ಸಂಪುಟ ಪುನಾರಚನೆ- ಇಂದಿನ ಕಂಪನಗಳೇನು?, ವೈದ್ಯರ ನಿವೃತ್ತಿ ವಯೋಮಿತಿ ಏರಿಕೆ, ಎಫ್ಡಿಐ ನಿಯಮ ಸಡಿಲಿಸಿದ ಕೇಂದ್ರ…

ಅಂಬರೀಶ್ ರಾಜೀನಾಮೆ ಇಂಗಿತ, ದಿನೇಶ್ ಗುಂಡೂರಾವ್ ರಿಗೆ ಕಾರ್ಯಾಧ್ಯಕ್ಷ ಪಟ್ಟ, ಶ್ರೀನಿವಾಸ್ ಪ್ರಸಾದ್ ಭಾರಿ ಗರಂ

ಸಚಿವ ಸ್ಥಾನ ಕಳೆದುಕೊಂಡ ಅಂಬರೀಷ್ ತಮ್ಮ ವಿಧಾನಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ಅಂಬರೀಷ್ ನೀಡಿರುವ ರಾಜೀನಾಮೆಯನ್ನು ವಿಧಾನ ಸಭೆಯ ಹಂಗಾಮಿ ಅಧ್ಯಕ್ಷ ಶಿವಶಂಕರ್ ರೆಡ್ಡಿ ತಿರಸ್ಕರಿಸಿದ್ದಾರೆ.

ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ಪತ್ರವನ್ನು ತಮ್ಮ ಆಪ್ತ ಸಹಾಯಕ ಶ್ರೀನಿವಾಸ್ ಎನ್ನುವವರ ಮೂಲಕ ಸಭಾಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದರು. ಸಭಾಧ್ಯಕ್ಷರು ರಾಜೀನಾಮೆ ಪತ್ರ ಪರಿಶೀಲಿಸಿ, ಅವರೇ ಬಂದು ಈ ಪತ್ರ ನೀಡಿದರೆ ಅಂಗೀಕರಿಸಲಾಗುವುದು. ಬೇರೆಯವರ ಮೂಲಕ ಕಳುಹಿಸಿದರೆ, ಅಂಗೀಕರಿಸಲು ಸಾಧ್ಯವಿಲ್ಲಎಂದು ಪತ್ರವನ್ನು ಹಿಂದಕ್ಕೆ ಕಳುಹಿಸಿದ್ದಾರೆ.

ಆರ್.ವಿ.ದೇವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ್, ಮಾಲಿಕಯ್ಯ ಗುತ್ತೇದಾರ್, ಡಾ.ಮಲಕಾರೆಡ್ಡಿ ಸೇರಿದಂತೆ ಎಂಟು ಶಾಸಕರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಬ್ಬರಿಸಿದ್ದರಾದರೂ ಯಾರೂ ಅಂಬರೀಶ್ ಮಾರ್ಗ ತುಳಿದಿಲ್ಲ.

ಮಂತ್ರಿಗಿರಿಯಿಂದ ಕೈ ಬಿಟ್ಟವರ ಜತೆ,ಮಂತ್ರಿಗಿರಿ ಸಿಗದ ಕಾರಣಕ್ಕಾಗಿ ಲೇಔಟ್ ಕೃಷ್ಣಪ್ಪ ಸೇರಿದಂತೆ ಹಲ ಮಂದಿ ಕಾಂಗ್ರೆಸ್ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು ಆ ಮೂಲಕ ಪಕ್ಷದಲ್ಲಿ ಎದ್ದಿರುವ ಭಿನ್ನಮತವನ್ನು ಶಮನಗೊಳಿಸುವುದು ಮುಖ್ಯಮಂತ್ರಿಗಳಿಗೆ ತಲೆ ನೋವಾಗಿದೆ. ಈಗ ಮಂತ್ರಿಗಳಾಗಿರುವವರ ಪೈಕಿ ಕಾಗೋಡು ತಿಮ್ಮಪ್ಪ,ರಮೇಶ್ ಕುಮಾರ್ ಅವರಂತಹ ಕೆಲ ಮಂದಿಯನ್ನು ಬಿಟ್ಟರೆ ಉಳಿದಂತೆ ಬಹುತೇಕರು ಒಂದೋ,ಪ್ರಮುಖ ನಾಯಕರ ಮಕ್ಕಳು,ಇಲ್ಲವೇ ಹಣ ಬಲವುಳ್ಳವರು ಎಂದು ಭಿನ್ನಮತೀಯರು ಕಿಡಿ ಕಾರುತ್ತಿದ್ದಾರೆ.

ಕನ್ನಡದ ಸುದ್ದಿವಾಹಿನಿಗಳಲ್ಲಿ ಸಂದರ್ಶನ ನೀಡುತ್ತ ಸಿಎಂ ವಿರುದ್ಧ ವಾಗ್ಸಮರವನ್ನೇ ಜಾರಿಯಲ್ಲಿಟ್ಟಿರುವವರು ಶ್ರೀನಿವಾಸ್ ಪ್ರಸಾದ್. ಕಂದಾಯ ಸಚಿವರಾಗಿದ್ದ ತಮ್ಮ ಮೇಲೆ ಯಾವುದೇ ಆರೋಪ, ಅದಕ್ಷತೆ ದೂರು ಇಲ್ಲದಿದ್ದರೂ ತೆಗೆದುಹಾಕಿದ್ದು ಏಕೆ ಎಂದು ಪ್ರಶ್ನಿಸಿರುವ ಅವರು, ಸಿದ್ದರಾಮಯ್ಯನವರ ಬದಲಾದ ವರ್ತನೆ ಹಾಗೂ ಖರ್ಗೆಯವರ ಪುತ್ರವ್ಯಾಮೋಹವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇನ್ನು, ಸಚಿವ ಸ್ಥಾನ ಕಳೆದುಕೊಂಡ ದಿನೇಶ್ ಗುಂಡೂರಾವ್ ಅವರಿಗೆ ಪ್ರದೇಶ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ಸ್ಥಾನ ದೊರೆತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಆದೇಶದಂತೆ ಗುಂಡೂರಾವ್ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.  ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದ ಗುಂಡೂರಾವ್ ಅವರ ದಕ್ಷತೆಯ ಕುರಿತು ಯಾವ ಅಪಸ್ವರಗಳು ಇರಲಿಲ್ಲವಾದರೂ ಬ್ರಾಹ್ಮಣರ ಕೋಟಾದಡಿಯಲ್ಲಿ ರಮೇಶ್ ಕುಮಾರ್ ಅವರಿಗೆ ಸ್ಥಾನ ಕಲ್ಪಿಸಬೇಕು ಎಂಬ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು.

ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆಗೆ ಮನವಿ

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ ಪಕ್ಷದ ಶಾಸಕ ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಎಂಟು ಮಂದಿಯ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಹಂಗಾಮಿ ಸಭಾಧ್ಯಕ್ಷ ಶಿವಶಂಕರರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.

ಮನವಿ ಸ್ವೀಕರಿಸಿದ ಸಭಾಧ್ಯಕ್ಷ ಶಿವಶಂಕರರೆಡ್ಡಿ, ನಿಮ್ಮ ಮನವಿಯ ಕುರಿತು ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ವಿಧಾನಸಭೆಯ ಒಳಗೆ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳುವ ಅಧಿಕಾರ ನಮಗಿದೆ. ಆದರೆ ಇದು ವಿಧಾನಸಭೆಯ ಒಳಗೆ ನಡೆದ ಘಟನೆಯಲ್ಲ. ಹೀಗಾಗಿ ಮುಂದೇನು ಮಾಡಬಹುದು ಎಂಬುದರ ಕುರಿತು ಕಾನೂನು ತಜ್ಞರ ಬಳಿ ಚರ್ಚಿಸುತ್ತೇನೆ. ನಂತರ ಅಗತ್ಯ ಬಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸುತ್ತೇನೆ ಎಂದರು.

ಸರ್ಕಾರಿ ವೈದ್ಯರ ವಯೋಮಿತಿ ಏರಿಕೆ

ಸರ್ಕಾರಿ ಆಸ್ಪತ್ರೆಗಳ ವೈದ್ಯರ ನಿವೃತ್ತಿ ವಯೋಮಿತಿಯನ್ನು 60 ರಿಂದ 65 ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಸೂಚನೆಯನ್ನು ರಾಜ್ಯ ಸರ್ಕಾರ ಪಾಲನೆ ಮಾಡಿದ್ದರೂ, ನಿವೃತ್ತಿ ವಯೋಮಿತಿಯನ್ನು ಹೆಚ್ಚಳ ಮಾಡುವ ಕಾಯ್ದೆಗೆ ಕೆಲವು ತಿದ್ದುಪಡಿ ಅಳವಡಿಸಿದೆ. ಆ ಪ್ರಕಾರ ಅರವತ್ತು ವರ್ಷಕ್ಕೇ ವೈದ್ಯರು ಐಚ್ಛಿಕ ನಿವೃತ್ತಿ ಹೊಂದಬಹುದು. ಒಂದು ವೇಳೆ ಅರವತ್ತೈದರವರೆಗೆ ಸೇವೆ ಮಾಡಲು ಬಯಸುತ್ತೇನೆ ಎಂದರೆ ಕೆಲಸ ಮಾಡಲು ದೈಹಿಕ ಅರ್ಹತೆ ಪರೀಕ್ಷೆಗೆ ಒಳಗಾಗಬೇಕು.

ಬ್ಯೂಟಿ ಸೆಲೂನ್, ಬ್ಯೂಟಿ ಸೆಂಟರ್‍ಗಳ ಹೆಸರಿನಲ್ಲಿ ವಾಣಿಜ್ಯ ಪರವಾನಗಿ ಪಡೆದು ಚರ್ಮರೋಗಕ್ಕೆ ಚಿಕಿತ್ಸೆ ನೀಡುವುದು, ಕೂದಲು ಕಸಿ ಮಾಡುವುದು ಸೇರಿದಂತೆ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವ ಕೆಲಸ ವ್ಯಾಪಕವಾಗಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳ ಒಳಗೆ ಇಂತಹ ಕೇಂದ್ರಗಳು ಕರ್ನಾಟಕ ಮೆಡಿಕಲ್ ಪ್ರಾಕ್ಟೀಷನರ್ಸ್ ಕಾಯ್ದೆಯಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಯೋಗ ದಿನಾಚರಣೆ ಅಂಗವಾಗಿ ಮಂಗಳವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಹಾಗೂ ಯೋಗಪಟುವೂ ಆಗಿರುವ ಬಿಪಾಶಾ ಬಸು ಪಾಲ್ಗೊಳ್ಳಲಿದ್ದಾರೆ ಅಂತಲೂ ಸಚಿವರು ತಿಳಿಸಿದ್ದಾರೆ.

ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮ ಸಡಿಲಿಸಿತು ಕೇಂದ್ರ

ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ್ದಂತೆ ರಕ್ಷಣಾ ವಿಭಾಗ, ಔಷಧೋದ್ಯಮ, ವಿಮಾನಯಾನ ಸೇರಿದಂತೆ ಹಲವು ವಿಭಾಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗಿದ್ದ ಮಿತಿಯನ್ನು ಕೇಂದ್ರ ಸರ್ಕಾರ ಸಡಿಲಿಸಿದೆ.

ಅತ್ಯಂತ ಉನ್ನತ ತಂತ್ರಜ್ಞಾನವನ್ನು ಹೊಂದಿರುವ ಕಂಪನಿಗಳಿಗೆ ಸ್ಥಳೀಯ ಪಾಲ್ಗೊಳ್ಳುವಿಕೆಯ ನಿಯಮವನ್ನೂ ಸಡಿಲಿಸಿರುವುದರಿಂದ ಆ್ಯಪಲ್ ನಂಥ ಕಂಪನಿಗಳಿಗೆ ವಹಿವಾಟು ಸುಲಭವಾಗಲಿದೆ.

ಮುಖ್ಯವಾಗಿ ಈ ವಿಭಾಗಗಳೆಲ್ಲ ವಿದೇಶಿ ನೇರ ಬಂಡವಾಳ ಹೂಡಿಕೆ ಹೊಸ ನಿಯಮಗಳಿಗೆ ಹೀಗೆ ತೆರೆದುಕೊಂಡಿವೆ.

– ರಕ್ಷಣಾ ವಿಭಾಗದಲ್ಲಿ  ಶೇ. 100 ಎಫ್ಡಿಐ

– ಫಾರ್ಮಾಸೂಟಿಕಲ್ ಶೇ. 74

– ನಾಗರಿಕ ವಿಮಾನಯಾನ ಶೇ. 100

-ಕೇಬಲ್ ನೆಟ್ವರ್ಕ್, ಡಿಟಿಎಚ್, ಮೊಬೈಲ್ ಟಿವಿಗಳಲ್ಲಿ ಶೇ. 100

Leave a Reply