ಬಿಜೆಪಿ ಕಾರ್ಯಕಾರಣಿಯಲ್ಲಿ ಚರ್ಚೆಯಾಯ್ತು ಮಿಷನ್ 150, ಸಂಪುಟ ಸರ್ಜರಿಗೆ ಸೋನಿಯಾ ಸಮ್ಮತಿ ಸಿಕ್ತಿದ್ದಂತೆ ಇತ್ತ ಅಸಮಾಧಾನ, 2ನೇ ಬಾರಿ ಆರ್ಬಿಐ ಗವರ್ನರ್ ಆಗಲ್ಲ ಅಂದ್ರು ರಾಜನ್, ರಾಯಭಾರಿ ಇದ್ದ ಕಾರ್ಯಕ್ರಮದಲ್ಲೇ ಮಲ್ಯ ಪ್ರತ್ಯಕ್ಷ

BJP Leaders Meeting at a Private Hotel in Bengaluru on Saturday.

ಶನಿವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಹಿರಿಯ ನಾಯಕರು.

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯ್ತು ಮಿಷನ್ 150. ಶನಿವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ವಿಧಾನ ಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಿಸುವ ‘ಮಿಷನ್ 150’ ಕಾರ್ಯಕ್ರಮಕ್ಕೆ ಶ್ರಮಿಸುವಂತೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಇದೇ ವೇಳೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಟೀಕೆ ಮಾಡಿದರು. ಮೋರ್ಚಾ ನೇಮಕದ ಬಗ್ಗೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಇಂತಹ ಯಾವುದೇ ಭಿನ್ನಾಭಿಪ್ರಾಯ ಪಕ್ಷದಲ್ಲಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಮನ್ನಣೆ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು.

ಇದೇ ಕಾರ್ಯಕಾರಣಿಯಲ್ಲಿ ಮಾತನಾಡಿದ ಸದಾನಂದಗೌಡರದ್ದು ಮಾತ್ರ ಆತ್ಮಾವಲೋಕನದ ದಾಟಿ. ‘ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ಸಮಯದಲ್ಲಿ ಸಾಕಷ್ಟು ತಪ್ಪುಗಳಾಗಿತ್ತು. ಇವು ಮರುಕಳಿಸಬಾರದು. ತಪ್ಪುಗಳ ಬಗ್ಗೆ ಆತ್ಮಾವಲೋಕನ ಆಗಬೇಕು. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಸಂಕಷ್ಟ ಎದುರಾಗಲಿದೆ. ನಾವು ಉತ್ತಮ ಆಡಳಿತ ನೀಡಿದ್ದೆವು. ಆದರೆ ನಂತರದಲ್ಲಿ ನಡೆದ ವಿದ್ಯಮಾನಗಳು ಸರಿಯಿರಲಿಲ್ಲ. ಈ ಎಲ್ಲದರ ಬಗ್ಗೆ ಜನ ಬೇಸರಗೊಂಡಿದ್ದಾರೆ. ಇನ್ನು ಮುಂದೆ ಇಂತಹ ಬೆಳವಣಿಗೆ ಆಗಬಾರದು ಎನ್ನುವ ಎಚ್ಚರಿಕೆ ನಮಗಿರಬೇಕು’ ಎಂದರು ಡಿ.ವಿ. ಸದಾನಂದಗೌಡ.

ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್

ರಾಜ್ಯ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ನಡೆದ ಸರ್ಕಸ್ಸಿಗೆ ಕೊನೆಗೂ ತೆರೆ ಬೀಳುವಂತಾಗಿದೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರೊಂದಿಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ ನಂತರ ಸಿಎಂ ಈ ವಿಚಾರವನ್ನು ಮಾಧ್ಯಮದವರಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಭೆ ಬಳಿಕ ನೀಡಿದ ಮಾಹಿತಿ ಹೀಗಿದೆ: ‘ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ರಾಜ್ಯ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಹಾಗೂ ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿದ್ದೆ. ಮುಂದಿನ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆಯ ಕುರಿತ ಅಂತಿಮ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಲಾಗುವುದು. ಯಾರೆಲ್ಲ ಹೊರಗೆ, ಯಾರ ಸೇರ್ಪಡೆ ಎಂಬ ವಿಷಯಗಳನ್ನೆಲ್ಲ ಈಗ ಬಹಿರಂಗಪಡಿಸುವುದಿಲ್ಲ.’

ಸುಮಾರು 14 ಸಚಿವರನ್ನು ಸಂಪುಟದಿಂದ ಹೊರಗಿರಿಸಿ ಹೊಸಮುಖಗಳಿಗೆ ಅವಕಾಶ ನೀಡುವುದಕ್ಕೆ ಸೋನಿಯಾ ಸಮ್ಮತಿಸಿದ್ದಾರೆ ಎಂಬ ವದಂತಿ ಮಾಧ್ಯಮ- ರಾಜಕೀಯ ಪಡಸಾಲೆಗಳಲ್ಲಿ ಧ್ವನಿಸುತ್ತಿದೆ. ಆದರೆ ಮುಖ್ಯಮಂತ್ರಿ ಇಂಥ ಹೆಚ್ಚುವರಿ ಮಾಹಿತಿಗಳನ್ನು ನೀಡುವುದಕ್ಕೆ ನಿರಾಕರಿಸಿದರು.

ಸಂಪುಟದಿಂದ ಕೈಬಿಡುವವರ ಪಟ್ಟಿ ಅಧಿಕೃತವಾಗಿ ಪ್ರಕಟವಾಗದಿದ್ದರೂ ಇದರಲ್ಲಿ ವಸತಿ ಸಚಿವ ಅಂಬರೀಶ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿವೆ. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ ಪ್ರಸಾದ್, ನಾನು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಆದರೂ ನನ್ನನ್ನು ಸಂಪುಟದಿಂದ ಕೈಬಿಡುವುದು ಸರಿಯಲ್ಲ ಎಂದರು.

ಮತ್ತೊಂದೆಡೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ, ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂಬ ಅರ್ಥದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ, ಇದರಿಂದ ಅವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಈ ಮೊದಲೇ ಸ್ಪಷ್ಟ ಮಾಹಿತಿ ಸಿಕ್ಕಿತ್ತೇ ಎಂಬ ಅನುಮಾನ ಹುಟ್ಟುಕೊಂಡಿದೆ.

ಎರಡನೇ ಅವಧಿಗೆ ಆರ್ಬಿಐ ಗವರ್ನರ್ ಆಗಲ್ಲ ಅಂದ್ರೂ ರಘುರಾಮ್ ರಾಜನ್

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್, ಎರಡನೇ ಅವಧಿಯಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 4 ಕ್ಕೆ ರಾಜನ್ ಅವರ ಗವರ್ನರ್ ಹುದ್ದೆಯ ಅವಧಿ ಮುಕ್ತಾಯಗೊಳ್ಳಲಿದೆ. ಈ ಬಗ್ಗೆ ರಾಜನ್ ಹೇಳಿದಿಷ್ಟು:

‘ಮೂಲತಃ ಶಿಕ್ಷಕನಾಗಿದ್ದು, ಅದರಲ್ಲೇ ಮುಂದುವರಿಯಲು ಇಚ್ಛಿಸುತ್ತೇನೆ. ಗವರ್ನರ್ ಹುದ್ದೆಯ ಮೂರು ವರ್ಷಗಳ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಚಿಕಾಗೊ ವಿಶ್ವವಿದ್ಯಾಲಯ ನೀಡಿದ್ದ ರಜೆಯ ಅವಧಿಯೂ ಮುಕ್ತಾಯಗೊಳ್ಳುತ್ತಿದೆ. ಹಾಗಾಗಿ ನಾನು ಮತ್ತೆ ಶೈಕ್ಷಣಿಕ ಕ್ಷೇತ್ರದತ್ತ ಹೋಗಲು ನಿರ್ಧರಿಸಿದ್ದೇನೆ. ದೇಶಕ್ಕೆ ಅಗತ್ಯ ಬಿದ್ದಾಗ ಸೇವೆ ಸಲ್ಲಿಸಲು ಸಿದ್ಧ.’

ಜಫ್ರಿ ಗುಂಡು ಹಾರಿಸಿದ್ದರಿಂದ ಗಲಭೆ ತೀವ್ರತೆ ಪಡೆಯಿತು ಅಂದಿದೆ ನ್ಯಾಯಾಲಯದ ತೀರ್ಪು

ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆಗೆ ಸಂಬಂಧಿಸಿದಂತೆ ಇತ್ತೀಚೆಗೆ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಘಟನೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಮಾಜಿ ಸಂಸದ ಇಶಾನ್ ಜಫ್ರಿ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದರು. ಗುಲ್ಬರ್ಗ್ ದಂಗೆ ಮತ್ತು ಜಫ್ರಿ ಹತ್ಯೆ ಉದ್ದೇಶಿತ ಕೃತ್ಯ ಎಂದು ನ್ಯಾಯಾಲಯ ಗುರುತಿಸದೇ ಇರುವುದಕ್ಕೂ ಅಸಂತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ನ್ಯಾಯಾಲಯದ ತೀರ್ಪಿನಲ್ಲಿ ಇದನ್ನು ಸಂಚು ಎಂದು ಏಕೆ ಪರಿಗಣಿಸುತ್ತಿಲ್ಲ ಎಂಬುದಕ್ಕೆ ಉತ್ತರ ಸ್ಪಷ್ಟವಾಗಿದೆ.

ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಲಯ ನೀಡಿರುವ ವ್ಯಾಖ್ಯಾನದ ಪ್ರಕಾರ, ಜಫ್ರಿ ತಮ್ಮ ಬಂದೂಕಿನಿಂದ 2-3 ಬಾರಿ ಗುಂಡು ಹಾರಿಸಿದರು. ಇದರಿಂದ ಉದ್ರಿಕ್ತರ ಗುಂಪು ಮತ್ತಷ್ಟು ರೊಚ್ಚಿಗೆದ್ದು ಗಲಭೆ ತೀವ್ರತೆ ಪಡೆದುಕೊಂಡಿತು. ಹಾಗೆಂದು ಇಲ್ಲಿ ಜಫ್ರಿ ಅವರ ಹತ್ಯೆಯನ್ನು ಸಮರ್ಥಿಸಿಕೊಳ್ಳದಿದ್ದರೂ ಇದೊಂದು ಪೂರ್ವ ನಿಯೋಜಿತ ಹತ್ಯೆಯಲ್ಲ ಎಂಬುದು ನ್ಯಾಯಾಲಯದ ಪ್ರತಿಪಾದನೆ.

ರಾಯಭಾರಿ ಇದ್ದ ಕಾರ್ಯಕ್ರಮದಲ್ಲೇ ಕಾಣಿಸಿಕೊಂಡ ಮಲ್ಯ!

ಲಂಡನ್ ನ ಭಾರತದ ಹೈ ಕಮಿಷನರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉದ್ದೇಶಿತ ಸುಸ್ಥಿದಾರನಾಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆಯೋಜಿಸಿದ್ದ ಸುಹೇಲ್ ಸೇತ್ ಅವರ ನೂತನ ಪುಸ್ತಕ ‘ಮಂತ್ರಾಸ್ ಫಾರ್ ಸಕ್ಸಸ್: ಇಂಡಿಯಾಸ್ ಗ್ರೇಟೆಸ್ಟ್ ಸಿಇಒಸ್ ಟೆಲ್ ಯು ಹೌ ಟು ವಿನ್’ ಬಿಡುಗಡೆ ಸಮಾರಂಭದಲ್ಲಿ ಸಾರ್ವಜನಿಕರ ಮಧ್ಯೆ ಮಲ್ಯ ಕಾಣಿಸಿಕೊಂಡಿದ್ದಾರೆ. ಆದ್ರೆ ಸೇತ್ ಹೇಳುವ ಪ್ರಕಾರ, ಮಲ್ಯ ಅವರಿಗೆ ಯಾವುದೇ ಅಧಿಕೃತ ಆಮಂತ್ರಣ ನೀಡಿರಲಿಲ್ಲ. ಇದೊಂದು ಮುಕ್ತ ಆಮಂತ್ರಣ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಲ್ಯ ಅವರು ಆಗಮಿಸಿದ್ದರು.

ಎನ್ಐಎಫ್ಟಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಚೌಹಾಣ್

ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫ್ಯಾಶನ್ ಟೆಟ್ನಾಲಜಿ (ಎನ್ಐಎಫ್ಟಿ) ಮುಖ್ಯಸ್ಥ ಸ್ಥಾನಕ್ಕೆ ಕೇಂದ್ರ ಸರ್ಕಾರ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರನ್ನು ಆಯ್ಕೆ ಮಾಡಿದೆ. ಫ್ಯಾಶನ್ ಕುರಿತಂತೆ ಯಾವುದೇ ಹಿನ್ನಲೆ, ಅನುಭವ ಹೊಂದಿರದ ಚೇತನ್ ಚೌಹಾಣ್ ಅವರ ಆಯ್ಕೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಟೀಕಿಸಲಾಗಿದೆ.

ಶ್ರೀಲಂಕಾದಲ್ಲಿ ಕ್ರೀಡಾಂಗಣ ಉದ್ಘಾಟಿಸಿದ ಮೋದಿ

ಭಾರತದ ₹ 7 ಕೋಟಿ ನೆರವಿನಲ್ಲಿ ನವೀಕರಣಗೊಂಡಿರುವ ಶ್ರೀಲಂಕಾದ ಜಫ್ನಾ ಪ್ರದೇಶದ ಡುರೈಪ ಕ್ರೀಡಾಂಗಣವನ್ನು ಪ್ರಧಾನಿ ಮೋದಿ ಶನಿವಾರ ನವದೆಹಲಿಯಿಂದಲೇ ಉದ್ಘಾಟಿಸಿದರು. ವಿಡಿಯೋ ಕಾನ್ಫೆರೆನ್ಸ್ ಮೂಲಕ ಮೋದಿ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. 1997ರಿಂದ ಬಳಕೆಯಾಗದೇ ಪಾಳು ಬಿದ್ದಿದ್ದ  ಕ್ರೀಡಾಂಗಣವನ್ನು ಈಗ ನವೀಕರಿಸಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ‘ಶ್ರೀಲಂಕಾದ ನೆರವಿಗೆ ಭಾರತ ಸದಾ ಸಿದ್ಧ. ಭಾರತದ ಆರ್ಥಿಕ ಬೆಳವಣಿಗೆ ನೆರೆ ರಾಷ್ಟ್ರಗಳ ಅಭಿವೃದ್ಧಿಗೂ ಸಹಾಯವಾಗಬೇಕು’ ಎಂದರು.

Leave a Reply