ಸಚಿವ ಸಂಪುಟ ಸರ್ಜರಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ನಡೆದ ಸರ್ಕಸ್ಸಿಗೆ ಕೊನೆಗೂ ತೆರೆ ಬೀಳುವಂತಾಗಿದೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರೊಂದಿಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ ನಂತರ ಸಿಎಂ ಈ ವಿಚಾರವನ್ನು ಮಾಧ್ಯಮದವರಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಭೆ ಬಳಿಕ ನೀಡಿದ ಮಾಹಿತಿ ಹೀಗಿದೆ: ‘ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ರಾಜ್ಯ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಹಾಗೂ ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿದ್ದೆ. ಮುಂದಿನ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆಯ ಕುರಿತ ಅಂತಿಮ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಲಾಗುವುದು. ಯಾರೆಲ್ಲ ಹೊರಗೆ, ಯಾರ ಸೇರ್ಪಡೆ ಎಂಬ ವಿಷಯಗಳನ್ನೆಲ್ಲ ಈಗ ಬಹಿರಂಗಪಡಿಸುವುದಿಲ್ಲ.’

ಸುಮಾರು 14 ಸಚಿವರನ್ನು ಸಂಪುಟದಿಂದ ಹೊರಗಿರಿಸಿ ಹೊಸಮುಖಗಳಿಗೆ ಅವಕಾಶ ನೀಡುವುದಕ್ಕೆ ಸೋನಿಯಾ ಸಮ್ಮತಿಸಿದ್ದಾರೆ ಎಂಬ ವದಂತಿ ಮಾಧ್ಯಮ- ರಾಜಕೀಯ ಪಡಸಾಲೆಗಳಲ್ಲಿ ಧ್ವನಿಸುತ್ತಿದೆ. ಆದರೆ ಮುಖ್ಯಮಂತ್ರಿ ಇಂಥ ಹೆಚ್ಚುವರಿ ಮಾಹಿತಿಗಳನ್ನು ನೀಡುವುದಕ್ಕೆ ನಿರಾಕರಿಸಿದರು.

Leave a Reply