ಉಗ್ರವಾದ… ಅಲ್ಲಲ್ಲ ‘ಇಸ್ಲಾಂ ಉಗ್ರವಾದ’ವನ್ನು ಚುನಾವಣೆಯ ಮುಖ್ಯ ವಿಷಯವಾಗಿಸುತ್ತಿರುವ ಡೊನಾಲ್ಡ್ ಟ್ರಂಪ್

 

ಡಿಜಿಟಲ್ ಕನ್ನಡ ವಿಶೇಷ:

ಉತ್ತರಪ್ರದೇಶದಲ್ಲಿ 2017 ರಲ್ಲಿ ನಡೆಯಲಿರುವ ಚುನಾವಣೆ ವೇಳೆ ಮುಸ್ಲಿಂ ಪರ-ವಿರೋಧ ಚರ್ಚೆಯಾದರೆ ಅದರಲ್ಲೇನು ವಿಶೇಷವಿಲ್ಲ. ರಾಜಕೀಯ ಅಸ್ತ್ರವಾಗಿ ಈ ಚರ್ಚೆ ಭಾರತದಲ್ಲಿ ಸಾಮಾನ್ಯ. ಆದರೆ, ಈ ಬಾರಿ ಇಂಥ ಚರ್ಚೆಯ ಬಿಸಿ ಹತ್ತಿಸಿಕೊಂಡಿರೋದು ಅಮೆರಿಕ! ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಸ್ಲಿಂ ಸಮಸ್ಯೆಯದ್ದೇ ಅನುರಣನ.

ಇಂಥ ಚರ್ಚೆ ಹುಟ್ಟುಹಾಕಿದ ಖ್ಯಾತಿಯೋ ಅಪಖ್ಯಾತಿಯೋ ಸಲ್ಲಬೇಕಿರುವುದು ಮಾತ್ರ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ. ಒರ್ಲ್ಯಾಂಡೊ ಶೂಟೌಟ್ ಪ್ರಕರಣದ ನಂತರ ಈ ಚರ್ಚೆಯ ಕಾವು ಮತ್ತಷ್ಟು ತೀವ್ರತೆ ಪಡೆದಿದೆ. ಈಗಿನ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರದೇ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಈ ಪ್ರಕರಣವನ್ನು ಅಮೆರಿಕದ ಗನ್ ನಿಯಂತ್ರಣ ಬಿಗಿಯಾಗಬೇಕಿರುವುದರ ಎಚ್ಚರಿಕೆಯಾಗಿ ನೋಡುತ್ತಿದ್ದಾರೆ. ಆದರೆ ಟ್ರಂಪ್ ಪ್ರಕಾರ ಮಾತ್ರ ಇದು ವಲಸೆ ಹಾಗೂ ಮುಸ್ಲಿಂ ಸಮಸ್ಯೆಯೇ.

ಒರ್ಲ್ಯಾಂಡೊ ನೈಟ್ ಕ್ಲಬ್ ಶೂಟೌಟ್ ಪ್ರಕರಣದಲ್ಲಿ ಸುಮಾರು 59 ಮಂದಿಯ ಪ್ರಾಣ ಬಲಿ ಪಡೆದಿದೆ. ಈ ಪ್ರಕರಣದ ಪ್ರಮುಖ ರೂವಾರಿ 29 ವರ್ಷದ ಒಮರ್ ಮಾಟೀನ್. ಈತ ಅಮೆರಿಕದಲ್ಲೇ ಹುಟ್ಟಿ ಅಲ್ಲಿನ ಪ್ರಜೆಯಾಗಿದ್ದು, ಆತನ ಪೋಷಕರು ಅಫ್ಘಾನ್ ಮೂಲದವರು. ಇದೇ ಅಂಶವನ್ನು ಇಟ್ಟುಕೊಂಡು ಟ್ರಂಪ್ ತನ್ನ ಮುಸ್ಲಿಂ ವಿರೋಧಿ ವಾದವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಇಸ್ಲಾಂ ಮೂಲದ ಉಗ್ರವಾದವನ್ನು ಗುರುತಿಸುವುದಕ್ಕೆ ಡೆಮಾಕ್ರಟಿಕ್ ಪಕ್ಷದವರು ಮುಜುಗರ ಪಟ್ಟುಕೊಳ್ಳುವುದು ಏಕೆ ಎಂಬುದು ಟ್ರಂಪ್ ಪ್ರಶ್ನೆ. ಟ್ರಂಪ್ ಆಕ್ರಮಣ ಶೈಲಿಗೆ ಉತ್ತರಿಸಲೇಬೇಕಾದ ಒತ್ತಡಕ್ಕೆ ಡೆಮಾಕ್ರಟಿಕ್ ಪಕ್ಷದವರು ಸಿಲುಕಿದ್ದಾರೆ. ಹಾಗೆಂದೇ ಅಧ್ಯಕ್ಷ ಒಬಾಮಾ ತಮ್ಮ ಮಾತಿನಲ್ಲಿ, ‘ಇಸ್ಲಾಂ ಉಗ್ರವಾದ ಎಂಬ ಪದಬಳಕೆಯಿಂದ ಪರಿಹಾರಕ್ಕಿಂತ ಸಮಸ್ಯೆಗಳೇ ಹೆಚ್ಚಾಗುತ್ತವೆ’ ಎಂದರು.

ಇದಕ್ಕೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರಸಭೆಯಲ್ಲಿ ಹೇಳಿದ್ದು- ‘ಸಮಸ್ಯೆಯ ಲಕ್ಷಣ, ಅದರ ಹೆಸರೇ ಗೊತ್ತಿಲ್ಲದಿದ್ದರೆ ನೀವು ಹೇಗ್ರೀ ಅದನ್ನು ಬಗೆಹರಿಸ್ತೀರಿ? ಇಸ್ಲಾಂ ಮೂಲಭೂತವಾದ ಹುಟ್ಟಿಸಿರುವ ಭಯೋತ್ಪಾದನೆ ಎಂದು ಅದನ್ನು ನಿಖರವಾಗಿ ಹೆಸರಿಸದಿದ್ದರೆ ಸಮಸ್ಯೆ ಬಗೆಹರಿಸೋಕೆ ಸಾಧ್ಯವೇ ಇಲ್ಲ. ನಮ್ಮದೆಲ್ಲ ಒಳ್ಳೆಯವರೆನಿಸಿಕೊಳ್ಳುವ ಪ್ರಯತ್ನ. ರಾಜಕೀಯವಾಗಿ ಸೂಕ್ತವಾದುದ್ದನ್ನೇ ಮಾಡಬೇಕು ಎಂಬ ನಿಲುವಿನ ಅಧ್ಯಕ್ಷರನ್ನು ನಾವು ಹೊಂದಿದ್ದೇವಾದ್ದರಿಂದ ಅವರು ‘ಇಸ್ಲಾಂ ಉಗ್ರವಾದ’ ಎಂಬ ಶಬ್ದ ಬಳಸಲೊಲ್ಲರು. ಹೀಗೆ ಒಳ್ಳೆಯವರಾಗಲಿಕ್ಕೆ ಹೊರಟು ಅವರು ಮಾಡಿದ ಸುದೀರ್ಘ ಭಾಷಣವನ್ನು ಕೇಳಿದ್ದೇ ಆದರೆ ಕೊನೆಯಲ್ಲಿ ಈ ಮನುಷ್ಯ ಹೇಳಲು ಹೊರಟಿದ್ದೇನು ಅಂತ ನಿಮಗೆ ಸರ್ವಥಾ ಅರ್ಥವಾಗೋಲ್ಲ.’

‘ಹಿಲರಿ ಕ್ಲಿಂಟನ್ ಸಹ ಇಂಥ ಶಬ್ದ ಉಪಯೋಗಿಸುವುದೇ ಇಲ್ಲ ಅಂದುಕೊಂಡಿದ್ದರು. ನಾನು ಚರ್ಚೆಯಲ್ಲಿ ಪ್ರಖರವಾಗಿ ಆಕೆಯ ಮೇಲೆ ದಾಳಿ ಮಾಡಿದೆ. ಸರಿ, ಆ ಶಬ್ದ ಉಪಯೋಗಿಸೋಣ ಅಂದರು. ಆದರೆ ಉಪಯೋಗಿಸಲಿಲ್ಲ. ಕೊನೆಗೂ ತಾನು ಇಸ್ಲಾಂ ಭಯೋತ್ಪಾದನೆ ಎನ್ನಲಾರೆ ಆದರೆ ಇಸ್ಲಾಂ ಮೂಲಭೂತವಾದ ಎನ್ನಬಹುದು ಅಂತ ಹಿಲರಿ ಹೇಳಿದರು. ಸರಿ, ನನಗೇನೂ ತಕರಾರಿಲ್ಲ. ಆದರೆ ಆ ಶಬ್ದವನ್ನೂ ಆಕೆ ಉಪಯೋಗಿಸುತ್ತಿಲ್ಲ.’

‘ನನಗೂ ನಿಮ್ಮೆಲ್ಲರಷ್ಟೇ ದೊಡ್ಡ ಹೃದಯವಿದೆ. ಆದರೆ ನಮ್ಮ ಜನರನ್ನು ಮೊದಲು ರಕ್ಷಿಸಬೇಕು. ಅದಕ್ಕೆ ಸುರಕ್ಷಿತ ವಲಯಗಳು ನಿರ್ಮಾಣವಾಗಬೇಕು. ಆದರೆ ಈ ಸೋಸುವಿಕೆ ಆಗಬೇಕಿರುವುದು ನಮ್ಮ ನೆಲದಲ್ಲಲ್ಲ. ಅಲ್ಲಿ, ಸಿರಿಯಾದಲ್ಲಿ.. ತಾತ್ಕಾಲಿಕವಾಗಿಯಾದರೂ ಅಮೆರಿಕದೊಳಗೆ ಮುಸ್ಲಿಮರ ಪ್ರವೇಶಕ್ಕೆ ತಡೆ ಬೇಕಿದೆ. ಏನಾಗುತ್ತಿದೆ ಎಂದು ನಾವೆಲ್ಲ ಅರ್ಥ ಮಾಡಿಕೊಳ್ಳುವುದಕ್ಕಾದರೂ ಇಂಥದೊಂದು ಅವಕಾಶ ಬೇಕು. ಬೇರೆಯವರು ಬರಬಾರದು ಎಂದಲ್ಲ, ನಮ್ಮನ್ನು ಪ್ರೀತಿಸಿ ನಮ್ಮೊಂದಿಗೆ ಬೆರೆಯುವವರು ಬರಲಿ. ಕ್ಲಬ್ ಗಳಲ್ಲಿರುವ ಮುಗ್ಧರ ಮೇಲೆ ಗನ್ ಹಿಡಿದು ಏರಿ ಹೋಗುವವರಲ್ಲ..’

ಹೀಗನ್ನುವ ಡೊನಾಲ್ಡ್ ಟ್ರಂಪ್ ಗೆ ಮುಸ್ಲಿಂ ವಲಸಿಗರ ವಿರುದ್ಧ ಮೊದಲ ಸಿಟ್ಟು. ನಂತರದ್ದು ಅಮೆರಿಕಕ್ಕೆ ಹೋಗಿ ಸ್ಥಳೀಯರಿಗೆ ಪೈಪೋಟಿ ಕೊಡುವ ಎಲ್ಲರ ಮೇಲೆ. ಇಲ್ಲಿ ಭಾರತೀಯರ ವಿರುದ್ಧವೂ ವಾಗ್ಬಾಣ ಆಗಾಗ ತೂರಿಕೊಂಡಿರುತ್ತದೆ.

‘ಭಾರತ, ಚೀನಾ, ಮೆಕ್ಸಿಕೊ ಎಲ್ಲ ದೇಶಗಳ ಜತೆಗೂ ನಮ್ಮ ಆಯಾತ- ನಿರ್ಯಾತ ಕಂದಕವಿದೆ. ನಮ್ಮೊಂದಿಗೆ ವ್ಯವಹರಿಸುವ ಎಲ್ಲ ದೇಶಗಳೂ ಅಮೆರಿಕದಿಂದ ಆದಷ್ಟು ಕಿತ್ತುಕೊಳ್ಳೋಣ ಅಂತಲೇ ಬರುತ್ತವೆ. ನಾನು ಅಧ್ಯಕ್ಷನಾದರೆ ಇವೆಲ್ಲ ಬದಲಾಗುತ್ತದೆ’ ಎನ್ನುತ್ತಿರುವ ಟ್ರಂಪ್ ನನ್ನು ಅತಿರೇಕಿ, ಅಪಾಯಕಾರಿ ಅಂತೆಲ್ಲ ಜಗತ್ತಿನ ಜನ ಮತ್ತು ಮಾಧ್ಯಮ ಎಷ್ಟೇ ಬೈದುಕೊಂಡರೂ ಅಮೆರಿಕನ್ನರ ಒಂದು ವರ್ಗಕ್ಕೆ ಟ್ರಂಪ್ ಆಪ್ತ ಹಾಗೂ ಜನಪ್ರಿಯ.

ಆದಾಯ ಕುಸಿತ, ಆತಂಕವಾದಗಳ ನಡುವೆ ಸಿಲುಕಿರುವ ಮಧ್ಯಮವರ್ಗಕ್ಕೆ ಡೊನಾಲ್ಡ್ ಟ್ರಂಪ್ ಮಾತುಗಳು ಏಕೆ ರುಚಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಹಳೆ ಲೇಖನ ಓದಿ.

Leave a Reply