ದೇಶ ಬದಲಾಗುತ್ತಿದೆ… ಇದು ಕಾಂಗ್ರೆಸ್ ಯುಕ್ತ ಬಿಜೆಪಿ ಭಕ್ತ ಭಾರತ!

ಚೈತನ್ಯ ಹೆಗಡೆ

– ರಘುರಾಮ ರಾಜನ್ ಇದ್ದರೆ ಮಾತ್ರ ಆರ್ಬಿಐಗೆ ಅಸ್ತಿತ್ವವೇ? ಅವಧಿ ಮುಗೀತು, ಎದ್ದು ಹೋಗ್ತಿದಾರೆ ಏನೀಗ? ಅವಧಿ ಮುಂದುವರಿಯಬೇಕು ಅಂತ ನಿಯಮವೇನಾದರೂ ಇದೆಯೇ?

– ನಿಫ್ಟ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಗೆ ಬಿಜೆಪಿಯ ಮಾಜಿ ಸಂಸದ, ಕ್ರಿಕೆಟಿಗನಿಗೆ ಅವಕಾಶ ಮಾಡಿಕೊಡ್ತಿದ್ದೇವೆ. ಇದು ಆಡಳಿತಾತ್ಮಕ ಹುದ್ದೆ. ಫ್ಯಾಶನ್, ವಸ್ತ್ರೋದ್ಯಮದ ಬಗ್ಗೆ ಗೊತ್ತಿರಬೇಕು ಅನ್ನೋದೇನಿದೆ? ಈ ಹಿಂದಿನ ಸರ್ಕಾರಗಳೇನು ಈ ಸಂಸ್ಥೆಗೆ ವಸ್ತ್ರೋದ್ಯಮ ಪರಿಣತರನ್ನು ನೇಮಿಸಿದ್ದವಾ? ಇಲ್ಲವಲ್ಲ…

– ಅಬ್ದುಲ್ ಕಲಾಂ ಅವರನ್ನು ಎರಡನೇ ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರಿಸಲು ಕಾಂಗ್ರೆಸಿಗರು ಅಡ್ಡಿಯಾಗಿದ್ದು ಗೊತ್ತಿಲ್ಲವೇ? ಸೋನಿಯಾ ಗಾಂಧಿ ಅಡುಗೆ ಮನೆಗೆ ಪ್ರವೇಶ ಹೊಂದಿರುವ ಏಕಮೇವ ಕಾರಣಕ್ಕೆ ಪ್ರತಿಭಾ ಪಾಟೀಲರನ್ನು ರಾಷ್ಟ್ರಪತಿ ಮಾಡಲಿಲ್ಲವಾ?

ಬಿಜೆಪಿಯ ಕಟ್ಟರ್ ಬೆಂಬಲಿಗರು ಹಾಗೂ ಪಕ್ಷದ ಟ್ವಿಟ್ಟರ್ ವೀರ ಸೇನಾನಿಗಳು ಮುಂದುಮಾಡುತ್ತಿರುವ ಈ ಎಲ್ಲ ಸಮರ್ಥನೆಗಳಲ್ಲಿ ತರ್ಕವಿಲ್ಲ ಅಂತ ಖಂಡಿತ ಹೇಳುವಂತಿಲ್ಲ. ಈ ಬುದ್ಧಿವಂತಿಕೆಯ ಮಾತುಗಳಲ್ಲಿ ಒಂದಂತೂ ಸ್ಪಷ್ಟವಾಗುತ್ತಿದೆ. ಅದೆಂದರೆ, ನಿಜಕ್ಕೂ ಈ ಹಿಂದಿನ ಕಾಂಗ್ರೆಸ್ ಆಡಳಿತಕ್ಕೆ ಹೊರತಾದ ಆಡಳಿತ ಕೊಡುವುದು ಈ ಸರ್ಕಾರದ ಕಾರ್ಯಸೂಚಿಯಾಗಿ ಉಳಿದಿಲ್ಲ. ‘ಹಿಂದಿನವರು ಮಾಡಿರಲಿಲ್ಲವಾ… ನಾವು ಮಾಡಿದರೇನೀಗ?’ ಎಂಬ ದಾರಿದ್ರ್ಯ ರೇಖೆಯೊಳಗೆ ಬಿಜೆಪಿ ಬಂದು ನಿಂತಿದೆ. ಅಲ್ಲಿಗೆ, ಇವರ ‘ಕಾಂಗ್ರೆಸ್ ಮುಕ್ತ ಭಾರತ’ದ ಅರ್ಥ ಏನೆಂದರೆ- ದೇಶಕ್ಕೆ ಕಾಂಗ್ರೆಸ್ ಬೇಕಿಲ್ಲ, ಆ ಪಕ್ಷ ಆಚರಿಸಿಕೊಂಡುಬಂದಿದ್ದ ಚಮಚಾಗಿರಿ, ಪ್ರತಿಭೆಗೆ ಬದಲಾಗಿ ಹೊಗಳುಭಟರಿಗೆ ಮಣೆ ಇಂಥವನ್ನೆಲ್ಲ ಬಿಜೆಪಿಯೇ ಮಾಡಲಿದೆ!

ಪ್ರಧಾನಿ ನರೇಂದ್ರ ಮೋದಿ ಒಳ್ಳೆ ಕೆಲಸಗಾರರು, ರಾಜಕಾರಣಿಯಂತಲ್ಲದೇ ಕಂಪನಿ ನಡೆಸುವ ಸಿಇಒರಂತೆ ಕಾರ್ಯತತ್ಪರರು ಎಂಬುದೆಲ್ಲ ಶ್ಲಾಘನಾರ್ಹವೇ. ಆದರೆ ಅಂಥ ನರೇಂದ್ರ ಮೋದಿ ಆಡಳಿತಗಾಥೆಯ ಭಾಗವಾಗಬೇಕಾದರೆ ‘ಪ್ರತಿಭೆ’ ಹೊಂದಿರುವುದೇ ಮಾನದಂಡವಲ್ಲ, ಅಬ್ಬರ- ಮೋದಿ ಭಜನೆ, ಸರ್ಕಾರದ ಮಾತಿಗೆ ಹೌದ್ಹೌದೆಂಬ ತಮ್ಮ ಮಾತು ಸೇರಿಸುವುದು ಇತ್ಯಾದಿಗಳೇ ಪ್ರಾಮುಖ್ಯ ಪಡೆದುಕೊಳ್ಳುತ್ತಿವೆ.

ಮಧ್ಯಮವರ್ಗವು ನರೇಂದ್ರ ಮೋದಿಯವರ ಬೆನ್ನಿಗೆ ಆ ಪರಿ ನಿಂತಿದ್ದು ಏಕೆ? ಹತ್ತು ವರ್ಷಗಳ ಯುಪಿಎ ಭ್ರಮನಿರಸನದ ಜತೆ, ಹಲವು ಸಂಘರ್ಷಗಳ ನಡುವೆ ಅರಳಿನಿಂತ ನರೇಂದ್ರ ಮೋದಿ ಸ್ವನಿರ್ಮಿತ ಪ್ರತಿಭೆ ಅಂತನಿಸಿದರು. ಇಂಥ ವ್ಯಕ್ತಿತ್ವ ಶ್ರಮ ಮತ್ತು ಪ್ರತಿಭೆಗೆ, ಇಂದಿನ ಆರ್ಥಿಕ ಆಶೋತ್ತರಗಳಿಗೆ ಬೆಲೆ ಕೊಡುವ ಭರವಸೆ ಹುಟ್ಟಿದ್ದರಿಂದಲೇ ಬಿಜೆಪಿಗೆ ಅಂತಲ್ಲದೇ ಮೋದಿ ಕೇಂದ್ರಿತವಾಗಿ ಆ ಮಟ್ಟದ ಬೆಂಬಲ ವ್ಯಕ್ತವಾಯಿತು. ಇಂಥವರ ನೇತೃತ್ವದಲ್ಲೂ ಸರ್ಕಾರದ ಸಂಸ್ಥೆಗಳಿಗೆ ಪ್ರತಿಭೆಯಲ್ಲದೇ, ರಾಜಕೀಯ ಪ್ರಾಶಸ್ತ್ಯವೇ ನೇಮಕದ ಅಳತೆಗೋಲಾಗುತ್ತದೆ ಎನ್ನುವುದಾದರೆ, ಸಾಂಸ್ಥಿಕ ರಚನೆಗಳನ್ನು ಎಂದಿನಂತೆಯೇ ಗಂಜಿಕೇಂದ್ರವಾಗಿಯೇ ಇಡುತ್ತಾರೆ ಅಂತಾದರೆ… ಆ ಕೆಲಸವನ್ನು ಕಾಂಗ್ರೆಸ್ಸೇ ಅಚ್ಚುಕಟ್ಟಾಗಿ ಮಾಡಿಕೊಂಡಿತ್ತು. ಇವರದ್ದೇನು ಹೆಚ್ಚುವರಿ?

ಪ್ರಧಾನಿ ನರೇಂದ್ರ ಮೋದಿಯವರು ಎಂಥ ಕೆಲಸಗಾರರೆಂದರೆ, ವಿದೇಶ ಪ್ರವಾಸ ಸಂದರ್ಭದಲ್ಲಿ ಹೋಟೇಲುಗಳಲ್ಲಿ ತಂಗದೇ ವಿಮಾನದಲ್ಲೇ ನಿದ್ರಿಸಿ ಸಮಯ ಉಳಿಸುತ್ತಾರೆ ಎಂಬ ವರದಿಗಳೆಲ್ಲ ಪ್ರಕಟವಾಗಿವೆ. ಭೇಷ್. ಆದರೆ ನೇಮಕಗಳ ವಿಷಯದಲ್ಲಿ ಇಂಥ ಶ್ರಮ ಸಂಸ್ಕೃತಿಗೇಕೆ ಬೆಲೆಯಿಲ್ಲ? ನಿಫ್ಟ್ ಅಧ್ಯಕ್ಷರಾಗಿ ನೇಮಕಗೊಂಡ ಚೇತನ್ ಚೌಹಾಣ್ ನೀಡಿರುವ ಹೇಳಿಕೆ ಗಮನಿಸಿ. ‘ಶೇ. 60ರಷ್ಟು ಸಮಯವನ್ನು ನಾನು ಡಿಡಿಸಿಎ (ದೆಹಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್)ಗೆ ಕೊಡುತ್ತೇನೆ. ಶೇ. 20ರ ಸಮಯ ನಿಫ್ಟ್ ಗೆ ಹಾಗೂ ಶೇ. 20ರ ಸಮಯ ನನ್ನ ಉದ್ಯಮಕ್ಕೆ ಕೊಡುತ್ತೇನೆ.’

ಇದನ್ನು ಕೇಳಿಯೇ ಕೆಲ ಟ್ವೀಟಿಗರು ಬರೆದರು- ಖಾಲಿಯಾಗಲಿರುವ ಆರ್ಬಿಐ ಗವರ್ನರ್ ಹುದ್ದೆಯನ್ನೂ ಈ ಚೌಹಾಣ್ ಗೇನೇ ಕೊಟ್ಟುಬಿಡಿ. ಮೇಲಿನ ಸಮೀಕರಣದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು 10 ಪರ್ಸೆಂಟ್ ಸಮಯವನ್ನು ಅಲ್ಲಿಗೂ ಕೊಡ್ತಾರೆ!

ಅದು ಸೆನ್ಸಾರ್ ಬೋರ್ಡ್ ಆಫ್ ಸರ್ಟಿಫಿಕೇಷನ್ ಆಗಿರಬಹುದು, ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿ ಐ ಐ) ಆಗಿರಬಹುದು ಈ ಹಿಂದೆ ಚಮಚಾಗಿರಿಗೆ ಮಣೆ ಹಾಕಿರಲಿಲ್ಲ ಎಂದೇನಲ್ಲ. ಆದರೆ ಇದನ್ನೇ ಮುಂದುವರಿಸಿಕೊಂಡಿರಲಿ ಅಂತಲ್ಲವಲ್ಲ ಮೋದಿ ಸರ್ಕಾರದಿಂದ ಜನ ನಿರೀಕ್ಷಿಸಿರೋದು.

ಇದರರ್ಥ, ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳಿಗೆ ಸಂಸ್ಥೆಗಳಲ್ಲಿ ಹುದ್ದೆ ನೀಡಿ ಉದಾರ ಆದರ್ಶವಾದವನ್ನು ಮೆರೆಯಲಿ ಎಂಬ ಭಯಂಕರ ಬೇಡಿಕೆಯನ್ನೇನೂ ಇಡಬೇಕಿಲ್ಲ. ಆದರೆ ತಾನು ಮೋದಿ ಚಮಚಾ ಅಂತ ಹೇಳಿಕೊಳ್ಳುವುದರಲ್ಲೇ ಖುಷಿ ಪಡುವ ಪಹ್ಲಾಜ್ ನಿಹ್ಲಾನಿ, ಜೇಟ್ಲಿ ವಿರುದ್ಧದ ಕೀರ್ತಿ ಆಜಾದ್ ಸಮರದಲ್ಲಿ ಸರ್ಕಾರದ ಬೆನ್ನಿಗೆ ನಿಂತಿದ್ದಕ್ಕೆ ಕೊಡುಗೆ ಪಡೆಯುತ್ತಿರುವ ಕ್ರಿಕೆಟಿಗ ಚೇತನ್ ಚೌಹಾಣ್, ಅಶೋಕ್ ಪಂಡಿತ್ ಸಹಿತ ಈ ಸರ್ಕಾರದ ಪರ ಮೃದು ನಿಲುವು ಹೊಂದಿರುವ ಅನೇಕ ಚಿತ್ರಕರ್ಮಿಗಳಿದ್ದರೂ ಎಫ್ಟಿಐಐಗೆ ಹೋಗಿ ಕುಳಿತ ಗಜೇಂದ್ರ ಚೌಹಾಣ್… ಈ ಎಲ್ಲರ ಜಾಗದಲ್ಲಿ ಉತ್ತಮರ ನೇಮಕ ಮಾಡುವುದು ಮೋದಿತಂಡಕ್ಕೆ ಸಾಧ್ಯವಾಗಲಿಲ್ಲವೇ?

ಯಾವುದೇ ವ್ಯವಸ್ಥೆಗೆ ದೃಢ ನಾಯಕತ್ವ ತುಂಬ ಮುಖ್ಯ ಎಂಬುದರಲ್ಲಿ ಸಂಶಯ ಬೇಕಿಲ್ಲ. ಭಾರತಕ್ಕೆ ನರೇಂದ್ರ ಮೋದಿ ಅಂಥ ವರ್ಚಸ್ವಿ ನಾಯಕತ್ವವನ್ನೂ ಒದಗಿಸಿರುವುದು ಖರೆ. ಆದರೆ, ನಾಯಕನ ಜತೆಯಲ್ಲೇ ಸಾಂಸ್ಥಿಕ ರಚನೆಗಳಲ್ಲಿ ಕಾರ್ಯನಿರ್ವಹಿಸುವವರ ಕ್ಷಮತೆಯೂ ಮುಖ್ಯವಾಗುತ್ತದೆ. ನಿಹ್ಲಾನಿಯ ಮೆಂಟಲ್ ಹೇಳಿಕೆಗಳನ್ನೆಲ್ಲ ಸಹಿಸಿಕೊಂಡು, ‘ಮೆಂಟಲಿ ಪೂರ್ತಿ ಭಾರತೀಯ’ರಲ್ಲದ ರಾಜನ್ ಅದೇಕೆ ಈ ಹಿಂದಿನ ಆರ್ಬಿಐ ಗವರ್ನರ್ ಗಳಿಗಿಲ್ಲದ ಪ್ರಚಾರ ಪಡೆಯುತ್ತಿದ್ದಾರೆ ಅಂತ ಪ್ರಶ್ನಿಸಿದರಾಯಿತೇ? ರಾಜನ್ ಜನಪ್ರಿಯತೆಗೆ ಕಾರಣವಿದೆ. ಮೋದಿ ಸರ್ಕಾರ ಅತಿದೊಡ್ಡ ಮಟ್ಟದಲ್ಲಿ ಜಗತ್ತಿನೆದರು ಭಾರತದ ಆರ್ಥಿಕತೆಯನ್ನು ತೆರೆದಿರಿಸುತ್ತಿದೆ. ಮೇಕ್ ಇನ್ ಇಂಡಿಯಾ, ವಿದೇಶಿ ನೇರ ಬಂಡವಾಳ ಹೂಡಿಕೆ ಇಂಥ ಜಾಗತಿಕ ಆಯಾಮದ ಪ್ಯಾಕೇಜಿಂಗ್ ನಡೆಯುವಾಗ ಸಹಜವಾಗಿಯೇ ವಿತ್ತೀಯ ಸಂಸ್ಥೆಗಳ ಹೊಣೆ ಹೊತ್ತವರು ಇಂಥದೇ ಜಾಗತಿಕ ವರ್ಚಸ್ಸು ಹೊಂದಿದ್ದಾಗ ಮುನ್ನೆಲೆಗೆ ಬರುತ್ತಾರೆ. ಇಂಥ ಗ್ಲೋಬಲ್ ಎಕನಾಮಿಸ್ಟ್ ಗಳೆಲ್ಲ ಬೇಡ, ಪಕ್ಷನಿಷ್ಠರನ್ನು ನೇಮಿಸಿಕೊಳ್ಳುತ್ತೇವೆ ಎಂದರೆ ಫೈನ್… ಇಂದಿರಾ ಈಸ್ ಇಂಡಿಯಾ ಎಂಬ ಕಾಲ ಕಾಂಗ್ರೆಸ್ ಮುಕ್ತ ಭಾರತದಲ್ಲಿ ಇನ್ನೊಂದು ರೀತಿಯಲ್ಲಿ ಮರುಕಳಿಸೀತು.

ಹಲವು ಸಕಾರಾತ್ಮಕ ವಿಷಯಗಳ ನಡುವಿನ ಕೆಲವೇ ಆಕ್ಷೇಪಾರ್ಹ ಸಂಗತಿಗಳು ಇವು ಎಂಬ ಸಮರ್ಥನೆಯೂ ಬಂದೀತೇನೋ. ಆದರೆ ಇಂಥ ನೇಮಕಗಳಿಂದ ಯಾವ ಸಂದೇಶ ಹೋಗುತ್ತಿದೆ ಎಂಬುದು ಗಮನಾರ್ಹ. ಯುವ ಜನಸಂಖ್ಯೆಯೇ ನಮ್ಮ ಅತಿದೊಡ್ಡ ಬಲ ಎಂದು ಎಲ್ಲ ಜಾಗತಿಕ ವೇದಿಕೆಗಳಲ್ಲಿ ಹೇಳುತ್ತಿರುತ್ತಾರೆ ಪ್ರಧಾನಿ. ಅಂಥ ಯುವ ಸಮುದಾಯಕ್ಕೆ ಹೋಗುತ್ತಿರುವ ಸಂದೇಶವೇನು? ಹುದ್ದೆ ಎಂಬುದು ನಿಮ್ಮ ಪ್ರತಿಭೆ, ವಿವೇಚನಾಶಕ್ತಿಗಳಿಗೆ ಸಿಗುವ ಪ್ರತಿಫಲವೇನಲ್ಲ. ನಿಮ್ಮ ಮಿದುಳಿಗೆ ಕಡಿಮೆ ಕೆಲಸ ಕೊಟ್ಟು, ಸರ್ಕಾರ ಹೇಳಿದ ಕಡೆ ಮುದ್ರೆ ಒತ್ತುವ ಮನೋಭಾವ ಹೊಂದಿದ್ದರೆ ಅದೇ ಯಶಸ್ಸಿನೆಡೆ ಕೊಂಡೊಯ್ಯಬಲ್ಲುದು…

1 COMMENT

  1. ಡಿಜಿಟಲ್ ಕನ್ನಡ ಸಂಪಾದಕರಿಗೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಎಲ್ಲಾ ಸರಿ ಇದೆ ಎಂದು ಹೇಳುತ್ತಿಲ್ಲ. ಯಾವ ಸರ್ಕಾರವು 100% ಪರ್ಫೆಕ್ಟ್ಆಗಿರಲು ಸಾಧ್ಯವಿಲ್ಲ. ಇದು ನಿಮ್ಮಂಥ ತಿಳಿದವರು ಬಲ್ಲ ವಿಷಯ. ಕೇಜ್ರಿವಾಲನ ಮಾತು ಕೇಳಿ ಸುಮ್ಮನೆ ಬರೆಯುವುದು ಒಳ್ಳೆಯದಲ್ಲ. ಚೇತನ್ ಚೌಹಾನ ಇವರನ್ನು ನೇಮಿಸಿರಿವುದು ನಿಫ್ಟ್ ಚೇರ್ ಪರ್ಸನ್ ಆಗಿ ಮಾತ್ರ. ನಿಫ್ಟ್., ಇದಕ್ಕೆ ಬೋರ್ಡ್ ಆಫ್ ಗವರ್ನರ್ಸ್ ಇರುತ್ತೆ. ಅದರಲ್ಲಿ ಚೇರ್ ಪರ್ಸನ್ ಜತೆಗೆ 3 ಜನ ಸಂಸದರು ಮತ್ತೆ ಹೆಚ್ಚಿನ ಜನ ಫ್ಯಾಷನ್ ಜಗತ್ತಿಗೆ ಸಂಬಂಧ ಪಟ್ಟವರು ಇರುತ್ತಾರೆ. ಇಲ್ಲಿ ಚೇರ್ ಪರ್ಸನ್ ಗೆ ಬೇಕಾಗಿರುವುದು ನಾಯಕನ ಗುಣಗಳು. ಇವರನ್ನು ಫ್ಯಾಷನ್ ಸಂಸ್ಥೆಯ ಹೆಡ್ ಆಗಿ ನೇಮಿಸುತ್ತಿಲ್ಲ. ಇವರು ಬೋರ್ಡ್ ಆಫ್ ಗವರ್ನರ್ಸ್ ನಲ್ಲಿ ಒಬ್ಬರು. ಉಡ್ತಾ ಪಂಜಾಬ್ ನಲ್ಲಿ ಕೆಲವು ಶಬ್ದಗಳನ್ನು ಕಟ್ ಮಾಡಿ ಎಂದರೆ ಪಂಕಜ್ ನೀಹಾಲನಿ ಅನರ್ಹ ವ್ಯಕ್ತಿ ಎಂದು ಹೇಗೆ ತೀರ್ಮಾನಿಸುತ್ತಿರಿ. ಅನುರಾಗ್ ಕಶ್ಯಪ ಇವರನ್ನು ನಾಳೆ ಸೆನ್ಸರ್ ಮಂಡಲಿಯ ಅಧ್ಯಕ್ಷರನ್ನಾಗಿ ಮಾಡಿದರೆ ಇವರು ಯಾವುದೇ ತಗಾದೆ ಇಲ್ಲದೆ ನಿರ್ವಹಿಸಬಲ್ಲರೇ? ಎಫ್ ಟಿ ಐ ನಲ್ಲಿ ಏನು ನಡೆಯುತ್ತಿದೆ ಎಂದು ನೀವು ಖುದ್ದು ಹೋಗಿ ನೋಡಿದ್ದೀರಾ? ದಯವಿಟ್ಟು 360 ಡಿಗ್ರೇ ವಿಶ್ಲೇಷಣೆಯನ್ನು ಕೊಡಿ…

Leave a Reply