ಲಿಂಕ್ಡಿನ್ ಅನ್ನು ಮೈಕ್ರೊಸಾಫ್ಟ್ ಕಂಪನಿ ಖರೀದಿಸಿದ ಕಥೆ ಗೊತ್ತು, ಆದ್ರೆ ಲಿಂಕ್ಡಿನ್ ಸಂಸ್ಥಾಪಕನ ಯಶೋಗಾಥೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ವೃತ್ತಿಪರರ ನಂಬರ್ ಒನ್ ಸಾಮಾಜಿಕ ಜಾಲತಾಣ ಲಿಂಕ್ಡಿನ್ ಅನ್ನು ಮೈಕ್ರೋಸಾಫ್ಟ್ 26. 2 ಬಿಲಿಯನ್ ಡಾಲರ್ ಕೊಟ್ಟು ತನ್ನ ವಶಕ್ಕೆ ಪಡೆದುಕೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಲಿಂಕ್ಡಿನ್ ಅನ್ನು ಸ್ಥಾಪಿಸಿ 13 ವರ್ಷಗಳ ಅವಧಿಯಲ್ಲಿ 200 ದೇಶಗಳಲ್ಲಿ 40 ಕೋಟಿ ಬಳೆಕೆದಾರರು ಹೊಂದುವಷ್ಟರ ಮಟ್ಟಿಗೆ ಬೆಳೆಸಿದ್ದು ಅಮೆರಿಕದ ಖ್ಯಾತ ಉದ್ಯಮಿ ರೇಡ್ ಹಾಫ್ಮನ್.

ರೇಡ್ ಹಾಫ್ಮನ್ ಏಕಾಏಕಿ ಲಿಂಕ್ಡಿನ್ ಸ್ಥಾಪಿಸಿ ಅದನ್ನು ವಿಶ್ವದರ್ಜೆಗೆ ಏರಿಸಲಿಲ್ಲ. ಇದರ ಹಿಂದೆ ಹಲವು ಶ್ರಮದ ಕಥೆ ಇದೆ. ನೆಟ್ವರ್ಕ್ ಕ್ಷೇತ್ರದಲ್ಲಿ ಸುದೀರ್ಘ ಸೋಲಿನ ನಂತರ ಯಶಸ್ಸು ಕಂಡ ಕಥೆ ಇವರದು. ಹಾಗಾದರೆ ಅವರ ಈ ಪಯಣದ ಹಾದಿ ಹೇಗಿತ್ತು ನೋಡೋಣ ಬನ್ನಿ.

ಹಾಫ್ಮನ್ 1967 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿ, 1990 ರಲ್ಲಿ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಪಿಸ್ಟೆಮೊಲಜಿಯಲ್ಲಿ ಪದವಿ ಪಡೆದರು. ರೇಡ್ ಸಂಬಂಧಿ ಎರಿಕ್ ಹಾಫ್ಮನ್ ಒಬ್ಬ ಬರಹಗಾರರು. ಇವರಿಂದ ಸ್ಫೂರ್ತಿಗೊಂಡ ಹಾಫ್ಮನ್ ಬರವಣಿಗೆಯಲ್ಲೂ ತಮ್ಮ ಆಸಕ್ತಿ ಬೆಳೆಸಿಕೊಂಡರು.

ಪ್ರಪಂಚದಲ್ಲಿ ತನ್ನ ಪ್ರಭಾವ ಬೀರಬೇಕು ಎಂಬ ಆಸೆ ಹಾಫ್ಮನ್ ರಲ್ಲಿ ಮೂಡಿತ್ತು. ಈ ತಮ್ಮ ಆಸೆ ಈಡೇರಿಸಿಕೊಳ್ಳಲು ಮೊದಲು ಅವರು ಆಯ್ಕೆ ಮಾಡಿಕೊಂಡ ಮಾರ್ಗ ಶಿಕ್ಷಕರಾಗುವುದು. ಹೀಗಾಗಿ ತಮ್ಮ ಕನಸು ಹಾಫ್ಮನ್ ರನ್ನು ಪ್ರೊಫೆಸರ್ ಆಗಲು ಪ್ರೇರೆಪಿಸಿತು. ಪ್ರೊಫೆಸರ್ ಆದರೆ, ದೊಡ್ಡ ಮಟ್ಟದ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ ಎಂಬ ಆಲೋಚನೆ ಹಾಫ್ಮನ್ ಪ್ರೊಫೆಸರ್ ಆಗುವ ಯೋಚನೆಯನ್ನು ಕೈಬಿಡುವಂತೆ ಮಾಡಿತ್ತು. ತಾನೊಬ್ಬ ಪ್ರಭಾವಿ ವ್ಯಕ್ತಿಯಾಗಿ ಬೆಳೆಯಲು ಏನು ಮಾಡಬೇಕು ಎಂದು ಯೋಚಿಸಿದಾಗ ಹಾಫ್ಮನ್ ಗೆ ಸಿಕ್ಕ ಮಾರ್ಗ ಉದ್ಯಮ ಕ್ಷೇತ್ರ.

1993 ರ ವೇಳೆಗೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಅಗಷ್ಟೇ ಅಮೆರಿಕದಲ್ಲಿ ಅಂತರ್ಜಾಲದ ಕ್ರಾಂತಿ ಆರಂಭವಾಗುತ್ತಿತ್ತು. ಈ ಹಂತದಲ್ಲಿ ಅಂತರ್ಜಾಲದ ಮೂಲಕ ಸಾಮಾಜಿಕ ಸಂಪರ್ಕ ಬೆಸೆಯುವ ಐಡಿಯಾ ಹಾಫ್ಮನ್ ರಲ್ಲಿ ಮೂಡಿತ್ತು. ಈ ಬಗ್ಗೆ ಒಂದೆರಡು ಉದ್ಯಮಿಗಳನ್ನು ಸಂಪರ್ಕಿಸಿದ ಹಾಫ್ಮನ್ ತನ್ನ ಪರಿಕಲ್ಪನೆ ಹಂಚಿಕೊಂಡರು. ಆಗ ಅವರಿಂದ ಬಂದ ಪ್ರತಿಕ್ರಿಯೆ, ‘ನಿನ್ನ ಕಂಪನಿಗೆ ಮಿಲಿಯನ್ ಡಾಲರ್ ಗಳನ್ನು ಹೂಡಲು ಹೇಳುತ್ತಿರುವೆ. ನೀನು ಈ ಮೊದಲು ಈ ಸಾಫ್ಟ್ ವೇರ್ ಗಳನ್ನು ಬಳಸಿದ್ದೆಯಾ? ಇಲ್ಲವಾದರೆ ಮೊದಲು ಹೋಗಿ ನಿನ್ನ ಕೆಲಸ ನೋಡಿಕೊ’ ಎಂಬ ತಿರಸ್ಕಾರದ ಮಾತು.

ರೇಡ್ ಹಾಫ್ಮನ್ ಸಾಮಾಜಿಕ ಜಾಲ ತಾಣಗಳ ಕುರಿತಷ್ಟೇ ಆಲೋಚಿಸುತ್ತಿರಲಿಲ್ಲ. ಅದರ ಜೊತೆ ಜೊತೆಗೆ ತನ್ನ ಸಂಪರ್ಕ ವಲಯವನ್ನು ವೃದ್ಧಿಸಿಕೊಳ್ಳುವತ್ತ ಗಮನ ಹರಿಸಿದರು.

1994 ರಲ್ಲಿ ಆಪಲ್ ಕಂಪನಿ ಸೇರಿದ ಹಾಫ್ಮನ್, ‘ಇವರ್ಲ್ಡ್’ ಎಂಬ ಸಾಮಾಜಿಕ ಜಾಲತಾಣ ಬೆಳೆಸಲು ಮುಂದಾದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅದು ಯಶಸ್ವಿಯಾಗಲಿಲ್ಲ. 1997ರಲ್ಲಿ ‘ಸೋಷಿಯಲ್ನೆಟ್’ ಎಂಬ ತನ್ನದೇ ಆದ ಸಾಮಾಜಿಕ ಜಾಲತಾಣ ಆರಂಭಿಸಿದರು ಹಾಫ್ಮನ್. ಇದೊಂದು ಡೇಟಿಂಗ್ ತಾಣವಾಗಿದ್ದು, ಜನರಿಗೆ ತಮ್ಮದೇ ಆದ ಅಭಿರುಚಿ ಹೊಂದಿರುವವರನ್ನು ಸಂಪರ್ಕಿಸಲು ವೇದಿಕೆ ಕಲ್ಪಿಸಿಕೊಟ್ಟಿತ್ತು. ಅಮೆರಿಕದಲ್ಲಿ ಈ ಡೇಟಿಂಗ್ ಸಾಮಾಜಿಕ ತಾಣಗಳ ಟ್ರೆಂಡ್ ಆರಂಭವಾಗುವ ಮುನ್ನವೇ ಹಾಫ್ಮನ್ ಇದನ್ನು ಪರಿಚಯಿಸಿದ್ದರಿಂದ ನಿರೀಕ್ಷಿತ ಫಲ ಸಿಗಲಿಲ್ಲ.

ಸೋಷಿಯಲ್ನೆಟ್ ವೈಫಲ್ಯದ ನಂತರ ಹಾಫ್ಮನ್ ಮತ್ತೊಂದು ಸಂಪರ್ಕ ತಾಣ ತರಲು ಮುಂದಾದ. ಈ ಬಗ್ಗೆ ತನ್ನ ಸ್ನೇಹಿತ ಪೀಟರ್ ಬಗ್ಗೆ ಚರ್ಚಿಸಿದ. ಆಗ ಪೀಟರ್ ಕೊಟ್ಟ ಸಲಹೆ. ‘ಸದ್ಯಕ್ಕೆ ಆ ಪ್ರಯತ್ನ ಬೇಡ. ಈ ಕ್ಷೇತ್ರದಲ್ಲಿ ನಾವಿನ್ನೂ ಚಿಕ್ಕವರು. ಈಗಲೇ ಈ ಸಾಹಸ ಬೇಡ’ ಎಂಬ ಸಲಹೆ ಕೊಟ್ಟರು. 2000 ರಲ್ಲಿ ತಮ್ಮದೇ ಆದ ‘ಪೇಪಲ್’ ಕಂಪನಿಗೆ ಹಾಫ್ಮನ್ ರನ್ನ ಸೇರಿಸಿಕೊಂಡರು ಪೀಟರ್. ಪೇಪಲ್ ನಲ್ಲೂ ಹಾಫ್ಮನ್ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ.

ಹೀಗೆ ಮೇಲಿಂದ ಮೇಲೆ ಸೋಲಿನ ಕಹಿ ಅನುಭವಗಳನ್ನು ಪಡೆಯುವ ಹೊತ್ತಿಗೆ ಹಾಫ್ಮನ್ ಸಾಮಾಜಿಕ ಸಂಪರ್ಕ ಜಾಲತಾಣ ಕ್ಷೇತ್ರದಲ್ಲಿ ದಶಕಗಳನ್ನು ಸವೆಸಿದ್ದರು. ಆದರೆ, ಈ ಯಾವುದೇ ಸೋಲಿಗೂ ಆತ ಧೃತಿಗೆಡಲಿಲ್ಲ. ಎರಡು ವರ್ಷಗಳ ನಂತರ ಅಂದರೆ 2002 ರಲ್ಲಿ ಪೇಪಲ್ ಅನ್ನು ‘ಇಬೇ’ ಖರೀದಿಸಿತು. ಆಗ ತನಗೆ ಬಂದ ಷೇರಿನಲ್ಲಿ ಹಾಫ್ಮನ್ 2002 ರ ಡಿಸೆಂಬರ್ ನಲ್ಲಿ ಲಿಂಕ್ಡಿನ್ ಅನ್ನು ಹುಟ್ಟಹಾಕಿದರು.

ತಮ್ಮ ಸೋಲಿನ ಅನುಭವಗಳಿಂದಲೇ ಪಾಠ ಕಲಿತು ಲಿಂಕ್ಡಿನ್ ಅನ್ನು ವಿಶ್ವದ ನಂಬರ್ 1 ವೃತ್ತಿಪರರ ಸಾಮಾಜಿಕ ಸಂಪರ್ಕಜಾಲವನ್ನಾಗಿ ಬೆಳೆಸಿದ. ಲಿಂಕ್ಡಿನ್ ಯಶಸ್ವಿಯಾದ ನಂತರ ಹಾಫ್ಮನ್ 30-40 ಅಂತರ್ಜಾಲ ಉದ್ದಿಮೆಗಳಲ್ಲಿ ಬಂಡವಾಳ ಹೂಡಿದರು. 13 ವರ್ಷಗಳಲ್ಲಿ ಲಿಂಕ್ಡಿನ್ ಅನ್ನು ವಿಶ್ವದರ್ಜೆಗೆ ಏರಿಸಿದರು. ಹಾಫ್ಮನ್ ಲಿಂಕ್ಡಿನ್ ಅನ್ನು ಮೈಕ್ರೋಸಾಫ್ಟ್ ಗೆ ಮಾರಾಟ ಮಾಡಿದರೂ ಶೇ. 11 ರಷ್ಟು ಷೇರನ್ನು ಉಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮೈಕ್ರೊಸಾಫ್ಟ್ ಜತೆ ಕೈಜೋಡಿಸಿ ಕೆಲಸ ಮಾಡಲು ಸಜ್ಜಾಗಿದ್ದಾರೆ.

ಸುದೀರ್ಘ ಅವಧಿಯಲ್ಲಿನ ತಮ್ಮ ಅನುಭವವನ್ನು ಹಾಫ್ಮನ್ ಕೆಲವೇ ಹೇಳಿಕೆಗಳಲ್ಲಿ ಬಿಚ್ಚಿಡುತ್ತಾರೆ. ಅವರ ಈ ಹೇಳಿಕೆಗಳು ಅನೇಕರಿಗೆ ಸ್ಫೂರ್ತಿದಾಯಕವಾಗಿವೆ. ಅವುಗಳಲ್ಲಿ ಪ್ರಮುಖ ಹೇಳಿಕೆಗಳು ಹೀಗಿವೆ:

  • ನಿಮ್ಮ ಜೀವನದಲ್ಲಿ ವೇಗವಾಗಿ ಬೆಳೆಯಬೇಕಾದರೆ, ಯಾವ ಮಟ್ಟಕ್ಕೆ ಬೆಳೆಯಲು ನೀವು ಇಚ್ಛಿಸುತ್ತೀರೋ ಆ ಮಟ್ಟಕ್ಕೆ ತಲುಪಿರುವ ಜನರ ಸಂಪರ್ಕ ಬೆಳೆಸಿಕೊಳ್ಳಬೇಕು.
  • ನಿಮ್ಮ ಸಂಪರ್ಕ ಹೇಗಿರಬೇಕು ಎಂದರೆ, ನಿನ್ನ ಸುತ್ತಲಿನ ಜನ ನಿನಗೆ ಸಹಾಯ ಮಾಡಬೇಕು. ಅಗತ್ಯ ಬಿದ್ದಾಗ ನೀವು ಅವರಿಗೆ ಸಹಾಯ ಮಾಡುವಂತಿರಬೇಕು. ಇದೊಂದು ಪ್ರಭಾವಿ ಅಂಶ.
  • ಕಂಪನಿಯೊಂದನ್ನು ಆರಂಭಿಸುವುದು ಎಂದರೆ, ಬೆಟ್ಟದ ಮೇಲಿಂದ ಹಾರಿದಂತೆ. ಉದ್ಯಮಿಯಾದವನು ಕೆಳಗೆ ಬೀಳುವ ಅವಧಿಯಲ್ಲಿ ವಿಮಾನವನ್ನು ತಯಾರಿಸಿ ಹಾರಾಟ ಮುಂದುವರಿಸಬೇಕು.
  • ನಿಮ್ಮ ಮೊದಲ ಉತ್ಪನ್ನದ ಬಗ್ಗೆ ನಿಮಗೆ ಆಸಕ್ತಿ ಮೂಡಿಸದಿದ್ದರೆ, ಅದನ್ನು ತಡವಾಗಿ ಉತ್ಪಾದಿಸಿದಂತೆ.

ರೇಡ್ ಹಾಫ್ಮನ್ ಕೇವಲ ಉದ್ಯಮಿಯಷ್ಟೇ ಆಗಿರಲಿಲ್ಲ. ಉತ್ತಮ ಬರಹಗಾರರೂ ಹೌದು. ತಮ್ಮ ಅನುಭವದ ಮೇಲೆ ಎರಡು ಸ್ಫೂರ್ತಿದಾಯಕ ಪುಸ್ತಕಗಳನ್ನು ಬರೆದಿದ್ದು, ಮೂರನೇ ಪುಸ್ತಕ ಹೊರತರುವಲ್ಲಿ ನಿರತರಾಗಿದ್ದಾರೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ‘ದ ಸ್ಟಾರ್ಟ್ ಅಪ್ ಆಫ್ ಯು’ ಪುಸ್ತಕ ಅನೇಕ ಯುವ ಉದ್ಯಮಿಗಳನ್ನು ಆಕರ್ಷಿಸಿದೆ. ಇದರೊಂದಿಗೆ ಹಾಫ್ಮನ್ ತಮ್ಮ ಕನಸಿನಂತೆ ವಿಶ್ವದಲ್ಲಿ ತನ್ನ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿದ್ದಾರೆ.

ಉದ್ಯಮಿಯಾಗಿ ಎಷ್ಟು ಹಣ ಮಾಡಿದರು ಎಂಬುದಕ್ಕಿಂತ ತನ್ನ ಪ್ರಭಾವವನ್ನು ದೊಡ್ಡ ಪ್ರಮಾಣದಲ್ಲಿ ಬೀರಬೇಕು ಎಂಬ ಗುರಿ ಸಾಧನೆ ಇವರ ನಿಜವಾದ ಯಶಸ್ಸು. ಈ ಹಾದಿಯಲ್ಲಿ ಹಾಫ್ಮನ್ ತೋರಿದ ಛಲ, ತಾಳ್ಮೆ ಇತರರಿಗೆ ಮಾದರಿ.

Leave a Reply