ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರಬಿದ್ದರೆ ಅರ್ಥವ್ಯವಸ್ಥೆಗೆ ಇದೆಯೇ ತೊಂದರೆ?

authors-rangaswamyಬ್ರೆಕ್ಸಿಟ್  ಎನ್ನುವ ಪದ ಇಂದಿನ ದಿನಗಳಲ್ಲಿ ಕೇಳದೆ ಇರುವರಾರು? ಯೂರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಹೊರಹೋಗುವ ಪ್ರಕ್ರಿಯೆಯೆಗೆ ‘ಬ್ರೆಕ್ಸಿಟ್’ ಎಂದು ಹೆಸರಿಸಿದ್ದಾರೆ.
28 ದೇಶಗಳ ಒಕ್ಕೂಟ ಯೂರೋಪಿಯನ್ ಯೂನಿಯನ್. ಬ್ರಿಟನ್ ಈ ಯೂನಿಯನ್ ನ ಸದಸ್ಯ ರಾಷ್ಟ್ರ. ಹಾಗೆ ನೋಡಿದರೆ ಬ್ರಿಟನ್ ಎಂದೂ ಪೂರ್ಣವಾಗಿ ಯೂರೋಪಿಯನ್ ಯೂನಿಯನ್ ನಲ್ಲಿ ಬೆರೆತಿತ್ತು ಎಂದು ಹೇಳಲು ಆಗದು. ಅದಕ್ಕೆ ಕಾರಣ ಅದು ‘ಯುರೋ’ ಕರೆನ್ಸಿ ಒಪ್ಪದೇ ತನ್ನ ‘ಪೌಂಡ್’ ಕರೆನ್ಸಿ ಉಳಿಸಿಕೊಂಡದ್ದು. ಅದಕ್ಕೆ ಅದು ಕೊಟ್ಟ ಕಾರಣ ‘ಟ್ರಡಿಶನ್’. ಪೌಂಡ್ ಬಿಡಲು ಅದಕ್ಕೆ ತನ್ನ ಪರಂಪರೆ ಅಡ್ಡಿ ಬಂದಿತು. ಇದು ಹೇಗೆಂದರೆ ‘ನೆಂಟರ ಮೇಲೆ ಪ್ರೀತಿ ಅಕ್ಕಿಯ ಮೇಲೆ ಆಸೆ’ ಎನ್ನುವ ತರಹದ್ದು. ಗಮನಿಸಿ… ಉಳಿದೆಲ್ಲಾ ಸದಸ್ಯ ರಾಷ್ಟ್ರಗಳು ತಮ್ಮ ಮೂಲ ಕರೆನ್ಸಿ ಬಿಟ್ಟು ‘ಯುರೋ’ ವನ್ನು ತಮ್ಮ ಹೊಸ ಕರೆನ್ಸಿ ಎಂದು ಒಪ್ಪಿಕೊಂಡಿವೆ.
ಯಾವುದೇ ಒಂದು ಒಕ್ಕೂಟಕ್ಕೆ ಸೇರ್ಪಡೆ ಆಗುವುದು ಸದಸ್ಯ ರಾಷ್ಟ್ರಗಳಲ್ಲಿ ಸಮ್ಮತಿಯಿಂದ ಉನ್ನತಿ ಕಡೆ ನಡೆಯಲು. ಬ್ರಿಟನ್ ಒಕ್ಕೂಟ ಸೇರಿದ ದಿನದಿಂದ ತನಗೇನು ಲಾಭ ಎಂದು ಯೋಚಿಸಿತೇ ಹೊರತು, ಹೇಗೆ ಒಂದು ಒಕ್ಕೂಟವಾಗಿ ಮುನ್ನೆಡೆಯಬಹುದು ಎನ್ನುವದರ ಬಗ್ಗೆ ಅಲ್ಲವೇ ಅಲ್ಲ. ಹೀಗೆ ಎಷ್ಟು ದಿನ ‘ಆಟಕುಂಟು ಲೆಕ್ಕಕ್ಕಿಲ್ಲ’ ನಡೆದೀತು?  ಇಷ್ಟೆಲ್ಲಾ ಏಕೆ ಹೇಳಬೇಕಾಯಿತು ಎಂದರೆ ‘ಬ್ರೆಕ್ಸಿಟ್’ ಒಂದು ದಿನದಲ್ಲಿ ಹುಟ್ಟಿದ ಕೂಗಲ್ಲ ಎನ್ನುವುದ ತಿಳಿಸಲು.
ಇದೇ ತಿಂಗಳು 23ನೇ ತಾರೀಕು ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬರಬೇಕೇ? ಅಥವಾ ಅಲ್ಲೇ ಮುಂದುವರಿಯಬೇಕೆ? ಎಂದು ಜನಾಭಿಪ್ರಾಯ ಕೇಳಲಿದ್ದಾರೆ. ಜಗತ್ತಿನ ಎಲ್ಲಾ ದೇಶಗಳಂತೆ ಇಲ್ಲಿಯ ನಾಗರಿಕ/ಮತದಾರ ಕೂಡ  ಮುಂದುವರಿಯಬೇಕೆ? ಬೇಡವೇ? ಎಂದು ಹೇಳಲು ಗೊಂದಲದಲ್ಲಿ ಇದ್ದಾನೆ. ಅದಕ್ಕೆ ಕಾರಣ ಇಲ್ಲದಿಲ್ಲ. ಬ್ರಿಟನ್ ಒಕ್ಕೂಟದಿಂದ ಹೊರಹೋಗಬೇಕು ಎನ್ನುವ ಗುಂಪು ‘ನೋಡಿ ಸ್ವಾಮಿ ನಾವು ದಿನ ಒಪ್ಪೊತ್ತಿಗೆ 55 ಮಿಲಿಯನ್ ಪೌಂಡ್ ಬ್ರುಸ್ಸೆಲೆಸ್ ಗೆ ನೀಡುತ್ತಿದ್ದೇವೆ. ಒಕ್ಕೂಟದಿಂದ ಹೊರಬಂದರೆ ಅದೇ ಹಣವನ್ನು ನಮ್ಮ ಜನರಿಗೆ ಖರ್ಚು ಮಾಡಬಹುದು’ ಎನ್ನುವ ಅಂಕಿಅಂಶ ಇಡುತ್ತಾರೆ. ಬ್ರಿಟನ್ ಅನ್ನು ಒಕ್ಕೂಟದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಗುಂಪು ‘ಇಲ್ಲ ಸ್ವಾಮಿ ಅದು ಶುದ್ಧ ಸುಳ್ಳು ಅಂಕಿ ಅಂಶ. ಒಕ್ಕೂಟದಿಂದ ನಮಗೆ ಬರುವ ಹಣ, ಆಗುವ ಸಹಾಯ ಎಲ್ಲಾ ಕಳೆದರೆ ನಾವು ಬ್ರುಸ್ಸೆಲ್ಸ್ ಗೆ ಕೊಡುವ ಹಣ 17 ಮಿಲಿಯನ್ ಪೌಂಡ್ ದಿನಕ್ಕೆ, 55 ಅಲ್ಲ’  ಎನ್ನುತ್ತದೆ. ಇದೊಂದು ಸಣ್ಣ ಉದಾಹರಣೆ, ಬ್ರಿಟನ್ ನಾಗರೀಕನ ಮನಸ್ಸು ಇಂದು ಗೊಂದಲಗಳ ಗೂಡು, ಬ್ರಿಟನ್ ಇಂದು ಒಡೆದ ಮನೆ.
ಯಾವುದು ಸರಿ? ಬ್ರಿಟನ್ ಯೂರೋಪಿಯನ್ ಒಕ್ಕೂಟದಲ್ಲಿ ಮುಂದುವರಿಯುವುದೋ? ಅಥವಾ ಹೊರ ನಡೆಯುವುದೋ? ಅದರತ್ತ ಒಮ್ಮೆ ಚಿತ್ತ ಹರಿಸೋಣ.

೧) ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರ ಹೋದರೆ  ನನ್ನ ಕೆಲಸದ ಗತಿ ಏನು?
ಒಬ್ಬ ಸಾಮಾನ್ಯ ನಾಗರಿಕನ ಮನಸ್ಸಿನಲ್ಲಿ ಮೊದಲು ಮೂಡುವ ಪ್ರಶ್ನೆ ಇದು. ಬ್ರಿಟನ್ ನಲ್ಲಿ 3 ಮಿಲಿಯನ್ ಕೆಲಸ ಸೃಷ್ಟಿ ಆಗಿರುವುದು ಯೂರೋಪಿಯನ್ ಯೂನಿಯನ್ ನೊಂದಿಗಿನ ವ್ಯಾಪಾರ ವಹಿವಾಟಿನಿಂದ. ಇದು ನೇರವಾಗಿ ಲೆಕ್ಕಕ್ಕೆ ಸಿಕ್ಕ ಅಂಕಿ. ಅನೇಕ ಅರ್ಥಿಕ ತಜ್ಞರ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಒಂದೇ ದಿನದಲ್ಲಿ ಒಕ್ಕೂಟದ ಎಲ್ಲಾ ವ್ಯವಹಾರ ಕೊನೆಗೊಳುತ್ತದೆ ಎಂದಲ್ಲ. ನಿಧಾನವಾಗಿಯಾದರೂ ಸರಿ ಕೆಲಸ ಕಡಿಮೆಯಾಗುವುದು ತಪ್ಪುವುದಿಲ್ಲ. ಹೊಸ ಕೆಲಸದ ಸೃಷ್ಟಿ ಬಹಳ ನಿಧಾನವಾಗಿ ಕೆಲಸದಿಂದ ಕೆಲಸಕ್ಕೆ ಜಿಗಿಯುವ ಅವಕಾಶ ಕಡಿಮೆಯಾಗುತ್ತದೆ . ಸಾಮಾನ್ಯ ನಾಗರಿಕ  ಹೊಸ  ಅವಕಾಶಗಳಿಂದ ವಂಚಿತನಾಗಿ ಇದ್ದದರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

೨) ವಸ್ತುಗಳ ಬೆಲೆ ಏರಿಕೆ ಆಗುತ್ತದೆಯೇ? ಮುಖ್ಯವಾಗಿ ಆಹಾರ ಪದಾರ್ಥಗಳದ್ದು?
ಇದು ಎರಡು ಅಲುಗಿನ ಕತ್ತಿಯಂತೆ. ಏಕೆಂದರೆ ಹಲವು ಪದಾರ್ಥಗಳ ಮೇಲೆ ಯೂರೋಪಿಯನ್ ಯೂನಿಯನ್ ಹಾಕುತ್ತಿದ್ದ ತೆರಿಗೆ ಬ್ರಿಟನ್ ತೆರೆವುಗೊಳಿಸಬಹುದು ಬೆಲೆ ಏರುವ ಬದಲು ಕಡಿಮೆ ಆಗಬಹುದು! ಆದರೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆದ ವಸ್ತುಗಳ ಕೊಳ್ಳಲು ಹಣವೇ ಇರದಿದ್ದರೆ ಏನು ಪ್ರಯೋಜನ? ಜನರ ಬಳಿ ಮಾಡಲು ಕೆಲಸವಿಲ್ಲದಿದ್ದರೆ, ಸಂಬಳ ಇರದಿದ್ದರೆ ಕಡಿಮೆ ಬೆಲೆ ಇದ್ದೂ ವ್ಯರ್ಥ .  ಅಥವಾ ಹೆಚ್ಚಿದ ಖರ್ಚು ವೆಚ್ಚ ತೂಗಿಸಲು ಬ್ರಿಟನ್ ಸರಕಾರ ಹೊಸ ತೆರಿಗೆ ವಿಧಿಸಿದರೆ ಬೆಲೆಯೂ ಹೆಚ್ಚುತ್ತದೆ ಸಾಲದಕ್ಕೆ ಜನರ ಬಳಿ ಖರೀದಿಸುವ ಶಕ್ತಿಯೂ ಕುಗ್ಗುತ್ತದೆ. ಹೀಗಾದರೆ ಜನ ಸಾಮಾನ್ಯನ ಬದುಕು ಮತ್ತಷ್ಟು ಬಿಗಡಾಯಿಸುತ್ತದೆ.

೩) ಮನೆ ಖರೀದಿ ಅಥವಾ ಬಾಡಿಗೆ ಏನಾಗಬಹುದು?

ಅಕಸ್ಮಾತ್ ಬ್ರಿಟನ್ ಒಕ್ಕೂಟದಿಂದ  ಹೊರ ನಡೆದರೆ ಮನೆಯ ಬೆಲೆ 10 ರಿಂದ 18 ಪ್ರತಿಶತ ಇಳಿಯುವ ಸಾಧ್ಯತೆ ಇದೆ. ಆದರೆ ಇದರ ಲಾಭ ಗ್ರಾಹಕನಿಗೆ ಆಗುವ ಸಾಧ್ಯತೆ ತೀರಾ  ಕಡಿಮೆ. ಹೆಚ್ಚಿದ ಹಣದುಬ್ಬರ ಮನೆಯ ಮೇಲಿನ ಸಾಲದ ಮೇಲೆ ಕಟ್ಟುವ ಬಡ್ಡಿ ಹೆಚ್ಚಿಸುತ್ತದೆ. ಅಲ್ಲದೆ ಇಲ್ಲಿ ಇನ್ನೊಂದು ವಿಷಯವೂ ತಳುಕು ಹಾಕಿಕೊಂಡಿದೆ, ಅದೇ ವಲಸೆ ನೀತಿ. ಒಕ್ಕೂಟದಿಂದ ಹೊರ ಹೋದ ನಂತರ ಬ್ರಿಟನ್ ಯಾವ ವಲಸೆ ನೀತಿ ಅನುಸರಿಸುತ್ತದೆ ಎನ್ನುವುದರ ಮೇಲೆ  ಹೌಸಿಂಗ್ ಸೆಕ್ಟರ್ ಅಳಿವು ಉಳಿವು ನಿಂತಿದೆ. ಗಮನಿಸಿ ಬ್ರಿಟ್ ಎಕ್ಸಿಟ್ ಪರ ಮಾತನಾಡುವ ಗುಂಪು ಕೊಡುವ ಪ್ರಮುಖ ಕಾರಣ ವಲಸೆ. ಪೂರ್ವ ಯೂರೋಪಿನ ಬಡ ದೇಶಗಳಿಂದ ಬಂದು ಬ್ರಿಟನ್ ಪೂರ ಆಕ್ರಮಿಸಿರುವ ವಲಸಿಗರಿಂದ ಮೂಲ ಬ್ರಿಟನ್ ನಿವಾಸಿ ಬೇಸತ್ತಿದ್ದಾನೆ. ಹಾಗೊಮ್ಮೆ ಜನ ಎಕ್ಸಿಟ್ ಪರವಾಗಿ ಮತ ಚಲಾಯಿಸಿದ್ದೆ ಆದರೆ ಮುಂಬರುವ ದಿನಗಳಲ್ಲಿ ಹೌಸಿಂಗ್ ಸೆಕ್ಟರ್ ನ ಭವಿಷ್ಯ ಮಂಕಾಗಲಿದೆ. ಇದು ಒಂದು ಸರಪಳಿ ಇದ್ದಂತೆ.. ಒಂದರ ಮೇಲೆ ಆದ ಪರಿಣಾಮ ಇನ್ನೊಂದಕ್ಕೆ ತಗಲುತ್ತದೆ.  ಈ ಚೈನ್ ರಿಯಾಕ್ಷನ್ ನಿಂದ ಡಿಮ್ಯಾಂಡ್ ಕಡಿಮೆ ಆಗುತ್ತದೆ.

 ೪) ವೈದ್ಯಕೀಯ ಸೌಲಭ್ಯದ ಕಥೆ ಏನು ?

ಯೂರೋಪಿಯನ್ ಒಕ್ಕೂಟದಿಂದ ಹೊರಬಂದರೆ ಬ್ರಿಟನ್ 8 ಬಿಲಿಯನ್ ಪೌಂಡ್ ಉಳಿತಾಯ ಮಾಡಬಹುದು ಹಾಗೂ ಇದನ್ನು ಶಿಕ್ಷಣ ಮತ್ತು ಆರೋಗ್ಯದಂತ ಮೂಲ ಸೌಕರ್ಯಗಳ ಒದಗಿಸಲು ಉಪಯೋಗಿಸಬಹುದು ಎನ್ನುವುದು  ಎಕ್ಸಿಟ್ ಗುಂಪಿನ ಹೇಳಿಕೆ. ಆದರೆ ಬ್ರಿಟನ್ ಹಾಗು ಯೂರೋಪಿನ ಇತರ ಅರ್ಥಶಾಸ್ತ್ರಜ್ಞರ ಲೆಕ್ಕಾಚಾರವೇ ಬೇರೆ. ಅವರ ಪ್ರಕಾರ ಉಳಿತಾಯಕ್ಕಿಂತ ವೆಚ್ಚವೇ ಹೆಚ್ಚಾಗುತ್ತದೆ. ಹೇಗೆಂದರೆ, 2014 ರಲ್ಲಿ ಬ್ರಿಟನ್ ಆರ್ಥಿಕತೆ 1817 ಬಿಲಿಯನ್ ಪೌಂಡ್. ಬ್ರಿಟನ್ ಒಕ್ಕೂಟಕ್ಕೆ ಮೆಂಬರ್ ಶಿಪ್ ಫೀಸ್ ಕೊಡುವುದು, ಒಕ್ಕೂಟ ಬ್ರಿಟನ್ ಗೆ ಅಭಿವೃದ್ಧಿಗೆ ಕೊಡುವ ಹಣ ಕಳೆದರೆ ಬ್ರಿಟನ್ ಜೇಬಿನಿಂದ ವಾರ್ಷಿಕ 8 ಬಿಲಿಯನ್ ಪೌಂಡ್ ಹೋಗುತ್ತದೆ. ಒಕ್ಕೂಟದಿಂದ ಹೊರ ಬಂದರೆ 0.4  ಪ್ರತಿಶತ ಉಳಿತಾಯ. ಆದರೆ ಒಕ್ಕೂಟ ಬ್ರಿಟನ್ ನೊಂದಿಗೆ ವ್ಯಾಪಾರ ವಹಿವಾಟು ಅರ್ಧದಷ್ಟು ಇಳಿಸಿದರೂ ನಾವು ತೆರುವ ಬೆಲೆ ಉಳಿತಾಯಕ್ಕಿಂತ ಹಲವು ಪಟ್ಟು ಹೆಚ್ಚು.
NHS (ನ್ಯಾಷನಲ್ ಹೆಲ್ತ್ ಸರ್ವಿಸ್) ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ 5 ಪ್ರತಿಶತ ಯೂರೋಪಿನ ಇತರ ದೇಶದ ಪ್ರಜೆಗಳು ಇವರ ಕೆಲಸ ಬದುಕು ವಲಸೆ ನೀತಿ ಅವಲಂಬಿಸಿದೆ. ಒಕ್ಕೂಟದಿಂದ  ಹೊರಬಂದ  ನಂತರ  ವಲಸೆ ನೀತಿ ಬದಲಾದರೆ, 5 ಪ್ರತಿಶತ ಸಿಬ್ಬಂದಿ ತಮ್ಮ ದೇಶಕ್ಕೆ ಮರಳಿದರೆ, ಹೆಲ್ತ್ ಸರ್ವಿಸ್ ನಲ್ಲಿ ಅಸಮತೋಲನ ಏರ್ಪಡುವುದು ತಪ್ಪಿಸಲಾಗುವುದಿಲ್ಲ.

೫) ವಲಸೆ ನೀತಿಯ ಗತಿ ಏನು?
ಬ್ರಿಟನ್ ನಲ್ಲಿ ಸರಿ ಸುಮಾರು 3 ಮಿಲಿಯನ್ ಯೂರೋಪಿನ ಇತರ ದೇಶದ ಜನರು ವಾಸಿಸುತ್ತಿದ್ದಾರೆ. ಹಾಗೆಯೇ ಬ್ರಿಟನ್ ನಲ್ಲಿ ಜನಿಸಿದ 1.3 ಮಿಲಿಯನ್ ಬ್ರಿಟಿಷರು ಯೂರೋಪಿನ ಇತರ ದೇಶದಲ್ಲಿ ಬದುಕು ಕಂಡು ಕೊಂಡಿದ್ದಾರೆ. ಅಂದರೆ ಒಕ್ಕೂಟದಿಂದ ಹೊರ ಹೋಗುವ ನಿರ್ಧಾರ ಸರಿ ಸುಮಾರು 5 ಮಿಲಿಯನ್ ಬದುಕಲ್ಲಿ ತಲ್ಲಣ ತರಲಿದೆ. ಇಲ್ಲಿಯವರ ಅಲ್ಲಿಗೆ ವಾಪಸ್ಸು ಕಳಿಸುವುದು, ಅಲ್ಲಿನವರ ಇಲ್ಲಿಗೆ ಕರೆಸಿಕೊಳ್ಳುವುದು ಸುಲಭದ ಮಾತಲ್ಲ. ಯೂನಿಯನ್ ನಿಂದ ಹೊರಹೋಗ ಬಯಸುವ ಗುಂಪು ಹೇಳುವಂತೆ ವಲಸೆಗೆ ಮದ್ದು ಬ್ರಿಟ್ಎಕ್ಸಿಟ್.
ಆದರೆ ಅಷ್ಟು ಸುಲಭವಾಗಿ ವಲಸೆ ತಡೆಯಬಹುದೇ? ಒಕ್ಕೂಟದಿಂದ ಬರುವ ವಲಸಿಗರ ತಡೆಯಬಹುದು, ಜಗತ್ತಿನ ವಿವಿಧ ಭಾಗಗಳಿಂದ ಅಕ್ರಮವಾಗಿ ಬರುವ ವಲಸಿಗರ ತಡೆಯುವುದು ಹೇಗೆ? ವಲಸೆ ನೀತಿ, ರೂಪುರೇಷೆಗಳು ಬದಲಾಗಲಿವೆ. ಬ್ರಿಟನ್ ಒಕ್ಕೂಟ ಬಿಟ್ಟು ಹೊರ ನಡೆದರೆ ಅದು ನೋವು ತರಲಿದೆ.

೬) ವ್ಯಾಪಾರ – ವಹಿವಾಟು:
ಬ್ರಿಟನ್ ನಲ್ಲಿ ಉತ್ಪಾದಿಸಲಾಗುವ 45 ರಿಂದ 50 ಭಾಗ ವಸ್ತುಗಳ ಗ್ರಾಹಕ ಯೂರೋಪಿಯನ್ ಯೂನಿಯನ್! ಅಂದರೆ ಬ್ರಿಟನ್ ನ ಅರ್ಧ ದಷ್ಟು ರಫ್ತು ಪಾಲುದಾರ ಒಕ್ಕೂಟದ ದೇಶಗಳು. ಬ್ರಿಟನ್, ಯೂರೋಪಿಯನ್ ಯೂನಿಯನ್ ನಿಂದ 8 ರಿಂದ 10 ಪರ್ಸೆಂಟ್ ಆಮದು ಮಾಡಿಕೊಳ್ಳುತ್ತದೆ.  ಇದು ಅಂಕಿ ಅಂಶ. ಎಕ್ಸಿಟ್ ಆಗುವುದರಿಂದ ಲಾಭವೇ ನಷ್ಟವೆ ನೀವೇ ನಿರ್ಧರಿಸಿ.
ತೊರೆದು ಹೋದ ಸದಸ್ಯ ರಾಷ್ಟ್ರದೊಂದಿಗೆ ಒಕ್ಕೂಟ ವ್ಯವಹಾರ ಏಕೆ ನಡೆಸುತ್ತದೆ? ಒಮ್ಮೆಲೇ ಟ್ರೇಡ್ ಆಫ್ ಆಗುತ್ತದೆ ಅನ್ನುವ ಸಿನಿಕತೆ ಇಲ್ಲದಿದ್ದರೂ ಮೊದಲಿನ ಸುಲಲಿತ ಸಂಬಂಧ ಇರುತ್ತದೆಯೇ ಎನ್ನುವುದು ಚಿಂತಿಸುವ  ವಿಷಯ.
brexitಬ್ರೆಕ್ಸಿಟ್  ಬ್ರಿಟನ್ ಮಟ್ಟಿಗಂತೂ ಒಳ್ಳೆಯದಲ್ಲ ಎನ್ನುವುದು ಸಾದೃಶ. ಇದರಿಂದ ಭಾರತದ ಮೇಲೆ ಆಗುವ ಪರಿಣಾಮ ಏನು?
ಭಾರತದ ಮೇಲೆ ಆಗುವ ತಾತ್ಕಾಲಿಕ ಪರಿಣಾಮ ‘ಪೌಂಡ್’ ಕರೆನ್ಸಿಯಲ್ಲಿ ಆಗುವ ಬದಲಾವಣೆ ನಾವು ಬ್ರಿಟನ್ ಗೆ ರಪ್ತು ಮಾಡುವುದಕ್ಕಿಂತ ಅವರಿಂದ ಆಮದು ಮಾಡಿಕೊಳ್ಳುವುದು ಹೆಚ್ಚು. ವಿನಿಮಯ ವ್ಯತ್ಯಾಸ  ರಿಸರ್ವ್ ಫಂಡ್ಸ್ ಮತ್ತು ಟ್ರೇಡ್ ಫಂಡ್ಸ್ ಎರಡರ ಮೇಲೂ ಪರಿಣಾಮ ಬೀರಲಿದೆ.
ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೂಟದ ನಾಗರೀಕರು ಪ್ರಪಂಚದ ಇತರ ನಾಗರೀಕರು ಒಂದೇ ಎಂದು ಭಾವಿಸಿದಲ್ಲಿ  ಹೆಲ್ತ್ ಸೆಕ್ಟರ್ ನಲ್ಲಿ ಭಾರತೀಯರು ಹೆಚ್ಚು ಕೆಲಸ ಪಡೆಯುವ ಸಾಧ್ಯತೆ ಇದೆ.
ಹಲವು ಬ್ರಿಟನ್ ಅರ್ಥ ಶಾಸ್ತ್ರಜ್ಞರ ಪ್ರಕಾರ ಬ್ರಿಟನ್ ಭಾರತದೊಂದಿಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಲು EU ಒಂದು ಕಂಟಕ. ಒಕ್ಕೂಟದಿಂದ ಹೊರ ಬಂದ ನಂತರ ಬ್ರಿಟನ್ ಮತ್ತು ಭಾರತದ ಭಾಂದವ್ಯ ಇನ್ನಷ್ಟು ಹೆಚ್ಚಲಿದೆ. ಮೂರು ಮಿಲಿಯನ್ ಮೀರಿದ ಭಾರತೀಯ ಮೂಲದ ಬ್ರಿಟಿಷರು ಭಾರತದೊಂದಿಗೆ ಹೆಚ್ಚು ವ್ಯವಹರಿಸಲು ಉತ್ಸುಕರಾಗಿದ್ದಾರೆ. ಬಹಳಷ್ಟು ವ್ಯವಹಾರ ಒಪ್ಪಂದಗಳು ಯುರೋಪಿಯನ್ ಯೂನಿಯನ್ ಜೊತೆಗಿದೆ. ಬ್ರೆಕ್ಸಿಟ್ ನಂತರ ನಾವು ಭಾರತದೊಂದಿಗೆ ಹೆಚ್ಚಿನ ವ್ಯಾಪಾರ ಮಾಡುತ್ತೇವೆ ಎನ್ನುವುದು ಬ್ರೆಕ್ಸಿಟ್ ಪರ ವಕಾಲತ್ತು ವಹಿಸಿದವರು ಹೇಳುವ ಮಾತು.
ಎಲ್ಲಕ್ಕೂ ಕಾಲವೇ ಉತ್ತರ ಹೇಳಲಿದೆ. ಬ್ರಿಟನ್ ನ ನಾಗರೀಕನಿಗೆ ಅಂಕಿ ಅಂಶಗಳ ತಿರುಚಿ ನೀಡಲಾಗುತ್ತಿದೆ. ಫುಲ್ ಫ್ಯಾಕ್ಟ್ ಡಾಟ್ ಆರ್ಗ್ ಎನ್ನುವ ಒಂದು ವೆಬ್ ಸೈಟ್ ಈ ಎಲ್ಲಾ ತಿರುಚವಿಕೆ ಇಂದ ಬೇಸತ್ತು ‘Whichever side you end up on, get the facts.’ ಎನ್ನುವ ಟ್ಯಾಗ್ ಲೈನ್ ಮೂಲಕ ಜನರಿಗೆ ನಿಖರ ಮಾಹಿತಿ ತೋರಿಸುವ ಕೆಲಸ ಮಾಡುತ್ತಿದೆ .
ಯಾವುದು  ಸರಿ ಎಂದು  ಹೇಳಲು ಬರುವುದಿಲ್ಲ. ಆದರೆ ನಾವು ಡಿಜಿಟಲ್ ಕನ್ನಡದಲ್ಲಿ ಅಂಕಿ ಅಂಶಗಳ ಅಳೆದು ತೂಗಿ ನಿಲುವು ಹೇಳುತ್ತಾ ಬಂದಿದ್ದೇವೆ. ಈ ಆಧಾರದಲ್ಲಿ ಹೇಳುವುದಾದರೆ ಯೂರೋಪಿಯನ್ ಒಕ್ಕೂಟದಲ್ಲಿ ಬ್ರಿಟನ್ ಮುಂದುವರಿಯುವುದು ಉತ್ತಮ ಎನ್ನುವುದು ನಮ್ಮ ಅನಿಸಿಕೆ.

1 COMMENT

  1. ಬ್ರೆಕ್ಸಿಟ್ ಅಂತ ಎಲ್ಲಾ ಕಡೆ ನೋಡುತ್ತಿದ್ದೆ, ಓದುತ್ತಿದ್ದೆ, ಆದರೆ ಅದರ ಪರಿಣಾಮ, ಮುಂದಿನ ಬೆಳವಣಿಗೆ ಏನು ಅಂತ ಅರ್ಥವಾಗಲೇ ಇಲ್ಲ …ನಿಮ್ಮ ಲೇಖನ ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ..!!!

Leave a Reply