ಸಿದ್ರಾಮಯ್ಯ ಸಂಪುಟಕ್ಕೆ ಜನತಾ ಪರಿವಾರವೇ ಭೂಷಣ, ಖರ್ಗೆ ಪುತ್ರವ್ಯಾಮೋಹಕ್ಕೆ ಬಲಿ ಮೂಲ ಕಾಂಗ್ರೆಸ್ಸಿಗರ ಆಶಾಕಿರಣ!

Kagodu Thimmappa, Ramesh Kumar, Basavaraja Rayareddy, H.Y.Mety, Tanivir Sait, Ramesh Jaraki Holi, Santhosh Lod, M.R.Seetharam, Mallikarjun, Pramod Madvaraj, Eshwar Khadre, Rudrappa Lamani, Priyank Kharge, pose camera after taking oath as New Ministers at Rajbhavan in Bengaluru on Sunday. Governor V.R.Wala, Chief Minister Siddaramaiah also seen in the picture.

ರಾಜಭವನದಲ್ಲಿ ಭಾನುವಾರ ಪ್ರಮಾಣ ಸ್ವೀಕರಿಸಿದ ನೂತನ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೂವರೇ ವರ್ಷದಿಂದ ಬುಟ್ಟಿಯೊಳಗೇ ಆಡಿಸುತ್ತಿದ್ದ ಸಂಪುಟ ಪುನಾರಚನೆ ಎಂಬ ಹಾವನ್ನು ಕೊನೆಗೂ ಹೊರಬಿಟ್ಟಿದ್ದಾರೆ. ರಾಜಭವನದಲ್ಲಿ ಭಾನುವಾರ ಸಂಜೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೂಲಕ 13 ಮಂದಿ ನೂತನ ಸಚಿವರು ಸಂಪುಟ ಸೇರಿಕೊಂಡಿದ್ದು, 14 ಮಂದಿಗೆ ಗೇಟ್ ಪಾಸ್ ನೀಡಲಾಗಿದೆ.
ಸಂಪುಟ ಪುನಾರಚನೆಯಲ್ಲೂ ಜನತಾ ಪರಿವಾರ ಮೂಲದವರ ಅಭಿಯಾನ ಮುಂದವರಿದಿದೆ. ಈಗ ಸಂಪುಟಸೇರಿರುವವರ ಪೈಕಿ 4 ಮಂದಿ ಸಿದ್ದರಾಮಯ್ಯನವರ ಹಳೇ ಬಳಗದವರು. ಜನತಾ ಪರಿವಾರ ಮೂಲದ ಒಬ್ಬರನ್ನು ಮಾತ್ರ ಕೈಬಿಡಲಾಗಿದೆ. ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಲು ಒಂದು ಸ್ಥಾನವನ್ನು ಹಾಗೇ ಕಾಲಿ ಉಳಿಸಿಕೊಳ್ಳಲಾಗಿದೆ.
ಸಂಪುಟ ಪುನಾರಚನೆ ಎಂಬುದು ಯಾವತ್ತಿಗೂ ಯುಗಾದಿ ಇದ್ದಂತೆ, ಬೇವು-ಬೆಲ್ಲಗಳ ಮಿಶ್ರಣ. ಸಿದ್ದರಾಮಯ್ಯನವರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿ, ಅದು ಸಿಗದೆ ಕೊಸರಾಡುತ್ತಿದ್ದ ಹಿರಿಯ ಮಖಂಡರಾದ ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಸೇರಿದಂತೆ 13 ಮಂದಿ ಸಂಪುಟ ಸೇರಿ ಬೆಲ್ಲದ ಸವಿ ಅನುಭವಿದ್ದಾರೆ. ಬಸವರಾಜ ರಾಯರೆಡ್ಡಿ, ಎಚ್.ವೈ. ಮೇಟಿ, ಸಂತೋಷ್ ಲಾಡ್, ತನ್ವೀರ್ ಸೇಠ್, ಎಂ.ಆರ್. ಸೀತಾರಾಂ, ರಮೇಶ್ ಜಾರಕಿಹೊಳಿ, ಎಸ್.ಎಸ್. ಮಲ್ಲಿಕಾರ್ಜುನ್ ಸಂಪುಟ ದರ್ಜೆ ಸಚಿವರಾಗಿಯೂ, ಪ್ರಿಯಾಂಕ ಖರ್ಗೆ, ಪ್ರಮೋದ್ ಮಧ್ವರಾಜ್, ರುದ್ದಪ್ಪ ಲಮಾಣಿ, ಈಶ್ವರ ಖಂಡ್ರೆ ರಾಜ್ಯ ಸಚಿವರಾಗಿಯೂ ಪ್ರಮಾಣ ಸ್ವೀಕರಿಸಿದ್ದಾರೆ.
ಇನ್ನು ಸಂಪುಟದಿಂದ ಹೊರಹಾಕಿಸಿಕೊಂಡು ಬೇವಿನ ಪಾಲು ಪಡೆದವರು – ಶಾಮನೂರು ಶಿವಶಂಕರಪ್ಪ, ಅಂಬರೀಶ್, ಖಮರಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್, ಶ್ರೀನಿವಾಸ ಪ್ರಸಾದ್, ದಿನೇಶ್ ಗುಂಡೂರಾವ್, ಕಿಮ್ಮನೆ ರತ್ನಾಕರ, ಪರಮೇಶ್ವರ ನಾಯ್ಕ, ಶಿವರಾಜ್ ತಂಗಡಗಿ, ಅಭಯಚಂದ್ರ ಜೈನ್, ಮನೋಹರ ತಹಶೀಲ್ದಾರ್, ವಿನಯಕುಮಾರ್ ಸೊರಕೆ, ಸತೀಶ್ ಜಾರಕಿಹೊಳಿ, ಎಸ್.ಆರ್. ಪಾಟೀಲ. ಈ ಪೈಕಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.,ಎಸ್. ಮಲ್ಲಿಕಾರ್ಜುನ್ ಅಪ್ಪನ ನಷ್ಟ ಭರ್ತಿ ಮಾಡಿಕೊಂಡಿದ್ದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅಪ್ಪನ ಲಾಭ ಇಮ್ಮಡಿಗೊಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಸ್ಥಾನವನ್ನು ಸಹೋದರ ರಮೇಶ್ ಜಾರಕಿಹೊಳಿ ತುಂಬಿದ್ದರೂ ಇದು ಲಾಭ ನಷ್ಟಗಳ ಪರಿಧಿಗೆ ಬಂದಿಲ್ಲ. ಬದಲಿಗೆ ಸಿದ್ದರಾಮಯ್ಯ ವಿರುದ್ಧ ಸತೀಶ್ ಜಾರಕಿಹೊಳಿ ಹೊಡೆದಿದ್ದ ಸೆಡ್ಡು ಕೆಲಸ ಮಾಡಿದೆ. ಪ್ರಮೋದ್ ಮಧ್ವರಾಜ್ ಹಿರಿಯ ನಾಯಕಿ ಮನೋರಮಾ ಮಧ್ವರಾಜ್ ಪುತ್ರ. ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಕುರುಬ ಸಮುದಾಯದ ಬೇರೊಬ್ಬರು ಸಂಪುಟದಲ್ಲಿ ಇರಲಿಲ್ಲ. ಈಗ ಎಚ್.ವೈ. ಮೇಟಿ ಬಂದಿದ್ದಾರೆ. ಈ ಹಿಂದೆ ಎಚ್.ಎಂ. ರೇವಣ್ಣ ಸೇರಿದಂತೆ ಸಮುದಾಯದ ಶಾಸಕರು ಸಚಿವ ಸ್ಥಾನದ ಬೇಡಿಕೆ ಇಟ್ಟಾಗಲೆಲ್ಲ ಮುಖ್ಯಮಂತ್ರಿಯಾಗಿ ತಾವೇ ಇರುವಾಗ ಸಮುದಾಯದ ಬೇರೊಬ್ಬರ ಅಗತ್ಯ ಇದೆಯೇ ಎಂದು ಗದರುತ್ತಿದ್ದರು.
ಸಂಪುಟದಲ್ಲಿ ಸ್ಥಾನ ಕಳೆದುಕೊಂಡವರ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದರೆ, ಸ್ಥಾನ ಪಡೆದವರ ಊರುಕೇರಿಗಳಲ್ಲಿ ಸಂಭ್ರಮದ ವಾತಾವರಣ. ಸಿದ್ದರಾಮಯ್ಯನವರು ತಮ್ಮ ಸಂಪುಟ ತೆರವು ಮಾಡಿದವರ ಸ್ಥಾನಗಳನ್ನು ಆಯಾ ಜಾತಿ ಮತ್ತು ಪ್ರದೇಶವಾರು ಪ್ರಾತಿನಿಧ್ಯದಿಂದಲೇ ಭರ್ತಿ ಮಾಡಲು ಪ್ರಯತ್ನಿಸಿದ್ದರಾದರೂ ಅಂಬರೀಶ್ ಮತ್ತು ಕಿಮ್ಮನೆ ರತ್ನಾಕರ ಜಾಗಗಳಿಗೆ ಒಬ್ಬರೇ ಒಬ್ಬರು ಒಕ್ಕಲಿಗರನ್ನು ತರದೇ ಆ ಸಮುದಾಯದ ಮುನಿಸಿಗೆ ಕಾರಣರಾಗಿದ್ದಾರೆ. ಅದೇ ರೀತಿ ಖರ್ಗೆ ಅವರು ತಮ್ಮ ಪುತ್ರವ್ಯಾಮೋಹಕ್ಕೆ ಖಮರುಲ್ ಇಸ್ಲಾಂ ಹಾಗೂ ಚಿಂಚನಸೂರ್ ಕೈಬಿಟ್ಟಿದ್ದಾರೆ ಎಂಬುದು ಗುಲ್ಬರ್ಗಾದಲ್ಲಿ ಪ್ರದರ್ಶನ ನಡೆಸಿದವರ ಆಪಾದನೆ. ಮಂಡ್ಯ, ಗುಲ್ಬರ್ಗ, ಮೈಸೂರು, ಬೆಳಗಾವಿ, ಬಳ್ಳಾರಿ ಮತ್ತಿತರ ಕಡೆ ಪ್ರತಿಭಟನೆಗಳು ದಾಖಲಾಗಿವೆ.
ಇದರ ಜತೆಗೆ ಸಚಿವ ಸ್ಥಾನಕಾಂಕ್ಷಿಗಳಾಗಿದ್ದು ಸಿಗದೆ ಹೋದವರ ಪ್ರತಿಭಟನೆ ಬೇರೆ ಸ್ವರೂಪದ್ದು. ಸಮಾನ ಮನಸ್ಕರ ವೇದಿಕೆ ರಚಿಸಿಕೊಂಡು ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಆಡುತ್ತಿದ್ದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ತಮ್ಮನ್ನು ಬಿಟ್ಟು ಮೊದಲ ಬಾರಿ ಶಾಸಕರಾದ ಪ್ರಿಯಾಂಕ ಖರ್ಗೆ ಮತ್ತು ಪ್ರಮೋದ್ ಮಧ್ವರಾಜ್ ಅವರಿಗೆ ಸ್ಥಾನ ಕೊಟ್ಟಿರುವ ಸಿದ್ದರಾಮಯ್ಯನವರ ಬಗ್ಗೆ ವ್ಯಗ್ರರಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದ್ದಾರೆ. ಖರ್ಗೆ ಅವರು ತಮ್ಮ ಮಗನ ಪರ ಡೀಲ್ ಆಗಿದ್ದಾರೆ ಎಂದೂ ಆಪಾದಿಸಿದ್ದಾರೆ.
ಮುಸ್ಲಿಂ ಸಮುದಾಯದ ಖಮರುಲ್ ಇಸ್ಲಾಂ ಬದಲು ತನ್ವೀರ್ ಸೇಠ್, ಗಂಗಾ ಮತಸ್ಥ ಚಿಂಚನಸೂರ್ ಬದಲು ಪ್ರಮೋದ್ ಮಧ್ವರಾಜ್, ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಬದಲು ರಮೇಶ್ ಕುಮಾರ್, ಲಿಂಗಾಯತ ಸಮುದಾಯದ ಶಾಮನೂರು ಬದಲು ಪುತ್ರ ಮಲ್ಲಿಕಾರ್ಜುನ್, ಎಸ್. ಆರ್. ಪಾಟೀಲ್ ಬದಲು ಬಸವರಾಜ ರಾಯರೆಡ್ಡಿ, ಪರಿಶಿಷ್ಟ ಸಮುದಾಯದ ಶ್ರೀನಿವಾಸ ಪ್ರಸಾದ್ ಬದಲು ಪ್ರಿಯಾಂಕ್ ಖರ್ಗೆ, ವಾಲ್ಮೀಕಿ ಸಮುದಾಯದ ಸತೀಶ್ ಜಾರಕಿಹೊಳಿ ಬದಲು ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಜಾತಿ ಸಮೀಕರಣದಲ್ಲಿ ತುಂಬಲಾಗಿದೆ. ಉಡುಪಿಯ ವಿನಯಕುಮಾರ ಸೊರಕೆ ಬದಲು ಪ್ರಮೋದ್ ಮಧ್ವರಾಜ್, ಶಿವಮೊಗ್ಗದ ಕಿಮ್ಮನೆ ರತ್ನಾಕರ ಬದಲು ಕಾಗೋಡು ತಿಮ್ಮಪ್ಪ, ಕೊಪ್ಪಳದ ಶಿವರಾಜ್ ತಂಗಡಗಿ ಬದಲು ಬಸವರಾಜ ರಾಯರೆಡ್ಡಿ, ಬಾಗಲಕೋಟೆಯ ಎಸ್.ಆರ್. ಪಾಟೀಲ್ ಬದಲು ಎಚ್.ವೈ. ಮೇಟಿ, ಹಾವೇರಿಯ ಮನೋಹರ್ ತಹಶೀಲ್ದಾರ್ ಬದಲು ರುದ್ರಪ್ಪ ಲಮಾಣಿ ಸ್ಥಾನ ಪಡೆದಿದ್ದಾರೆ. ಧಾರವಾಡ ಜಿಲ್ಲೆ ಕಲಘಟಗಿಯ ಸಂತೋಷ್ ಲಾಡ್ ಹಿಂದೆ ಕಳೆದುಕೊಂಡಿದ್ದ ಸ್ಥಾನಕ್ಕೆ ಬಂದಿದ್ದಾರೆ. ಅವರನ್ನು ಭಾಷಾ ಅಲ್ಪಸಂಖ್ಯಾತ ಕೋಟಾದಡಿ ಧಾರ್ಮಿಕ ಅಲ್ಪಸಂಖ್ಯಾತ ಅಭಯಚಂದ್ರ ಜೈನ್ ಜಾಗಕ್ಕೆ ತರಲಾಗಿದೆ. ಪರಮೇಶ್ವರ ನಾಯಕ್ ಪ್ರತಿನಿಧಿಸುತ್ತಿದ್ದ ಬಳ್ಳಾರಿಗೆ ಯಾವುದೇ ಪ್ರಾತಿನಿಧ್ಯ ಇಲ್ಲದಿದ್ದರೂ ಲಂಬಾಣಿ ಸಮುದಾಯದ ರುದ್ರಪ್ಪ ಲಮಾಣಿ ಜತೆ ಜಾತಿ ಲೆಕ್ಕಾಚಾರದಲ್ಲಿ ಸಮೀಕರಿಸಲಾಗಿದೆ. ಅಂಬರೀಶ್ ಪ್ರತಿನಿಧಿಸುತ್ತಿದ್ದ ಮಂಡ್ಯಕ್ಕೆ ಪ್ರದೇಶ ಹಾಗೂ ಜಾತಿ ಎರಡೂ ಲೆಕ್ಕದಲ್ಲೂ ಖೋತಾ ಆಗಿದೆ.
ಇನ್ನೊಂದು ಮುಖ್ಯ ವಿಷಯವೆಂದರೆ ಮೂಲನಿವಾಸಿಗಳು ಹಾಗೂ ವಲಸಿಗರ ನಡುವಣ ಅಂತರವನ್ನು ಮತ್ತಷ್ಟು ವಿಸ್ತಾರ ಮಾಡಲಾಗಿದೆ. ಜನತಾ ಪರಿವಾರ ಮೂಲದವರ ಪೈಕಿ ಸತೀಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು, ಅದೇ ಮೂಲದ ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡಾ ಹಾಗೂ ಮೇಟಿ ಅವರಿಗೆ ಮಣೆ ಹಾಕಲಾಗಿದೆ. ಇದರೊಂದಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸರಿಸುಮಾರು ಅರ್ಧದಷ್ಟು ಮಂದಿ ಜನತಾ ಪರಿವಾರದವರೇ ಇದ್ದಾರೆ.

1 COMMENT

  1. ಸಿದ್ದರಾಮಯ್ಯ ಎಷ್ಟೇ ಆದರು ರಾಜಕೀಯದಲ್ಲಿ ಪಳಗಿರುವುದು ದೇವೇಗೌಡರ ಗರಡಿಯಲ್ಲಿ. ಶಿಷ್ಯ ಗುರುವನ್ನು ಮೀರಿಸದಿದ್ದರೆ ಹೇಗೆ? ಗುರುವಿನ ಮಿಂಚಿನ ಶಿಷ್ಯ

Leave a Reply