ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಮಹಾರಾಷ್ಟ್ರ ಕಂಡುಕೊಂಡಿರೋ ಹೊಸ ಮಾರ್ಗ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಈಗ ಎಲ್ಲ ನಗರಗಳ ಪ್ರಮುಖ ಸಮಸ್ಯೆ. ಕೆಲವು ಪ್ಲ್ಯಾಸ್ಟಿಕ್ ಪುನರ್ಬಳಕೆ ಮಾಡಬಹುದಾದರೂ ಮತ್ತೆ ಕೆಲವು ಪ್ಲಾಸ್ಟಿಕ್ ಮರುಬಳಕೆ ಸಾಧ್ಯವಾಗದೇ ತ್ಯಾಜ್ಯವಾಗಿಯೇ ಉಳಿಯುತ್ತಿದೆ. ಇದರ ಪ್ರಮಾಣ ಹೆಚ್ಚುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಮಾರ್ಗ ಕಂಡುಕೊಂಡಿದೆ. ಅದೇನಂದ್ರೆ, ರಸ್ತೆ ನಿರ್ಮಾಣದಲ್ಲಿ ಡಾಂಬರಿನ ಜತೆ ಪ್ಲಾಸ್ಟಿಕ್ ಅನ್ನು ಬಳಸುವುದು.

ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಇನ್ನು ಪ್ರಾಯೋಗಿಕ ಹಂತದಲ್ಲಿದೆ. ಈ ವರ್ಷ ಪ್ಲಾಸ್ಟಿಕ್ ಬಳಸಿ 100 ಕಿ.ಮೀ ರಸ್ತೆ ನಿರ್ಮಾಣ ಮಾಡುತ್ತೇವೆ. ನಂತರ ದೊಡ್ಡ ಪ್ರಮಾಣದಲ್ಲಿ ಈ ಮಾದರಿ ಅಳವಡಿಸಿಕೊಳ್ಳುತ್ತೇವೆ. ಮುಂದಿನ ಐದು ವರ್ಷಗಳಲ್ಲಿ 1000 ಕಿ.ಮಿ ರಸ್ತೆ ನಿರ್ಮಾಣದ ಗುರಿ ಇದೆ ಎಂದಿದೆ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ.

ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಅವುಗಳೆಂದರೆ, ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ, ರಸ್ತೆಯಲ್ಲಿ ನೀರು ಇಳಿಯುವುದನ್ನು ತಡೆದು ಗುಣಮಟ್ಟ ಹೆಚ್ಚುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಣ್ಣಿನ ಫಲವತ್ತತೆ ಹಾಳಾಗದಂತೆ ನೋಡಿಕೊಳ್ಳುತ್ತದೆ. ರಸ್ತೆ ನಿರ್ಮಾಣದಲ್ಲಿ ಆಸ್ಫಾಲ್ಟ್ ಬಳಕೆ ಕಡಿಮೆಯಾಗಿ ರಸ್ತೆ ನಿರ್ಮಾಣದ ವೆಚ್ಚವೂ ತಗ್ಗುತ್ತದೆ.

ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಹೇಗಿರತ್ತೆ ಅಂದ್ರೆ, ರಸ್ತೆ ನಿರ್ಮಾಣದಲ್ಲಿ ಬಳಸಲಾಗುವ ಪ್ರತಿ 100 ಕೆ.ಜಿ ಡಾಂಬರಿಗೆ, ಪುನರ್ಬಳಕೆ ಮಾಡಲಾಗದಂತಹ 3-6 ಕೆ.ಜಿ ಪ್ಲ್ಯಾಸ್ಟಿಕ್ ಅನ್ನು ಬೆರೆಸಲಾಗುತ್ತದೆ. ಈ ಪ್ರಮಾಣದಲ್ಲಿ ಟಾರ್ ಗೆ ಪ್ಲಾಸ್ಟಿಕ್ ಬಳಸುವುದರಿಂದ ರಸ್ತೆಯ ಆಯಸ್ಸು 3 ವರ್ಷ ಹೆಚ್ಚುತ್ತದೆ.

ಈ ಪ್ರಕ್ರಿಯೆಯಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಸಂಗ್ರಹದ ಬಗ್ಗೆ ಶಾಲಾ ಮಕ್ಕಳಲ್ಲೂ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಕವರ್, ಹಾಲಿನ ಪೌಚ್, ಡಸ್ಟ್ ಬಿನ್ ಕವರ್, ಸೌಂದರ್ಯವರ್ಧಕಗಳ ಪ್ಲಾಸ್ಟಿಕ್ ತ್ಯಾಜ್ಯ, ಡಿಟರ್ಜೆಂಟ್ ಬಾಟೆಲ್, ನೀರಿನ ಬಾಟೆಲ್ ಗಳನ್ನು ಸಂಗ್ರಹಿಸುವಂತೆ ಹೇಳಿಕೊಡಲಾಗುವುದು.

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಲಾಗದೇ ಪರದಾಡುವ ಬದಲು ಇನ್ನು ಮುಂದೆ ರಸ್ತೆ ನಿರ್ಮಾಣದಲ್ಲಿ ಬಳಸುವುದು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಮಾರ್ಗ. ಈ ಮಾದರಿಯನ್ನು ಎಲ್ಲ ರಾಜ್ಯಗಳಲ್ಲೂ ಅಳವಡಿಸಿಕೊಂಡರೆ, ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.

1 COMMENT

Leave a Reply