ಚಾಂಪಿಯನ್ಸ್ ಹಾಕಿ ಟ್ರೋಫಿ ಬೆಳ್ಳಿ ಪದಕದೊಂದಿಗೆ ಮೂಡಿದೆ ಒಲಿಂಪಿಕ್ಸ್ ಪೋಡಿಯಂ ಸ್ಥಾನದ ಕನಸು

ಡಿಜಿಟಲ್ ಕನ್ನಡ ಟೀಮ್:

ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲಾ ಸುಧಾರಣೆಯಾಗಿದೆಯೋ ಗೊತ್ತಿಲ್ಲ. ಆದ್ರೆ ಭಾರತ ಹಾಕಿ ತಂಡದ ಪ್ರದರ್ಶನ ಖಂಡಿತಾ ಸುಧಾರಣೆ ಆಗಿದೆ. ಶುಕ್ರವಾರ ರಾತ್ರಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೈಬ್ರೇಕರ್ ನಲ್ಲಿ 3-1 ಗೋಲುಗಳ ಅಂತರದಲ್ಲಿ ಸೋತು ಭಾರತ ರನ್ನರ್ ಆಪ್ ಆಗಿ ಐತಿಹಾಸಿಕ ಬೆಳ್ಳಿ ಪದಕ ಪಡೆದಿರುವುದೇ ಇದಕ್ಕೆ ಸಾಕ್ಷಿ.

ಪ್ರಶಸ್ತಿ ಸುತ್ತಿನಲ್ಲಿ ಸೋತಿದ್ದರೂ ತಂಡದ ಪ್ರದರ್ಶನ ಸುಧರಣೆ ಆಗಿದೆ ಹೇಗೆ ಅಂತಿರಾ, ವಿವರಣೆ ಇಲ್ಲಿದೆ ನೋಡಿ. ಒಂದು ಕಾಲದಲ್ಲಿ ಸತತ ಆರು ಒಲಿಂಪಿಕ್ಸ್ ಗಳಲ್ಲಿ ಚಿನ್ನ ಗೆದ್ದು ವಿಶ್ವ ಹಾಕಿಯಲ್ಲಿ ಸಾಮ್ರಾಟನಂತೆ ಮೆರೆದಿದ್ದ ಭಾರತ, ಕಳೆದೆರಡು ಒಲಿಂಪಿಕ್ಸ್ ನಲ್ಲಿ ತೋರಿದ ದಯನೀಯ ಪ್ರದರ್ಶನ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಹ ಅನುಭವ ನೀಡಿತ್ತು. 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅರ್ಹತೆಯನ್ನೇ ಪಡೆಯದೆ ಮೊದಲ ಬಾರಿಗೆ ಒಲಿಂಪಿಕ್ಸ್ ನಿಂದ ಹೊರಗುಳಿದಿತ್ತು. 2012ರ ಒಲಿಂಪಿಕ್ಸ್ ನಲ್ಲಿ ಭಾರತ ಗಳಿಸಿದ್ದು 12ನೇ ಸ್ಥಾನ. ಅಂದರೆ ಕಡೇಯ ಸ್ಥಾನ. ಈಗ ಆ ಕಹಿ ಘಟನೆಯನ್ನು ಮರೆಯುವ ಪ್ರಯತ್ನದಲ್ಲಿದೆ ಭಾರತ ಹಾಕಿ ತಂಡ.

ರಾಷ್ಟ್ರೀಯ ಕ್ರೀಡೆ ಹಾಕಿಯಾಗಿದ್ದರೂ ತಂಡದ ಈ ಪ್ರದರ್ಶನ ಅಭಿಮಾನಿಗಳ ತಲೆತಗ್ಗಿಸುವಂತೆ ಮಾಡಿತ್ತು. ಅಲ್ಲಿಂದ ಈವರೆಗೂ ಭಾರತ ತಂಡ ಮತ್ತೆ ಸುಸ್ಥಿತಿಗೆ ಬರುವ ಕಸರತ್ತು ನಡೆಸಿದೆ. ಅದೂ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ 36 ವರ್ಷಗಳ ನಂತರ ಮೊದಲ ಬಾರಿಗೆ ಬೆಳ್ಳಿ ಪದಕ ಪಡೆಯುವ ಮಟ್ಟಿಗೆ.

ಭಾರತ ಫೈನಲ್ ಗೆ ಅದೃಷ್ಟದ ಮೇಲೆ ಪ್ರವೇಶಿಸಿತ್ತು ನಿಜ. ಅಂತಿಮ ಪಂದ್ಯದಲ್ಲಿ ತಂಡದ ವಿರೋಚಿತ ಸೋಲು ಸಂತೋಷದ ಅಲೆಯಲ್ಲಿ ನಮ್ಮನ್ನು ತೇಲಿಸದಿದ್ದರೂ ನಾಲ್ಕು ವರ್ಷದ ಹಿಂದಿನ ಪ್ರದರ್ಶನಕ್ಕಿಂತ ಉತ್ತಮವಾಗಿ ಆಡುತ್ತಿರುವುದು ತೃಪ್ತಿ ನೀಡಿದೆ. ನಾಯಕ ಸರ್ದಾರ್ ಸಿಂಗ್, ಡ್ರ್ಯಾಗ್ ಫ್ಲಿಕರ್ ಸ್ಪೆಷಲಿಸ್ಟ್ ರೂಪಿಂದರ್ ಪಾಲ್ ಸಿಂಗ್ ಹೊರತಾಗಿ ಭಾರತ ಈ ಟೂರ್ನಿಯಲ್ಲಿ ಆಡಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ. ಇನ್ನು ಟೂರ್ನಿಯಲ್ಲಿ ತಂಡದ ಪ್ರದರ್ಶನ ಹಾದಿ ನೋಡೊದಾದ್ರೆ, ಲೀಗ್ ಹಂತದ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ 3-3 ರ ಡ್ರಾ, ಗ್ರೇಟ್ ಬ್ರಿಟನ್ ವಿರುದ್ಧ 2-1 ರ ಜಯ, ಬೆಲ್ಜಿಯಂ ವಿರುದ್ಧ 2-1 ರ ಸೋಲು, ಕೊರಿಯಾ ವಿರುದ್ಧ 2-1 ರ ಜಯ, ಆಸ್ಟ್ರೇಲಿಯಾ ವಿರುದ್ಧ 4-2 ರ ಸೋಲು, ಫೈನಲ್ ನಲ್ಲಿ 3-1 ರ ಟೈಬ್ರೇಕರ್ ಸೋಲಿನ ಫಲಿತಾಂಶ ಪಡೆದಿದೆ. ಜರ್ಮನಿ ಕಳೆದ ಒಲಿಂಪಿಕ್ಸ್ ಚಾಂಪಿಯನ್ ಆದರೆ, ಆಸ್ಟ್ರೇಲಿಯಾ ಕಂಚಿನ ಪದಕ ಪಡೆದ ತಂಡ.

ಇಲ್ಲಿ ಭಾರತ ಯಾವುದೇ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿಲ್ಲ. ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿಯಂತ ಪ್ರಬಲ ತಂಡಗಳ ವಿರುದ್ಧ ಅತ್ಯುತ್ತಮ ಹೋರಾಟ ನೀಡಿದೆ. ಒಲಿಂಪಿಕ್ಸ್ ಗೆ ಪೂರ್ವಸಿದ್ಧತಾ ಟೂರ್ನಿಯಲ್ಲಿ ಫಲಿತಾಂಶಕ್ಕಿಂತ, ತಂಡ ಯಾವ ರೀತಿ ಹೋರಾಟ ನಡೆಸಿತು ಎಂಬುದು ಮುಖ್ಯವಾಗುತ್ತದೆ. ಈ ಪಂದ್ಯಗಳಲ್ಲಿ ಸಿಗುವ ಪ್ರತಿಯೊಂದು ಅನುಭವ ತಂಡ ಹಾಗೂ ಆಟಗಾರರ ತಪ್ಪು ತಿದ್ದುಕೊಳ್ಳುವ ಅವಕಾಶ ನೀಡುತ್ತದೆ. ಜತೆಗೆ ಪ್ರಬಲ ತಂಡಗಳಿಗೆ ಮುಂದೆ ಯಾವ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ತಿಳಿಸುತ್ತದೆ.

ಈ ಟೂರ್ನಿಯಲ್ಲಿ ಕೇವಲ 6 ತಂಡಗಳು ಮಾತ್ರ ಭಾಗವಹಿಸುತ್ತವೆ. ಹೀಗಾಗಿ ಈ ಟೂರ್ನಿಯ ಪ್ರದರ್ಶನ ಕಂಡು ಒಲಿಂಪಿಕ್ಸ್ ನಲ್ಲೂ ಇದೇ ಫಲಿತಾಂಶ ಮರುಕಳಿಸುತ್ತದೆ ಎಂದು ಹೇಳುವುದು ವಾಸ್ತವಕ್ಕೆ ದೂರ. ಆದರೆ, ವಿಶ್ವವೇ ಕಾದು ಕುಳಿತಿರುವ ರಿಯೋ ಒಲಿಂಪಿಕ್ಸ್ ಗೆ ಬಾಕಿ ಇರೋದು ಕೆಲವೇ ದಿನಗಳಷ್ಟೆ. ಇಂತಹ ಪ್ರಮುಖ ಘಟ್ಟದಲ್ಲಿ ತಂಡದ ಪ್ರದರ್ಶನ ಆಟಗಾರರ ಮನೋಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಈ ಫಲಿತಾಂಶ.

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತ ಸತತ ಹೀನಾಯ ಸೋಲುಂಡಿತ್ತು. ಎದುರಾಳಿಗಳ ಪಾಲಿಗೆ ಇದೊಂದು ಬಚ್ಚಾ ತಂಡ ಎನ್ನುವಷ್ಟರ ಮಟ್ಟಿಗೆ ವೈಫಲ್ಯ ಅನುಭವಿಸಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಭಾರತ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರೂ ವಿಶ್ವ ಚಾಂಪಿಯನ್ನರಿಗೆ ತೊಡೆ ತಟ್ಟಿ ಮೈದಾನದಲ್ಲಿ ಪ್ರಬಲ ಸವಾಲು ಎಸೆಯುತ್ತಿದೆ. ಭಾರತ ತನ್ನ ಪ್ರಯತ್ನ ಬಿಡದೇ ಪ್ರತಿ ಪಂದ್ಯದಲ್ಲೂ ಇದೇ ಪ್ರದರ್ಶನ ನೀಡಿದರೆ, ಒಲಿಂಪಿಕ್ಸ್ ಪಂದ್ಯದ ದಿನ ಫಲಿತಾಂಶ ಬದಲಾದರೆ ಅಚ್ಚರಿ ಪಡುವಂತಿಲ್ಲ. ಅಂದರೆ ತೀರ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಅಲ್ಲದಿದ್ದರೂ ಕಡೇ ಸ್ಥಾನದಲ್ಲಿ ನಿಲ್ಲುವ ಸ್ಥಿತಿ ಇಲ್ಲ ಎಂಬ ಭರವಸೆ ದೊರೆತಿದೆ.

ಖಂಡಿತವಾಗಿಯೂ ಭಾರತ ಒಲಿಂಪಿಕ್ಸ್ ನಲ್ಲಿ ಕನಿಷ್ಠ ಪೋಡಿಯಂ ಫಿನಿಶ್ ಮಾಡುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಕಾರಣ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಹಾಕಿ ತಂಡದ ಹಾದಿ ಸುಗಮವಾಗಿರಲಿಲ್ಲ. ತಂಡದ ಕೋಚ್ ಗಳ ದಿಢೀರ್ ಬದಲಾವಣೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರೂ ತಂಡದ ಪ್ರದರ್ಶನ ಉತ್ತಮವಾಗಿಯೇ ಸಾಗಿ ಬಂದಿದ್ದು, ಎಲ್ಲಿಯೂ ಇಳಿಮುಖವಾಗಿಲ್ಲ. ತಂಡದ ಆಟಗಾರರ ಸಾಂಘಿಕ ಪ್ರದರ್ಶನ, ಹೊಸ ಕೋಚ್ ರೊಯ್ಲೆಂಟ್ ಒಲ್ಟ್ ಮನ್ಸ್ ತಂತ್ರಗಾರಿಕೆ ತಂಡದ ಈ ಪ್ರದರ್ಶನದ ಗುಟ್ಟು.

ಭಾರತ ಪದಕ ಪಡೆದಿದ್ದೇ ಆದಲ್ಲಿ 36 ವರ್ಷಗಳ ನಂತರ ಅಂದರೆ, ಸತತ 8 ಒಲಿಂಪಿಕ್ಸ್ ಬಳಿಕ ತನ್ನ ಪದಕದ ದಾಹ ನೀಗಿಸಿಕೊಂಡಂತಾಗಲಿದೆ. ಈ ಒಂದು ಕ್ಷಣಕ್ಕಾಗಿ ಆಟಗಾರರು ಹಗಲು ರಾತ್ರಿ ಕಠಿಣ ಪರಿಶ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಪದಕ ಗೆದ್ದು ಪೊಡಿಯಂ ಮೇಲೆ ನಿಂದು ರಾಷ್ಟ್ರಧ್ವಜ ಹಾರಿಸುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಕನಸು ಹೀಗೆ ಮುಂದುವರಿಯುತ್ತದೋ ಅಥವಾ ನಸಾಗುತ್ತದೆಯೋ ಎಂಬುದು ಇನ್ನೆರಡು ತಿಂಗಳಲ್ಲಿ ಗೊತ್ತಾಗಲಿದೆ.

Leave a Reply