ಅವನಿ, ಭಾವನಾ, ಮೋಹನಾ… ಫೈಟರ್ ಜೆಟ್ ಪೈಲಟ್ ಆಗಿ ಇತಿಹಾಸ ನಿರ್ಮಿಸುತ್ತಿರುವ ದಿಟ್ಟೆಯರಿಗಿರಲಿ ನಮ್ಮ ಅಭಿಮಾನ!

ಡಿಜಿಟಲ್ ಕನ್ನಡ ಟೀಮ್:

ಶನಿವಾರದ ಬೆಳಗು ಇತಿಹಾಸವೊಂದನ್ನು ಬರೆದಿದೆ. ಭಾರತದ ವಾಯುಪಡೆಯ ಫೈಟರ್ ಜೆಟ್ ಸೇನಾನಿಗಳಾಗಿ ಮಹಿಳೆಯರ ಪ್ರವೇಶಕ್ಕೆ ಇಪ್ಪತ್ತರ ಹರೆಯದ ಮೂವರು ನಾರಿಯರು ಮುನ್ನುಡಿ ಬರೆದಿದ್ದಾರೆ.

ಹೈದರಾಬಾದಿನ ದಿಂಡುಗಲ್ ನಲ್ಲಿ ನಡೆದ ವಾಯುಸೇನೆ ಪಥಸಂಚಲನದಲ್ಲಿ ಉಳಿದ ಕೆಡೆಟ್ ಗಳ ಜತೆ ಮೂವರು ಮಹಿಳಾ ಕೆಡೆಟ್ ಗಳನ್ನು ರಕ್ಷಣಾ ಮಂತ್ರಿ ಮನೋಹರ ಪಾರಿಕ್ಕರ್ ಅವರು ತರಬೇತಿಗೆ ಅಧಿಕೃತವಾಗಿ ಸೇರಿಸಿಕೊಂಡರು.

ಮಧ್ಯಪ್ರದೇಶದ ಅವನಿ ಚತುರ್ವೇದಿ, ಬಿಹಾರದ ಭಾವನಾ ಕಾಂತ್ ಹಾಗೂ ರಾಜಸ್ಥಾನದ ಮೋಹನಾ ಸಿಂಗ್ ಈ ಮೂವರು ಯುವತಿಯರು ಫೈಟರ್ ಜೆಟ್ ಪೈಲೆಟ್ ಗಳಾಗಿ ವಾಯುಸೇನೆಯಲ್ಲಿ ಅರ್ಹತೆ ಪಡೆದಿದ್ದಾರೆ. ವಾಯುಸೇನೆಯಲ್ಲಿ ವಿರಳ ಪ್ರಮಾಣದಲ್ಲಿ ಮಹಿಳಾ ಕೆಡೆಟ್ ಗಳ ಉಪಸ್ಥಿತಿ ಇದೆಯಾದರೂ ಹೆಲಿಕಾಪ್ಟರ್ ಗಳು ಹಾಗೂ ಸರಕು ಸಾಗಣೆ ವಿಭಾಗಕ್ಕೆ ಅವರ ಕಾರ್ಯನಿರ್ವಹಣೆಗಳಿದ್ದವು. ಫೈಟರ್ ಜೆಟ್ ಪೈಲಟ್ ಸ್ಥಾನದಲ್ಲಿ ಮಹಿಳೆಯರಿರಲಿಲ್ಲ. 2016ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ವಿಭಾಗಕ್ಕೆ ಮಹಿಳೆಯರ ಪ್ರವೇಶ ಘೋಷಿಸಿದ್ದರು. ಹಾಗಂತ ಮಹಿಳೆಯರಿಗೂ ಪ್ರಾತಿನಿಧ್ಯವಿರಬೇಕೆಂಬ ಕಾರಣಕ್ಕೆ ಈ ಮೂವರಿಗೆ ಇಂಥ ಸ್ಥಾನ ಸುಲಭಕ್ಕೆ ಸಿಕ್ಕಿದೆ ಅಂದುಕೊಳ್ಳಬೇಡಿ!

ಸುಮಾರು 150 ತಾಸುಗಳ ವಿವಿಧ ಹಾರಾಟ ಕಸರತ್ತುಗಳನ್ನು ಒಳಗೊಂಡ ಮೊದಲ ಹಂತದ ತರಬೇತಿಯಲ್ಲಿ ಪಾಸಾಗಿರುವುದರಿಂದ ಇವರಿಗೆ ಈ ಅವಕಾಶ. ಇನ್ನು ಮುಂದೆ ಮುಂದುವರಿದ ಜೆಟ್ ಟ್ರೈನರ್ ನಲ್ಲಿ ಮತ್ತೆ 145 ತಾಸುಗಳ ಅವಧಿಯ ಕಠಿಣ ತರಬೇತಿಗೆ ಒಳಪಡಿಸಲಾಗುತ್ತದೆ. ಈ ತರಬೇತಿ ಕರ್ನಾಟಕದ ಬೀದರ್ ನಲ್ಲಿರುವ ಹ್ವಾಕ್ ವಾಯುನೆಲೆಯಲ್ಲೇ ನಡೆಯುವ ಸಾಧ್ಯತೆ ಇದೆ. ಇದಾದ ನಂತರ ಇವರಿಗೆ ಸೂಪರ್ ಸಾನಿಕ್ ಫೈಟರ್ ವಿಮಾನದಲ್ಲಿ ಪ್ರವೇಶ. ಹೀಗೆ ಕರ್ತವ್ಯಕ್ಕೆ ಸೇರಿದ ಮೇಲೆ ಪುರುಷ ಪೈಲಟ್ ಗಳಿಗೆ ಹೊರತಾದ ಯಾವ ವಿನಾಯತಿಗಳೂ ಈ ಮಹಿಳಾ ಫೈಟರ್ ಗಳಿಗೆ ಇರುವುದಿಲ್ಲ.

ಅವನಿ ಚತುರ್ವೇದಿ ಮತ್ತು ಭಾವನಾ ಕಾಂತ್ ಇಬ್ಬರೂ ಸರ್ಕಾರಿ ಅಧಿಕಾರಿಗಳ ಮಕ್ಕಳು. ಭಾವನಾ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಓದಿದವರು. ಮೋಹನಾ ಸಿಂಗ್ ಮಾತ್ರ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಮಗಳು.

ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿ 8 ಸಾವಿರಕ್ಕೂ ಮಿಕ್ಕಿ ಮಹಿಳೆಯರು ಕರ್ತವ್ಯದಲ್ಲಿದ್ದಾರಾದರೂ ಯುದ್ಧಭೂಮಿಯಲ್ಲಿ ಕಾದಾಡುವ ಹಂತಕ್ಕೆ ಅನುಮತಿ ಇಲ್ಲ. ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಇಂಥ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇದರಾಚೆ ಬಿ ಎಸ್ ಎಫ್, ಸಿಆರ್ ಪಿಎಫ್ ಎನ್ ಎಸ್ ಜಿ ಇಂಥ ಅರೆಸೇನಾ ಪಡೆಗಳಲ್ಲೂ ಮಹಿಳೆಯರ ಉಪಸ್ಥಿತಿ ಗಣನೀಯವಾಗಿದೆ. ಆದರೆ ಮಹಿಳಾ ಫೈಟರ್ ಜೆಟ್ ಪೈಲೆಟ್ ಗಳಾಗಿ ಸೇರಿರುವ ಈ ಮೂವರದ್ದು ಐತಿಹಾಸಿಕ ಹೆಜ್ಜೆ. ಏಕೆಂದರೆ ಇದು ನೇರ ರಣರಂಗ ಪ್ರವೇಶ. ಯುದ್ಧ ಸಂದರ್ಭದಲ್ಲಿ ಪುರುಷ ಪೈಲೆಟ್ ಗಳು ಯಾವೆಲ್ಲ ಅಪಾಯಗಳನ್ನು ಎದುರಿಸಿ ಮುನ್ನುಗ್ಗಬೇಕಿರುತ್ತದೆಯೋ ಅಂಥ ಯಾವ ಸನ್ನಿವೇಶಗಳಿಂದಲೂ ಈ ಮೂವರು ಧೀರ ರಮಣಿಯರಿಗೆ ವಿನಾಯತಿ ಇಲ್ಲ.

ಹಾಗೆಂದೇ ಇದು ಭಾರತದ ವೀರಾಭಿಮಾನ ಕ್ಷಣ!

Leave a Reply