ಸ್ಟೇಟ್ ಬ್ಯಾಂಕ್ ವಿಲೀನ ಸೂತ್ರ: ಯಾರಿದರ ಸೂತ್ರದಾರ, ಏನಿಹುದು ಸರ್ಕಾರದ ಲೆಕ್ಕಾಚಾರ?

authors-rangaswamyಸ್ಟೇಟ್ ಬ್ಯಾಂಕ್ ಗಳ ವಿಲೀನ ಬಜೆಟ್ ನಲ್ಲಿಯೇ ಆಗಿದ್ದ ಘೋಷಣೆ. ಇದೇ ಬುಧವಾರ ಜೂನ್ 15ಕ್ಕೆ ಕೇಂದ್ರ ಸಂಪುಟ ಸಭೆಯಲ್ಲೂ ಹಸಿರು ನಿಶಾನೆ ಸಿಕ್ಕಿದೆ. ಇದರ ಫಲಶ್ರುತಿ ಸ್ಟೇಟ್ ಬ್ಯಾಂಕ್ ಆಫ್  ಬೈಕಾನೇರ್ ಅಂಡ್ ಜೈಪುರ್, ಟ್ರಾವಂಕೋರ್, ಪಟಿಯಾಲಾ, ಮೈಸೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಹೀಗೆ ಐದು ಸ್ಟೇಟ್ ಬ್ಯಾಂಕ್ ಗಳು ವಿಲೀನವಾಗುವುದು ನಿಶ್ಚಿತವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಲು ಬೇಕಾಗಿರುವ ನೀಲಿನಕ್ಷೆ, ಹತ್ತು ಜನರ ಒಂದು ಸಮಿತಿ ರಚಿಸಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕ್ ನ ಮುಖ್ಯಸ್ಥೆ ಆರುಂಧತಿ ಭಟ್ಟಾಚಾರ್ಯ ಹೇಳುತ್ತಾರೆ ‘ವಿಲೀನದಿಂದ ಗಳಿಸುವುದೇ ಹೆಚ್ಚು, ಸ್ಟೇಟ್ ಬ್ಯಾಂಕ್ ಗಳು ಕಳೆದುಕೊಳ್ಳುವುದು ಏನೂ ಇಲ್ಲ. ಹಾಗೆ ನೋಡಿದರೆ ಇದೊಂದು ವಿನ್ -ವಿನ್ ಕಾಂಬಿನೇಷನ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇರುವ ಅಪಾರ ನೆಟ್ವರ್ಕ್ ಬೇಸ್ ಉಳಿದವಕ್ಕೂ ಸಿಗುತ್ತದೆ. ಅಲ್ಲದೆ ಉನ್ನತ ತಂತ್ರಜ್ಞಾನ ವಿಲೀನವಾದ ಇತರ  ಬ್ಯಾಂಕ್ ಗಳಿಗೂ ಲಭಿಸುವಂತೆ ಎಸ್ ಬಿ ಐ ಮಾಡುತ್ತದೆ. ಎಲ್ಲಕ್ಕೂ ಮುಖ್ಯ ಜಾಗತಿಕ ಮಟ್ಟದಲ್ಲಿ ಭಾರತದಂತ ಮಹಾನ್ ರಾಷ್ಟ್ರದಿಂದ ಟಾಪ್ 50 ಬ್ಯಾಂಕ್ಗಳ ಪಟ್ಟಿಯಲ್ಲಿ ಒಂದೂ ಬ್ಯಾಂಕ್ ಇಲ್ಲ. ಈ ವಿಲೀನದಿಂದ ಖಂಡಿತಾ ಜಾಗತಿಕ ಮಟ್ಟದಲ್ಲಿ ನಾವು ಒಂದಷ್ಟು ಸದ್ದು  ಮಾಡಬಹುದು. ಇದರಿಂದ ವಿಲೀನಗೊಂಡ ಬ್ಯಾಂಕ್ಗಳಿಗೂ, ಗ್ರಾಹಕರಿಗೂ ಅನುಕೂಲವೇ ಹೆಚ್ಚು. ಇಷ್ಟೇ ಅಲ್ಲದೆ ಕಾಮನ್ ಟ್ರೆಷರಿ ಇರುವುದರಿಂದ ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್ಗೆ ಕೊಡುವ ಸಾಲದ ಮೇಲಿನ ಬಡ್ಡಿ ನೇರ ಉಳಿತಾಯಕ್ಕೆ ಸೇರುತ್ತದೆ. ಹೊಸ ಜನರ ಕೆಲಸಕ್ಕೆ ತೆಗೆದುಕೊಳ್ಳುವದರ ಬದಲು ನಮ್ಮಲ್ಲೇ ಇರುವ ಪ್ರತಿಭೆ ಸದುಪಯೋಗ ಪಡಿಸಿಕೊಳ್ಳಬಹುದು’.
ಗಮನಿಸಿ. ಈ ವಿಲೀನದಿಂದ ಎಸ್ ಬಿ ಐ ವಹಿವಾಟು 37 ಲಕ್ಷ  ಕೋಟಿ ಮೀರುತ್ತದೆ. 50 ಕೋಟಿ ಗ್ರಾಹಕರ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಅಂದರೆ ಆಜುಬಾಜು ದೇಶದ ಜನಸಂಖ್ಯೆಯ 40 ಭಾಗ! ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ಎಸ್ ಬಿ ಐ 23 ಪ್ರತಿಶತ ಮಾರುಕಟ್ಟೆ ಸ್ವಾಮ್ಯ ಹೊಂದಿದ್ದು. ಈ ಪಾರುಪತ್ಯೆ ಇನ್ನಷ್ಟು ಹೆಚ್ಚಲಿದೆ.
ಎಲ್ಲಾ ಸರಿ ಈ ರೀತಿಯ ಬ್ಯಾಂಕ್ಗಳ ವಿಲೀನ ಏಕೆ ಮಾಡಲಾಗುತ್ತೆ?
ಎಸ್ ಬಿ ಐ ಮುಖ್ಯಸ್ಥೆ  ಹೇಳುವ ಪ್ರಕಾರ ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆ  ತೋರ್ಪಡಿಸಲು, ಹಣಕಾಸು ವಿಷಯದಲ್ಲಿ ಇನ್ನಷ್ಟು ಬಲಿಷ್ಠರಾಗಲು. ಸರಿ ಅವರ ಮಾತನ್ನು ಪೂರ್ಣವಾಗಿ ಅಲ್ಲಗೆಳೆಯಲು ಬರುವುದಿಲ್ಲ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ ಬಲಿಷ್ಠವಾಗಿಸಲು ಈ ಕಸರತ್ತು ಏಕೆ ಮಾಡಬೇಕು? ಏಕೆಂದರೆ ನಾವು ಈಗ ಬಲಿಷ್ಠರಲ್ಲ ಎನ್ನುವುದ ಸೂಕ್ಷ್ಮವಾಗಿ ಒಪ್ಪಿಕೊಂಡು, ಬಲಿಷ್ಠರಾಗುವುದರತ್ತ ನಡೆಯಲು.

ಇವತ್ತು ಈ ರೀತಿಯ ಕಸರತ್ತು ನಡೆದಿದ್ದರೆ ಅದಕ್ಕೆ ಅಪರೋಕ್ಷವಾಗಿ ಆರ್ ಬಿ ಐ ಮುಖ್ಯಸ್ಥ ರಘುರಾಮ ರಾಜನ್ ಕಾರಣ. ಏನಿದು ಕೇಂದ್ರ ಸರ್ಕಾರ ಅಪ್ಪಣೆ ಕೊಟ್ಟಿದೆ ಅಂದಿರಿ, ಮತ್ತೆ ರಾಜನ್ ನನ್ನ ಇಲ್ಲಿ ಎಳೆ ತಂದಿರಿ ಎನ್ನುವ ನಿಮ್ಮ ಪ್ರಶ್ನೆ ಗೆ ಇದೋ ಉತ್ತರ…

ಮೋದಿ ಸ್ವಚ್ಛ ಭಾರತ್ ಅಭಿಯಾನ ಶುರು ಮಾಡಿದಂತೆ, ರಾಜನ್ ಹಣಕಾಸು ವಲಯದಲ್ಲಿ  ಸ್ವಚ್ಛ ಬ್ಯಾಲನ್ಸ್ ಶೀಟ್ ಅಭಿಯಾನ ಶುರು ಮಾಡಿದ್ದು ವಿತ್ತ ವಲಯದಲ್ಲಿ ಒಂದು ಕಣ್ಣು ನೆಟ್ಟ ಎಲ್ಲಾ ಓದುಗರಿಗೂ ತಿಳಿದ ವಿಷಯವೇ ಆಗಿರುತ್ತದೆ.  ಬ್ಯಾಂಕ್ಗಳು ವಸೂಲಾತಿ ಆಗದೆ ಉಳಿದ ಸಾಲವನ್ನು ನಾನ್ ಪರ್ಫಾಮಿಂಗ್ ಅಸ್ಸೆಟ್ ಎಂದು ವಿಂಗಡಿಸಿ ಅದನ್ನ ತಮ್ಮ ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸುತ್ತಿದ್ದರು ಮತ್ತು ಪ್ರಾಫಿಟ್ ಅಂಡ್ ಲಾಸ್ ಸ್ಟೇಟ್ಮೆಂಟ್ ನಲ್ಲಿ ಈ ವರ್ಷ ಇಷ್ಟು ಲಾಭ ಎಂದು ತೋರಿಸುತ್ತಿದ್ದರು. ಪಿ ಅಂಡ್ ಎಲ್ ನೋಡಿದರೆ ಬ್ಯಾಂಕ್ಗಳು ಸಖತ್ ಲಾಭ ಮಾಡುತ್ತಿವೆ ಎನ್ನುವ ಚಿತ್ರ ಕಟ್ಟಿ ಕೊಡುತ್ತಿದ್ದವು. ಬ್ಯಾಲನ್ಸ್ ಶೀಟ್ ಮತ್ತೊಂದು ಕಥೆ ಹೇಳುತಿತ್ತು. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ.
ಒಂದು ಬ್ಯಾಂಕ್ 2014ರಲ್ಲಿ ತನ್ನ ಲಾಭ ₹200 ಕೋಟಿ ಎಂದು ಘೋಷಿಸುತ್ತದೆ. ಆ ವರ್ಷ ಅವರಲ್ಲಿ ವಸೂಲಾಗದೆ ಉಳಿದ ಸಾಲದ ಮೊತ್ತ ₹100 ಕೋಟಿ ಎಂದುಕೊಳ್ಳಿ. ಇದೇ ರೀತಿ 2015 ರಲ್ಲಿ ಲಾಭ  ₹250 ಕೋಟಿ, ವಸೂಲಾಗದ ಸಾಲ ₹150 ಕೋಟಿ. 2016 ರಲ್ಲಿ ಲಾಭ ₹300 ಕೋಟಿ ಲಾಭ, ವಸೂಲಾಗದ ಸಾಲ ₹250 ಕೋಟಿ ಎಂದುಕೊಳ್ಳಿ. ಕೇವಲ ಪಿ ಅಂಡ್ ಎಲ್ ನೋಡಿದರೆ  2014ರಲ್ಲಿ 200 , 2015ರಲ್ಲಿ 250 ಮತ್ತು 2016 ರಲ್ಲಿ 300 ಕೋಟಿ ಲಾಭ ಎನ್ನುವ ಚಿತ್ರಣ ಕಟ್ಟಿ ಕೊಡುತ್ತೆ. ಅಂದರೆ ಮೂರು ವರ್ಷದ ಒಟ್ಟು ಲಾಭ ₹750 ಕೋಟಿ!
ನಮ್ಮ ಬ್ಯಾಂಕ್ಗಳು ಇಷ್ಟು ದಿನ ತೂರಿಸಿಕೊಂಡು ಬಂದದ್ದು ಇದನ್ನೇ. ರಾಜನ್ ಹೇಳಿದ್ದು- ‘ಸಾಕು ಈ ರೀತಿ ನಮಗೆ ನಾವೇ ಮೋಸ ಮಾಡಿ ಕೊಳ್ಳುವ ಆಟ. ವಸೂಲಾಗದೆ ಉಳಿದ ಸಾಲವನ್ನು ಕೆಟ್ಟ ಸಾಲ ಎಂದು ವಿಂಗಡಿಸಿ ನಿಮ್ಮ ಲಾಭದಲ್ಲಿ ಕಳೆಯುತ್ತಾ ಬನ್ನಿ’ ಎಂದು.  ಉದಾಹರಣೆ ಮುಂದುವರಿಸೋಣ.
ಒಟ್ಟು ಮೂರು ವರ್ಷದ ಲಾಭ ₹750 ಕೋಟಿಯಲ್ಲಿ ರಾಜನ್ ಹೇಳಿದಂತೆ ಒಟ್ಟು ಮೂರು ವರ್ಷದ ವಸೂಲಾಗದ ಸಾಲದ ಮೊತ್ತ ₹650 ಕೋಟಿ ಕಳೆದರೆ ಉಳಿಯುವುದು ₹100 ಕೋಟಿ ಲಾಭ ಅದೂ ಮೂರು ವರ್ಷದಲ್ಲಿ! ಈಗ ವ್ಯತ್ಯಾಸ ತಿಳಿಯಿತೇ?
ರಾಜನ್ ತೆಗೆದುಕೊಂಡ ಈ ಕಠಿಣ ಕ್ರಮದಿಂದ ಜಗತ್ತಿನ ಇತರ ಬ್ಯಾಂಕ್ಗಳು ಬಿದ್ದರೂ ನಾವು ಸೂಪರ್.

ಸರಕಾರದ  ಮುಂದೆ ದೊಡ್ಡ ಸವಾಲು ಎದಿರಾಯಿತು. ಇಷ್ಟು ದಿನ ರೋಗ ಇದ್ದರೂ ಇಲ್ಲ ಎಂದುಕೊಂಡು ಸುಮ್ಮನಿದ್ದದ್ದಾಯಿತು. ರಾಜನ್ ರೋಗ ಇದೆಯೆಂದು ಜಗಜ್ಜಾಹೀರು ಮಾಡಿದ್ದಾರೆ. ಅವರ ನಡೆ ಸರಕಾರದ ವಿರುದ್ಧ, ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಹೂಡಿಕೆ ಮಾಡುವರಿಗೆ ತಪ್ಪು ಸಂದೇಶ ರವಾನೆ ಮಾಡಿದ ಹಾಗೆ… ಇತ್ಯಾದಿ ಅನ್ನಿಸಬಹುದು. ಆದರೆ ಮುಂದಿನ ವರ್ಷಗಳ ಭಾರತದ ಭವಿಷ್ಯಕ್ಕೆ ಆತ ತೆಗೆದುಕೊಂಡ ನಿರ್ಧಾರ ಬಹಳ ಒಳ್ಳೆಯದು.
ರಾಜನ್ ಈ ನಡೆಯಿಂದ ಆಕಾಶದಿಂದ ಒಮ್ಮೆಲೇ ನೆಲಕ್ಕೆ ಇಳಿದ ಬ್ಯಾಂಕ್ಗಳ ಪರಿಸ್ಥಿತಿ ಬಿಗಡಾಯಿಸಿತು. ಸರಕಾರ ವಿಧಿ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ಗಳಲ್ಲಿ ಮರು ಬಂಡವಾಳ ಹೂಡಿಕೆ ಮಾಡಿ ಕುಸಿತವನ್ನು ತಡೆದಿದೆ. ಕುಸಿತ ತಡೆಯಲು ಗ್ರಾಹಕರ ಹಾಗೂ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳಲು ಸರಕಾರ ಮಾಡಿದ ಮೊದಲ ಕಸರತ್ತು ಸರಿಯಾಗಿಯೇ ಇತ್ತು. ಕುಸಿತದ ನಂತರ ಬೆಳವಣಿಗೆಗೆ, ಅಭಿವೃದ್ಧಿಗೆ ಸರಕಾರ ತೆಗೆದುಕೊಂಡ ಎರಡನೆ ಹೆಜ್ಜೆ ಸ್ಟೇಟ್ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ. ರಾಜನ್ ಅಪರೋಕ್ಷವಾಗಿ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯ ಹರಿಕಾರ.

ಇದೆಲ್ಲ ಸರಿ, ಅರ್ಥ ಆಯ್ತು. ವಿಲೀನದಿಂದ ಬಲಿಷ್ಠ ಹೇಗಾಗುತ್ತಾರೆ, ಉಳಿತಾಯ ಹೇಗಾಗುತ್ತೆ ?

– ವಿಲೀನಗೊಳ್ಳಲಿರುವ ಎಲ್ಲಾ ಬ್ಯಾಂಕ್ಗಳ ಡೆಪಾಸಿಟ್ ಒಂದೇ ತಟ್ಟೆಯಲ್ಲಿ ತೂಗಲಾಗುತ್ತೆ. ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್ನಿಂದ ಹಲವು ಬಾರಿ ಸಾಲ ಪಡೆಯುತ್ತದೆ. ಅದಕ್ಕೆ ಬಡ್ಡಿ ಕೂಡ ನೀಡುತ್ತವೆ. ವಿಲೀನದಿಂದ ಈ ಬ್ಯಾಂಕ್ಗಳ ನಡುವಿನ ಕೊಡು -ಕೊಳ್ಳುವಿಕೆ ಇಲ್ಲವಾಗುತ್ತದೆ. ನೇರವಾಗಿ ಗ್ರಾಹಕನಿಗೆ ಸಾಲ ಕೊಡಬಹುದು, ಹೆಚ್ಚು ಬಡ್ಡಿಯೂ ಸಂಪಾದಿಸಬಹುದು.
– ಒಂದೇ ಏರಿಯಾದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಟಿಯಾಲ ಹೀಗೆ ಮೂರ್ನಾಲ್ಕು ಬ್ಯಾಂಕ್ ಇರುವುದು ನಾವು ಕಂಡಿದ್ದೇವೆ. ವಿಲೀನದಿಂದ ಮೂರು ಬ್ಯಾಂಕ್ ಬದಲು  ಸ್ಟೇಟ್ ಬ್ಯಾಂಕ್ ಇಂಡಿಯಾ ಒಂದೇ ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ. ಖರ್ಚು ಕಡಿಮೆಯಾಗುತ್ತದೆ.
-ಹೆಚ್ಚಿದ ಗ್ರಾಹಕ ಸಂಖ್ಯೆ, ಹೆಚ್ಚಿದ ವಹಿವಾಟು, ಹಲವು ಕೆಲಸಗಳು ಒಂದು ಸೂರಿನಡಿ, ನಿಪುಣರ ಕ್ಷಮತೆ ಹಂಚಿಕೊಂಡು ಕೆಲಸ ಮಾಡುವುದರಿಂದ  ಸಾಲ ವಸೂಲಾತಿ ಮುಂತಾದ ಕಾರ್ಯಗಳು ಕ್ಷಮತೆ ಪಡೆಯುತ್ತವೆ.
-ದೊಡ್ಡದಾದಷ್ಟು ಹಲವು ವಿಷಯಗಳಲ್ಲಿ, ವ್ಯವಹಾರಗಳಲ್ಲಿ ಹೆಚ್ಚಿನ ಚೌಕಾಸಿ ಮಾಡುವ ಶಕ್ತಿ ಬರುತ್ತದೆ. ಜಾಗತಿಕ ಮಟ್ಟದಲ್ಲಿ ನಾವು ಒಬ್ಬ ಆಟಗಾರರಾಗಿ ಹೊರ ಹೊಮ್ಮುವ ಸಾಧ್ಯತೆ ಕೂಡ ಇದೆ.
ಓಕೆ, ಮತ್ತ್ಯಾಕೆ ವಿಲೀನಕ್ಕೆ ಆತಂಕ-ಅಪಸ್ವರವೂ ಇದೆ?
ಯಾವುದೇ ಕೆಲಸಕ್ಕೆ ಅಪಸ್ವರ ಇದ್ದದ್ದೇ. ಇಲ್ಲಿ ಅಪಸ್ವರ ಎತ್ತಿರುವರು ಯಾರು? ನೌಕರರು. ಏಕೆ?  ಮೊದಲೇ ಹೇಳಿದಂತೆ ಒಂದು ಏರಿಯಾದಲ್ಲಿ ಮೂರು ಬ್ಯಾಂಕ್ಗಳಿದ್ದವು ಎಂದು ಕೊಳ್ಳಿ. ಪ್ರತಿ ಬ್ಯಾಂಕ್ ನಲ್ಲಿ10 ನೌಕರರಿದ್ದಾರೆ ಎಂದುಕೊಳ್ಳಿ. ವಿಲೀನದಿಂದ 1 ಬ್ರಾಂಚ್ ಆ ಏರಿಯಾದಲ್ಲಿ ಉಳಿದುಕೊಳ್ಳುತ್ತದೆ. ಹೆಚ್ಚಿದ ವಹಿವಾಟು, ಕಾರ್ಯದ ಸಲುವಾಗಿ ಆ ಬ್ರಾಂಚ್ ನಲ್ಲಿ ಹತ್ತರ ಬದಲಿಗೆ 20 ನೌಕರರ ನಿಯಮಿಸಿದರು ಎಂದುಕೊಂಡರೂ ಉಳಿದ ಹತ್ತು ನೌಕರರು ದೂರದ ಊರಿಗೆ ವರ್ಗಾವಣೆಯ ಅಥವಾ ಕೆಲಸ ಕಳೆದು ಕೊಳ್ಳುವ ಭೀತಿ ಅನುಭವಿಸುತ್ತಾರೆ. ಅದು ಸುಳ್ಳು ಕೂಡ ಅಲ್ಲ.
ಇದರ ಸಲುವಾಗಿ ನಾನೊಂದು ಸಣ್ಣ ಪ್ರಯೋಗ ಮಾಡಿದೆ. ನನ್ನ ನೆಟ್ವರ್ಕ್ ನಲ್ಲಿರುವ ಹಲವು  ಬ್ಯಾಂಕ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಗಳ ಈ ಬಗ್ಗೆ ಮಾತಾಡಿಸಿದೆ. ಎಲ್ಲರೂ ವಿಲೀನದ ಬಗ್ಗೆ ಭಾರಿ ಉತ್ಸುಕರಾಗಿದ್ದಾರೆ. ಹೆಚ್ಚಿನ ಅಭಿವೃದ್ಧಿ ಸಿದ್ಧ ಎನ್ನುವುದು ಅವರ ಅಂಬೋಣ.
ಹಲವು ಸಿಂಗಲ್ ವಿಂಡೋ ಕ್ಲರ್ಕ್ ಗಳನ್ನ, ಕ್ಯಾಷಿಯರ್ ಗಳನ್ನ ಮಾತನಾಡಿಸಿದೆ. ಇಲ್ಲಿ ನನಗೆ ಸಿಕ್ಕಿದ್ದು ತದ್ವಿರುದ್ಧ ಉತ್ತರ! ಸಾಮಾನ್ಯ ಬ್ಯಾಂಕ್ ನೌಕರ ತನ್ನ ಭವಿಷ್ಯದ ಬಗ್ಗೆ, ವಿಲೀನದ ಬಗ್ಗೆ ಗಲಿಬಿಲಿಗೊಂಡಿರುವುದು ಸತ್ಯ.
ಇವೆಲ್ಲಾ ಹೇಗೆ ಇರಲಿ, ವಿಲೀನ ಪ್ರಕ್ರಿಯೆ ಆಗುತ್ತೆ ಎಲ್ಲಾ ವಿರೋಧಗಳ ನಡುವೆ. ಹಾಗೆಯೇ ಸಮಯ ಎಲ್ಲಾ ನೋವನ್ನು ಮರೆಸುತ್ತದೆ. ದೇಶದ ಒಳಿತಿಗೆ ಅಲ್ಲಲ್ಲಿ ಹಲವರು ಬಹಳಷ್ಟು ತ್ಯಾಗ ಮಾಡಿದ್ದಾರೆ. ಈ ಬಾರಿ ಬ್ಯಾಂಕ್ ನೌಕರರ ಸರತಿ.

3 COMMENTS

  1. excellent article, it could have been more elucidative about the status of bank employees, in the view of world banks etc. am I right?

  2. ನಿಮ್ಮ ವಿಶ್ಲೇಷಣೆ ಬಹುಪಾಲು ಸರಿಯಾಗಿದೆ. ಸಹವರ್ತಿ ಬ್ಯಾಂಕುಗಳ ವಿಲೀನದ ಮಾತು ಬಹಳ ಹಳೆಯದು. ಇದಕ್ಕೆ ಚಾಲನೆ ದೊರೆತದ್ದು ೨೦೦೭ ರಲ್ಲಿ. ಅಂದಿನ ಅಧ್ಯಕ್ಷರು ಚಾಲನೆ ಕೊಟ್ಟ ವಿಲೀನ ಪ್ರಕ್ರಿಯೆಗೆ ಸರ್ಕಾರ ಹಾಗೂ ಆರ್ ಬಿ ಐ ತೋರಿದ ತಣ್ಣನೆಯ ಪ್ರತಿಕ್ರಿಯೆಯಿಂದಾಗಿ ಸೌರಾಷ್ಟ್ರ ಬ್ಯಾಂಕಿನ ವಿಲೀನ ಸಾಕಷ್ಟು ತಡವಾಯಿತು. ನಂತರ ಇಂದೋರ್ ಬ್ಯಾಂಕಿನ ವಿಷಯದಲ್ಲೂ ಸಾಕಷ್ಟು ವಿಳಂಬ ಇದೇ ಕಾರಣಕ್ಕೆ ಆಯಿತು. ಅಷ್ಟರೊಳಗೆ ಆ ಅಧ್ಯಕ್ಷರು ನಿವೃತ್ತರಾದರು. ಇಲ್ಲದಿದ್ದರೆ ಏಳೂ ಬ್ಯಾಂಕ್ ಅಲ್ಲದಿದ್ದರೂ ಹೆಚ್ಚಿನವು ವಿಲೀನ ವ ಅಗತ್ಯ ಇದ್ದವು. ಮುಂದಿನ ಅಧ್ಯಕ್ಷರು ಈ ಬಗ್ಗೆ ಆಸಕ್ತಿ ವಹಿಸಲೇ ಇಲ್ಲ. ಈಗ ರಾಜನ್ ಅವರನ್ನು ಕಾರಣೀಭೂತರನ್ನಾಗಿ ಮಾಡುವುದನ್ನು ನಾನು ಒಪ್ಪುವುದಿಲ್ಲ. ನೀವು ಹೇಳುವ ಕಾರಣ ಸರಿಯಾಗಿದ್ದಲ್ಲಿ ಉಳಿದ ಸಾ.ಕ್ಷೇತ್ರದ ಬ್ಯಾಂಕ್ ಗಳಲ್ಲಿ ಈ ಪ್ರಕ್ರಿಯೆ ಕೂಡಲೇ ಶುರುವಾಗಬೇಕು.
    ಶ್ರೀಧರ, ಸ್ಟೇಟ್ ಬ್ಯಾಂಕ್ ನಿವೃತ್ತ ಡಿ ಜಿ ಎಮ್. (ಈಗಾಗಲೇ ವಿಲೀನಗೊಂಡ ಎರಡೂ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಪಾಲಿನಲ್ಲಿ ನಾನು ನೇರವಾಗಿ ಭಾಗವಹಿಸಿದ್ದೆ.

Leave a Reply to praveen shetty Cancel reply