ಭಾರತಕ್ಕೆ ಕೊಡೋದಾದ್ರೆ ಪಾಕಿಸ್ತಾನಕ್ಕೂ ಕೊಡಿ: ಇದು ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಒಡ್ಡುತ್ತಿರುವ ಹೊಸ ವಾದ!

ಡಿಜಿಟಲ್ ಕನ್ನಡ ಟೀಮ್:

ಹಲವು ದಿನಗಳಿಂದ ಪರಮಾಣು ಪೂರೈಕೆ ಸಮೂಹದಲ್ಲಿ ಭಾರತದ ಸದಸ್ಯತ್ವಕ್ಕೆ ಚೀನಾ ಒಪ್ಪಿಗೆ ನೀಡಲು ಚೌಕಾಸಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಭಾರತದ ಸದಸ್ಯತ್ವಕ್ಕೆ ಚೀನಾದಿಂದ ನಿರ್ದಿಷ್ಟ ಪ್ರತಿರೋಧವೇನಿಲ್ಲ ಎಂದಿದ್ದು ಆಶಾದಾಯಕವಾಗಿ ಕಂಡುಬಂದಿತ್ತು. ಆದ್ರೆ, ಚೀನಾ ಈಗ ಭಾರತದ ಜತೆಗೆ ಪಾಕಿಸ್ತಾನವನ್ನು ಈ ಗುಂಪಿಗೆ ತರುವ ಪ್ರಯತ್ನ ನಡೆಸುತ್ತಿದೆ.

ಭಾರತ ಸದಸ್ಯತ್ವಕ್ಕೆ ಚೀನಾ ಒಪ್ಪಬೇಕಾದರೆ, ಪಾಕಿಸ್ತಾನದ ಸದಸ್ಯತ್ವಕ್ಕೆ ಇತರೆ ರಾಷ್ಟ್ರಗಳು ಯಾವುದೇ ತಕರಾರು ಎತ್ತಬಾರದು ಎಂಬುದು ಚೀನಾದ ಹೊಸ ತಂತ್ರ. ಈ ಬಗ್ಗೆ ಸ್ಪಷ್ಟ ಸೂಚನೆ ಕೊಟ್ಟಿದೆ ಚೀನಾ ಸರ್ಕಾರ ಅಧೀನದಲ್ಲಿರು ಮಾಧ್ಯಮ ‘ಗ್ಲೋಬಲ್ ಟೈಮ್ಸ್’ ವರದಿ.

ಈ ವರದಿಯಲ್ಲಿ ಪಾಕಿಸ್ತಾನದ ಪರ ಬ್ಯಾಟಿಂಗ್ ಮಾಡಿರುವುದು ಎನ್ಎಸ್ಜಿ ಸದಸ್ಯತ್ವದ ವಿದ್ಯಮಾನಕ್ಕೆ ಹೊಸ ತಿರುವು ನೀಡಿದೆ. ಈ ಗ್ಲೋಬಲ್ ಟೈಮ್ಸ್ ತನ್ನ ವರದಿಯಲ್ಲಿ ವಾದಿಸಿರುವುದು ಹೀಗೆ:

‘ಭಾರತ ಪರಮಾಣು ಪೂರೈಕೆ ಸಮೂಹಕ್ಕೆ ಸೇರಲು ಪ್ರಯತ್ನಿಸುತ್ತಿದೆ. ಇದೇ ವೇಳೆ ಪಾಕಿಸ್ತಾನ ಈ ಸಮೂಹಕ್ಕೆ ಸೇರಿದರೆ ಪರಮಾಣು ಪ್ರಸರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕಾರಣವನ್ನು ಕೊಟ್ಟು ಪಾಕ್ ಸದಸ್ಯತ್ವಕ್ಕೆ ಅಡ್ಡಗಾಲು ಹಾಕಿದೆ. ವಾಸ್ತವವಾಗಿ ಹೇಳುವುದಾದರೆ, ಪಾಕಿಸ್ತಾನ ಈ ಹಿಂದೆಯೇ ಪ್ರಸರಣವನ್ನು ಜಾರಿಗೆ ತಂದಿತ್ತು. ಪಾಕಿಸ್ತಾನದ ಪರಮಾಣು ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ಇದರ ರೂವಾರಿಯಾಗಿದ್ದರು. ಇದಾದ ನಂತರ ಖಾದಿರ್ ಅವರನ್ನು ಪಾಕಿಸ್ತಾನ ಸರ್ಕಾರ ಗೃಹ ಬಂಧನದಲ್ಲಿಟ್ಟಿತ್ತು. ಒಂದು ವೇಳೆ ಪರಮಾಣು ಪ್ರಸರಣ ಒಪ್ಪಂದ ಮತ್ತು ಪರಮಾಣು ಪೂರೈಕೆ ಸಮೂಹದಲ್ಲಿ ಭಾರತಕ್ಕೆ ಹೆಚ್ಚಿನ ವಿನಾಯಿತಿ ನೀಡುವುದೇ ಆದರೆ, ಅದು ಪಾಕಿಸ್ತಾನಕ್ಕೂ ಅನ್ವಯವಾಗಬೇಕು.’

1998 ರಲ್ಲಿ ಭಾರತ ಮತ್ತು ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸಿದ್ದವು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಈ ಎರಡು ದೇಶಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಸೆಪ್ಟೆಂಬರ್ 11ರ ದಾಳಿಯ ನಂತರ ಈ ನಿರ್ಬಂಧ ಸಡಿಲ ಮಾಡಿತ್ತು. ಜತೆಗೆ ಅಮೆರಿಕ ಭಾರತದ ಜತೆ ನಾಗರೀಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರೊಂದಿಗೆ ಭಾರತ ಎನ್ಎಸ್ಜಿ ಸದಸ್ಯತ್ವದ ಪ್ರಯತ್ನ ಆರಂಭವಾಯಿತು.

‘ಎನ್ಎಸ್ಜಿಗೆ ಭಾರತವನ್ನು ಸೇರಿಸಿಕೊಂಡು, ಪಾಕಿಸ್ತಾನವನ್ನು ದೂರವಿಡುವುದಕ್ಕೆ ಚೀನಾ ಮತ್ತು ಇತರೆ ರಾಷ್ಟ್ರಗಳ ತೀವ್ರ ವಿರೋಧವಿದೆ. ಭಾರತ ಒಂದು ವೇಳೆ ಪಾಕಿಸ್ತಾನದೊಂದಿಗೆ ಕೈಜೋಡಿಸಿ ಎನ್ಎಸ್ಜಿ ಸದಸ್ಯತ್ವ ಕೇಳುವುದು ಉತ್ತಮ. ಏಕಾಂಗಿಯಾಗಿ ಸದಸ್ಯತ್ವ ಕೋರುವ ಬದಲು ವ್ಯವಹಾರಿಕವಾಗಿ ಸದಸ್ಯತ್ವ ಕೇಳುವುದು ಸೂಕ್ತ. ಭಾರತಕ್ಕೆ ಪರಮಾಣು ಪ್ರಸರಣ ಒಪ್ಪಂದಕ್ಕೆ ಅವಕಾಶ ಕಲ್ಪಿಸುವುದಾದರೆ, ಪಾಕಿಸ್ತಾನಕ್ಕೂ ಈ ಅವಕಾಶ ಸಿಗಬೇಕು’ ಎಂದಿದೆ ಚೀನಾ ಮಾಧ್ಯಮ.

ಇದರೊಂದಿಗೆ ಎನ್ಎಸ್ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿ. ಮತ್ತೊಂದು ದೊಡ್ಡ ಸಮಸ್ಯೆ ಹುಟ್ಟಿ ಹಾಕುವುದು ಚೀನಾದ ಕುತಂತ್ರ ಎಂಬುದು ಸ್ಪಷ್ಟವಾಗುತ್ತಿದೆ.

Leave a Reply