ಡಿಜಿಟಲ್ ಕನ್ನಡ ಟೀಮ್:
ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲವು ಬೆಳವಣಿಗೆಗಳಾಗಿವೆ. ಆ ಪೈಕಿ ನಾವು ಗಮನಿಸಬೇಕಿರುವ ಎರಡು ಪ್ರಮುಖ ಅಂಶಗಳು ಹೀಗಿವೆ:
- ದೇಶದ ಆಯಾತ ಮತ್ತು ನಿರ್ಯಾತ ಖಾತೆಗಳ ಕೊರತೆ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 34 ಬಿಲಿಯಯನ್ ಡಾಲರ್ ನಷ್ಟಿದ್ದ ವ್ಯತ್ಯಾಸ, ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 24.8 ಬಿಲಿಯನ್ ಡಾಲರ್ ಗೆ ಇಳಿದಿದೆ. 2015-16 ಸಾಲಿನಲ್ಲಿ ವಿದೇಶಿ ನೇರ ಬಂಡವಾಳ ಶೇ.15.3 ರಷ್ಟು ಹೆಚ್ಚಿದೆ. ಕಳೆದ ವರ್ಷ ನವೆಂಬರ್ ನಲ್ಲಿ ವಿದೇಶಿ ಬಂಡವಾಳ ಹೂಡಿಕೆ ನಿಯಮ ಸಡಿಲಗೊಳಿಸಿದ ನಂತರ ಇದರ ಪ್ರಮಾಣ ಮತ್ತಷ್ಟು ಹೆಚ್ಚಿದೆ. ಅನಿವಾಸಿ ಭಾರತೀಯರ ಹಣ ರವಾನೆ ಹಾಗೂ ಸೇವಾ ರಫ್ತಿನ ಪ್ರಮಾಣದಲ್ಲಿನ ಭಾರಿ ಕುಸಿತದ ನಡುವೆಯೂ ಇಷ್ಟು ಪ್ರಮಾಣದಲ್ಲಿ ವ್ಯತ್ಯಾಸ ತಗ್ಗಿರುವುದು ಉತ್ತಮ ಬೆಳವಣಿಗೆ. ಒಂದು ವೇಳೆ ಸೇವಾ ರಫ್ತು ಹಾಗೂ ಅನಿವಾಸಿ ಭಾರತೀಯರ ಹಣ ರವಾನೆ ಪ್ರಮಾಣ ಕುಸಿಯದಿದ್ದರೆ, ಆಯಾತ ಮತ್ತು ನಿರ್ಯಾತ ಖಾತೆಗಳ ಕೊರತೆ ಪ್ರಮಾಣದಲ್ಲಿ ಮತ್ತಷ್ಟು ಸುಧಾರಣೆ ಕಾಣುತಿತ್ತು ಎಂದಿದ್ದಾರೆ ತಜ್ಞರು.
- ದೇಶದಲ್ಲಿ ಸಕ್ಕರೆ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಸಕ್ಕರೆ ರಫ್ತಿನ ಮೇಲೆ ಶೇ.20 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದೆ. ಬರದ ಹಿನ್ನೆಲೆಯಲ್ಲಿ ಈ ವರ್ಷ ಸಕ್ಕರೆ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ದೇಶದಲ್ಲಿ ಸಕ್ಕರೆ ಬೆಲೆ ಏರಿದೆ. ಈ ಬೆಲೆ ಏರಿಕೆಯನ್ನು ನಿಯಂತ್ರಿಸುವ ಹಾಗೂ ಸ್ಥಳೀಯ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ರಫ್ತಾಗುವ ಸಕ್ಕರೆಗೆ ಹೆಚ್ಚಿನ ತೆರಿಗೆ ವಿಧಿಸಲು ನಿರ್ಧರಿಸಿದೆ. ಈಗಾಗಲೇ ಬ್ರೆಜಿಲ್ ನಲ್ಲಿ ಸಕ್ಕರೆ ಉತ್ಪಾದನೆ ವಿಳಂಬವಾದ್ದರಿಂದ ಅಂತಾರಾಷ್ಟ್ರೀಯ ಸಕ್ಕರೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿರುವುದು ಗಮನಾರ್ಹ.