‘ಊದೋದು ಕೊಟ್ಟು ಬಾರಿಸೋದು ತಗೊಂಡ್ರು..’ ಅಂದಂಗಾಗಿದೆ ಸಿದ್ದರಾಮಯ್ಯನವರ ಸಂಪುಟ ಪುನಾರಚನೆ ಕಸರತ್ತು!

author-thyagarajರಾಜಕೀಯ ತಂತ್ರಗಾರಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ದೇವೇಗೌಡರನ್ನೂ ಮೀರಿಸಿದ್ದಾರೆ. ಗೌಡರು ಒಂದು ಕಲ್ಲಿನಲ್ಲಿ ಎರಡು-ಮೂರು ಹಕ್ಕಿಗಳನ್ನು ಹೊಡೆದುರುಳಿಸುತ್ತಾರೆ ಎಂಬುದು ಪ್ರತೀತಿ. ಆದರೆ ಸಿದ್ದರಾಮಯ್ಯನವರು ಸಂಪುಟ ಪುನಾರಚನೆ ಮೂಲಕ ಒಂದೇ ಕಲ್ಲಿನಲ್ಲಿ ನಾಲ್ಕು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಹಾಗೆ ಮಾಡುವಾಗ ‘ರಾಜಕೀಯ ಸ್ಫೋಟ’ವನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ಅನ್ನು ವ್ಯವಸ್ಥಿತವಾಗಿ ಒಡೆದು ಹಾಕಿದ ಸಿದ್ದರಾಮಯ್ಯನವರು ಈಗ ಸಂಪುಟ ಪುನಾರಚನೆಯಲ್ಲೂ ಅದೇ ತಂತ್ರವನ್ನು ಮುಂದುವರಿಸಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಒಳಗಿನ ವಿರೋಧಿಗಳನ್ನು ಹಣಿಯಲು ಬಳಸಿಕೊಂಡಿದ್ದಾರೆ. ಸಂಪುಟ ಪುನಾರಚನೆಯಲ್ಲಿ ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ದಲಿತರು, ಒಕ್ಕಲಿಗರು, ಮೂಲ ಕಾಂಗ್ರೆಸ್ಸಿಗರ ಜತೆಗೆ ಆಪ್ತರನ್ನೂ ಮೂಲೆಗುಂಪು ಮಾಡಲು ಬಳಸಿಕೊಳ್ಳುವ ಮೂಲಕ ‘ರಾಜಕೀಯ ಸರ್ವಾಧಿಕಾರ’ ಮೆರೆದಿದ್ದಾರೆ. ಅದೀಗ ತಿರುಗುಬಾಣವಾಗಿದ್ದು, ಸಂಪುಟದಲ್ಲಿ ಸ್ಥಾನ ಕಳೆದುಕೊಂಡ ಕೆಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ಸಿದ್ದರಾಮಯ್ಯ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.

ಮೂರು ವರ್ಷವಾದರೂ ಸರಕಾರ ಇದೆಯೋ ಇಲ್ವೋ ಅನ್ನುವ ಸ್ಥಿತಿ ತಂದಿಟ್ಟಿದ್ದ ಸಿದ್ದರಾಮಯ್ಯನವರ ಸಚಿವ ಸಂಪುಟ ಪುನಾರಚನೆ ಆಗಬೇಕಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಬಹಳ ಹಿಂದೆಯೇ ಆಗಬೇಕಿತ್ತು. ತಡವಾಗಿಯಾದರೂ ಆಗಿದ್ದು ಒಳ್ಳೆಯ ಬೆಳವಣಿಗೆಯೇ. ಆದರೆ ಸಾಮಾಜಿಕ ನ್ಯಾಯ, ರಾಜ್ಯ ಪ್ರಗತಿ ದೂರದರ್ಶಿತ್ವ ಪಕ್ಕಕ್ಕಿಟ್ಟು ದ್ವೇಷ, ಪ್ರತಿಷ್ಠೆ, ಸ್ವಜನ ಪಕ್ಷಪಾತಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಸಂಪುಟ ಪುನಾರಚನೆ ಪ್ರಕ್ರಿಯೆ ಎಂಬುದು ‘ಊದೋದು ಕೊಟ್ಟು ಬಾರಿಸೋದು ತಗೊಂಡ್ರು’ ಅನ್ನುವ ಹಾಗೆ ಆಗಿದೆ. ಜತೆಗೆ ಜಾತಿ ಲೇಪಿತ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ.

ಕಾಂಗ್ರೆಸ್ ಒಳಗಣ ರಾಜಕೀಯ ಹಿರಿತನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲಿಂದಲೂ ಸಿದ್ದರಾಮಯ್ಯ ಅವರಿಗೆ ಕಾಯಿಸಿದ ತುಪ್ಪ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಿಎಂ ಕುರ್ಚಿ ಮೇಲೆ ಕಣ್ಣು ಮಿಟುಕಿಸುತ್ತಿದ್ದರಿಂದ ‘ದಲಿತ ಸಿಎಂ’ ಕೂಗು ಆಗಾಗ್ಗೆ ಅನುರಣಿಸುತ್ತಿತ್ತು. ಆದರೆ ಸಂಪುಟ ಪುನಾರಚನೆಗೆ ಮೊದಲ ತೊಡಕಾಗಿದ್ದ ಖರ್ಗೆ ಅವರನ್ನು ‘ಅಡ್ಜಸ್ಟ್’ ಮಾಡಿಕೊಂಡಿದ್ದೇ ಅಲ್ಲದೇ, ಅವರ ಪುತ್ರ ಪ್ರಿಯಾಂಕ್ ಖರ್ಗೆಗೆ ಮಂತ್ರಿ ಸ್ಥಾನ ಕೊಟ್ಟು ಈ ದಲಿತ ಸಿಎಂ ಕೂಗನ್ನೇ ಆಪೋಶನ ತೆಗೆದುಕೊಂಡಿದ್ದಾರೆ. ಪ್ರಿಯಾಂಕ ಖರ್ಗೆಗೆ ಕೊಟ್ಟ ಈ ಸ್ಥಾನವನ್ನು ದಲಿತ ಕೋಟಾದ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್ ಅವರಿಂದಲೇ ಕಿತ್ತುಕೊಂಡಿದ್ದಾರೆ. ಖರ್ಗೆ, ಪರಮೇಶ್ವರ್ ತಮ್ಮ ನೆರವಿಗೆ ಬರಲಿಲ್ಲ ಎಂಬ ಸಿಟ್ಟು ಪ್ರಸಾದ್ ಅವರದು. ಸಿದ್ದರಾಮಯ್ಯನವರ ಈ ರಾಜಕೀಯ ಜಾಣ್ಮೆಗೆ ತಲೆ ಗಿರ್ ಎಂದು ಪರಮೇಶ್ವರ್ ದೇಶ ಬಿಟ್ಟು ಟೂರ್ ಹೋಗಿದ್ದರೆ, ತಮ್ಮ ಸಮುದಾಯದ ಖರ್ಗೆ, ಪರಮೇಶ್ವರ್, ಶ್ರೀನಿವಾಸ ಪ್ರಸಾದ್ ಗೆ ಬಿದ್ದ ಹೊಡೆತ ಕಂಡು ಕೇಂದ್ರದ ಮಾಜಿ ಮಂತ್ರಿ ಕೆ.ಎಚ್. ಮುನಿಯಪ್ಪ ಮುಸಿಮುಸಿ ನಗುತ್ತಿದ್ದಾರೆ. ಅಲ್ಲಿಗೆ ಸಿದ್ದರಾಮಯ್ಯನವರು ಒಂದೇ ಕಲ್ಲಲ್ಲಿ ನಾಲ್ವರು ದಲಿತ ಮುಖಂಡರನ್ನು ಒಬ್ಬರ ಮುಖ ಮತ್ತೊಬ್ಬರು ನೋಡದಂತೆ ಛಿದ್ರ ಮಾಡಿಟ್ಟಿದ್ದಾರೆ. ಜತೆಗೆ ಖರ್ಗೆ ವಿರುದ್ಧ ಶಿಷ್ಯರಾದ ಖಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್ ಗುಲ್ಬರ್ಗಾದಲ್ಲಿ ತೊಡೆ ತಟ್ಟಿ ನಿಲ್ಲುವಂತೆ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯನವರ ಒಕ್ಕಲಿಗ ವಿರೋಧಿ ಅಭಿಯಾನದ ವಿಚಾರ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗಿನಿಂದಲೂ ದೇವೇಗೌಡರ ಕಾರಣಕ್ಕೆ ಒಕ್ಕಲಿಗ ಸಮುದಾಯದ ಮೇಲೆ ಸಿದ್ದರಾಮಯ್ಯನವರು ಬೆಳೆಸಿಕೊಂಡಿದ್ದ ಒಳಸಿಟ್ಟು ಮುಖ್ಯಮಂತ್ರಿ ಆದನಂತರ ಬಹಿರಂಗ ಗುಟ್ಟಾಗಿತ್ತು. ಮೊದಲಿಗೆ ಡಿ.ಕೆ. ಶಿವಕುಮಾರ್ ಅವರನ್ನು ಏಳು ತಿಂಗಳು ಸಂಪುಟದಿಂದ ಹೊರಗಿಟ್ಟರು. ಅವರು ಒಳಗೆ ಬಂದನಂತರ ಸಚಿವರಾದ ಅಂಬರೀಶ್ ಮತ್ತು ಕಿಮ್ಮನೆ ರತ್ನಾಕರ್ ವಿರುದ್ಧ ವ್ಯವಸ್ಥಿತ ಜನಾಭಿಪ್ರಾಯ ಮೂಡಿಸಲು ತಮ್ಮ ಪಟಾಲಂ ಮೂಲಕ ಯತ್ನಿಸಿದರು. ಹಾಗೆ ನೋಡಿದರೆ ಅಂಬರೀಶ್ ನಿರ್ವಹಿಸುತ್ತಿರುವ ವಸತಿ ಇಲಾಖೆ ಸಾಧನೆಯಲ್ಲಿ ಕರ್ನಾಟಕಕ್ಕೆ ಭಾರತದ ಐದನೇ ಸ್ಥಾನ ತಂದುಕೊಟ್ಟಿದೆ. ತಾವು ಮಾಡಿದ ಕೆಲಸದ ಬಗ್ಗೆ ಹೇಳಿಕೊಂಡಿರಲಿಲ್ಲ ಎಂಬುದು ಬಿಟ್ಟರೆ ಅಂಬರೀಶ್ ವಿರುದ್ಧ ಯಾವುದೇ ಗುರುತರ ಆಪಾದನೆಗಳು ಇರಲಿಲ್ಲ. ಕಿಮ್ಮನೆ ಸಜ್ಜನರಿದ್ದರೂ ತಮ್ಮ ಇಲಾಖೆ ನಿರ್ವಹಣೆಯಲ್ಲಿ ಎಡವಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವರಿಬ್ಬರಿಂದ ತೆರವಾದ ಸ್ಥಾನಗಳಿಗೆ ಒಕ್ಕಲಿಗ ಸಮುದಾಯದ ಒಬ್ಬರನ್ನೂ ತುಂಬದಿರುವುದರ ಹಿಂದಿರುವುದು ಸಿದ್ದರಾಮಯ್ಯನವರ ಮತ್ತದೇ ಜಾತಿವಿರೋಧಿ ಭಾವನೆ. ತಮ್ಮ ಆಪ್ತ ವಲಯದಲ್ಲೇ ಇದ್ದ ಎಂ. ಕೃಷ್ಣಪ್ಪ, ಸಿ.ಪಿ. ಯೋಗೀಶ್ವರ್, ಸುಧಾಕರ್ ಅವರನ್ನೂ ಪರಿಗಣಿಸದೇ ಹೋದದ್ದು ಇದಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಿದೆ. ಇವರೆಲ್ಲರೂ ಡಿ.ಕೆ. ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿರುವುದು ಸಿಎಂ ಒಳಾನಂದವವನ್ನು ಇಮ್ಮಡಿಗೊಳಿಸಿದೆ. ಇಲ್ಲೂ ಅಷ್ಟೇ ಒಂದೇ ಕಲ್ಲು, ಹಲವು ಹಕ್ಕಿ!

ಇನ್ನು ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟು ಹಿರಿಯ ಮುಖಂಡ ರಮೇಶ್ ಕುಮಾರ್ ಅವರನ್ನು ತಂದಿರುವುದು. ರಮೇಶ್ ಕುಮಾರ್ ಅವರಂಥ ಚತುರ ಸಂಸದೀಯ ಪಟುವನ್ನು ಸಂಪುಟಕ್ಕೆ ತರಲು ಪುನಾರಚನೆವರೆಗೆ ಕಾಯಿಸಿದ್ದೇ ಅವರಿಗೆ ಮಾಡಿದ ಬಹುದೊಡ್ಡ ಅವಮಾನ. ತಮ್ಮ ಭಾಗ್ಯ ಯೋಜನೆ ಸರಣಿಯ ಉದಾತ್ತ ಸ್ಥಾನದಲ್ಲಿರುವ ‘ಅನ್ನಭಾಗ್ಯ’ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವುದರಲ್ಲಿ ಕ್ರಿಯಾಶೀಲರಾಗಿದ್ದ ದಿನೇಶ್ ಗುಂಡೂರಾವ್ ಸ್ಥಾನಪಲ್ಲಟದಲ್ಲೂ ಕೆಲಸ ಮಾಡಿರುವುದು ದ್ವೇಷವೇ ಹೊರತು ಮತ್ತೇನೂ ಅಲ್ಲ. ತಮಗೆ ಸೆಡ್ಡು ಹೊಡೆದ ಕಾರಣಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಕೈಬಿಟ್ಟಿದ್ದು ಕೂಡ ಇದೇ ರೀತಿಯ ವೈಷಮ್ಯಕ್ಕೆ. ಇಲ್ಲಿ ಅವರು ನಿರ್ವಹಿಸಿದ ಖಾತೆಗಿಂತ ತೆಗೆದಿದ್ದ ಖ್ಯಾತೆಯೇ ಹೆಚ್ಚು ಕೆಲಸ ಮಾಡಿದೆ. ಜೈನ ಸಮುದಾಯದ ಅಭಯಚಂದ್ರ ಜೈನ್ ಅವರ ಬದಲು ಸಂತೋಷ್ ಲಾಡ್ ಅವರನ್ನು ಸಂಪುಟಕ್ಕೆ ತರುವಾಗ ಧಾರ್ಮಿಕ ಅಲ್ಪಸಂಖ್ಯಾತ ಕೋಟಾವನ್ನು ಭಾಷಾ ಅಲ್ಪಸಂಖ್ಯಾತ ಕೋಟಾ ಮೂಲಕ ಭರ್ತಿ ಮಾಡಲಾಗಿದೆ ಎಂದು ಕೊಟ್ಟಿರುವ ಸಮಜಾಯಿಷಿ ಬಾಲಿಶತನದ ಅತಿರೇಕ.

ಸಿದ್ದರಾಮಯ್ಯನವರ ಮಾತು ಮತ್ತು ಕೃತಿ ನಡುವೆ ಎಷ್ಟೊಂದು ಅಂತರ ಎಂಬುದನ್ನು ಪರಮಾಪ್ತ ಎಸ್.ಟಿ. ಸೋಮಶೇಖರ್ ಎತ್ತಿ ತೋರಿಸಿದ್ದಾರೆ. ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಪ್ರತಿಪಾದಿಸಿದ್ದ ತತ್ವವನ್ನು ಮುಖ್ಯಮಂತ್ರಿಯವರು ಪ್ರಮೋದ್ ಮಧ್ವರಾಜ್ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮುರಿದು ಬಿಸಾಡಿದ್ದಾರೆ. ಸಮಾನ ಮನಸ್ಕ ಕೂಟ ಮಾಡಿಕೊಂಡು ಆಗಾಗ್ಗೆ ಸಂಪುಟ ಪುನಾರಚನೆಗೆ ಆಗ್ರಹ ಮಾಡುತ್ತಾ ಅದಕ್ಕೊಂದು ಪೂರ್ವಭಾವಿ ವೇದಿಕೆ ಸಿದ್ಧಪಡಿಸಿದ್ದ ಸೋಮಶೇಖರ್ ತಂಡಕ್ಕೂ ಬಗನಿ ಗೂಟ ಬಡಿದಿದ್ದಾರೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಮಾತಾಡಿರುವ ಸೋಮಶೇಖರ್ ಅವರಿಗೊಬ್ಬರಿಗೇ ಗೊತ್ತು ತಮಗಾಗಿರುವ ನೋವು. ಅಲ್ಲಿಗೆ ಸಿದ್ದರಾಮಯ್ಯನವರ ಹೊಡೆತಕ್ಕೆ ನಿಷ್ಠರು, ಅನಿಷ್ಠರು ಎಂಬ ಬೇಧಕ್ಕಿಂತ ರಾಜಕೀಯ ಮೇಲಾಟವೇ ಹೆಚ್ಚು ಎಂದಂತಾಯಿತು.

ಇನ್ನು ಕಾಂಗ್ರೆಸ್ ಮೂಲ ನಿವಾಸಿಗಳು ಹಾಗೂ ವಲಸಿಗರ ಸಂಗತಿ. ಮುಖ್ಯಮಂತ್ರಿ ಆದ ನಂತರ ಮೊದಲ ಸಂಪುಟ ಪುನಾರಚನೆಯಲ್ಲೇ ಜನತಾ ಪರಿವಾರದವರಿಗೆ ಹೆಚ್ಚು ಆದ್ಯತೆ ನೀಡಿದರು ಎಂಬ ಆರೋಪ ಅವರ ಮೇಲೆ ಬಂದಿತ್ತು. ಅದನ್ನೀಗ ಸಂಪುಟ ವಿಸ್ತರಣೆಗೂ ವಿಸ್ತರಿಸಿದ್ದಾರೆ. ಕೆ.ಬಿ. ಕೋಳಿವಾಡ, ಡಾ. ಎ.ಬಿ. ಮಾಲಕರೆಡ್ಡಿ ಮಾಲೀಕಯ್ಯ ಗುತ್ತೇದಾರ್. ಅಪ್ಪಾಜಿ ನಾಡಗೌಡ ಅವರಂಥವರನ್ನು ಕಡೆಗಣಿಸಿರುವುದಕ್ಕೆ ಅವರ ಬಳಿ ಯಾವುದೇ ಸಮರ್ಥನೆ ಇಲ್ಲ. ಹಾಗೆಂದು ಜನತಾ ಪರಿವಾರ ಮೂಲದವರನ್ನು ವಿಸ್ತರಣೆಯಲ್ಲಿ ತೆಗೆದುಕೊಳ್ಳಬಾರಿದಿತ್ತು ಎಂದೇನೂ ಅಲ್ಲ. ಆದರೆ ಈ ಮೊದಲು ಸಂಪುಟ ಸೇರಿದ್ದ ಪರಿವಾರ ಮೂಲದ ಅಸಮರ್ಥರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬಹುದಿತ್ತು. ಇಲ್ಲೂ ಕೂಡ ಸಿದ್ದರಾಮಯ್ಯನವರ ರಾಜಕೀಯ ಪ್ರಜ್ಞೆಗಿಂತ ಪ್ರತಿಷ್ಠೆ ಕೆಲಸ ಮಾಡಿದೆ.

ಇನ್ನು ಸಂಪುಟ ಪುನಾರಚನೆಯಲ್ಲೂ ಮಹಿಳೆಯರಿಗೆ ಆದ್ಯತೆ ಕೊಟ್ಟಿಲ್ಲ. ಸಂಪುಟ ರಚನೆಯಲ್ಲಿ ಮಹಿಳೆಯರಿಗೆ ಆಗಿದ್ದ ಲೋಪವನ್ನು ಪುನಾರಚನೆಯಲ್ಲಾದರೂ ಸರಿಪಡಿಸಬಹುದಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಯಲ್ಲಿದ್ದ ಮೋಟಮ್ಮ ಅವರಂಥ ಹಿರಿಯ ನಾಯಕಿಯನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯನವರ ಬಗಲಲ್ಲಿ ಪೋಸು ಕೊಡುವ ಸಚಿವೆ ಉಮಾಶ್ರೀ ಅವರಂಥವರ ಮುಂದೆ ಮೋಟಮ್ಮ ಅವರಂಥವರು ಕಳೆದು ಹೋಗಿರುವುದು ರಾಜಕೀಯ ದುರಂತ.

ಸಂಪುಟ ಪುನಾರಚನೆ ಅಂದ ಮೇಲೆ ಒಂದಷ್ಟು ಜನ ಹೊರಕ್ಕೆ, ಒಂದಷ್ಟು ಜನ ಒಳಕ್ಕೆ ಎಂಬುದು ಸಹಜ. ಆರಿಸಿ ಕಳುಹಿಸಿದ ಜನರಿಗೆ, ಅಲಂಕರಿಸಿದ ಖಾತೆಗೆ ನ್ಯಾಯ ಒದಗಿಸದವರನ್ನು ಸಹಿಸಿಕೊಳ್ಳಬಾರದು ಎಂಬುದು ಸರಿಯೇ. ಖಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್, ಪರಮೇಶ್ವರ ನಾಯ್ಕ್ ಅವರಂಥವರನ್ನು ಇಷ್ಟು ದಿನ ಸಹಿಸಿಕೊಂಡದ್ದು ಅವರ ಪುಣ್ಯ ಮತ್ತು ಈ ನಾಡಿನ ದುರಂತ. ಅವರ ಮೇಲಿನ ಆಪಾದನೆಗಳು, ನಡೆ-ನುಡಿ, ಕಾರ್ಯಕ್ಷಮತೆ ಕೊರತೆ, ಜನರಿಗಿದ್ದ ವಿರೋಧಿ ಭಾವನೆಗಳು ಅವರನ್ನು ಯಾವತ್ತೋ ಮಾಜಿ ಸಚಿವರನ್ನಾಗಿ ಮಾಡಬೇಕಿತ್ತು. ಹೀಗಾಗಿ ಸಂಪುಟ ಪುನಾರಚನೆ ಬಗ್ಗೆ ಯಾರದ್ದೂ ತಕರಾರಿಲ್ಲ. ಆದರೆ ಹೊರಗೆ ಹಾಕಲ್ಪಟ್ಟವರಿರಗಿಂತಲೂ ಹೆಚ್ಚು ಅಸಮರ್ಥರು, ಭ್ರಷ್ಟಾಚಾರ ಆರೋಪ ಹೊತ್ತಿರುವವರು ಸಿದ್ದರಾಮಯ್ಯನವರ ಪಡಸಾಲೆಯಲ್ಲಿ ಹಾಗೇ ಉಳಿದುಕೊಂಡಿರುವುದರಿಂದ ಸಂಪುಟ ಪುನಾರಚನೆ ಕಸರತ್ತಿನ ಮೂಲ ಉದ್ದೇಶವೇ ಹೊಗೆ ಹಾಕಿಕೊಂಡಿದೆ. ಜತೆಗೆ ಮುಖ್ಯಮಂತ್ರಿ ವಿರುದ್ಧ ಆಕ್ರೋಶದ ಸ್ಫೋಟಕ್ಕೂ ಕಾರಣವಾಗಿದೆ.

ಇಲ್ಲಿ ಸಂಪುಟದಿಂದ ನಿರ್ಗಮಿತ ನಾಯಕ ಶ್ರೀನಿವಾಸ ಪ್ರಸಾದ್ ಹೇಳಿರುವ ಮಾತು ಹೆಚ್ಚು ಪ್ರಸ್ತುತ ಎನ್ನಿಸುತ್ತದೆ. ‘ವಿಧಾನಸಭೆ ಮುಂದಿನ ಚುನಾವಣೆ ದಲಿತ ಸಿಎಂ ನೇತೃತ್ವದಲ್ಲಿ ನಡೆಯುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರು ಮನಬಂದಂತೆ ವರ್ತಿಸುತ್ತಿದ್ದಾರೆ. ಅವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ. ಒಂದೊಮ್ಮೆ ಸಂಪುಟ ಪುನಾರಚನೆ ಪ್ರಕ್ರಿಯೆ ಪರಿಪೂರ್ಣ ಆಗಬೇಕಾದರೆ ಮೊದಲು ಸಿದ್ದರಾಮಯ್ಯನವರನ್ನು ಬದಲಿಸಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ’ ಎಂಬ ಪ್ರಸಾದ್ ಮಾತಿನಲ್ಲಿ ಹಿರಿಯ ಕಾಂಗ್ರೆಸ್ಸಿಗರ ಭಾವ ಮಿಳಿತವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಬಂದರೂ ತಮಗೆ ಸಿಎಂ ಪಟ್ಟ ದೊರಕುವುದಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿರುವುದು ಸಂಪುಟ ಪುನಾರಚನೆಯಲ್ಲಿ ಪ್ರತಿಬಿಂಬಿತವಾಗಿದೆ. ತಮಗೆ ಸಿಕ್ಕ ಸ್ವಾತಂತ್ರ್ಯ ಬಳಕೆಯಲ್ಲಿ ಮೇಲ್ವರ್ಗ ಹಾಗೂ ಅಹಿಂದ ಎರಡರ ಭಾವನೆಗಳ ದಮನದ ಜತೆಗೆ ಸಿದ್ದರಾಮಯ್ಯನವರ ಮೂಲ ‘ಕಾಂಗ್ರೆಸ್ ಆಪೋಶನ ಕರ್ಮಸಿದ್ಧಾಂತ’ವೂ ಅಡಗಿರುವಂತೆ ಕಾಣುತ್ತಿದೆ.

ಲಗೋರಿ : ತನಗಿಲ್ಲದ್ದು ಪರರಿಗೂ ಬೇಡ ಎಂದೆನಿಸಿದವ ಪರರಿಗೂ ಬೇಡವಾಗುತ್ತಾನೆ.

Leave a Reply