುವ ಚಿತ್ರಗೀತೆಯಾಗಿಸಿ ಅಮರವಾಗಿಸಿದ ಉದಾಹರಣೆ ನಮ್ಮ ಮುಂದಿದೆ. ‘ದೇವರಾಜ ಅರಸರ’ ಬಗ್ಗೆ ಸಿನಿಮಾ ನಿರ್ಮಿಸಲು ಹೊರಟ ಸರ್ಕಾರ ನಿಜಕ್ಕೂ ಸಿನಿಮಾ ಮಾಡ ಬೇಕಿದ್ದು ಪಂಪ, ಕುಮಾರ ವ್ಯಾಸ, ಕುವೆಂಪು, ಬೇಂದ್ರೆ, ಮಾಸ್ತಿಯವಂತಹ ಬದುಕು ಮತ್ತು ಕೃತಿಗಳ ಕುರಿತಾಗಿ. ನಮಗೆ ದೊರೆತಿರುವ ಶಾಸ್ತ್ರಿಯ ಭಾಷೆಯ ಸ್ಥಾನಮಾನ ಹಣಕಾಸು ಸೌಲಭ್ಯವನ್ನೂ ಒದಗಿಸಿದೆ. ಈಗ ಬೇಕಾಗಿರುವುದು ಇಚ್ಚಾಶಕ್ತಿ. ಪಿ. ಶೇಷಾದ್ರಿಯವರ ಸಿನಿಮಾ ಅಂತಹ ಪ್ರಯತ್ನಗಳಿಗೆ ಪ್ರೇರಣೆಯಾಗ ಬಲ್ಲದು.

1 COMMENT

  1. Gud review on Subbanna.. never knew this movie was released. wish they spend a little money on publicity as well to spread awareness.

Leave a Reply