ದಾರಿ ಯಾವುದಯ್ಯಾ ನ್ಯೂಕ್ಲಿಯರ್ ತ್ಯಾಜ್ಯ ಹೂಳಲು? ಫಿನ್ಲೆಂಡ್ ಹೊರಟಿದೆ ಭೂಗತ ಸುರಂಗ ತೋಡಲು

author-ananthramuಇಲ್ಲಿ ಹೀಗೆ: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಘನತ್ಯಾಜ್ಯ ಹೂಳಲು ಈಗ ಹೊಸ ತಾಣಗಳನ್ನು ಹುಡುಕಿದೆ. ಅದರ ಕಣ್ಣು ನೆಟ್ಟಿರುವುದು ಕ್ವಾರಿಗಳ ಮೇಲೆ. ಆನೆಕಲ್ ಮತ್ತು ಸುತ್ತಮುತ್ತ ಕಂದಾಯ ಇಲಾಖೆಗೆ ಸೇರಿದ ಸುಮಾರು 450 ಎಕರೆ ಭೂಮಿಯಲ್ಲಿ 180 ಎಕರೆ ವಿಸ್ತರಿಸಿರುವ ಕಲ್ಲಿನ ಕ್ವಾರಿಗಳನ್ನು ಪತ್ತೆಹಚ್ಚಿದೆ, ಗೆದ್ದೆವು ಎಂದು ನಿಟ್ಟುಸಿರುಬಿಟ್ಟಿದೆ. ಅವುಗಳಲ್ಲಿ 24 ಲಕ್ಷ ಟನ್ನು ಘನತ್ಯಾಜ್ಯ ಹೂಳಬಹುದೆಂದು ಅಂದಾಜು. ದಪ್ಪ ಪಾಲಿಥೀನ್ ಹೊದಿಕೆಯನ್ನು ಕ್ವಾರಿಗಳ ತಳಕ್ಕೆ ಹಾಕಿ ಅದರಲ್ಲಿ ಗಟ್ಟಿ ಕಸ ತುಂಬುವುದು, ಅದರ ಮೇಲೆ ದಪ್ಪ ಮಣ್ಣಿನ ಪದರ ಹಾಕಿ ಮುಚ್ಚುವುದು. ಹಾಗೆ ಮಾಡಿದರೆ ಮೀಥೇನ್ ಹೊರಬರುವುದಿಲ್ಲ ಎಂದು ಸ್ಥಳೀಯರಿಗೆ ಆಶ್ವಾಸನೆ ನೀಡುತ್ತಿದೆ. ಘನತ್ಯಾಜ್ಯದಿಂದ ದ್ರವ ಸೋರಿಕೆಯಾದರೂ ಅದು ಅಂತರ್ಜಲ ಮುಟ್ಟುವುದಿಲ್ಲ, ‘ಸೇಫ್’ ಎನ್ನುತ್ತಿದೆ. ಆದರೆ ಸುತ್ತ ಹತ್ತು ಹಳ್ಳಿಗಳು ಇದನ್ನು ಒಪ್ಪುತ್ತಿಲ್ಲ. ಭಂಗೀಪುರ, ಲಕ್ಷ್ಮೀಪುರದಲ್ಲಿ ಮೀಥೇನ್ ಸೋರಿ ಬೆಂಕಿ ಎದ್ದುದನ್ನು ನಾವು ಮರೆತಿಲ್ಲ ಎನ್ನುತ್ತಿದ್ದಾರೆ. ಕಸ ವಿಂಗಡಣೆ ಮಾಡುವ ಮನಸ್ಸು ಬೆಂಗಳೂರಿನ ನಾಗರಿಕರಲ್ಲೂ ಎದ್ದುಕಾಣುತ್ತಿಲ್ಲ. ಬಿ.ಬಿ.ಎಂ.ಪಿ.ಗೆ ಇದು ದೊಡ್ಡ ತಲೆನೋವಾಗಿದೆ.

ಅಲ್ಲಿ ಹಾಗೆ:  ಫಿನ್ಲೆಂಡ್ ದೇಶಕ್ಕೆ ಗಟ್ಟಿ ಕಸದ ನಿರ್ವಹಣೆ ಸಮಸ್ಯೆಯೇ ಆಗಿಲ್ಲ. ಅವರದ್ದು ಬೇರೆಯದೇ ಆದ ಕಳವಳ. ಕಳೆದ 50 ವರ್ಷಗಳಿಂದ ಯೂರೋಪಿನ 8ನೇ ದೊಡ್ಡ ದೇಶ ತನ್ನ ವಿದ್ಯುತ್ ಪೂರೈಕೆ ಮಾಡಿಕೊಳ್ಳಲು ಪರಮಾಣು ಸ್ಥಾವರಗಳಿಗೆ ಮೊರೆಹೋಗಿದೆ. ತನ್ನ ಬೇಡಿಕೆ ಮೂರನೇ ಒಂದು ಪಾಲು ವಿದ್ಯುತ್ತನ್ನು ಈ ಮೂಲದಿಂದಲೇ ಪಡೆದುಕೊಳ್ಳುತ್ತಿದೆ. ಇದು ಅದಕ್ಕೀಗ ಇನ್ನೊಂದು ತಲೆನೋವು. ಈಗಿರುವ 5,500 ಟನ್ನು ನ್ಯೂಕ್ಲಿಯರ್ ತ್ಯಾಜ್ಯವನ್ನು ಹೂಳುವುದು ಹೇಗೆ? ಸಾಗರಕ್ಕೆ ಸುರಿಯುವಂತಿಲ್ಲ, ಕೆರೆ, ಕಟ್ಟೆಗಳಿಗೆ ಸುರಿದು ಕೈತೊಳೆದುಕೊಳ್ಳುವಂತಿಲ್ಲ, ಉಪಗ್ರಹಗಳಲ್ಲಿ ತುಂಬಿ ಅಂತರಿಕ್ಷಕ್ಕೆ ಬಿಡುವುದು ಬಿಲ್‍ಕುಲ್ ಆಗದು; ಅಂತಾರಾಷ್ಟ್ರೀಯ ಕಾನೂನುಗಳಿವೆ. ಯಾವ ದೇಶವೂ ಈ ತ್ಯಾಜ್ಯ ಹೂಳಲು ಜಾಗಕೊಡುವುದಿಲ್ಲ. ‘ನಮ್ಮ ಹಿತ್ತಲಲ್ಲಿ ಬೇಡ-ನಾಟ್ ಇನ್ ಮೈ ಬ್ಯಾಕ್ ಯಾರ್ಡ್’ ಎನ್ನುತ್ತಿವೆ. ಸಮಸ್ಯೆ ಇಷ್ಟೇ, ನಗರಗಳ ಘನತ್ಯಾಜ್ಯವನ್ನು ಹೂತು ನಿರ್ವಹಿಸಿದಂತೆ ನ್ಯೂಕ್ಲಿಯರ್ ತ್ಯಾಜ್ಯವನ್ನು ಹೂಳುವುದು ಸುಲಭವಲ್ಲ. ಹಾಗೆ ಹೂಳುವುದು ಸುಲಭವಿದ್ದಿದ್ದರೆ 5,500 ಟನ್ನು ನ್ಯೂಕ್ಲಿಯರ್ ತ್ಯಾಜ್ಯ ಯಾವ ಲೆಕ್ಕ? ಯಾವುದೋ ಒಂದು ಕ್ವಾರಿಯಲ್ಲಿ ಹೂತು ಹಾಯಾಗಿರಬಹುದಿತ್ತು. ಪರಮಾಣು ಸ್ಥಾವರಗಳಲ್ಲಿ ಶಕ್ತಿ ಉತ್ಪಾದನೆ ಮಾಡಲು ವಿಕಿರಣಪಟು ಖನಿಜಗಳನ್ನು ಬಳಸುತ್ತಾರೆ. ಆ ಶಕ್ತಿ ಉತ್ಪಾದಿಸಿದ ನಂತರ ತ್ಯಾಜ್ಯದಲ್ಲೂ ಅವು ತೂರಿರುತ್ತವೆ. ಕಬ್ಬಿನ ಜಲ್ಲೆಯನ್ನು ಗಾಣಕ್ಕೆ ಕೊಟ್ಟು ರಸಹಿಂಡಿ ಸಿಪ್ಪೆಯನ್ನು ಒಗೆದಂತಲ್ಲ, ನ್ಯೂಕ್ಲಿಯರ್ ತ್ಯಾಜ್ಯ ನಿರ್ವಹಣೆ. ನ್ಯೂಕ್ಲಿಯರ್ ತ್ಯಾಜ್ಯದಲ್ಲಿ ಅಧಿಕ ಮಟ್ಟ, ಮಧ್ಯಮ ಮಟ್ಟ ಮತ್ತು ಸಾಧಾರಣ ಮಟ್ಟ ಎಂದು ವರ್ಗೀಕರಿಸಬಹುದಾದ ವಿಕಿರಣತೆ ಇದ್ದೇ ಇರುತ್ತದೆ (ಬಳಸಿದ ಯುರೇನಿಯಮ್, ಉತ್ಪತ್ತಿಯಾದ ಪ್ಲೂಟೋನಿಯಮ್ ಇತ್ಯಾದಿ). ವಿಕಿರಣತೆ ಹಲವು ಸಹಸ್ರ ವರ್ಷಗಳ ದೀರ್ಘ ಕಾಲದವರೆಗೆ ಕ್ರಿಯಾಶೀಲವಾಗಿರುತ್ತವೆ. ಅದೇ ಬಹು ದೊಡ್ಡ ಸಮಸ್ಯೆ ಜೀವಿಗಳನ್ನು ಸಾವಿರಾರು ವರ್ಷಗಳ ಕಾಲ ಕಾಡುತ್ತಲೇ ಇರುತ್ತದೆ ಎಂದೇ, ನಿಭಾಯಿಸುವುದು ಸುಲಭವಲ್ಲ.

ಸದ್ಯ ನ್ಯೂಕ್ಲಿಯರ್ ಶಕ್ತಿ ಉತ್ಪಾದಿಸುತ್ತಿರುವ ಮೂವತ್ತೊಂದಕ್ಕೂ ಮಿಕ್ಕಿ ದೇಶಗಳು ಈ ತ್ಯಾಜ್ಯದ ಬಗ್ಗೆ ತಲೆ ಬಿಸಿಮಾಡಿಕೊಂಡಿವೆ. ಅತಿಹೆಚ್ಚು ನ್ಯೂಕ್ಲಿಯರ್ ಸ್ಥಾವರಗಳಿರುವ ಅಮೆರಿಕವೂ ಇದಕ್ಕೆ ಉತ್ತರ ಕಂಡುಕೊಂಡಿಲ್ಲ. ಜಾಗತಿಕ ಮಟ್ಟದಲ್ಲಿ ನ್ಯೂಕ್ಲಿಯರ್ ತ್ಯಾಜ್ಯ 74,258 ಮೆಟ್ರಿಕ್ ಟನ್ನಿಗೆ ಏರಿದೆ. ಪ್ರತಿವರ್ಷ ಅಂದಾಜು 12,000 ಟನ್ನು ಈ ಸಂಗ್ರಹಕ್ಕೆ ಸೇರುತ್ತಿದೆ-ಅಂದರೆ ಒಂದು ಬ್ಯಾಸ್ಕೆಟ್ ಬಾಲ್ ಸ್ಟೇಡಿಯಮ್ ಮೇಲೆ ಎರಡು ಮಹಡಿ ಕಟ್ಟಡಗಳನ್ನು ಕಟ್ಟಿ ತುಂಬುವಷ್ಟು. ವಿಕಿರಣ ಸೋರಿಕೆಯ ಪ್ರಶ್ನೆ ಬಂದಾಗ, ಮೂವತ್ತು ವರ್ಷಗಳ ಹಿಂದೆ (ಏಪ್ರಿಲ್ 26, 1986) ರಷ್ಯದ ಚರ್ನೋಬಿಲ್ ಸ್ಥಾವರ ಅಪಘಾತಕ್ಕೀಡಾದಾಗ ವಿಕಿರಣ ಉತ್ತರ ಧ್ರುವದವರೆಗೆ ಹರಡಿತ್ತು. ಈಗ ಅದು ‘ಘೋಸ್ಟ್ ಟೌನ್’ ಎನ್ನಿಸಿಕೊಂಡಿದೆ. ಚರ್ನೋಬಿಲ್ ಸುತ್ತಣ ಹಳ್ಳಿಗಳಲ್ಲಿ ಹುಲ್ಲು ಮೇಯ್ದ ಹಸುಗಳ ಹಾಲಿನಲ್ಲೂ ವಿಕಿರಣ ಧಾತುಗಳು ಸೇರಿವೆಯೆಂದು ಇತ್ತೀಚಿನ ವರದಿ.

ಅಮೆರಿಕದಲ್ಲಿ ಈಗ ಅಪಸ್ವರ ಎದ್ದಿದೆ. ನಿವೇಡದ ಬಳಿ ಯೂಕಾ ಪರ್ವತದಲ್ಲಿ ಗುಂಡಿ ತೆಗೆದು ನ್ಯೂಕ್ಲಿಯರ್ ತ್ಯಾಜ್ಯ ಹೂಳಲು ಅಮೆರಿಕ ಪ್ರಯತ್ನಿಸಿತಾದರೂ ಅದು ಸರಿಯಾದ ಮಾರ್ಗವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ನ್ಯೂಕ್ಲಿಯರ್ ತ್ಯಾಜ್ಯ ಹೂತ 100 ಕಿಲೋ ಮೀಟರ್ ಪಾಸಲೆಯಲ್ಲಿ ಜನ ವಾಸಮಾಡಲು ನಿರಾಕರಿಸುತ್ತಿದ್ದಾರೆ. ಸದ್ಯಕ್ಕೆ ಅಲ್ಲೂ ಸ್ಥಾವರಗಳಿರುವ ಆವರಣಗಳ ಬಳಿಯೇ ನ್ಯೂಕ್ಲಿಯರ್ ತ್ಯಾಜ್ಯದ ಸಮಾಧಿಯಾಗುತ್ತಿದೆ. ಇನ್ನು ಭಾರತದಲ್ಲಿ ಶೇ. 4 ಭಾಗ ವಿದ್ಯುತ್ ಒದಗಿಸುವ ಪರಮಾಣು ವಿದ್ಯುತ್ ಸ್ಥಾವರಗಳ ಬಗ್ಗೆ ಮೊದಲಿನಿಂದಲೂ ವಿರೋಧವಿದೆ. ವಾರ್ಷಿಕ ನಾಲ್ಕು ಟನ್ನು ನ್ಯೂಕ್ಲಿಯರ್ ತ್ಯಾಜ್ಯ ಇಲ್ಲಿ ಉತ್ಪಾದನೆಯಾಗುತ್ತಿದೆ. ಅದನ್ನು ತಾರಾಪುರದ ಸ್ಥಾವರದ ಬಳಿಯೇ ಸದ್ಯಕ್ಕೆ ಹೂತಿದ್ದಾರೆ. ಇನ್ನು ಮುಕ್ಕಾಲು ಪಾಲು ಸಮಾಧಿ ಖಾಲಿ ಇದೆ ಎನ್ನುತ್ತಿದ್ದಾರೆ. ಇದೂ ಕೂಡ ಶಾಶ್ವತ ಪರಿಹಾರವಲ್ಲ. ಆದರೆ ಇನ್ನೂ ನಲವತ್ತು ವರ್ಷಗಳ ಕಾಲ ನಮಗೇನೂ ಅಂಥ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿಯನ್ನು ವಿಶ್ಲೇಷಿಸುತ್ತಿರುವ ಎಕ್ಸ್ಪರ್ಟ್ ಗಳು.

NUCLEAR WAST

ವಾಸ್ತವವೆಂದರೆ ಇದುವರೆಗೆ ಕೇವಲ ಒಂದು ಕಿಲೋ ಗ್ರಾಂ ನ್ಯೂಕ್ಲಿಯರ್ ತ್ಯಾಜ್ಯವನ್ನು ‘ಸೇಫ್’ ಎನ್ನುವ ತಂತ್ರ ಬಳಸಿ ಹೂಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಗತ್ತಿನ ಕಣ್ಣು ಫಿನ್ಲೆಂಡ್ ಮೇಲಿದೆ. ತನ್ನ 5,500 ಟನ್ನು ನ್ಯೂಕ್ಲಿಯರ್ ತ್ಯಾಜ್ಯವನ್ನು ಶಾಶ್ವತವಾಗಿ ಸಮಾಧಿಮಾಡಲು ಆಲ್ಕಿಲ್ಯೂಟೋ ಎಂಬ ಪಶ್ಚಿಮ ತೀರದ ದ್ವೀಪವೊಂದನ್ನು ಆರಿಸಿಕೊಂಡಿದೆ. ನಾಲ್ಕು ಪರಮಾಣು ಸ್ಥಾವರಗಳಲ್ಲಿ ಒಂದು ಅಲ್ಲಿದೆ. ಅ ದ್ವೀಪದ ಆಂಕ್ಯಾಲೋ ಎಂಬ ಜಾಗದಲ್ಲಿ 42 ಕಿಲೋ ಮೀಟರ್ ಉದ್ದದ ಸುರಂಗ ತೋಡಲು ಆರಂಭಿಸಿ ಈಗಾಗಲೇ ಹದಿನೈದು ಕಿಲೋ ಮೀಟರ್‍ಗಳಷ್ಟನ್ನು ಕೊರೆದಿದೆ. ಈ ಸುರಂಗವಿರುವುದು ಭೂಮಿಯ ಕೆಳಗೆ 420 ಮೀಟರ್ ಆಳದಲ್ಲಿ. ಇಳಿಯಲು ಮೂರು ಕಡೆ ಕೂಪಗಳಿವೆ. ಸುರಂಗ ಕೊರೆದಿರುವುದು ಗಟ್ಟಿ ಗ್ರನೈಟ್ ಬಂಡೆಯಲ್ಲಿ. ಅದರಲ್ಲಿ ಬಿರುಕುಗಳಿಲ್ಲ, ಮಳೆ ನೀರು ಸೋರಿಹೋಗುವ ಭಯವಿಲ್ಲ, ಇದು ಸೇಫ್ ಎನ್ನುತ್ತಿದೆ ಫಿನ್ಲೆಂಡ್. ಏಕೆಂದರೆ ಅಲ್ಲಿ ಅಂತರ್ಜಲ ಉಕ್ಕುವ ಭೀತಿಯೂ ಇಲ್ಲ. 2020ರಿಂದ ಶುರುವಾಗುತ್ತದೆ ಇಲ್ಲಿ ನ್ಯೂಕ್ಲಿಯರ್ ತ್ಯಾಜ್ಯಕ್ಕೆ ರಾಜಮರ್ಯಾದೆ ಕೊಟ್ಟು ಹೂಳಲು. 2120ರಲ್ಲಿ ನ್ಯೂಕ್ಲಿಯರ್ ಸಮಾಧಿಯನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ. ಇದಕ್ಕೆ ತಗಲುವ ಒಟ್ಟು ವೆಚ್ಚ ನಾಲ್ಕು ಶತಕೋಟಿ ಯೂರೋ. ಜಗತ್ತಿನ ಅತಿ ದುಬಾರಿ ಸಮಾಧಿ ಎನ್ನುವ ಹೆಗ್ಗಳಿಕೆ ಇದರದು.

finland1

ಮೊದಲು ನ್ಯೂಕ್ಲಿಯರ್ ತ್ಯಾಜ್ಯವನ್ನು ಪರಿಶುದ್ಧ ತಾಮ್ರದ ದೊಡ್ಡ ಡಬ್ಬಿಗಳಲ್ಲಿ, ಜೇನುಗೂಡಿನ ವಿನ್ಯಾಸವಿರುವ, ಗ್ರಾಫೈಟ್ ಮಿಶ್ರಣ ಮಾಡಿದ ಸ್ಟೀಲ್ ಗೂಡುಗಳಲ್ಲಿ ಇರಿಸಲಾಗುತ್ತದೆ. ಸೀಲ್ ಮಾಡಿದ ಡಬ್ಬಿಗಳ ಸುತ್ತ ವಿಕಿರಣ ಸೋರಿ ಆಚೆ ಒಂದುವೇಳೆ ಬಂದರೂ ಬೆಂಟೊನೈಟ್ ಎಂಬ ಒಂದು ಬಗೆಯ ಜೇಡಿಮಣ್ಣನ್ನು ಅದರ ಸುತ್ತ ಪ್ಯಾಕ್ ಮಾಡಲಾಗುತ್ತದೆ. ಇದರ ಸುತ್ತ ಗಟ್ಟಿ ಬಂಡೆ ಸಹಜವಾದ ಗ್ರನೈಟ್ ಇರುತ್ತದೆ, ಕೋಟೆಯೊಳಗೆ ಕೋಟೆಯಿದ್ದಂತೆ. ಈ ಶಿಲೆಯಂತೂ ಆ ಮಟ್ಟದಲ್ಲಿ ಯಾವ ಶಾಖಕ್ಕೂ ಪ್ರತಿಕ್ರಿಯಿಸುವುದಿಲ್ಲ. ಹಾಗಾದರೆ ಎಷ್ಟು ವರ್ಷ ಇದು ಸೇಫ್? ತಜ್ಞರ ಪ್ರಕಾರ ಒಂದು ಲಕ್ಷ ವರ್ಷ. ಆ ವೇಳೆಗೆ ವಿಕಿರಣದ ತೀವ್ರತೆ ತಗ್ಗಿರುತ್ತದೆ. ನಿಜ. ಫಿನ್ಲೆಂಡ್ ಭೂಕಂಪನ ವಲಯದಲಿಲ್ಲ, ಅದು ಪ್ಲಸ್ ಪಾಯಿಂಟ್. ಆದರೆ ಮುಂದಿನ ಒಂದು ಲಕ್ಷ ವರ್ಷ ಎಂದರೆ ಮೂರು ಸಾವಿರ ತಲೆಮಾರು ಸವೆಸಿದ ಕಾಲ. ಆಗ ಜಗತ್ತಿನ ಪರಿಸ್ಥಿತಿ ಹೇಗಿರುತ್ತದೆ? ‘ಇದು ನಿಷಿದ್ಧ ಜಾಗ’ ಎಂದು ಬೋರ್ಡ್ ಹಾಕಿದರೂ ಅದನ್ನು ಓದುವ ಸ್ಥಿತಿಯಲ್ಲಿ ಆ ಕಾಲದ ಜನ ಇರುತ್ತಾರೆಯೆ? ಎಂಬ ಪ್ರಶ್ನೆ ಅನೇಕ ರಂಗಗಳಲ್ಲಿ ಎದ್ದಿದೆ. ಅದಕ್ಕಿಂತಲೂ ಮುಖ್ಯವಾಗಿ ಮುಂದಿನ ಒಂದು ಲಕ್ಷ ವರ್ಷದಲ್ಲಿ ಫಿನ್ಲೆಂಡ್ ಹಿಮದಿಂದ ಆವೃತವಾಗುವ ಸಾಧ್ಯತೆ ಇದೆ ಎಂದು ಹವಾಗುಣ ತಜ್ಞರ ಲೆಕ್ಕಾಚಾರ. ಆಗ ಇದು ಎಷ್ಟು ಸೇಫ್ ಎಂದು ಕೇಳುತ್ತಿದ್ದಾರೆ. ಸದ್ಯಕ್ಕಂತೂ ಫಿನ್ಲೆಂಡ್ ಈ ಸುರಂಗ ತೋಡಿ ಜಗತ್ತಿನ ಗಮನ ಸೆಳದಿದೆ. ಗ್ರೀನ್ ಪೀಸ್ ಸದಸ್ಯರು ‘ಇದು ಸರಿಯಲ್ಲ, ನ್ಯೂಕ್ಲಿಯರ್ ಸ್ಥಾವರಗಳಿಗೆ ಬೈ ಹೇಳಿ, ಅದೇ ಮದ್ದು’ ಎನ್ನುತ್ತಿದ್ದಾರೆ.

Leave a Reply