ಸಂಪುಟ ಪುನಾರಚನೆ ಕ್ಲೈಮ್ಯಾಕ್ಸ್ ನಾಳೆಗೆ, ರಾಜ್ಯದ ಆಯುಷ್ ಬಗ್ಗೆ ಕೇಂದ್ರಕ್ಕಿದೆಯಂತೆ ಮೆಚ್ಚುಗೆ, ನಮಿಬಿಯಾದ ಭಾರತ ಪ್ರೀತಿ, ಕೈರಾನಾ ಕೋಲಾಹಲ, ಪಾಸ್ವಾನರು ಮೋದಿ ಬಗ್ಗೆ ಹೇಳಿದ್ದೇನು?

ಬೆಂಗಳೂರಿನ ಇಸ್ಕಾನ್ ನಲ್ಲಿ ಇಂದಿನಿಂದ ಜೂನ್ 20ರವರೆಗೆ ‘ಮಹಾಕಾವ್ಯಗಳ ಸಂದೇಶ’ ಎಂಬ ನಾಲ್ಕು ದಿನಗಳ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ. ಉಪನ್ಯಾಸ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪುಸ್ತಕ/ಡಿವಿಡಿ ಪ್ರದರ್ಶನಗಳು ಕಾರ್ಯಕ್ರಮದ ಭಾಗವಾಗಿವೆ.

ಡಿಜಿಟಲ್ ಕನ್ನಡ ಟೀಮ್:

ಸಂಪುಟ ಪುನಾರಚನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವುದಕ್ಕೇನೋ ಸಫಲರಾದರು. ಆದರೆ ಅಭಿಪ್ರಾಯವೇನೂ ಹೊರಹೊಮ್ಮಲಿಲ್ಲ. ಶನಿವಾರ ಬೆಳಗ್ಗೆ ಮತ್ತೆ ಸೋನಿಯಾ ನಿವಾಸದಲ್ಲಿ ಸಭೆ ಸೇರಿ ಅಂತಿಮ ತೀರ್ಮಾನಕ್ಕೆ ಬರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ 10 ಜನಪಥದ ಸೋನಿಯಾ ನಿವಾಸ ಹೊಕ್ಕರು. ಅರ್ಧ ತಾಸಿಗೂ ಹೆಚ್ಚಿನ ಭೇಟಿ ನಂತರ ಹೊರಬಂದು, ಇಂದು ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ. ನಾಳೆ ಬೆಳಗ್ಗೆ 10 ಗಂಟೆಗೆ ಸಭೆ ಸೇರಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬ ಮಾಹಿತಿ ಹೊರಹಾಕಿದರು.

ಹೀಗಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿವ ಸ್ಥಾನದ ಆಕಾಂಕ್ಷಿಗಳು, ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಹಾಗೂ ಈ ಬಾರಿಯಾದರೂ ಸಂಪುಟ ಬದಲಾವಣೆಯಾಗಿ ಹೊಸಮುಖಗಳನ್ನು ಕಾಣಬಹುದಾ ಎಂಬ ಆಸಕ್ತಿ ಹೊಂದಿರುವ ಕರ್ನಾಟಕದ ಪ್ರಜೆಗಳೆಲ್ಲ ಶನಿವಾರದ ಕ್ಲೈಮ್ಯಾಕ್ಸ್ ಗಾಗಿ ಕಾಯಬೇಕಿದೆ.

ರಾಜ್ಯದಲ್ಲಿ 2 ಸಾವಿರ ನಕಲಿ ಕ್ಲೀನಿಕ್ ಮುಚ್ಚಿಸಿದ್ದೇವೆ: ಖಾದರ್

ರಾಜ್ಯದಲ್ಲಿ ಅನಧಿಕೃತವಾಗಿ ಕ್ಲೀನಿಕ್ ಗಳನ್ನು ನಡೆಸುತ್ತಿದ್ದ ವೈದ್ಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿವೆ. ಅಲ್ಲದೆ ಸುಮಾರು 2 ಸಾವಿರ ನಕಲಿ ಕ್ಲಿನಿಕ್ ಗಳನ್ನು ಮುಚ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಆಯುಷ್ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖಾದರ್ ಅವರು ಹೇಳಿದಿಷ್ಟು: ‘ದೇಶದಲ್ಲೇ ಮೊದಲ ಬಾರಿಗೆ ನಕಲಿ ವೈದ್ಯರ ಹಾವಳಿ ತಡೆಯಲು ಬಯೋಮೆಟ್ರಿಕ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿರುವುದಾಗಿ ನಕಲಿ ಪ್ರಮಾಣ ಪತ್ರ ತರುತ್ತಿದ್ದರು. ನಮ್ಮ ರಾಜ್ಯದ ವೈದ್ಯರಿಗೂ ಬೇರೆ ರಾಜ್ಯಗಳಲ್ಲಿ ಪ್ರಮಾಣ ಪತ್ರ ಹಸಲಿಯೋ ನಕಲಿಯೋ ಎಂಬ ಗೊಂದಲ ಏರ್ಪಡುತ್ತಿತ್ತು. ಈ ಹೊಸ ವ್ಯವಸ್ಥೆಯಿಂದ ಸಮಸ್ಯೆ ಬಗೆಹರಿದಿದೆ. ರಾಜ್ಯ ಮತ್ತು ಆಯುಷ್ ಮಂಡಳಿಯ ಉತ್ತಮ ಕೆಲಸ ಗುರುತಿಸಿರುವ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಆಯುರ್ವೇದ ಎಕ್ಸ್ ಪೋ ಅನ್ನು ಕರ್ನಾಟಕದಲ್ಲಿ ನಡೆಸಲು ನಿರ್ಧರಿಸಿದೆ.’

ಉತ್ತರ ಪ್ರದೇಶದಲ್ಲಿ ನಿರ್ಭಯ ಯಾತ್ರೆಗೆ ತಡೆ

ಉತ್ತರ ಪ್ರದೇಶದ ಕೈರಾನಾ ಗ್ರಾಮದಲ್ಲಿ ಹಿಂದೂ ಕುಟುಂಬಗಳನ್ನು ಬಲವಂತವಾಗಿ ಹೊರದಬ್ಬಿರುವುದರ ವಿರುದ್ಧ ಬಿಜೆಪಿ ಶಾಸಕ ಸಂಗೀತ್ ಸೋಮ್ ಆರಂಭಿಸಿದ್ದ ನಿರ್ಭಯ ಯಾತ್ರೆಗೆ ಬ್ರೇಕ್ ಹಾಕಲಾಗಿದೆ. ಪರಿಸ್ಥಿತಿ ಕೈಮೀರಬಹುದು ಎಂಬ ಮುಂದಾಲೋಚನೆಯಿಂದ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ ಮಾಡಿ ಈ ಯಾತ್ರೆಯನ್ನು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಸಂಗೀತ್ ಸೋಮ್ ಹೇಳಿರುವುದಿಷ್ಟು:

‘ಉತ್ತರ ಪ್ರದೇಶವನ್ನು ಕಾಶ್ಮಿರವನ್ನಾಗಲು ಬಿಡುವುದಿಲ್ಲ. ಕೈರಾನಾದಿಂದ ವಲಸೆ ಹೋಗುತ್ತಿರುವವರಿಗೆ ರಾಜ್ಯದಲ್ಲಿ ರಕ್ಷಣೆ ಇದೆ. ವಲಸೆ ಹೋಗುವುದು ಬೇಡ ಎಂಬ ಸಂದೇಶ ರವಾನೆ ಮಾಡಲು ಈ ಯಾತ್ರೆ ನಡೆಸಲಾಗುತ್ತಿದೆ. ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ವಲಸೆ ಹೋಗಿರುವ ಕುಟುಂಬಗಳನ್ನು ಮತ್ತೆ ವಾಪಸ್ ಕರೆ ತರಬೇಕು. ಈ ಪ್ರಕ್ರಿಯೆಯಲ್ಲಿ ಕಾನೂನು ವಿರುದ್ಧವಾಗಿ ಹೋಗುವುದಿಲ್ಲ. ಕಾನೂನಿಗೆ ಬದ್ಧರಾಗಿ ಹೋರಾಟ ನಡೆಸುತ್ತೇನೆ.’

ಈ ಬಗ್ಗೆ ಸಮಾಜವಾದಿ ಪಕ್ಷದ ಶಾಸಕ ಶಿವಪಾಲ್ ಸಿಂಗ್ ಯಾದವ್ ಪ್ರತಿಕ್ರಿಯೆ ನೀಡಿರುವುದು ಹೀಗೆ:

‘2002 ಗುಜರಾತ್ ಗಲಭೆ ವೇಳೆ ಸಾಕಷ್ಟು ಜನರು ವಲಸೆ ಹೋಗಿದ್ದಾರೆ. ಮೊದಲು ಅವರನ್ನು ವಾಪಸ್ ಕರೆತರುವ ಬಗ್ಗೆ ಸಂಗೀತ್ ಸೋಮ್ ಮತ್ತು ಪ್ರಧಾನಿ ಮೋದಿ ಇಬ್ಬರೂ ಚಿಂತಿಸಬೇಕು. ಇನ್ನು ಕೈರಾನದಿಂದ ಯಾವುದೇ ಹಿಂದು ಕುಟುಂಬ ವಲಸೆ ಹೋಗಿಲ್ಲ. ಕೆಲವೇ ಮಂದಿ ಕೆಲಸದ ಹುಡುಕಾಟಕ್ಕೆ ಬೇರೆ ಸ್ಥಳಕ್ಕೆ ತೆರಳಿದ್ದಾರೆ.’

ಭಾರತಕ್ಕೆ ಯುರೇನಿಯಂ ನೀಡಲು ಮಾರ್ಗ ಕಂಡುಕೊಳ್ತೀವಿ ಅಂತೂ ನಮಿಬಿಯಾ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವುದು ಗೊತ್ತಿರುವ ವಿಚಾರ. ಆದರೆ, ಪ್ರಧಾನಿ ಮೋದಿ ಪ್ರವಾಸದಷ್ಟು ರಾಷ್ಟ್ರಪತಿ ಅವರ ಪ್ರವಾಸ ಸದ್ದು ಮಾಡದಿದ್ದರೂ, ಇಲ್ಲಿ ಕೆಲವು ಪ್ರಮುಖ ಬೆಳವಣಿಗೆಗಳಾಗಿವೆ.

ಮೊದಲನೆಯದಾಗಿ ಭಾರತಕ್ಕೆ ಯುರೇನಿಯಂ ಸಂಪನ್ಮೂಲವನ್ನು ನೀಡಲು ಇರುವ ಕಾನೂನು ತೊಡಕುಗಳನ್ನು ಶೀಘ್ರವೇ ಸರಿಪಡಿಸಿಕೊಂಡು ಸುಗಮ ಮಾರ್ಗ ಕಂಡುಕೊಳ್ಳುವುದಾಗಿ ನಮಿಬಿಯಾ ಭರವಸೆ ನೀಡಿದೆ. ‘ನಮ್ಮಲ್ಲಿ ಯುರೇನಿಯಂ ಸಂಪನ್ಮೂಲಗಳಿವೆ. ಆದರೆ, ಅದನ್ನು ಬಳಸಲು ಸರಿಯಾದ ರೀತಿಯಲ್ಲಿ ಬಳಸಲು ನಮ್ಮಲ್ಲಿ ಅಣುಶಸ್ತ್ರಾಸ್ತ್ರಗಳಿಲ್ಲ’ ಎಂದಿದೆ.

ಮತ್ತೊಂದು ಪ್ರಮುಖ ವಿಷಯ ಅಂದರೆ, ‘1.2 ಬಿಲಿಯನ್ ಜನಸಂಖ್ಯೆ ಇರುವ ಭಾರತ ದೇಶಕ್ಕೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಸದಸ್ಯತ್ವ ಸ್ಥಾನ ಸಿಗದಿರುವುದೇಕೆ? ಇದೆಂಥಾ ಪ್ರಜಾಪ್ರಭುತ್ವ ವ್ಯವಸ್ಥೆಯಾಗುತ್ತದೆ?’ ಎಂದು ನಮಿಬಿಯಾ ಅಧ್ಯಕ್ಷ ಭಾರತದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ನೀರಿನ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರಿಗೆ ನೋಟೀಸ್ ನೀಡಲಾಗಿದೆ. ದೆಹಲಿ ರಾಜ್ಯಪಾಲರಾದ ನಜೀಬ್ ಜುಂಗ್ ಅವರು ಶೀಲಾ ದಿಕ್ಷಿತ್ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ವಿಭಾಗಕ್ಕೆ ಅನುಮತಿ ನೀಡಿದ್ದಾರೆ. ಪಂಜಾಬ್ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಈ ಬೆಳವಣಿಗೆ ಬಂದಿದ್ದು, ಶೀಲಾ ದಿಕ್ಷಿತ್ ವಿರುದ್ಧ ರಾಜಕೀಯ ಒತ್ತಡ ಹೇರುವ ನಿರ್ಧಾರ ಎಂದು ಬಣ್ಣಿಸಲಾಗುತ್ತಿದೆ.
  • ಕಳೆದ ತಿಂಗಳು ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದ ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿ ಪಟ್ಟಿಯ ಅಗ್ರಸ್ಥಾನದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ಬೆಂಗಳೂರಿನ ರಕ್ಷಿತಾ 596 ಅಂಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಈ ಮಧ್ಯೆ ಮೈಸೂರಿನ ರಾಮಕೃಷ್ಣಾಶ್ರಮದ ವಿದ್ಯಾರ್ಥಿ ರವೀಶ್ ಬನ್ನಿಹಟ್ಟಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಂಸ್ಕೃತ, ಗಣಿತ, ಭೌತಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದು ಒಟ್ಟು 597 ಅಂಕ ಪಡೆದಿದ್ದಾರೆ. ಇದರೊಂದಿಗೆ ರವೀಶ್ ಅಗ್ರಸ್ಥಾನ ಪಡೆದಿದ್ದಾರೆ.
  • ಗುಜರಾತ್ ನ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ 2002, ಫೆ.28 ರಂದು ನಡೆದ ಗಲಭೆಯ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಗೋಧ್ರಾ ಹತ್ಯಾಕಾಂಡದ ಬೆನ್ನಲ್ಲಿ ನಡೆದ ಈ ಗಲಭೆ, ಕಾಂಗ್ರೆಸ್ ನ ಇಶಾನ್ ಜಫ್ರಿ ಸೇರಿದಂತೆ 69 ಮಂದಿ ಪ್ರಾಣ ಬಲಿ ಪಡೆದಿತ್ತು. ಉಳಿದ 12 ಅಪರಾಧಿಗಳಿಗೆ ಕಡಿಮೆ ಪ್ರಮಾಣದ ತಪ್ಪಿನ ಆಧಾರದ ಮೇಲೆ 7 ವರ್ಷ ಜೈಲುವಾಸದ ಶಿಕ್ಷೆ ನೀಡಿದೆ.

ದಲಿತರ ಬಗ್ಗೆ ಮೋದಿ ಕಾಳಜಿ ವಿಪಿ ಸಿಂಗ್ ರನ್ನು ನೆನಪಿಸುತ್ತೆ: ಪಾಸ್ವಾನ್

ಕಳೆದ ಎರಡು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರು ದಲಿತರು, ಹಿಂದುಳಿದ ವರ್ಗಗಳ ಪ್ರಗತಿ ಬಗ್ಗೆ ಉತ್ತಮ ಕಾಳಜಿ ವಹಿಸಿದ್ದಾರೆ. ಇದರಿಂದ ದಲಿತರಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಬಗೆಗಿನ ಕಲ್ಪನೆಯಲ್ಲಿ ಅಗಾಧ ಬದಲಾವಣೆಯಾಗಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಈ ಹಿಂದುಳಿದ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ ಪ್ರಧಾನಿ ಅವರು ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಪಸಂಖ್ಯಾತರ ಏಳಿಗೆಗೆ ಅವರ ಪ್ರಯತ್ನಗಳು ಮಾಜಿ ಪ್ರಧಾನಿ ದಿವಂಗತ ವಿಪಿ ಸಿಂಗ್ ಅವರನ್ನು ನೆನಪಿಸುತ್ತದೆ ಎಂದರು.

Leave a Reply