ಡಿಜಿಟಲ್ ಕನ್ನಡ ಟೀಮ್:
ತನ್ನ ಬದುಕಿನ ಯಾನದಲ್ಲಿ ಓಡುತ್ತಿರುವ ಈ ತಲೆಮಾರು ತನ್ನ ಅಪ್ಪನ ಪ್ರಯಾಣದ ಸುಖ-ದುಃಖಗಳನ್ನು ಗಮನಿಸುವುದೇ ಇಲ್ಲ. ಗಮನಿಸಿದ ಕ್ಷಣಕ್ಕೆ ಅಲ್ಲೊಂದು ಅಚ್ಚರಿಯೇ ಬಿಚ್ಚಿಕೊಳ್ಳುತ್ತದೆ…
ಇದೇನು? ಬಹಳ ಲೇಟಾಗಿ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ವಿಮರ್ಶೆ ಬರೆಯೋಕೆ ಹೊರೆಟಿರಾ ಅಂತ ನೀವು ಕೇಳ್ತೀರೇನೋ? ಇಲ್ಲ… ಅಪ್ಪ- ಮಗನ ನಡುವಿನ ಅಂತರ್ಗಾಮಿ ಒಲವನ್ನೇ ಇಟ್ಟುಕೊಂಡು ಗೂಗಲ್ ಕಂಪನಿ 6 ನಿಮಿಷಗಳ ಅನನ್ಯ ಜಾಹೀರಾತೊಂದನ್ನು ನಿರ್ಮಿಸಿ ಯೂಟ್ಯೂಬಿನಲ್ಲಿ ತೇಲಿಬಿಟ್ಟಿದೆ. ಇದು ನಿಮ್ಮ ಕಣ್ಣು ತೇವವಾಗಿಸೋದರಲ್ಲಿ ಸಂಶಯವಿಲ್ಲ.
ತಂದೆ- ಮಗನ ಕತೆ ಹೇಳುತ್ತಲೇ ‘ಗೂಗಲ್’ ಜತೆಗಿದ್ದರೆ ಎಂಥ ಅಮೂಲ್ಯವನ್ನಾದರೂ ಹುಡುಕಿ ನಿಮ್ಮದಾಗಿಸಿಕೊಳ್ಳಬಹುದು ಅಂತ ಪರೋಕ್ಷವಾಗಿ ತನ್ನ ಬಗ್ಗೆ ಹೇಳಿಕೊಂಡಿದೆ ಕಂಪನಿ. ಅದೇನೇ ಇರಲಿ, ವಿಡಿಯೋ ನೋಡೋದಕ್ಕಿಂತ ಮುಂಚೆ ಸಂಕ್ಷಿಪ್ತ ಕತೆ ಹೇಳಿಬಿಡೋಣ.
ಚಿಕ್ಕ ನಗರವೊಂದರಿಂದ ಮಗನಿಗೆ ಮುಂಬೈ ಕೆಲಸ ಸಿಕ್ಕಿದೆ. ಜತೆಗೆ ಅಪ್ಪ- ಅಮ್ಮನನ್ನು ಕರೆದುಕೊಂಡು ಹೋಗಬೇಕಾತ. ಆದರೆ ಅಪ್ಪ ಮುಂಬೈಗೆ ಬರಲೊಲ್ಲ. ಆತನ ನಿರಾಕರಣೆ ಏತಕ್ಕಾಗಿ ಅಂತ ಮಗನಿಗೆ ಗೊತ್ತಿಲ್ಲ. ಆಗ ಅಮ್ಮ ಗುಟ್ಟಿನ ಕತೆ ಬಿಚ್ಚಿಡುತ್ತಾಳೆ.
‘ಪ್ರಾಯದ ದಿನಗಳಲ್ಲಿ ನಿನ್ನಪ್ಪ ಹೀರೋ ಆಗಬೇಕು ಅಂತ ಮುಂಬೈಗೆ ಹೊರಟಿದ್ದರು ಕಣೋ. ಬೆಂಗಳೂರಿನ ಹತ್ತಿರದ ಚಿತ್ರವೊಂದರ ಶೂಟಿಂಗ್ ಗೆ ಆಫರೂ ಬಂದಿತ್ತು. ಆದರೆ ಹಿರಿಯರ ಆಕ್ಷೇಪದಿಂದ ಕನಸು ಈಡೇರಲಿಲ್ಲ. ಮುಂಬೈಗೆ ಹೋದರೆ ಹೀರೋ ಆಗಿಯೇ ಅಂತ ಶಪಥ ಮಾಡಿಬಿಟ್ಟಿದ್ದರು…’ ಅಂತ ಅಮ್ಮ ಹೇಳುತ್ತಿದ್ದರೆ, ಸಿನಿಮಾ ಹಾಲ್ ನಲ್ಲಿ ಕೆಲಸಕ್ಕಿದ್ದು ನಿವೃತ್ತನಾಗುತ್ತಿರುವ ಅಪ್ಪ ಹೀರೋ ಆಗೋಕೆ ನೋಡಿದ್ದನಾ ಅಂತ ಮಗನಿಗೆ ಆಶ್ಚರ್ಯ.
ಆತ ತನ್ನ ಮೊಬೈಲ್ ಫೋನಿನ ಗೂಗಲ್ ಗೆ ಕೇಳ್ತಾನೆ. ನಲ್ವತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಶೂಟ್ ಆಗಿದ್ದ ಹಿಂದಿ ಸಿನಿಮಾ ಯಾವುದು ಅಂತ. ಶೋಲೆ ಅಂತ ಉತ್ತರ ತೆರೆದಿರಿಸುವ ಗೂಗಲ್, ರಾಮನಗರದ ನಕ್ಷೆಯನ್ನೂ ತೋರಿಸುತ್ತದೆ. ಸರಿ, ಈ ಮಗ ಅಪ್ಪನನ್ನು ಕರೆದುಕೊಂಡು ಸುಮ್ಮನೇ ರಜೆಯ ತಿರುಗಾಟ ಅಂತ ರಾಮನಗರದ ಬಂಡೆಗಳ ನಡುವೆ ತಂದು ನಿಲ್ಲಿಸಿಬಿಡುತ್ತಾನೆ. ತಂದೆಯನ್ನು ನೆನಪಿನ ಅಲೆಗಳಿಗೆ ನೂಕುತ್ತಾನೆ. ‘ಕಿತ್ನೆ ಆದ್ಮಿ ಥೆ’ ಎಂಬ ಜನಪ್ರಿಯ ಡೈಲಾಗನ್ನು ತಂದೆಯಿಂದ ಹೇಳಿಸಿ ತಾನೂ ಕೂಗುತ್ತ ಭಾವದ ಕಡಲಲ್ಲಿ ಈಜುತ್ತಾನೆ. ಹಾಗೆಯೇ ಬಾಲಿವುಡ್ ಸಿನಿಮಾಗಳ ಶೂಟಿಂಗ್ ಜಾಗಗಳನ್ನೆಲ್ಲ ಗೂಗಲಿಸುತ್ತ ಒಂದು ಮಧುರ ಪ್ರಯಾಣ ಮುಂದುವರಿಸುತ್ತಾರೆ.
ಕೊನೆಯಲ್ಲಿ ಅಪ್ಪ ನಿರ್ವಹಿಸುತ್ತಿದ್ದ ಸಿನಿಮಾ ಹಾಲಿನಲ್ಲಿ, ರಾಮನಗರದ ಬೆಟ್ಟದಲ್ಲಿ ಮೊಬೈಲ್ ಫೋನಿನಲ್ಲೇ ಚಿತ್ರಿಸಿಕೊಂಡು ಬಂದಿದ್ದ ‘ಕಿತ್ನೇ ಆದ್ಮಿ ಥೆ’ ಡೈಲಾಗ್ ದೃಶ್ಯ ತೋರಿಸಿ, ಹೀರೋ ಆಗ್ಬಿಟ್ಯಲ್ಲ ಅಪ್ಪ ಅಂತ ಪುಳಕಗೊಳಿಸುತ್ತಾನೆ.
ಹೀರೋ ಅಪ್ಪ ಮಗನೊಂದಿಗೆ ಮುಂಬೈಗೆ ಹೊರಟು ನಿಲ್ಲುತ್ತಾನೆ… ಈ ವಿಡಿಯೋದಲ್ಲಿ ಗೂಗಲ್ ತನ್ನ ಹುಡುಕಾಟದ ಸಾಮರ್ಥ್ಯವನ್ನು ಮಾರ್ಕೆಟ್ ಮಾಡಿಕೊಳ್ಳುತ್ತಲೇ, ಮಸಾನ್ ಚಿತ್ರದಲ್ಲಿ ಮನಗೆದ್ದಿದ್ದ ವಿಕ್ಕಿ ಕೌಶಲ್ ನನ್ನು ಮಗನ ಪಾತ್ರದಲ್ಲಿರಿಸಿ ಅದ್ಭುತ ಭಾವದೃಶ್ಯವನ್ನೂ ಕೊಟ್ಟಿದೆ.